ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿನಯ ಕಲಾವಿದ ಕೊಡಗನೂರು ಜಯಕುಮಾರ

Last Updated 7 ಅಕ್ಟೋಬರ್ 2020, 4:04 IST
ಅಕ್ಷರ ಗಾತ್ರ

ಹಿರಿಯ ರಂಗಕಲಾವಿದ ಕೊಡಗನೂರು ಜಯಕುಮಾರ ತೀರಿಕೊಂಡಿದ್ದಾರೆ. ಅವರ ಸಾವು ಒಬ್ಬ ಸಜ್ಜನ, ಸಹೃದಯ ಕಲಾವಿದನ ಕಣ್ಮರೆ. ತಾನೊಬ್ಬ ಪ್ರತಿಭಾಶಾಲಿ ಕಲಾವಿದನೆಂಬ ಎಳ್ಳರ್ಧ ಕಾಳಿನಷ್ಟು ನೆನಪು ಕೂಡ ಅವರ ಬಳಿ ಸುಳಿಯುತ್ತಿರಲಿಲ್ಲ. ತನಗಿಂತ ಕಿರಿಯರೊಂದಿಗೂ ಸದಾ ಸವಿನಯದ ಮಾತುಗಳು. ವರ್ತಮಾನದ ವೃತ್ತಿ ರಂಗಭೂಮಿಯಲ್ಲಿ ಇಂತಹ ಸಜ್ಜನಿಕೆಯ ರಂಗವ್ಯಕ್ತಿತ್ವ ಇತ್ತೆಂಬುದೇ ಸೋಜಿಗ‌.

ಹತ್ತನೇ ವಯಸ್ಸಿಗೆ ರಂಗಭೂಮಿಯ ನಂಟು. ಹಳ್ಳಿಯ ದೊಡ್ಡಾಟಗಳಿಂದ ಬಣ್ಣದ ಬದುಕು ಆರಂಭ. ಜಯಕುಮಾರ ಅಭಿಜಾತ ಕಲಾವಿದ. ಮತ್ತೆ ಮತ್ತೆ ರಾಜಕುಮಾರ್ ಅವರನ್ನು ಪ್ರತ್ಯಕ್ಷವಾಗಿಸುವ ಅಭಿನಯ ಚತುರತೆ. ನಾಟಕ ಪೌರಾಣಿಕವೋ, ಸಾಮಾಜಿಕವೋ ಯಾವುದೇ ಇರಲಿ ಜಯಕುಮಾರಗೆ ಹೀರೋ ಪಾತ್ರ ಮುಡಿಪು. ನೋಡಲು ವರನಟನ ತದ್ರೂಪು.

ಗುಬ್ಬಿ ಕಂಪನಿ ಸೇರಿದಂತೆ ಗುಡಗೇರಿ, ಕುಮಾರಸ್ವಾಮಿ, ಸುಳ್ಳದ ದೇಸಾಯಿ, ಚಿಂದೋಡಿ ಕಂಪನಿ... ಹೀಗೆ 20ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ 50 ವರ್ಷಗಳ ಕಾಲ ವೃತ್ತಿರಂಗಭೂಮಿಯ ನಿರಂತರ ರಂಗವ್ಯವಸಾಯ. ಕಲಬುರ್ಗಿಯಲ್ಲಿ ಮೊಕ್ಕಾಂ ಮಾಡಿದ್ದ ನಾಟಕ ಕಂಪನಿಯೊಂದರಲ್ಲಿ ಕಳೆದ ವರ್ಷ ಅಭಿನಯಿಸುತ್ತಿರುವಾಗ ಲಘು ಹೃದಯಾಘಾತ. ಸಕ್ಕರೆ ಕಾಯಿಲೆ ಅವರನ್ನು ಯಾಮಾರಿಸಿದೆ. ಎರಡನೇ ಬಾರಿಗೆ ಆದಾಗ, ದಾವಣಗೆರೆಗೆ ಧಾವಿಸಿ ತಜ್ಞ ವೈದ್ಯಕೀಯ ಚಿಕಿತ್ಸೆ ಪಡೆದು ಎರಡು ಸ್ಟೆಂಟ್ ಅಳವಡಿಕೆ.

ಆಗ ಶಿವಸಂಚಾರದ ಶ್ರೀ ಪಂಡಿತಾರಾಧ್ಯಶ್ರೀಗಳು ವೈದ್ಯರಿಗೆ ಫೋನ್ ಮೂಲಕ ಹೇಳಿ ನೆರವಾದರು. ಇನ್ನೇನು ಮನೆಗೆ ಬರಬೇಕೆನ್ನುವಾಗ ಎರಡೂ ಕಿಡ್ನಿಗಳು ಕೈಕೊಡುವ ಸೂಚನೆಗಳು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ. ಆಗ ಅವರ ಶ್ರೀಮತಿಯವರ ಮನವಿಗೆ ಸ್ಪಂದಿಸಿ ಅನೇಕ ಸಹೃದಯರು ಆರ್ಥಿಕವಾಗಿ ನೆರವಾದರು. ಹೃದಯನಾಳಗಳಿಗೆ ಸ್ಟೆಂಟ್‌ಗಳನ್ನು ಜೋಡಿಸಿಕೊಂಡ ಜಯಕುಮಾರ ಒಂದು ವರ್ಷ ರಂಗದ ನಂಟಿಲ್ಲದೇ ಕಳೆದುದು ಬಲುದುಸ್ತರ. ಅವರ ರಂಗಬದುಕಿನ ಈ ಒಂದು ವರ್ಷ ಹೊರತುಪಡಿಸಿದರೆ ಅರ್ಧಶತಮಾನಕ್ಕೂ ಹೆಚ್ಚು ಅವಧಿ ಬಣ್ಣದ ಬದುಕನ್ನು ತೀವ್ರವಾಗಿ ಬದುಕಿದವರು.

ಶಿವಣ್ಣನ ‘ಜನುಮದ ಜೋಡಿ’ ಸೇರಿದಂತೆ ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ದರ್ಶನ್ ಅಂತಹ ಹೆಸರಾಂತ ನಟರ ಜತೆ ಅಜಮಾಸು ಐವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಅಭಿನಯಿಸಿದ ಕಿರುತೆರೆ ಧಾರಾವಾಹಿಗಳನ್ನು ಲೆಕ್ಕವಿಟ್ಟಿರಲಿಲ್ಲ. ಸಂಕ್ರಾಂತಿ, ಭಾಗೀರಥಿ, ಮಹಾಮಾಯೆ, ಮಹಾಭಾರತ ಸೇರಿದಂತೆ ಮನೆಮಾತಾಗಿದ್ದ ಪಾ.ಪ.ಪಾಂಡು ಧಾರಾವಾಹಿಯಲ್ಲಿ ಶಾಸ್ತ್ರಿ ಪಾತ್ರ ಜನಪ್ರಿಯವಾಗಿತ್ತು. ತೆಲುಗಿನ ಬೆಳ್ಳಿತೆರೆಯಲ್ಲೂ ಕನ್ನಡದ ಈ ಪ್ರತಿಭೆ ಮೆರೆದಿದೆ.

ಪೌರಾಣಿಕ ನಾಟಕಗಳಿಗೆ ಹೇಳಿ ಮಾಡಿಸಿದ ಶರೀರ ಮತ್ತು ಶಾರೀರ. ಎಚ್ಚಮ್ಮನಾಯಕ, ಟಿಪ್ಪುಸುಲ್ತಾನ, ಮದಕರಿನಾಯಕ, ನೃಪತುಂಗ ಚಕ್ರವರ್ತಿಯಾಗಿ ಜಯಕುಮಾರ ಅಭಿನಯ ಅಮೋಘ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಎಡೆಯೂರು ಸಿದ್ದಲಿಂಗೇಶ್ವರ ಮಹಾತ್ಮೆ ಪಾತ್ರಗಳು ಪ್ರೇಕ್ಷಕರನ್ನು ಭಾವ ಪರವಶತೆಯ ಜಳಕ ಮಾಡಿಸಿವೆ.

ಬೆಂಗಳೂರಿನಲ್ಲಿ ನಾ.ದೇ. ನರಸಿಂಹಮೂರ್ತಿಯವರ ‘ಪೊಲೀಸನ ಮಗಳು‘ ನಾಟಕದ ಹೀರೋ ಚಂದ್ರಶೇಖರ್ ಎಂಬ ಪೊಲೀಸ್ ಅಧಿಕಾರಿ ಪಾತ್ರದಿಂದಾಗಿ ನಾಟಕ 1,115 ನಿರಂತರ ಪ್ರದರ್ಶನ. ವರ್ಚಸ್ಸು ಕೇಳಿ ರಾಜಕುಮಾರ ಖುದ್ದು ನಾಟಕ ನೋಡಿ ಜಯಕುಮಾರ ಅಭಿನಯವನ್ನು ಮುಕ್ತಕಂಠದಿಂದ ಕೊಂಡಾಡಿದ್ದರು. ಕಳೆದ ವರ್ಷ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದೆ. ಹಿಂದಿನ ನಾಟಕ ಅಕಾಡೆಮಿ ಜಯಕುಮಾರಗೆ ಅಕಾಡೆಮಿ ಪ್ರಶಸ್ತಿ ಘೋಷಿಸಿತು. ನೂತನ ಅಕಾಡೆಮಿ ಪಟ್ಟಿಯನ್ನೇ ರದ್ದುಗೊಳಿಸಿತು. ಅವಿರತವಾಗಿ ದುಡಿದ ಬಣ್ಣದಜೀವ ಪೂರ್ಣ ವಿಶ್ರಾಂತಿಗಾಗಿ ರಂಗದಿಂದ ಸರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT