ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಳು ತಾಯ್ತನದ ‘ಕಾತ್ಯಾಯಿನಿ’

kathyaini- new drama
Last Updated 3 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಎ ಸ್.ಎನ್. ಸೇತುರಾಮ್ ಅಂದರೆ ತಕ್ಷಣಕ್ಕೆ ಕಣ್ಮುಂದೆ ಅವರ ಚಿತ್ರ ನೆನಪಾಗದಿರಬಹುದು. ಆದರೆ, ‘ಮಾಯಾಮೃಗ’ದ ನಾರಾಯಣ ಮೂರ್ತಿ ಅಂದರೆ ಸಾಕು ತಲೆತುಂಬಾ ಬಿಳಿಕೂದಲು ಹೊತ್ತ, ಅಷ್ಟೇ ಬೆಳ್ಳನೆಯ ನಗುತುಂಬಿ ಮಗಳನ್ನು ಪ್ರೀತಿಯಿಂದ ‘ಪುಟ್ಟಿ...’ ಎಂದು ಕರೆಯುವ ಅಪ್ಪನ ನೆನಪಾಗದಿರದು. ಹೌದು. ಅದೇ ನಾರಾಯಣಮೂರ್ತಿ ಪಾತ್ರಧಾರಿ ಸೇತುರಾಮ್ ಅವರು ಈಗ ಕಥೆಗಾರರಾಗಿದ್ದಾರೆ. ಅವರು ಬರೆದಿರುವ ‘ನಾವಲ್ಲ’ ಮತ್ತು ‘ದಹನ’ ಕಥಾಸಂಕಲನಗಳು ಬಿಸಿದೋಸೆಯಂತೆ ಖರ್ಚಾಗಿ ಸಾಹಿತ್ಯಪ್ರಿಯರ ಮನಗೆದ್ದಿವೆ. ಬಿಡುಗಡೆಯಾದ ತಿಂಗಳಲ್ಲೇ ಮರುಮುದ್ರಣಗಳನ್ನು ಕಂಡ ಸಂತಸದ ಸಂಗತಿ ಈ ಕೃತಿಗಳದ್ದು.

ಸೇತುರಾಮ್ ಅವರ ಮೊದಲ ಕಥಾಸಂಕಲನ ‘ನಾವಲ್ಲ’ದಲ್ಲಿ ಕಾತ್ಯಾಯಿನಿ ಎನ್ನುವ ವಿಶಿಷ್ಟ ಕಥೆಯೊಂದಿದೆ. ಆ ಕಥೆಯನ್ನಾಧರಿಸಿದ ರಂಗರೂಪ ಅಕ್ಟೋಬರ್ 4ರಂದು ನಗರದ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ಸೇತುರಾಮ್ ಅವರ ಆಪ್ತಮಿತ್ರ ನಟ, ನಿರ್ದೇಶಕ ವಿ. ನಾಗೇಂದ್ರ ಶಾ ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಪ್ರೇಮವಂಚಿತಳಾದ ಕಾತ್ಯಾಯಿನಿ, ಮನೆಯಲ್ಲಿ ನೋಡಿದ ಹುಡುಗನನ್ನೇ ಮದುವೆಯಾಗುತ್ತಾಳೆ. ದಾಂಪತ್ಯದಲ್ಲಿ ಪ್ರೇಮದ ನಿರೀಕ್ಷೆ ಸುಳ್ಳಾಗುತ್ತದೆ. ಒಲ್ಲದ ಗಂಡನೊಡನೆ ಹಟಮಾಡಿ ಸಂಸಾರ ಮಾಡಿದಾಗ ವಿಕಲಚೇತನ ಮಗುವಿನಿಂದಾಗಿ ಅವಳ ಬದುಕು ಮತ್ತಷ್ಟು ದುರ್ಬರವಾಗುತ್ತದೆ. ಜೀವನದ ಏಳುಬೀಳುಗಳ ನಡುವೆಯೇ ಸಂಸಾರ ತೂಗಿಸುತ್ತಿದ್ದ ಅವಳಿಗೆ ಗಂಡ ವಿಚ್ಛೇದನ ನೀಡುತ್ತಾನೆ. ಆದರೆ, ಕಾತ್ಯಾಯಿನಿಯದ್ದು ಒಂದೇ ಪ್ರಶ್ನೆ ‘ಡೈವೋರ್ಸ್ ವಾಪಸ್ ಪಡೆಯಲಾಗದೇ’ ಅನ್ನುವುದು. ಒಂದಿಷ್ಟು ಹಿಡಿಪ್ರೀತಿಗಾಗಿ ಪರಿತಪಿಸುತ್ತಿದ್ದ ಕಾತ್ಯಾಯಿನಿಗೆ ಕೊನೆಗೂ ಆ ಪ್ರೀತಿ ಸಿಕ್ಕಿತೇ? ಅವಳ ಮಗುವಿನ ಪಾಡೇನು? ಇತ್ಯಾದಿ ಕುತೂಹಲಕರ ಪ್ರಶ್ನೆಗಳಿಗೆ ಉತ್ತರ ನೀಡಲಿದೆ ‘ಕಾತ್ಯಾಯಿನಿ’ ನಾಟಕ.

‘ಮೂಲ ಕತೆಗೂ ರಂಗರೂಪಕ್ಕೂ ಅಷ್ಟೇನೂ ಬದಲಾವಣೆ ಇಲ್ಲ. ಮಾತುಗಳೆಲ್ಲಾ ಅವೇ. ಕಥೆಯಲ್ಲಿ ನಿರೂಪಣೆ ಇರುತ್ತದೆ. ಆದರೆ, ನಾಟಕದಲ್ಲಿ ಅದು ವಿಷ್ಯುಲೈಸ್ ಆಗಿದೆ. ‘ಕಾತ್ಯಾಯಿನಿ’ ಕಥೆ ನಾಟಕವಾಗಿರುವುದು ನನಗೆ ಸಂತಸ ತಂದಿದೆ. ನಾನು ಮತ್ತು ನಾಗೇಂದ್ರ ಶಾ ಎಂಬತ್ತರ ದಶಕದಿಂದಲೂ ಸ್ನೇಹಿತರು. ಸ್ನೇಹಿತನೇ ನನ್ನ ಕಥೆಯನ್ನು ನಾಟಕ ಮಾಡಿಸುತ್ತಿರುವುದರಿಂದ ಕುತೂಹಲ ಹೆಚ್ಚಿದೆ’ ಎನ್ನುತ್ತಾರೆ ಕಥೆಗಾರ ಎಸ್.ಎನ್. ಸೇತುರಾಮ್.

‘ನನ್ನ ಮನದಲ್ಲಿ ನೂರಾರು ಕಾತ್ಯಾಯಿನಿಗಳಿದ್ದಾರೆ. ನನ್ನನ್ನು ಕಾಡಿದ ಎಲ್ಲಾ ಕಾತ್ಯಾಯಿನಿಗಳನ್ನು ನೆನಪು ಮಾಡಿಕೊಂಡು ಕಥೆ ಬರೆದಿದ್ದೇನೆ. ಒಬ್ಬೊಬ್ಬರು ಒಂದು ರೀತಿಯಲ್ಲಿದ್ದಾರೆ. ಅವರನ್ನೆಲ್ಲಾ ಕ್ರೋಢಿಕರಿಸಿ ಒಬ್ಬ ‘ಕಾತ್ಯಾಯಿನಿ’ಯನ್ನು ಸೃಷ್ಟಿಸಿದ್ದೇನೆ. ‘ನಾವಲ್ಲ’ ಕಥಾಸಂಕಲನದಲ್ಲಿರುವ ಈ ಕಥೆಯನ್ನು ಓದಿರುವ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಮ್ಮಲ್ಲಿ ಸ್ತ್ರೀವಾದವನ್ನು ತಪ್ಪಾಗಿಯೇ ಅರ್ಥೈಸಿಕೊಳ್ಳಲಾಗಿದೆ. ಎಲ್ಲವನ್ನೂ ಧಿಕ್ಕರಿಸಿ ಓಡುವುದೇ ಸ್ತ್ರೀವಾದ ಎನ್ನಲಾಗುತ್ತದೆ. ಆದರೆ, ನಮ್ಮೆಲ್ಲರ ಪ್ರಜ್ಞೆಯಲ್ಲಿ ಇರುವ ಸ್ತ್ರೀವಾದವೇ ಬೇರೆ. ಕಾತ್ಯಾಯಿನಿ ಅಂದರೆ ಇಲ್ಲಿ ಪ್ರೇಯಸಿ ಅಲ್ಲ. ಅವಳು ತಾಯ್ತನದ ಕಾತ್ಯಾಯಿನಿ. ಹೆಣ್ಣು ಕಲ್ಪನೆಯಲ್ಲಿ ಮಾತ್ರ ಪ್ರೇಯಸಿ. ಆದರೆ, ಮಾನಸಿಕ ಪ್ರಜ್ಞೆ ಮತ್ತು ವಾಸ್ತವಿಕ ನೆಲೆಯಲ್ಲಿ ಆಕೆ ತಾಯಿ. ಜೀವಂತವಾಗಿರುವ ಎಲ್ಲವನ್ನೂ ಪ್ರೀತಿಸುವವಳು ಕಾತ್ಯಾಯಿನಿ.

ನಮ್ಮ ನಡುವಿನ ಹೆಣ್ಣುಮಕ್ಕಳಲ್ಲಿರುವ ಕಾತ್ಯಾಯಿನಿಯನ್ನು ಈ ಕಥೆಯಲ್ಲಿ ಒಡಮೂಡಿಸಲು ಪ್ರಯತ್ನಿಸಿದ್ದೇನೆ. ಇಲ್ಲಿರುವವಳು ಒಬ್ಬಳೇ ಕಾತ್ಯಾಯಿನಿ. ಆದರೆ, ನನ್ನ ಮನದಲ್ಲಿ ಸಾವಿರಾರು ಕಾತ್ಯಾಯಿನಿಗಳಿದ್ದಾರೆ. ನಾಲ್ಕು ಜನ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡರೆ ನನ್ನ ‘ಕಾತ್ಯಾಯಿನಿ’ ಗೆದ್ದಳು ಅಂತ ಅರ್ಥ’ ಎನ್ನುವ ಅನಿಸಿಕೆ ಅವರದ್ದು.

‘ನಾವಲ್ಲ’ ಕಥಾಸಂಕಲನದ ಕಥೆ ‘ಕಾತ್ಯಾಯಿನಿ’ಯೇ ರಂಗರೂಪದಲ್ಲಿದ್ದಾಳೆ. ಹೆಣ್ಣೊಬ್ಬಳು ಪರಿಸ್ಥಿತಿಗಳಿಗೆ ಅನುಗುಣವಾಗಿ ಹೇಗೆ ಬದಲಾಗುತ್ತಾಳೆ ಅನ್ನುವುದೇ ನಾಟಕದ ಕಥಾವಸ್ತು. ಈ ಕಥೆಯಲ್ಲಿ ಏನೂ ಬದಲಾವಣೆ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಇದೊಂದು ರೀತಿಯಲ್ಲಿ ಸವಾಲಾಗಿತ್ತು. ಕಥೆಯಲ್ಲಿ ನಿರೂಪಕರಿದ್ದಾರೆ. ಇದು ನನಗೆ ಸವಾಲಾಗಿತ್ತು. ಇದು ಕಷ್ಟವಾದರೂ ಇಷ್ಟಪಟ್ಟು ರಂಗದ ಮೇಲೆ ತಂದಿದ್ದೇನೆ. ಸೇತುರಾಮ್ ಅವರಿಗೆ ತಮ್ಮದೇ ವಿಶಿಷ್ಟತೆಯಿದೆ. ಆ ವಿಶಿಷ್ಟ ಶೈಲಿಯಿಂದ ಹೊರತುಪಡಿಸಿ ನಾಟಕವನ್ನು ಪ್ರಸ್ತುತ ಪಡಿಸಲು ಯತ್ನಿಸಿದ್ದೇನೆ. ನಾಟಕದ ಬಗ್ಗೆ ಅಪಾರ ಕುತೂಹಲವಿದೆ. ಮಾಮನ ರಂಗತಾಣ ತಂಡದ ಮೊದಲನೇ ಪ್ರದರ್ಶನ ಇದಾಗಿದೆ’ ಎಂದು ವಿವರಿಸುತ್ತಾರೆ ‘ಕಾತ್ಯಾಯಿನಿ’ ನಾಟಕದ ನಿರ್ದೇಶಕ ವಿ.ನಾಗೇಂದ್ರ ಶಾ.

ಟಿಕೆಟ್‌ಗಳಿಗೆ ಸಂಪರ್ಕಿಸಿ: 83103 15453.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT