ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ: ಅಧಿಕಾರ ಕ್ರೌರ್ಯದ ಫಲ ಫೂಲನ್

Last Updated 30 ಜುಲೈ 2022, 19:31 IST
ಅಕ್ಷರ ಗಾತ್ರ

ದೌರ್ಜನ್ಯದ ವಿರುದ್ಧ ಸಿಡಿದೆದ್ದ, ಒಂದು ಕಾಲಕ್ಕೆ ಆಳುವ ಸರ್ಕಾರದ ನಿದ್ದೆ ಕೆಡಿಸಿದ್ದ, ಡಕಾಯಿತರ ನಾಯಕಿ ಎಂದೇ ಪ್ರಖ್ಯಾತರಾಗಿದ್ದ, ಮಾಜಿ ಸಂಸದೆ ಫೂಲನ್ ದೇವಿಯವರ ಬದುಕನ್ನು ಆಧರಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ‘ಫೂಲನ್‌ ದೇವಿ’ ನಾಟಕ ಇತ್ತೀಚೆಗೆ ಪ್ರದರ್ಶನಗೊಂಡಿತು.

***

‘ಒಬ್ಬ ರಾಜ ಮತ್ತೊಬ್ಬ ರಾಜನ ಮೇಲೆ ದಂಡೆತ್ತಿ ಹೋದರೆ ಚಕ್ರವರ್ತಿ ಪಟ್ಟ ಕಟ್ತೀವಿ. ಒಬ್ಬ ಸೈನಿಕ ತನ್ನ ಶತ್ರು ಸೈನಿಕನನ್ನು ಕೊಂದರೆ ವೀರ ಪಟ್ಟ ಕಟ್ತೀವಿ. ನನಗಾದ ದೌರ್ಜನ್ಯ, ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಕ್ಕೆ ನನಗೆ ಡಕಾಯತಿ ಪಟ್ಟ ಕಟ್ತಾರೆ...’

ಹೀಗೆ ರಂಗದ ಮೇಲೆ ನಿಂತು ಪ್ರೇಕ್ಷಕರಿಗೆ ಸವಾಲೆಸೆದದ್ದು ಫೂಲನ್. ದೌರ್ಜನ್ಯದ ವಿರುದ್ಧ ಸಿಡಿದೆದ್ದ, ಒಂದು ಕಾಲಕ್ಕೆ ಆಳುವ ಸರ್ಕಾರದ ನಿದ್ದೆ ಕೆಡಿಸಿದ್ದ, ಡಕಾಯಿತರ ನಾಯಕಿ ಎಂದೇ ಪ್ರಖ್ಯಾತರಾಗಿದ್ದ, ಮಾಜಿ ಸಂಸದೆ ಫೂಲನ್ ದೇವಿಯವರ ಬದುಕನ್ನು ಆಧರಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ‘ಫೂಲನ್‌ ದೇವಿ’ ನಾಟಕ ಇತ್ತೀಚೆಗೆ ಪ್ರದರ್ಶನಗೊಂಡಿತು.

ಸ್ವಾತಂತ್ರ್ಯ ಭಾರತದ ಬಹುದೊಡ್ಡ ಕಥನವನ್ನು, ರಾಜಕೀಯ ಮತ್ತು ಸಾಂಸ್ಕೃತಿಕ ವ್ಯವಸ್ಥೆಯ ಕ್ರೂರತೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ, ಸಾಂಸ್ಕೃತಿಕ ಪರಂಪರೆಯನ್ನು ಎದುರಿಸುತ್ತಲೇ ಬೆಳೆದ ಫೂಲನ್‌ ಅವರ ಬದುಕು ರಂಗದ ಮೇಲೆ ಅನಾವರಣವಾಯಿತು. ಬದುಕಿನುದ್ದಕ್ಕೂ ನೋವು, ಸಂಕಟ, ಅಸಹಾಯಕತೆ, ಅದರಿಂದ ಉಂಟಾದ ಕ್ರೋಧ, ಕ್ರೌರ್ಯ, ಬಂದೂಕಿನ ಮೊರೆತ... ಅದರಾಚೆಗಿನ ಪ್ರೇಮ ಮತ್ತು ಸಹಬಾಳ್ವೆಯನ್ನು ಪ್ರೇಕ್ಷಕನ ಎದೆಗೆ ಇಳಿಸಿದವು.

ಬಾಲ್ಯವಿವಾಹಕ್ಕೆ ಒಳಗಾದ ಫೂಲನ್‌, ತನ್ನ ಗಂಡ, ಕುಟುಂಬ, ಆಡಳಿತ ವ್ಯವಸ್ಥೆ, ಮೇಲ್ಜಾತಿಗಳ ದಬ್ಬಾಳಿಕೆ, ಅತ್ಯಾಚಾರ ಇವೇ ಮೊದಲಾದವುಗಳಿಂದ ಉಂಟಾದ ಅಸಹಾಯಕತೆಯಿಂದ ಹಿಂಸೆಗೆ ತಿರುಗಿದ ರೀತಿ ನಿಬ್ಬೆರಗಾಗಿಸಿತು. ಉಳ್ಳವರ ಮನೆಯನ್ನು ದೋಚಿ ಹಸಿದ ಒಡಲುಗಳ ತಣಿಸುವ, ನೊಂದವರ ಬಾಳಿಗೆ ಬೆಳಕಿನ ಕಿಂಡಿಯಾಗುವ ಪ್ರೀತಿಯ ದ್ಯೋತಕವಾದ ಫೂಲನ್‌ ಕಥನವು ಕನ್ನಡ ರಂಗ ಪರಂಪರೆಗೆ ಹೊಸ ಮೆರಗನ್ನು ನೀಡಿತು. ಗಾಂಧಿ ಮತ್ತು ಭವಾನಿಯ ಸಿಂಬಲೈಸ್‍ಗಳು ಫೂಲನ್‌ ಅವರನ್ನು ಅರ್ಥಮಾಡಿಕೊಳ್ಳಲು ಇರುವ ಎರಡು ಶಕ್ತಿಗಳು ಎನ್ನುವುದನ್ನು ರಂಗದ ಮೇಲೆ ನಿರೂಪಿಸಿದ ಬಗೆಯೂ ವಿಶೇಷವಾಗಿತ್ತು.

ಸಾಂಸ್ಕೃತಿಕ ಯಜಮಾನಿಕೆಗೆ ಹೆಣ್ಣು ತುಪಾಕಿಯಾಗಿ, ಧ್ವನಿ ಮಾತ್ರದಿಂದಲೇ ದರ್ಪಗಳ ಅಡಗಿಸುವ ಶಕ್ತಿ ಭವಾನಿಯಾಗಿ, ಚರಿತ್ರೆಯ ನಡುಗಿಸುವ ಹೆಣ್ಣು ಧ್ವನಿಯಾದ ಫೂಲನ್‌ ಅವರ ಪಾತ್ರವನ್ನು ನಿಬಾಯಿಸಿದ್ದು ನಯನ
ಜೆ. ಸೂಡ. ಈಗಾಗಲೇ ಚಂದ್ರಗಿರಿಯ ತೀರದಲ್ಲಿ ‘ನಾದಿರ’ಳಾಗಿ, ಗುಲಾಬಿ ಗ್ಯಾಂಗ್‍ನಲ್ಲಿ ‘ಕಮಲದೇವಿ’ಯಾಗಿ, ಅಕ್ಕಯ್ ನಾಟಕದಲ್ಲಿ ‘ಅಕ್ಕಯ್ ಪದ್ಮಶಾಲಿ’ಯಾಗಿ ಅಭಿನಯಿಸಿ ಗೆದ್ದಿರುವ ಇವರು ‘ಫೂಲನ್‌’ ಆಗಿಯೂ ಅಷ್ಟೇ ಶಕ್ತಿಶಾಲಿಯಾಗಿ ಪಾತ್ರವನ್ನು ನಿಭಾಯಿಸಿದರು.

ಫೂಲನ್‌ ಅವರ ಕ್ರೌರ್ಯ ಮತ್ತು ಪ್ರೇಮವನ್ನು ಸಶಕ್ತವಾಗಿ ರಂಗದ ಮೇಲೆ ಅಭಿನಯಿಸುವ ಮೂಲಕ ಪ್ರೇಕ್ಷಕರಲ್ಲಿ ಫೂಲನ್‌ ಎಂದರೆ ಡಕಾಯಿತೆ ಮಾತ್ರವಲ್ಲ, ಅವಳೊಂದು ಸುಂದರ ಕನಸನ್ನು ಕಂಡ ಮಹಿಳೆ ಎನ್ನುವುದನ್ನೂ ತೋರಿಸಿದರು. ರಂಗದ ಮೇಲೆ ನಯನ ಅವರಷ್ಟೇ ಸಶಕ್ತವಾಗಿ ತಮ್ಮ ಪಾತ್ರವನ್ನು ಕಟ್ಟಿಕೊಟ್ಟಿದ್ದು ಫೂಲನ್‌ ಅವರ ತಂದೆಯ ಪಾತ್ರವನ್ನು ಮಾಡಿದ್ದ ಲಕ್ಷ್ಮೀರೆಡ್ಡಿಯವರು. ಸಹೋದರರಿಂದಲೇ ಆಗುವ ಅನ್ಯಾಯ, ಹೆಣ್ಣು ಮಕ್ಕಳ ತಂದೆಯ ಅಸಹಾಯಕತೆ, ಮಗಳ ಮೇಲಿನ ಅಗಾಧ ಪ್ರೀತಿ ಪ್ರೇಕ್ಷಕರ ಕಣ್ಣನ್ನು ತೇವಗೊಳಿಸಿದವು. ಉಳಿದಂತೆ ಡಕಾಯಿತರ ಗುಂಪಿನಲ್ಲಿ ಮಾನ್‍ಸಿಂಗ್ ಪಾತ್ರದಲ್ಲಿ ಪ್ರದೀಪ್, ಬಾಬಾ ಮುಸ್ತಾಕಿ ಅವರ ಪಾತ್ರದಲ್ಲಿ ರಾಘವೇಂದ್ರ ಹಾಗೂ ಫೂಲನ್‌ ಅವರು ಶರಣಾಗುವ ಹಾಗೆ ಮಾತುಕತೆ ನಡೆಸಿದ ರಾಜೇಂದ್ರ ಚತುರ್ವೇದಿಯವರ ಪಾತ್ರವನ್ನು ಮಾಡಿದ ಸಬಾಸ್ಟಿನ್ ಅವರು ಪ್ರೇಕ್ಷಕರ ಗಮನ ಸೆಳೆದರು.

ಒಂದು ಕಡೆ ರಂಗದ ಮೇಲೆ ಪಾತ್ರಗಳು ಜೀವತುಂಬುತ್ತಿದ್ದರೆ, ಅದಕ್ಕೆ ಸಂಗೀತದ ಮೂಲಕ ಜೀವಕಳೆ ನೀಡಿದವರು ರಾಜಗುರು ಹೊಸಕೋಟಿ. ನಾಟಕದ ರಚನೆ ಮತ್ತು ನಿರ್ದೇಶನದ ಹೊಣೆಯನ್ನೂ ಅವರೇ ನಿಭಾಯಿಸಿದ್ದು ವಿಶೇಷ. ಬೆಳಕು, ನೆರಳಿನ ವಿನ್ಯಾಸ, ಕೃತಕ ಹೊಗೆ ಇವೆ ಮೊದಲಾದವುಗಳ ಮೂಲಕ ಫೂಲನ್‌ ಅವರ ಪ್ರವೇಶವು ವರ್ಣರಂಜಿತವಾಗಿ ಮೂಡಿ ಬಂತು. ರಂಗದ ಮೇಲೆ ತಮಟೆಯ ವಾದ್ಯವನ್ನು ಬಳಸುವಾಗ ಹಾಡಿನ ಸಾಹಿತ್ಯವು ಗಮ್ಯವಾಗಿ ಅಸ್ಪಷ್ಟವಾಗುತ್ತದೆ ಎನ್ನುವುದೊಂದನ್ನು ಹೊರತುಪಡಿಸಿದರೆ ನಾಟಕವು ನಿರ್ದೇಶನದಲ್ಲಿಯೂ ಹೊಸ ಪ್ರಯೋಗಶೀಲತೆಗೆ ಕೈಹಾಕಿ ಗೆದ್ದಿದೆ.

ಸ್ವಾತಂತ್ರ್ಯ, ಸಮಾನತೆಯ ಕನಸನ್ನು ಕಂಡ ಪ್ರತಿಯೊಬ್ಬರಲ್ಲಿಯೂ ಹುಡುಕಬಹುದಾದ ಧ್ವನಿಯೊಂದನ್ನು ಫೂಲನ್‌ ಅವರಲ್ಲಿಯೂ ಕಾಣಬಹುದು. ಫೂಲನ್‌ ಅವರ ಬಗೆಗೆ ಏನೇ ಚರ್ಚೆ, ವಿಮರ್ಶೆಗಳಿದ್ದರೂ ಕೂಡ ವಾಸ್ತವದ ಹಲವು ಸಾಂಸ್ಕೃತಿಕ ಮತ್ತು ರಾಜಕೀಯ ಕುರೂಪಗಳನ್ನು ಸರಿಮಾಡಿಕೊಳ್ಳದೇ ಹೋಗದಿದ್ದಲ್ಲಿ, ಅಸಹಾಯಕತೆಯು ಕ್ರೌರ್ಯವಾಗಿ ಅದು ನಮ್ಮನ್ನೇ ಬಲಿ ತೆಗೆದುಕೊಳ್ಳುತ್ತದೆ ಎನ್ನುವ ಎಚ್ಚರಿಕೆಯನ್ನೂ ಈ ನಾಟಕ ನೀಡಿತು. ಸಮುದಾಯದ ಒಳಿತಿಗಾಗಿ ಸದಾ ತುಡಿಯುತ್ತಲೇ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಾತ್ವಿಕ ರಂಗಪಯಣ ತಂಡವು ‘ಸಮಾನತೆಯ ಕಡೆಗೆ ಕ್ರಾಂತಿಯ ಪಯಣ’ ಆರಂಭಿಸಿರುವುದು ಈ ಪ್ರಯೋಗದಿಂದ ಗೊತ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT