ಪ್ರೀತಿಯ ಬದುಕಿನ ಕಥೆ ‘ಸಿಂಹಾಚಲಂ ಸಂಪಿಗೆ’

7

ಪ್ರೀತಿಯ ಬದುಕಿನ ಕಥೆ ‘ಸಿಂಹಾಚಲಂ ಸಂಪಿಗೆ’

Published:
Updated:

ನವಿರಾದ ಭಾವನೆಗಳು, ಕನಸು, ಕಲ್ಪನೆಗಳನ್ನು ಜೋಡಿಸಿ ಹೆಣೆದ ಕಥೆಗಳೇ ಚಂದ. ಪ್ರೀತಿ, ಸಂತೋಷ, ಸ್ವಾಭಿಮಾನದ ಬದುಕಿನ ಕಥೆಗಳನ್ನು ರಂಗದ ಮೇಲೆ ತರುವ ಪ್ರಯತ್ನದ ಫಲವೇ ‘ಸಿಂಹಾಚಲಂ ಸಂಪಿಗೆ’ ನಾಟಕ.

ಕಥೆಗಾರ ವಸುಧೇಂದ್ರ‌ ಅನುವಾದಿಸಿರುವ ಸಣ್ಣ ಕಥೆಗಳನ್ನಾಧರಿಸಿದ ತೆಲುಗು ಮೂಲದ ‘ಮಿಥುನಂ’ ಪುಸ್ತಕದಿಂದ ನಾಲ್ಕು ಕಥೆಗಳನ್ನು ಆರಿಸಿಕೊಂಡು ನಾಟಕ ರೂಪ ನೀಡಲಾಗಿದೆ. ‘ಬಂಗಾರದ ಕಡಗ’, ‘ಧನಲಕ್ಷ್ಮಿ’, ‘ಮಿಥುನ’, ‘ಸೋಡಾಗೋಲಿ’ ಕಥೆಗಳು ಇಲ್ಲಿ ನಾಟಕರೂಪವಾಗಿ ಹೊರಹೊಮ್ಮಿವೆ.

ಮದುವೆಯಾಗಿ ಅಜ್ಜಿಯನ್ನು ಊರಿನಲ್ಲಿಯೇ ಬಿಟ್ಟು ಪಟ್ಟಣ ಸೇರುವ ಮೊಮ್ಮಗ ಅಜ್ಜಿ ಸತ್ತ ಮೇಲೆ ಊರಿಗೆ ಭೇಟಿ ನೀಡಿದಾಗ ಅಜ್ಜಿಯೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾನೆ. ಮೊಮ್ಮಗನ ಮದುವೆಗಾಗಿ ಬಂಗಾರದ ಕಡಗವನ್ನು ತ್ಯಾಗ ಮಾಡಿದ ಅಜ್ಜಿ ಪ್ರೀತಿಯನ್ನು ಅರಿಯುವಷ್ಟರಲ್ಲಿ ಅಜ್ಜಿಯನ್ನೇ ಕಳೆದುಕೊಂಡ ಮೊಮ್ಮಗನ ತೊಳಲಾಟದ ಕಥೆಯನ್ನು ನಾಟಕ ಒಳಗೊಂಡಿದೆ.

ಸಮಾಜದಲ್ಲಿ ಹೆಣ್ಣಿಗಿರುವ ಸ್ಥಾನಮಾನ, ಹೆಣ್ಣನ್ನು ನಡೆಸಿಕೊಳ್ಳುವ ರೀತಿ, ಪ್ರತಿಯೊಂದು ತಪ್ಪುಗಳಿಗೂ ಹೆಣ್ಣನ್ನೇ ಹೊಣೆಗಾರಳನ್ನಾಗಿಸುವುದರ ಕುರಿತು ಧನಲಕ್ಷ್ಮಿ ಕಥೆಯು ವಿವರಿಸುತ್ತಾ ಹೋಗುತ್ತದೆ. ಶ್ರೀಮಂತ ಹುಡುಗನೊಂದಿಗೆ ಧನಲಕ್ಷ್ಮಿಯನ್ನು ಬಾಲ್ಯವಿವಾಹ ವಿವಾಹ ಮಾಡಲಾಗುತ್ತದೆ. ಹಣವನ್ನು ಕಳೆದುಕೊಂಡು ಬೀದಿಗೆ ಬೀಳುವ ಕುಟುಂಬವನ್ನು ಮತ್ತೆ ಶ್ರೀಮಂತರನ್ನಾಗಿ ಮಾಡಲು ಹರಸಾಹಸ ಪಡುವ ಧನಲಕ್ಷ್ಮಿಯ ಪ್ರಯತ್ನ ಗೆಲ್ಲುತ್ತದೆಯಾದರೂ ಇಷ್ಟೆಲ್ಲಾ ಘಟನೆ ಜರುಗಲು ಅವಳೇ ಕಾರಣ ಎಂಬ ದೋಷಾರೋಪ ಹೊತ್ತ ಅವಳು ಹೇಗೆ ಎಲ್ಲವನ್ನು ಸರಿಯಾಗಿ ನಿಭಾಯಿಸುತ್ತಾಳೆ ಎಂಬುದನ್ನು ಧನಲಕ್ಷ್ಮಿ ಕಥೆಯು ವಿವರಿಸುತ್ತದೆ. 

ವಯಸ್ಸಾದ ದಂಪತಿ ಸ್ವಾಭಿಮಾನಿಗಳಾಗಿ ಯಾರ ಅವಲಂಬನೆಯೂ ಇಲ್ಲದೇ ತಮಗೆ ಬದುಕಲು ಬೇಕಾದ ಎಲ್ಲಾ ಅಗತ್ಯಗಳನ್ನು ತಾವುಗಳೇ ಪೂರೈಸಿಕೊಳ್ಳುತ್ತಾ ಪ್ರೀತಿಯಿಂದ ದಾಂಪತ್ಯ ಜೀವನವನ್ನು ಕಳೆಯುವುದರ ಕುರಿತು ಮಿಥುನ ತಿಳಿಸುತ್ತದೆ. 

ಗೋಲಿ ಸೋಡಾ ಸಂಗ್ರಹಿಸುವ ಹುಚ್ಚು ಆಸೆಯನ್ನು ಹೊಂದಿದ್ದ ಹುಡುಗನೊಬ್ಬ ಸೋಡಾ ಬಾಟೆಲ್‌ನಲ್ಲಿ ಇರುವ ಗೋಲಿಗಾಗಿ ಸೋಡಾ ನಾಯ್ಡು ಒಬ್ಬನ ಬೆನ್ನತ್ತುತ್ತಾನೆ. ಸೋಡಾ ಬಾಟೆಲ್‌ ಗಾಜನ್ನು ಹೊಡೆಯುವುದು ಅಪಶಕುನ ಎಂಬುದನ್ನು ನಂಬಿದ್ದ ನಾಯ್ಡು ಮತ್ತು ಹುಡುಗನ ನಡುವೆ ನಡೆಯುವ ಸಂಭಾಷಣೆಯಲ್ಲಿ ಆ ಊರಿನಲ್ಲಿ ನಡೆದ ಕಥೆಗಳನ್ನು ಹೇಳುತ್ತಾ ಹೋಗುತ್ತಾನೆ. ಇಲ್ಲಿ ಸೋಡಾಗೋಲಿ ಕಥೆಯನ್ನು ಉಳಿದ ಮೂರು ಕಥೆಗಳನ್ನು ವಿವರಿಸಲು ಸಂಪರ್ಕ ಸೇತುವೆಯಾಗಿ ರೂಪಿಸಿದ್ದಾರೆ. 

12 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ‘ಯುಗಶ್ರೀ’ ಹವ್ಯಾಸಿ ಕಲಾವಿದರ ತಂಡ ‘ಸಿಂಹಾಚಲಂ ಸಂಪಿಗೆ’ ನಾಟಕ ಪ್ರದರ್ಶಿಸುತ್ತಿದೆ.


ಶಂಕರ್‌ ಗಣೇಶ್‌

‘ಸಿಂಹಾಚಲಂ ಸಂಪಿಗೆ’ ನಾಟಕಕ್ಕೆ ರಂಗರೂಪ ನೀಡಿ ನಿರ್ದೇಶಿಸಿರುವ ಶಂಕರ್‌ ಗಣೇಶ್‌,  12 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬೆನಕ, ರಂಗಶಂಕರ, ಸಂಚಯ ತಂಡಗಳಲ್ಲಿ ಕೆಲಸ ಮಾಡಿದ್ದಾರೆ. ನಾಟಕ, ಕಿರುತರೆ, ಸಿನಿಮಾಗಳಲ್ಲಿ ನಟಿಸಿರುವ ಇವರು ಪೋಲಿಕಿಟ್ಟಿ, ಕಲಾಕುಂಜ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.

‘ಸಿಂಹಾಚಲಂ ಸಂಪಿಗೆ’ ನಾಟಕ ಪ್ರದರ್ಶನ

ಪ್ರಸ್ತುತಿ: ಯುಗಶ್ರೀ,

ನಿರ್ದೇಶನ: ಶಂಕರ್ ಗಣೇಶ್,

ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ನಾಳೆ ರಾತ್ರಿ 7.30.

ಪ್ರವೇಶ ಶುಲ್ಕ: ₹150

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !