ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಭಾಷೆಯ ಹೊಸ ವಿನ್ಯಾಸ

ಕೆ.ನರಸಿಂಹಮೂರ್ತಿ
Published 17 ಮಾರ್ಚ್ 2024, 0:28 IST
Last Updated 17 ಮಾರ್ಚ್ 2024, 0:28 IST
ಅಕ್ಷರ ಗಾತ್ರ

ಫಲವತ್ತಾದ ತಾಯ್ನೆಲದಿಂದ ಬಂಜರುಭೂಮಿಗೆ ಎಸೆಯಲ್ಪಟ್ಟವರ ಅತೀವ ಸಂಕಟ ಚೀತ್ಕಾರವಾಗಬೇಕಿಲ್ಲ. ಅಳು ಕಣ್ಣೀರಾಗಬೇಕಿಲ್ಲ. ಮಾತು ಇರಲೇಬೇಕಿಲ್ಲ. ದೇಸಿ ಸಂಗೀತದ ಲಯಕ್ಕೆ ತಕ್ಕ ಧ್ವನಿ, ವೈವಿಧ್ಯಮಯ ಚಲನೆಗಳಲ್ಲೇ ಅಭಿನಯಿಸಬಹುದು. ನೋಡುಗರ ಎದೆಯೊಳಕ್ಕೂ ಈ ಸಂಕಟವನ್ನು ದಾಟಿಸಬಹುದು...

ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಇಂಫಾಲದ ಅಖೋಕಾ ಥಿಯೇಟರ್‌ನ ಐವರು ಕಲಾವಿದರು ವೇದಿಕೆ ತುಂಬ ಮಣ್ಣು ಚೆಲ್ಲುತ್ತಲೇ ಕೇವಲ ಒಂದು ಗಂಟೆ ಅವಧಿಯಲ್ಲಿ ಇಂಥದ್ದೊಂದು ಅನುಭವವನ್ನು ನೋಡುಗರಿಗೆ ದಾಟಿಸಿದರು.

ಈ ತಂಡ ತೀವ್ರವಾಗಿ, ತಮ್ಮ ಎಲ್ಲ ದೈಹಿಕ ಶಕ್ತಿಯನ್ನೂ ಹಾಕಿ, ನೆಗೆದು, ಕುಣಿದು ಅಭಿನಯಿಸಿದ ‘ಅಬೊರಿಜನಲ್‌ ಕ್ರೈ’ ಸಂಭಾಷಣೆ ರಹಿತ ನಾಟಕ. ಅದರೊಂದಿಗೆ, ತನ್ನ ಪ್ರಯೋಗಶೀಲತೆಯ ಕಾರಣಕ್ಕೆ ರಂಗಭಾಷೆಗೊಂದು ಹೊಸ ಕಥನ ಕಾವ್ಯದ ಸಾಧ್ಯತೆಯನ್ನು ತೋರಿಸಿಕೊಟ್ಟಿತ್ತು. ಈ ಪ್ರಯೋಗದ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಮಾಡಿದ ಥೌದಮ್ ವಿಕ್ಟರ್‌ ಸಿಂಗ್‌ ಕೂಡ ಮೆಚ್ಚುಗೆಗೆ ಪಾತ್ರರಾದರು.

ಕಳೆದ ವಾರ ನಡೆದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ವಿವಿಧ ರಾಜ್ಯಗಳ ಆರು ನಾಟಕಗಳು ಇಂಥ ತಾಜಾ ಪ್ರಯೋಗಗಳಿಂದಲೇ ಗಮನ ಸೆಳೆದವು. ರಂಗಭೂಮಿಯಲ್ಲಿ ಹೊಸತನದ ನಿರೂಪಣೆಗಾಗಿ ಎದುರು ನೋಡುತ್ತಿದ್ದ ಬಹುತೇಕರು ಇಂಥ ನಾಟಕಗಳಿಗೆ ಮೊದಲಿಗರಾಗಿ ಬಂದು ಕುಳಿತಿದ್ದರು.

ವಿಶಿಷ್ಟ ಪರಿಕಲ್ಪನೆಗಳನ್ನು ಆಧರಿಸಿಯೇ ಹಲವು ವರ್ಷಗಳಿಂದ ಉತ್ಸವವನ್ನು ಹಮ್ಮಿಕೊಂಡು ಬಂದಿರುವ ರಂಗಾಯಣ, ಈ ಬಾರಿ ‘ಇವ ನಮ್ಮವ, ಇವ ನಮ್ಮವ’ ಪರಿಕಲ್ಪನೆಯಡಿ, ವಚನ ಚಳವಳಿಯ ಕನ್ನಡಿಯಲ್ಲಿ ಇಂದಿನ ಕಾಲಮಾನವನ್ನು ಅಭಿವ್ಯಕ್ತಿಸುವ ಸಾಧ್ಯತೆಯ ಹುಡುಕಾಟದಲ್ಲಿ ಉತ್ಸವವನ್ನು ಆಯೋಜಿಸಿತ್ತು.

‘ಇವನಾರವ ಇವನಾರವ ಎಂದೆನಿಸದಿರಯ್ಯ; ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯ’ ಎಂಬ ಬಸವಣ್ಣನ ವಚನದ ಸಾಲುಗಳನ್ನೇ ಇಂದಿನ ಮೂಲನಿವಾಸಿಗಳು, ದಲಿತರು ಮತ್ತು ತಳಮಟ್ಟದಲ್ಲಿ ದುಡಿಯುತ್ತಿರುವ ಕೈ ಕಸುಬುದಾರ ಜನ ಸಂಕಟದಿಂದ ತಮ್ಮ ಭಾಷೆಯಲ್ಲಿ ಹೇಳುತ್ತಿದ್ದಾರೆ. ಅವರ ಸಂಕಟಕ್ಕೆ ದನಿಯಾದ ಇನ್ನೊಂದು ನಾಟಕ ಮಲಯಾಳಂನ ‘ಚಿಲ್ಲರ ಸಮರಂ’. ಕೇರಳದ ಲಿಟಲ್‌ ಅರ್ಥ್ ಸ್ಕೂಲ್‌ ಆಫ್‌ ಥಿಯೇಟರ್‌ನ ಕಲಾವಿದರು ಕಲಾಮಂದಿರದ ದೊಡ್ಡ ವೇದಿಕೆಯಲ್ಲಿ ಈ ನಾಟಕವನ್ನು ಅರೆಬೆತ್ತಲೆ ವೇಷಧಾರಿಗಳಾಗಿ ಅಭಿನಯಿಸುತ್ತಿದ್ದಾಗ ಅವರ ಮೈಯಲ್ಲಿ ಬೆವರು ಸುರಿಯುತ್ತಿತ್ತು.

ಅಭಿನಯವೆಂಬುದೊಂದು ಬಹುತೇಕ ಮೆಲು ನಡೆ ನುಡಿಗಳ ನಾಜೂಕು ಪ್ರಯೋಗ ಎಂಬ ಮಾತಿಗೆ ಹೊರತಾದಂತೆ, ಅಲ್ಲಿ ದೈಹಿಕ ಶ್ರಮ ಹೆಚ್ಚೇ ಆವರಿಸಿತ್ತು. ದುಡಿಯುವ ಜನರೆಂದರೆ ಬೆವರಿಳಿಸುವ ಜನರಲ್ಲವೇ. ಚಿಲ್ಲರೆ ಮುಷ್ಕರ ಎಂದರೆ ಯಾವ ಪ್ರಭಾವವೂ ಇಲ್ಲದ ಜನರ ಮುಷ್ಕರ. ಅವರ ಪ್ರತಿಭಟನೆಗೂ ಬೆವರು ಹರಿಯಲೇಬೇಕು.

ಬೃಹತ್‌ ಡಾಲರ್‌ ನೋಟಿನ ಜೊತೆಗೆ ಬರುವ ದಲ್ಲಾಳಿಗಳ ಠೇಂಕಾರ, ದೇಸಿ ವೃತ್ತಿಗಳನ್ನು ನೆಚ್ಚಿಕೊಂಡ ಚಿಲ್ಲರೆ ಜನರ ಅಸಹಾಯಕತೆಯನ್ನು ನಿರ್ದೇಶಕ ಅರುಣ್‌ಲಾಲ್‌ ಅವರು ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದರಿಂದಲೇ, ನಾಟಕ ಮುಗಿದು ಹೊರಗೆ ಬಂದ ಮೇಲೆ ಬಹುಹೊತ್ತು ಪ್ರೇಕ್ಷಕರು ಚರ್ಚೆಯಲ್ಲಿ ತೊಡಗಿದ್ದರು.

ಉತ್ತರ ಪ್ರದೇಶದ ಕಮಲಾಶಂಕರ್ ಧನವಂತಿದೇವಿ ಫೌಂಡೇಶನ್ ತಂಡ ಪ್ರದರ್ಶಿಸಿದ ‘ದುಖ್ವಾ ಮೇ ಬೀತಲ್‌ ರತಿಯಾ’ ಕಥಾವಸ್ತುವಿನ ಕಾರಣಕ್ಕೆ ಮೈಜುಮ್ಮೆನಿಸಿದಂಥ ಹಿಂದಿ ನಾಟಕ.

ಹಳ್ಳಿಯಲ್ಲಿ ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಕೋರಲೆಂದೇ ಹಸಿ ಹಾಲು ಕುಡಿದು, ನಂತರ, ಅದೇ ಕುಟುಂಬದವರಿಂದ ನಿಂದನೆ ಎದುರಿಸುವ ಸಂಪ್ರದಾಯವನ್ನು ಪಾಲಿಸುವ ಮಹಾಪಥರ್ ಸಮುದಾಯದಲ್ಲಿ ಹುಟ್ಟಿದ ಲೌಂಡ್‌ ಜರೇಲಾನ ಪ್ರತಿರೋಧವು ವ್ಯರ್ಥವಾಗುವ ಕಥೆ.

ಊಳಿಗಮಾನ್ಯ ವ್ಯವಸ್ಥೆಯ ಶೋಷಣೆ ವಿರುದ್ಧ ಬಂಡೇಳುವ ಆತನ ಒಳತೋಟಿ, ಬಂಡಾಯ ಸಫಲವಾಗದೆ ಮತ್ತೆ ಮಹಾಪಥರ್‌ಗೆ ಮರಳುವ ಸಂಕಟ ಕನ್ನಡದ ಪ್ರೇಕ್ಷಕರ ಮಟ್ಟಿಗೆ ಹೊಸ ಅನುಭವ. ಸಂಘರ್ಷದ ನಡುವೆಯೇ ‘ಇವ ನಮ್ಮವ ಇವ ನಮ್ಮವನೆಂದಿನಿಸಯ್ಯ’ ಎಂಬ ಭಾವವನ್ನು ಹೊಮ್ಮಿಸಲೆತ್ನಿಸಿ ಸೋಲುವ ಕ್ಷಣಗಳ ಅಭಿನಯ ಮನಕ್ಕೆ ತಾಕದೇ ಇರದು.

ಮಗಳ ಮದುವೆಗೆ ಅಡ್ಡಿಯಾದ ಎತ್ತಿನಬಂಡಿಯನ್ನು ಮಾರಬೇಕೇ ಬೇಡವೇ ಎಂಬ ಸಂದಿಗ್ದದ ನಡುವೆ ಸಿಲುಕುವ ಕುಟುಂಬದ ಕತೆಯನ್ನು ಹೇಳುವ ಮರಾಠಿ ನಾಟಕ ‘ಖಟಾರ’. ಬದುಕಿಗೆ ಆಧಾರವಾದ ಕೃಷಿಯ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಸಲುವಾಗಿ ನಡೆಯುವ ತಾಕಲಾಟಗಳು ಮತ್ತವೇ ಆಧುನಿಕ ಬದುಕಿನ ಜಂಜಾಟಗಳ ಕಡೆಗೆ ಗಮನ ಸೆಳೆಯುತ್ತವೆ.

ಪರಿಕಲ್ಪನೆ ಮತ್ತು ಮಂಡನೆಯ ಹೊಸತನದ ಕಾರಣಕ್ಕೆ ಗಮನ ಸೆಳೆದ ಕನ್ನಡದ ನಾಟಕ, ‘ಕಲ್ಯಾಣದ ಬಾಗಿಲು’. ಅದನ್ನು ನಾಟಕ ಎನ್ನುವುದಕ್ಕಿಂತ ಸಾಮರಸ್ಯದ ಗೀತರೂಪಕವೆಂದೇ ಹೇಳಬೇಕು. ಸಾಮರಸ್ಯದ ಹೊಸ ಕಲ್ಯಾಣ ಕಟ್ಟುವ ಆಶಯವನ್ನು ಪ್ರತಿ ದೃಶ್ಯದಲ್ಲೂ ಪ್ರತಿಪಾದಿಸುವ ನಾಟಕ, ವಚನ ಚಳವಳಿ ಸೇರಿದಂತೆ ಎಲ್ಲ ತಾತ್ವಿಕ ಧಾರೆಗಳ ಸಾಧಕರನ್ನು, ಆಧುನಿಕ ಕಾಲಘಟ್ಟದ ಸುಧಾರಣಾವಾದಿಗಳನ್ನು ಮುಖಾಮುಖಿಯಾಗಿಸುತ್ತದೆ. ದೇಶದ ಸಂವಿಧಾನವನ್ನು ರಕ್ಷಿಸಲೇಬೇಕಾದ ದುರಿತ ಕಾಲದ ಅಗತ್ಯವನ್ನು ಎತ್ತಿಹೇಳುವ ಕಾರಣಕ್ಕೆ ಇದು ಮಹತ್ವದ ನಾಟಕ. ಉತ್ಸವದ ಆಶಯವನ್ನು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿ ಎತ್ತಿಹಿಡಿಯುವ ನಾಟಕ.

ಆಶಯಕ್ಕೆ ತಕ್ಕ ಪ್ರಯೋಗಶೀಲ ನಾಟಕಗಳನ್ನು ಭಾರತೀಯ ಭಾಷೆಗಳಲ್ಲಿ ಹುಡುಕಾಡಿ ಆಯ್ಕೆ ಮಾಡಿದ ರಂಗಾಯಣಕ್ಕೆ ಅಭಿನಂದನೆಗಳು ಸಲ್ಲಲೇಬೇಕು.

‘ಕನ್ನಡದ ಜೊತೆಗೆ ಜಗತ್ತು’ ಎಂಬ ಆಶಯವೂ ಈ ಉತ್ಸವಕ್ಕೆ ಇರುವುದರಿಂದಲೇ ಬಹುಭಾಷಾ ನಾಟಕೋತ್ಸವದಲ್ಲಿ ‘ಮುಟ್ಟಿಸಿಕೊಂಡವನು’, ‘ದ್ರೋಪದಿ ಹೇಳ್ತವ್ಳೆ’, ‘ಶಿಶುನಾಳ ಶರೀಫ’ ನಂಥ ನಾಟಕಗಳೂ ಗಮನ ಸೆಳೆದವು.

ವಿಚಾರ ಸಂಕಿರಣ, ಚಲನಚಿತ್ರೋತ್ಸವ, ಜನಪದ ಸಂಭ್ರಮ, ಪುಸ್ತಕ ಮೇಳ, ಕರಕುಶಲ ಮೇಳ, ದೇಸಿ ಆಹಾರ ಮೇಳವೆಲ್ಲ ಬೆರೆತ ಸಿದ್ಧ ಚೌಕಟ್ಟಿನೊಳಗೇ ರಂಗಾಯಣ ಉತ್ಸವವನ್ನು ಆಯೋಜಿಸಿದ್ದರೂ ಚೌಕಟ್ಟು ಮೀರಿದ ಕೆಲವು ಚಿತ್ರಗಳೂ ಕಂಡು ಬಂದಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT