‘ಸಂಗ್ಯಾ–ಬಾಳ್ಯಾ’ ಪ್ರದರ್ಶನ

7
Sangya-Balya drama summary

‘ಸಂಗ್ಯಾ–ಬಾಳ್ಯಾ’ ಪ್ರದರ್ಶನ

Published:
Updated:
Deccan Herald

‘ನಾಟಕ ಬೆಂಗ್ಳೂರು’ ಆಯೋಜಿಸಿರುವ ರಂಗೋತ್ಸವದಲ್ಲಿ ಬುಧವಾರ ಪ್ರಯೋಗರಂಗ ತಂಡ ‘ಸಂಗ್ಯಾಬಾಳ್ಯಾ’ ನಾಟಕ ಪ್ರದರ್ಶಿಸಲಿದೆ.

ಕರ್ನಾಟಕ ಜನಪದ ರಂಗಭೂಮಿ, ಆಧುನಿಕ ಕನ್ನಡ ರಂಗಭೂಮಿಯಲ್ಲಿ ಜನಪ್ರಿಯತೆ ಪಡೆದಿರುವ ಒಂದು ಸಣ್ಣಾಟದ ಪ್ರಕಾರ ಸಂಗ್ಯಾಬಾಳ್ಯಾ. ಬೈಲವಾಡದಲ್ಲಿ ನಡೆದಿರುವ ನೈಜ ಘಟನೆಯೊಂದನ್ನು‌ ಆಧಾರವಾಗಿಟ್ಟುಕೊಂಡು ಈ‌ ನಾಟಕದ‌ ಕಥೆ ಹುಟ್ಟಿ ಬಂದಿದೆ.‌ ಅದೇ ಕಾರಣವಾಗಿ ಈ ನಾಟಕ ಲೋಕಪ್ರಿಯತೆಯನ್ನು ಪಡೆಯಿತು. ಬ್ರಿಟಿಷ್ ಸರ್ಕಾರದ ಅವಕೃಪೆಗೂ ಪಾತ್ರವಾಗಿ ಕೆಲವೊಂದು ಊರುಗಳಲ್ಲಿ ಈ ನಾಟಕದ‌ ಪ್ರದರ್ಶನ ನಿರ್ಬಂಧನೆಗೆ ಒಳಗಾಗಿತ್ತು.

ಅನೈತಿಕ ಸಂಬಂಧ ಮತ್ತು ಕೊಲೆ ಸಂಗ್ಯಾಬಾಳ್ಯಾ ನಾಟಕದ ಪ್ರಮುಖ ಘಟನೆಗಳು. ಇವುಗಳಲ್ಲಿ ಮೊದಲನೆಯದು ನಾಟಕದ ಶಿಖರವಾಗಿದ್ದು ಎರಡನೆಯದ್ದು ಮೊದಲನೆಯದರ ಅನಿವಾರ್ಯ ಫಲವಾಗಿದೆ.

ಸಂಗ್ಯಾ ಊರ ಶ್ರೀಮಂತರ ಮಗ. ಗಂಗಾ ಸಜ್ಜನ ಮನೆತನಸ್ಥದ ಹೆಣ್ಣು. ವೀರಭದ್ರ ಊರಿನ ಗಣ್ಯ ನಾಗರಿಕ. ನಾಟಕದ ಪ್ರಾರಂಭದಲ್ಲಿ ಬಾಳಣ್ಣನೊಡನೆ ಪೇಟೆಗೆ ಬಂದಾಗ ಸಂಗ್ಯಾ ಮರ್ಯಾದೆಯಿಂದ ವರ್ತಿಸುತ್ತಾನೆ. ಮರಡಿ ಬಸವಣ್ಣನ ಜಾತ್ರೆಗೆ ಹೋಗುವ ತನಕ ಗಂಗಾ ವಿನಯದಿಂದ ವರ್ತಿಸುತ್ತಾಳೆ. ಜಾತ್ರೆಯಲ್ಲಿ ಗಂಗಾಳ ರೂಪಕ್ಕೆ ಮರುಳಾಗುವ ಸಂಗ್ಯಾ ಅವಳನ್ನು ಮೋಹಿಸುವ ಆಸೆಯನ್ನು ಗೆಳೆಯ ಬಾಳ್ಯನ ಬಳಿ ಹೇಳಿಕೊಳ್ಳುತ್ತಾನೆ. ಗಂಡನ ಅಗಲಿಕೆಯಿಂದ ಉಂಟಾದ ಶೂನ್ಯ ಮತ್ತು ಪರಮ್ಮನ ಕುಟಿಲ ಬುದ್ಧಿಯ ಫಲವಾಗಿ ಗಂಗಾ ಸಂಗ್ಯಾನಿಗೆ ವಶವಾಗುತ್ತಾಳೆ. ಗಂಡುಳ್ಳ ಗರತಿಯನ್ನು ಮೋಹಿಸಬಾರದೆಂದು ಗೊತ್ತಿದ್ದೂ ಸಂಗ್ಯಾ ಅವಳನ್ನು ಕೂಡಲು ಮನಸ್ಸು ಮಾಡುತ್ತಾನೆ. ಕೊನೆಯವರೆಗೆ ಅವನಲ್ಲಿರುವ ಗುಣವೆಂದರೆ ಧೈರ್ಯವೊಂದೇ.

ಅನೈತಿಕ ಸಂಬಂಧಕ್ಕೆ ಕೊಲೆಯೇ ಶಿಕ್ಷೆಯಾಗಿರುವುದು ನಾಟಕದಲ್ಲಿ ಪಾತ್ರಗಳು ನಂಬಿರುವ ನೀತಿಗೆ ಉಚಿತವಾಗಿದೆ. ಸಂಗ್ಯಾನಿಗೆ ವಶಳಾಗುವ ಮೊದಲು ಗಂಗೆ ಅವನಿಗೆ ವ್ಯಭಿಚಾರದ ಪಾಪದ ಕುರಿತು ಉಪದೇಶ ಮಾಡುತ್ತಾಳೆ. ನಾಟಕದಲ್ಲಿನ ನೈತಿಕ ಮತ್ತು ಅನೈತಿಕ ಸಂಬಂಧಕ್ಕೆ ಪಾತ್ರಗಳೇ ಹೊಣೆಗಾರರಾಗುತ್ತವೆ. ಆ ಅನುಭವವನ್ನು ಅದರ ಸಮಗ್ರತೆಯೊಂದಿಗೆ ನಾಟಕೀಯವಾಗಿ ರಂಗದ ಮೇಲೆ ಸೃಷ್ಟಿಸಿ ಅದರ ಅನುಭವವನ್ನು ಪ್ರೇಕ್ಷಕರಲ್ಲಿ ಮೂಡಿಸುವುದೇ ನಿರ್ದೇಶಕರ ನಿಲುವಾಗಿದೆ.

‘ಸಂಗ್ಯಾಬಾಳ್ಯಾ’ ನಾಟಕ: ಪ್ರಸ್ತುತಿ– ಪ್ರಯೋಗ ರಂಗ. ರಚನೆ, ರಂಗರೂಪ–ಡಾ.ಚಂದ್ರಶೇಖರ ಕಂಬಾರ ನಿರ್ದೇಶನ– ಡಾ.ರಾಮಕೃಷ್ಣಯ್ಯ. ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ರಾತ್ರಿ 7. ಟಿಕೆಟ್ ದರ ₹ 70.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !