ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಬಿಲ್ಲ ಮರೆಯಿಂದ: ಕ್ವೀರ್‌ ಸಮುದಾಯದ ಕುರಿತ ಬರಹ

Last Updated 18 ಡಿಸೆಂಬರ್ 2021, 20:30 IST
ಅಕ್ಷರ ಗಾತ್ರ

ಕ್ವೀರ್‌ ಸಮುದಾಯವು ಇನ್ನೂ ತನ್ನ ಲೈಂಗಿಕ ಅಸ್ಮಿತೆಯನ್ನು ಮುನ್ನೆಲೆಗೆ ತರುತ್ತಿದೆ ಎಂದರೆ ಅದಕ್ಕೆ ಸಲ್ಲಬೇಕಾದ ಸಮತೆಯ ಹೂವು ಇದುವರೆಗೆ ಕೈಗೆಟಕಿಲ್ಲ ಎಂದೇ ಅರ್ಥ

***
ನಮ್ಮ ಬೆಂಗಳೂರು ಮತ್ತೊಂದು ಕ್ವೀರ್ ಪ್ರೈಡ್ ಮಾರ್ಚ್‌ನ ಹೊಸ್ತಿಲಲ್ಲಿದೆ. ಮಹಾನಗರ ಇದನ್ನು ‘ಹೆಮ್ಮೆಯ ನಡಿಗೆ’ ಎಂದು ಕರೆಯುತ್ತದೆ. ಸಲಿಂಗಕಾಮ ಅಪರಾಧವಲ್ಲ ಎಂದು (ಸೆಕ್ಷನ್ 377ಅನ್ನು ಭಾಗಶಃ ರದ್ದುಗೊಳಿಸಿ) ಸುಪ್ರೀಂ ಕೋರ್ಟ್‌ ತೀರ್ಪು ನೀಡಿ ಮೂರು ವರ್ಷಗಳೇ ಗತಿಸಿವೆ. ಅಲ್ಲಿಂದ ಇಲ್ಲಿಯವರೆಗೆ ಕ್ವೀರ್ ಸಮುದಾಯವನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಿದೆಯೇ? ಸಾಹಿತ್ಯ, ರಂಗಭೂಮಿ, ಸಿನಿಮಾ ಮುಂತಾದ ಕಲಾ ಮಾಧ್ಯಮಗಳಲ್ಲಿ ಕ್ವೀರ್ ಸಮುದಾಯದ ಕಥೆಗಳನ್ನು ಹೇಳುವಲ್ಲಿ ಎಷ್ಟರ ಮಟ್ಟಿಗೆ ಪ್ರಗತಿಯಾಗಿದೆ ಎಂದು ಯೋಚಿಸಿದರೆ ದಾರಿ ತುಂಬಾ ದೂರ ಇದೆ ಎಂದೇ ಹೇಳಬೇಕಾದೀತು.

‘ತೀರ್ಪು ಬಂದಿತಲ್ಲ. ಇನ್ನು ಈ ರೀತಿಯ ಬಣ್ಣಬಣ್ಣದ ಉಡುಗೆಗಳನ್ನು ತೊಟ್ಟು ಈ ಪ್ರೈಡ್ ಮಾರ್ಚ್ ನಡೆಸುವ ಅವಶ್ಯಕತೆಯಾದರೂ ಏನಿದೆ? ನೀವೂ ಇನ್ನು ಮೇಲೆ ಎಲ್ಲರಂತೆ ಸಹಜವಾಗಿ ಇರಬಹುದಲ್ಲ’ ಎನ್ನುವ ಮಾತನ್ನು ಮತ್ತೆ ಮತ್ತೆ ಕೇಳುತ್ತಿರುತ್ತೇವೆ. ಭಾರತ ಸೇರಿದಂತೆ ಜಗತ್ತಿನ ಎಲ್ಲಾ ಪ್ರಮುಖ ನಗರಗಳಲ್ಲಿ ಈ ಪ್ರೈಡ್ ಮೆರವಣಿಗೆಗಳು ಯಾಕೆ ನಡೆಯುತ್ತವೆ? ಬೇರೆ ಬೇರೆ ದೇಶಗಳಲ್ಲಿ ಅವರನ್ನು ಒಪ್ಪಿಕೊಂಡು ಬಹಳ ವರ್ಷಗಳೇ ಆಗಿಹೋದವಲ್ಲ! ಪ್ರೈಡ್ ಮಾರ್ಚ್‌ಗಳನ್ನು ನಡೆಸುವ ಮುಖ್ಯ ಉದ್ದೇಶ ನಾಗರಿಕ ಸಮಾಜಕ್ಕೆ ‘ನಿಮ್ಮಂತೆಯೇ ನಾವೂ ಇದ್ದೇವೆ; ಸಹಜವಾಗಿ. ನಮ್ಮ ಅಸ್ತಿತ್ವವೂ ನಿಮ್ಮಂತೆಯೇ ಮುಖ್ಯ’ ಎಂಬ ಸಂದೇಶವನ್ನು ದಾಟಿಸುವುದಾಗಿದೆ. ಸಮಾಜದ ಒತ್ತಡಕ್ಕೆ ಹೆದರಿ ಹಲವು ಸಂದೇಹಗಳಿಂದ ತನ್ನ ಇರುವಿನ ಬಗ್ಗೆಯೇ ಅಸ್ತಿತ್ವದ ಬಗ್ಗೆಯೇ ಕೀಳರಿಮೆ ಹೊಂದಿರುವ ಜನರಿಗೆ ಈ ಪ್ರೈಡ್ ಮಾರ್ಚ್ ಅಪಾರ ಆತ್ಮವಿಶ್ವಾಸ ಮತ್ತು ಅಪರಿಮಿತ ಧೈರ್ಯವನ್ನು ಕೊಡುತ್ತದೆ.

ಕ್ವೀರ್ ಸಮುದಾಯದ ಕುರಿತು ಬಹಳ ಕೆಲಸ ಮಾಡಿರುವ ಕನ್ನಡದ ಹಿರಿಯ ಕವಿಯೊಬ್ಬರ ಬಳಿ ಮಾತನಾಡುತ್ತಿದ್ದಾಗ ಅವರು ಮಾತಿನ ಭರದಲ್ಲಿ ಎಂಬಂತೆ ‘ಏನೋಪಾ, ಈ ಕ್ವೀರ್ ಸಮುದಾಯದವರು ಅವರ ಲೈಂಗಿಕ ಅಸ್ಮಿತೆಯನ್ನು ಮುಂದೆ ಮಾಡಿಯೇ ಇಡೀ ಜೀವನ ಕಳೆದುಬಿಡ್ತಾರೆ. ಅದು ಯಾಕಾಗಿ ಅಷ್ಟು ಮುಖ್ಯ ಆಗಬೇಕು. ಅವರೂ ಕೂಡ ಎಲ್ಲರಂತೆ ಯಾಕಿರಬಾರದು’ ಎನ್ನುವ ಪ್ರಶ್ನೆಯನ್ನು ಮುಂದಿಟ್ಟರು. ಆ ಕ್ಷಣಕ್ಕೆ ನನಗೆ ಏನೆಂದು ಉತ್ತರಿಸಬೇಕೆಂದು ಹೊಳೆಯಲಿಲ್ಲ. ಈಗ ಅನಿಸುವ ಪ್ರಕಾರ ಒಬ್ಬ ದಲಿತ, ಪುರುಷ ಪ್ರಾಧಾನ್ಯ ವ್ಯವಸ್ಥೆಯ ಕಪಿಮುಷ್ಟಿಯಿಂದ ತುಳಿತಕ್ಕೊಳಗಾಗುತ್ತಲೇ ಇರುವ ಮಹಿಳೆ ಮತ್ತು ಇತರೆ ತಳಸಮುದಾಯಗಳಿಂದ ಬಂದ ವ್ಯಕ್ತಿ ಜೀವನಪೂರ್ತಿ ಹೋರಾಡುವುದು ಅವರಿಗೆ ದಕ್ಕಬೇಕಾದ ಸಮಾನತೆಯ ವಿಷಯಕ್ಕೆ ಅಲ್ಲವೇ? ಆ ನಿಟ್ಟಿನಲ್ಲಿ ನೋಡಿದಾಗ ಕ್ವೀರ್ ಸಮುದಾಯ ಇನ್ನೂ ತನ್ನ ಲೈಂಗಿಕ ಅಸ್ಮಿತೆಯನ್ನು ಮುನ್ನೆಲೆಗೆ ತರುತ್ತಿದೆಯೆಂದರೆ ಅದಕ್ಕೆ ಸಲ್ಲಬೇಕಾದ ಸಮತೆಯ ಹೂವು ಕೈಗೆಟುಕಿಲ್ಲ ಅರ್ಥವಲ್ಲವೇ?

ನಾನು ಬರೆದ ‘ಆವರಣ’ ಕಥೆಯನ್ನು ಓದಿ ಓದುಗರೊಬ್ಬರು ಕರೆ ಮಾಡಿದ್ದರು. ಕೋವಿಡ್ ಸಾಂಕ್ರಾಮಿಕದ ಕಷ್ಟ ಕಾಲದಲ್ಲಿ ಗಂಡಿದ್ದವನು ಹೆಣ್ಣಾಗಿ ಪರಿವರ್ತನೆಯಾದ ಅನಂತು ಅನ್ನುವ ಪಾತ್ರವೊಂದು ಬಾಲ್ಯದಲ್ಲಿ ತಾನು ಬಿಟ್ಟುಬಂದಿದ್ದ ತನ್ನ ಅಣ್ಣನ ಮನೆಗೆ ಮರಳುವ ಎಳೆಯೊಂದು ಕಥೆಯಲ್ಲಿದೆ. ಅದಕ್ಕೆ ಪ್ರತಿಕ್ರಿಯಿಸುತ್ತಾ ಅವರು ಹೇಳಿದರು: ‘ಅಲ್ಲಾ ಸರ್, ಆ ಕಥೆಯ ಅಣ್ಣ, ಅಪ್ಪ, ಅಮ್ಮ ಎಲ್ಲರೂ ಅನಂತು ಅನಂತು ಅಂತ ಪ್ರಾಣಬಿಟ್ಟರು. ಅಣ್ಣ ಅಂತೂ ಕಷ್ಟಪಟ್ಟು ಓದಿ ಸಾಧನೆ ಮಾಡಿದ. ಈ ಅನಂತು ಏನೂ ಆಗಲೇ ಇಲ್ಲವಲ್ಲ ಸರ್? ಕೊನೆಗೆ ಮತ್ತೆ ಅಲ್ಲಿಯೇ ಬಂದುಬಿದ್ದ. ಅವನ ಸಾಧನೆ ಏನು’ ಎಂದರು. ಸಮಾಜ ವಿಭಿನ್ನವಾದದ್ದನ್ನು ನಾವು ಒಪ್ಪಿಕೊಳ್ಳಬೇಕೆಂದರೆ ನೀವು ಏನೋ ಮಹತ್ತರವಾದದ್ದನ್ನು ಸಾಧಿಸಿರಲೇಬೇಕು ಎನ್ನುವ ಧೋರಣೆ ಇದು. ಏನನ್ನಾದರೂ ಮಹತ್ತರವಾದದ್ದನ್ನು ಸಾಧಿಸಲು ಕ್ವೀರ್‌ ಸಮುದಾಯದ ವ್ಯಕ್ತಿಗಳು ಪ್ರಯತ್ನಿಸಿ ಬಳಲಿದ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಎಲ್ಲರೂ ಅಕ್ಕಯ್ ಪದ್ಮಸಾಲಿ, ರೇವತಿ, ಮಂಜಮ್ಮ ಜೋಗತಿ, ಕರಣ್ ಜೋಹರ್, ಹಿಮಾ ದಾಸ್, ವಸುಧೇಂದ್ರ ಆಗಲು ಸಾಧ್ಯವಿಲ್ಲವಲ್ಲ. ಅವರೂ ನಮ್ಮ ನಿಮ್ಮಂತೆ ಒಂದು ಸಹಜವಾದ ಜೀವನವನ್ನು ನಡೆಸಲು ಸಾಧ್ಯವಾಗಬೇಕಲ್ಲವೇ?

ಇನ್ನೊಂದು ಮುಖ್ಯವಾದ ವಿಷಯ ಭಾಷೆಯ ಬಗೆಗಿನದು. ಯಾವುದೇ ರಾಜಕೀಯ ಪಕ್ಷವಿರಲಿ, ಅದು ತನ್ನ ಎದುರಾಳಿ ಪಕ್ಷವನ್ನು ಜರಿಯಬೇಕಾದರೆ ಸ್ತ್ರೀಕೇಂದ್ರಿತ ಬೈಗುಳಗಳ ಮುಂದುವರಿಕೆಯಾಗಿ ಕ್ವೀರ್ ಸಮುದಾಯದ ಬಗೆಗಿನ ಬೈಗುಳಗಳೂ ಇರುತ್ತವೆ. ‘ಕೈಗೆ ಬಳೆ ತೊಟ್ಟುಕೊಂಡಿದ್ದೀಯಾ’ ಎಂದು ಬಳಸುವಂತೆಯೇ ‘ಷಂಡ’ ‘ಕೈಲಾಗದವನು’ ‘ಹೆಣ್ಣಿಗ’ ಹೀಗೆ ಪದಪುಂಜಗಳನ್ನು ಬಳಸಲಾಗುತ್ತದೆ. ಇವುಗಳು ಏನನ್ನು ಸೂಚಿಸುತ್ತಿವೆ?

ಸಂತಾನೋತ್ಪತ್ತಿ ಮಾಡಲಾಗದವರು ಬದುಕಲು ಯೋಗ್ಯರಲ್ಲ ಎಂಬ ಅರ್ಥವನ್ನಲ್ಲವೇ ಆ ಪದಗಳು ದಾಟಿಸುವುದು? ಇದೇ ಪ್ರಶ್ನೆಯನ್ನು ನಿಜವಾಗಿಯೂ ಎದುರುಗೊಂಡರೆ ಅದಕ್ಕೆ ಉತ್ತರವೇನಿದ್ದೀತು? ಕ್ವೀರ್ ಸಮುದಾಯದ ಜನ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು. ಬಾಡಿಗೆ ತಾಯ್ತನದ ಮೂಲಕ ತಮ್ಮದೇ ಆದ ಮಕ್ಕಳನ್ನು ಪಡೆಯಬಹುದು. ದತ್ತು ಪಡೆಯುವ ಹಕ್ಕು ಈ ಸಮುದಾಯದ ಜನಕ್ಕೆ ಬಂದರೆ ಅದು ಆ ಮಕ್ಕಳಿಗೆ ಆಸರೆಯಾಗುವುದಿಲ್ಲವೇ?

ಕನ್ನಡ ಸಿನಿಮಾರಂಗದಲ್ಲಿ, ಅದರಲ್ಲೂ ಕಮರ್ಷಿಯಲ್ ಸಿನಿಮಾಗಳಲ್ಲಿ, ಕ್ವೀರ್ ಸಮುದಾಯವನ್ನು ಕ್ಯಾರಿಕೇಚರ್ ಮಟ್ಟದಿಂದ ಮೇಲೆ ನೋಡಲೇ ಇಲ್ಲ. ಕಲಾತ್ಮಕ ಸಿನಿಮಾಗಳ ಮಟ್ಟಿಗೆ ‘ನಾನು ಅವನಲ್ಲ, ಅವಳು’ ‘ಹರಿಕಥಾಪ್ರಸಂಗ’ ಮುಂತಾದ ಚಿತ್ರಗಳು ತೆರೆಕಂಡರೂ ಅವು ಜನಸಾಮಾನ್ಯರಿಗೆ ತಲುಪಿದ್ದು ಇಲ್ಲವೇ ಇಲ್ಲ. ಆ ನಿಟ್ಟಿನಲ್ಲಿ ಕಮರ್ಷಿಯಲ್ ಸಿನಿಮಾ ಮಾಡುವವರ ಹೊಣೆ ತುಂಬಾ ಮಹತ್ವದ್ದು ಎಂದು ನನಗೆ ಯಾವಾಗಲೂ ಅನಿಸುತ್ತದೆ.

ಇದಕ್ಕೆ ಅಪವಾದವೆಂಬಂತೆ ಕನ್ನಡ ರಂಗಭೂಮಿಯಲ್ಲಿ ಹಲವಾರು ಒಳ್ಳೆಯ ಪ್ರಯತ್ನಗಳಾಗಿವೆ. ವಸುಧೇಂದ್ರರ ಮೋಹನಸ್ವಾಮಿಯನ್ನು ರಂಗರೂಪಕ್ಕೆ ತರಲಾಗಿದೆ. ರೇವತಿ ಅವರ ಆತ್ಮಕಥೆ ಆಧರಿಸಿದ ‘ಬದುಕು ಬಯಲು’ ಪ್ರದರ್ಶನವಾಗಿದೆ. ಬೆಂಗಳೂರು ಥಿಯೇಟರ್ ಕಲೆಕ್ಟಿವ್‌ನವರು ಅಭಿನಯಿಸಿದ ವಿಜಯ್ ತೆಂಡೂಲ್ಕರ್ ನಾಟಕ ಆಧಾರಿತ ಲೆಸ್ಬಿಯನ್ ಪ್ರೇಮಕಥೆ ಉಳ್ಳ ‘ಒಂದು ಪ್ರೀತಿಯ ಕಥೆ’, ಧೀಮಹಿ ತಂಡದಿಂದ ಪ್ರದರ್ಶನವಾದ ‘ಪತಂಗ ಪ್ರಭಾವ’, ‘ಅಮ್ಮ ಮತ್ತು ಸುಹೇಲ್’ ಹೀಗೆ ಹಲವಾರು ನಾಟಕಗಳು ಕ್ವೀರ್ ಕಥೆಗಳನ್ನು ಒಳಗೊಂಡಿದ್ದವು. ಇದು ನಿಜಕ್ಕೂ ಗಮನಾರ್ಹವಾದದ್ದು.

ಸಾಹಿತ್ಯದಲ್ಲೂ ಒಳ್ಳೊಳ್ಳೆಯ ಪುಸ್ತಕಗಳು ಬಂದವು. ವಸುಧೇಂದ್ರರ ಮೋಹನಸ್ವಾಮಿಯ ಆಚೆಗೆ ಕಾವ್ಯಾ ಕಡಮೆಯವರ ‘ಪುನರಪಿ’, ಇತ್ತೀಚಿಗೆ ಬಂದ ಸುಶಾಂತ್ ಕೋಟ್ಯಾನ್ ಅವರ ‘ದೀಪವಿರದ ದಾರಿಯಲ್ಲಿ’, ಕೆ. ಸತ್ಯನಾರಾಯಣ ಅವರ ‘ಲೈಂಗಿಕ ಜಾತಕ’ ಮುಂತಾದವುಗಳನ್ನು ಹೆಸರಿಸಬಹುದು. ಕಥೆಗಳ ಮಟ್ಟಿಗಂತೂ ಹಲವು ಯುವ ಬರಹಗಾರರು ಧೈರ್ಯದಿಂದ ಕ್ವೀರ್ ವಿಷಯಗಳ ಬಗ್ಗೆ ಬರೆಯುತ್ತಿದ್ದಾರೆ. ಮುದಿರಾಜ್ ಬಾಣದ್ ಅವರ ‘ಚಾನ್ನೆ’, ಮುಸ್ತಫಾ ಅವರ ‘ಹರಾಂನ ಕಥೆಗಳು’, ‘ನೀಲಕುರಿಂಜಿ’ ಕೃತಿಗಳಲ್ಲಿ ಹಲವಾರು ಕ್ವೀರ್ ಕಥೆಗಳಿವೆ. ಕ್ವೀರ್ ಜೀವಗಳ ಆತ್ಮಕಥೆಗಳಿಗೆ ಈ ವರ್ಷ ಸುಗ್ಗಿ. ಮಾನವಿ ಬಂಡೋಪಾಧ್ಯಾಯ ಅವರ ‘ಗಂಡು ಜೀವ ಹೆಣ್ಣು ಭಾವ’, ಮಂಜಮ್ಮ ಜೋಗತಿ ಅವರ ‘ನಡುವೆ ಸುಳಿವ ಹೆಣ್ಣು’, ಅಕ್ಕಯ್ ಪದ್ಮಸಾಲಿ ಅವರ ‘ಅಕ್ಕಯ್’ ಓದುಗರಿಗೆ ಹೊಸ ಲೋಕವನ್ನೇ ತೆರೆದಿಟ್ಟವು. ಅವರ ಕಾವ್ಯದಲ್ಲಿ ಶಿಲೋಕ್ ಮುಕ್ಕಾಟಿ, ಚಾಂದನಿ ಗಗನ, ರೂಮಿ ಹರೀಶ್, ಉಮಿ ಅವರಲ್ಲದೆ ಅನೇಕರು ಬರೆಯುತ್ತಿದ್ದಾರೆ. ಈ ಮಟ್ಟಿಗೆ ಬೆಳವಣಿಗೆಗಳು ಆಶಾದಾಯಕವಾಗಿ ಕಂಡಿವೆ.

ಕ್ವೀರ್ ಸಮುದಾಯದವರು ಅವರದೇ ಆದ ಸ್ವ ಸಹಾಯ ಗುಂಪುಗಳನ್ನು ಕಟ್ಟಿಕೊಂಡಿದ್ದಾರೆ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಉಚಿತವಾಗಿ ಚಿಕಿತ್ಸೆ ಕೊಡುವ ಸಮುದಾಯಸ್ನೇಹಿ ಕೌನ್ಸೆಲರುಗಳಿದ್ದಾರೆ, ಸಮುದಾಯ ಕೇಂದ್ರಿತ ಚಟುವಟಿಕೆಗಳಾಗುತ್ತವೆ. ಭಾರತದ ಅನೇಕ ಕಡೆ ಕ್ವೀರ್ ಚಿತ್ರೋತ್ಸವಗಳಾಗುತ್ತವೆ. ಅನೇಕ ಖಾಸಗಿ ಕಂಪನಿಗಳಲ್ಲಿ ಕ್ವೀರ್ ಸಮುದಾಯವನ್ನು ಒಳಗೊಳ್ಳುವ ಪ್ರಯತ್ನಗಳಾಗುತ್ತಿವೆ. ಯುನಿಸೆಕ್ಸ್ ಶೌಚಾಲಯಗಳ ನಿರ್ಮಾಣ ಮೆಟ್ರೊ ಸಿಟಿಗಳಲ್ಲಿ ಒಂದು ಬದಲಾವಣೆಯನ್ನು ಸೂಚಿಸುತ್ತಿವೆ. ಆದರೆ ಇವೆಲ್ಲವೂ ನಗರಕೇಂದ್ರಿತವಾದ ಬೆಳವಣಿಗೆಗಳು. ಇಂತಹ ಮುಕ್ತ ವಾತಾವರಣ ಹಳ್ಳಿಗಳು, ತಾಲ್ಲೂಕುಗಳು, ಜಿಲ್ಲೆಗಳು, ಅರೆ ಪಟ್ಟಣಗಳ ಕಡೆ ಇಲ್ಲವೆಂದೇ ಹೇಳಬೇಕು. ಅಲ್ಲಿಯವರೆಗೂ ತಲುಪುವ ಮಾರ್ಗಗಳು ಯಾವುವು ಎಂಬುದನ್ನು ನೆನೆಸಿಕೊಂಡರೆ ಕ್ವೀರ್ ಸಮುದಾಯ ನಡೆಯಬೇಕಾದ ದಾರಿ ದೂರವಿದೆ ಎಂದೇ ಹೇಳಬೇಕು.

ಇಲ್ಲಿ ಹೇಳಲೇಬೇಕಾದ ಮತ್ತೊಂದು ಮಾತಿದೆ. ಸುಪ್ರೀಂ ಕೋರ್ಟ್‌ ತೀರ್ಪು ಬಂದ ನಂತರದ ಮೂರು ವರ್ಷಗಳಲ್ಲಿ ಕ್ವೀರ್ ಸಮುದಾಯದ ಹುಡುಗರು ಸಮಾಜದ ಮತ್ತು ಕುಟುಂಬದ ಒತ್ತಡಗಳಿಗೆ ಹೆದರಿ ಮದುವೆಯಾದ ಎಷ್ಟೋ ಉದಾಹರಣೆಗಳಿವೆ. ಈ ಮೊದಲೂ ಆಗುತ್ತಿರಲಿಲ್ಲವಾ ಎಂದರೆ ಆಗುತ್ತಿತ್ತು. ಕೋರ್ಟ್‌ ತೀರ್ಪಿತ್ತ ಮೇಲೂ ಈ ರೀತಿಯ ಮದುವೆಗಳು ಮುಂದುವರೆಯುತ್ತಿವೆ ಎಂದರೆ ಸಮುದಾಯದಲ್ಲಿನ ಜನರಿಗೆ ತಮ್ಮ ಅಸ್ಮಿತೆಯನ್ನು ಒಪ್ಪಿಕೊಳ್ಳುವ ಧೈರ್ಯ ಬಂದಿಲ್ಲವೆಂದೇ ಅರ್ಥ. ಇವೆಲ್ಲದರ ನಡುವೆ ನಲುಗುವುದು ಇವರನ್ನು ಮದುವೆಯಾಗಿ ಬರುವ ಹೆಣ್ಣುಮಕ್ಕಳಲ್ಲವೇ? ಎಷ್ಟೋ ಸಂದರ್ಭಗಳಲ್ಲಿ ಪೋಷಕರಿಗೆ ಅವರ ಮಕ್ಕಳ ಬಗೆಗೆ ಹೀಗೊಂದು ಸುಳಿವು ಇದ್ದೇ ಇರುತ್ತದೆ. ಬೆದರಿಸಿ ಇಲ್ಲವೆ ನಾನಾ ಉಪಾಯ ಮಾಡಿ ಮದುವೆ ಮಾಡಿಸಿಬಿಡುತ್ತಾರೆ. ಇಲ್ಲೂ ಕೂಡ ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡುವ ಪುರುಷಪ್ರಾಧಾನ್ಯ ಮನೋಸ್ಥಿತಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಕ್ವೀರ್ ಸಮುದಾಯದ ಜನ ಯಾವುದೋ ಒತ್ತಡಕ್ಕೆ ಮಣಿಯಬಾರದು ಎಂಬುದನ್ನು ಮನಗಾಣಬೇಕು. ಆಗ ದೀಪದ ದಾರಿಯ ಬಾಗಿಲು ತಾನಾಗೇ ತೆರೆದುಕೊಳ್ಳುತ್ತದೆ. ಆ ದೀಪದ ದಾರಿಯಲ್ಲಿ ಹೆಮ್ಮೆಯಿಂದ ನಾವೆಲ್ಲರೂ ಹೆಜ್ಜೆ ಹಾಕಬಹುದು. ಪೂರ್ಣಚಂದ್ರ ತೇಜಸ್ವಿ ಹೇಳಿದಂತೆ ‘ನಾವು ಅಂದುಕೊಂಡಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಲ್ಲ’. ಹೋರಾಟದ ಧೈರ್ಯವನ್ನು ಜತನವಾಗಿ ನಮ್ಮೊಳಗೇ ಸಾಕುತ್ತಿರಬೇಕು ಅಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT