ಅದೃಷ್ಟ ತಿಳಿಸುವ ಶುಕ್ರವಾರ: ತಮನ್ನಾ

ಮಂಗಳವಾರ, ಜೂನ್ 18, 2019
23 °C

ಅದೃಷ್ಟ ತಿಳಿಸುವ ಶುಕ್ರವಾರ: ತಮನ್ನಾ

Published:
Updated:
Prajavani

ಹಾಲು ಬಿಳುಪಿನ, ಸುಂದರ ಮೈ ಮಾಟದ ನಟಿ ತಮನ್ನಾ ಭಾಟಿಯಾ ಟಾಲಿವುಡ್ ಹಾಗೂ ಕಾಲಿವುಡ್‌ನ ಇಂದಿಗೂ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ತಮ್ಮ 15ನೇ ವಯಸ್ಸಿನಲ್ಲೇ ನಟನೆ ಆರಂಭಿಸಿದ ಈ ಚೆಲುವೆ ಸಿನಿರಂಗದ ಕುರಿತ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.  

‌ಮುಂಬೈನಲ್ಲಿ ಹುಟ್ಟಿ ಬೆಳೆದ ಇವರ ಚೊಚ್ಚಲ ಸಿನಿಮಾ ತೆಲುಗಿನ ಶ್ರೀ. 2005ರಲ್ಲಿ ಚಿತ್ರರಂಗದಲ್ಲಿ ಹೆಜ್ಜೆಯೂರಿ ಯಶಸ್ವಿ ನಟಿ ಎನ್ನಿಸಿಕೊಂಡರು. ಆರಂಭದ ದಿನಗಳಿಂದಲೂ ಗೆಲುವಿನ ಗರಿ ಬೆನ್ನತ್ತಿ ತಿರುಗುತ್ತಿದ್ದ ನಟಿಗೆ ಹೆಚ್ಚು ತಂದು ಕೊಟ್ಟ ಸಿನಿಮಾ ಹ್ಯಾಪಿ ಡೇಸ್ ಹಾಗೂ ಕಲ್ಲೂರಿ. 

‘ನಾನು ಎಳೆ ವಯಸ್ಸಿನಲ್ಲೇ ಎತ್ತರಕ್ಕೆ ಬೆಳೆದಿದ್ದೇನೆ. ಆಗ ನನ್ನ ಮನಸ್ಸಿನಲ್ಲಿ ನಟಿಯಾಗಬೇಕು ಎಂಬುದು ದೃಢವಾಗಿತ್ತು. ನಾನು ನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ನಾಯಕಿಯಾದೆ. ಈ ಸಿನಿಮಾ ಪಯಣದ ಮಧ್ಯೆ ನನಗೆ ಅರಿವಾಗಿದ್ದು ಏನೆಂದರೆ ಸ್ಟಾರ್‌ಡಮ್ ಎನ್ನುವುದು ನಮ್ಮನ್ನು ಮೀರಿದ್ದು. ಅದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ನಾನು ಉತ್ತರದವಳಾದರೂ ದಕ್ಷಿಣದ ಮಂದಿ ನನ್ನನ್ನು ಮನೆ ಮಗಳಂತೆ ಪ್ರೀತಿಸುತ್ತಾರೆ. ಇಲ್ಲಿ ನನಗೆ ಅಭಿಮಾನಿಗಳ ಬಳಗವೇ ಇದ್ದು, ನಾನು ತುಂಬಾ ಅದೃಷ್ಟವಂತೆ ಎಂಬ ಭಾವನೆ ಮೂಡುವಂತೆ ಮಾಡಿದೆ‍’ ಎಂದಿದ್ದಾರೆ.

ಚಿತ್ರರಂಗ ಎಂಬ ಉದ್ಯಮದಲ್ಲಿ ಅನಿಶ್ಚಿತತೆ ಎನ್ನುವುದು ಸಾಮಾನ್ಯ. ಇಲ್ಲಿ ಪ್ರತಿಯೊಬ್ಬರ ಅದೃಷ್ಟವೂ ನಿಂತಿರುವುದು ಶುಕ್ರವಾರದ ಮೇಲೆ. ಪ್ರತಿ ಶುಕ್ರವಾರವೂ ನಮ್ಮ ಜೀವನ ಬದಲಾಗುತ್ತಿರುತ್ತದೆ. ಕೆಲವೊಂದು ಶುಕ್ರವಾರ ಒಳ್ಳೆಯ ದಿನವಾದರೆ, ಇನ್ನು ಕೆಲವು ಕೆಟ್ಟ ದಿನವಾಗಿರುತ್ತವೆ. ಆದರೆ ಪ್ರತಿ ನಟರ ಜೀವನ ಸಾಗುವುದು ಮುಂದಿನ ಶುಕ್ರವಾರಕ್ಕಾಗಿ. ಅದಕ್ಕಾಗಿ ನಾವು ಮುಂದೆ ಹೋಗಲೇಬೇಕು. ಇದು ನಾನು ನನ್ನ ಜೀವನದಲ್ಲಿ ಮಾಡಿದ ದೊಡ್ಡ ‘ರಿಯಾಲಿಟಿ ಚೆಕ್‌‌‌’ ಎಂಬ ಅನುಭವದ ಮಾತನ್ನು ಹೇಳಿದ್ದಾರೆ.

ಆಯನ್, ಪೈಯಾ, ಸಿರುತ್ತಾಯ್, 100%ಲವ್‌ನಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ ತಮನ್ನಾ ಬಾಹುಬಲಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ‌

ಬಹುಬೇಡಿಕೆ ನಟಿಯಾಗಿರುವ ತಮನ್ನಾ 29ನೇ ವಯಸ್ಸಿನಲ್ಲಿ ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಇವರು ನಟಿಸಿದ ಹಿಮ್ಮತ್‌ವಾಲಾ, ಎಂಟರ್‌ಟೈನ್‌ಮೆಂಟ್ ಸಿನಿಮಾಗಳು ಬಾಕ್ಸ್‌ ಆಫೀಸ್ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರಲಿಲ್ಲ.

ಸೈದ್ಧಾಂತಿಕವಾಗಿ ಈ ಸಿನಿಮಾಗಳು ಆ ಕಾಲದಲ್ಲಿ ದೊಡ್ಡ ಚಿತ್ರಗಳೇ ಆಗಿದ್ದವು. ಆದರೆ ಅವು ಒಳ್ಳೆಯ ಚಿತ್ರಗಳಾಗಿರಲಿಲ್ಲ. ಕೆಲವೊಂದು ಕಾರಣಗಳಿಂದ ಅವು ಚೆನ್ನಾಗಿ ಬಂದಿರಲಿಲ್ಲ. ಅಲ್ಲಿಂದ ನಾನು ನನ್ನ ಮನಸ್ಸಿಗೆ ಇಷ್ಟವಾದ ಪಾತ್ರಗಳಲಷ್ಟೇ ನಟಿಸಲು ಆರಂಭಿಸಿದೆ. ಆ ಕಾರಣಕ್ಕೆ ನಾನು ಹಿಂದಿ ಸಿನಿಮಾದಲ್ಲಿ ನಟಿಸುವುದು ನಿಲ್ಲಿಸಿದ್ದೆ ಎಂದಿದ್ದಾರೆ.  

ಕಮರ್ಷಿಯಲ್ ಚಿತ್ರವೊಂದರ ಪ್ರಮುಖ ಘಟ್ಟದಲ್ಲಿ ನೀವಿದ್ದರೆ ಅಂತಹ ಸಿನಿಮಾದಲ್ಲಿನ ನಿಮ್ಮ ಪಾತ್ರ ನಿಮಗೆ ತುಂಬಾ ಹೆಸರು ತಂದುಕೊಂಡುತ್ತದೆ. ಸಿನಿಮಾವೂ ಅಷ್ಟೇ ವ್ಯಾಪಕವಾಗಿ ಜನರ ಮನಸ್ಸಿಗೆ ಮುಟ್ಟಿರುತ್ತದೆ. ನನಗೆ ಹೀರೊಯಿನ್ ಕೇಂದ್ರಿತ ಸಿನಿಮಾಗಳಿಗಿಂತ ಅಂತಹ ಸಿನಿಮಾಗಳಲ್ಲಿ ನಟಿಸುವುದು ಇಷ್ಟ ಎನ್ನುವುದು ಈ ಮಿಲ್ಕ್ ಬ್ಯೂಟಿಯ ಅಭಿಮತ.

ನನ್ನ ಕೆಲವೊಂದು ಸಿನಿಮಾಗಳಲ್ಲಿ ಸೋಲು ಕಂಡ ಮೇಲೆ ನನಗೆ ನಾನೇ ಚಾಲೆಂಚ್ ಹಾಕಿಕೊಂಡಿದ್ದೇನೆ. ನಾನು ಇಲ್ಲಿಯವರೆಗೆ ಅನೇಕ ವಿಧದ ಪಾತ್ರಗಳಲ್ಲಿ ನಟಿಸಿದ್ದೇನೆ. ಅವು ನನಗೆ ಹೆಸರು ತಂದುಕೊಟ್ಟಿದ್ದಲ್ಲದೇ, ಪ್ರಪಂಚಕ್ಕೆ ನಾನು ಯಾರು ಎಂಬುದನ್ನು ತಿಳಿಸಿದೆ. ಆದರೆ ನಾನು ಈವರೆಗೆ ಮಾಡದ ಪಾತ್ರಗಳಲ್ಲಿ ನಟಿಸುವುದು ನನಗೆ ಇಷ್ಟವಾಗುತ್ತದೆ. ಅದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕಾಮೋಶಿ, ಇದರಲ್ಲಿ ನಾನು ಕಿವುಡಿ ಹಾಗೂ ಮೂಕಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದಕ್ಕೂ ಹೆಚ್ಚಿಗೆ ಏನಾದರೂ ಮಾಡಬೇಕು ಎಂಬ ಹಂಬಲ ಎಂದಿದ್ದಾರೆ.

ಕಾಮೋಶಿ ಚಿತ್ರವನ್ನು ಚಾಕ್ರಿ ಚೊಲೆಟಿ ನಿರ್ದೇಶಿಸುತ್ತಿದ್ದು ಪ್ರಭುದೇವ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಇಂದು ಬಿಡುಗಡೆಯಾಗಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !