ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ವಿಮರ್ಶೆ | ಮಹಿಳಾ ಭಾರತ: ಎರಡು ಪಾತಳಿಗಳಲ್ಲಿ ವಿಮರ್ಶೆಯ ಇಣುಕು ನೋಟ

Published 29 ನವೆಂಬರ್ 2023, 12:32 IST
Last Updated 29 ನವೆಂಬರ್ 2023, 12:32 IST
ಅಕ್ಷರ ಗಾತ್ರ

ಮಹಾಕಾವ್ಯಗಳನ್ನು ʼಕ್ಲಾಸಿಕ್ಸ್‌ʼಗಳ ಸಾಲಿಗೆ ಸೇರಿಸಲಾಗಿದೆ. ಹಲವು ಭಿನ್ನ ಭೌಗೋಳಿಕತೆಗಳ  ನಕ್ಷೆಯಲ್ಲಿ ಸಂಸ್ಕೃತಿಗಳ ಪಲ್ಲಟ ಕಾಣಬಹುದೇ ಹೊರತು ಬದುಕಿನ ಒಟ್ಟಂದದ ಹೂರಣ ಒಂದೇ ಎಂದು ಕ್ಲಾಸಿಕ್ಸ್‌ಗಳು ಧ್ವನಿಸುತ್ತವೆ. ಕಾಲ ದೇಶಗಳ ಬಂಧ ಅವುಗಳಿಗೆ ಇಲ್ಲ. ಭಾಷೆ ಮತ್ತು ಅಭಿವ್ಯಕ್ತಿ ಕ್ರಮ ಭಿನ್ನವಾದರೂ ಮನುಷ್ಯನ ಸಂವೇದನೆಗಳ ಸ್ವರೂಪ ಒಂದೇ ಎನ್ನುವುದನ್ನು ಅವು ಕಟ್ಟಿಕೊಟ್ಟಿವೆ. ಪ್ರೇಮ, ಕಾಮ, ಯುದ್ಧ, ಕುತ್ಸಿತತೆ, ಅನುಕಂಪ, ಸ್ವಮರುಕ, ಸಿಟ್ಟು, ಸೆಡವು ಮುಂತಾದ ಭಾವಗಳು ಆಯಾ ಭೌಗೋಳಿಕತೆಯ ಸಂಸ್ಕೃತಿಗಳಲ್ಲಿ ಆಯಾ ರೂಪಗಳಲ್ಲಿ  ಅರಳಿವೆ ಅಷ್ಟೇ.

ಭಾರತೀಯ ಸಂದರ್ಭದಲ್ಲಿ ರಾಮಾಯಣ, ಮಹಾಭಾರತವೂ ಇದಕ್ಕೆ ಹೊರತಲ್ಲ. ಅಲ್ಲಿ ಪ್ರತಿಪಾದಿತವಾದ ಮೌಲ್ಯಗಳು ಹಲವು ಶತಮಾನಗಳ ಕಾಲ ಸ್ಥಾಪಿತ ಸತ್ಯಗಳಾಗಿ ಅರಳಿಕೊಂಡಿದ್ದವು. ಒಂದು ಘಟ್ಟದವರೆಗೆ ಪುರುಷ ಪ್ರಧಾನ ಧಾರೆಗಳಾಗಿ ಅರಳಿಕೊಂಡ ಈ ಕಥನಗಳ ಬಗ್ಗೆ ಚಕಾರಗಳೂ ಇರಲಿಲ್ಲ. ಕಾಲ ಸರಿದಂತೆ ಮಹಾಕಾವ್ಯಗಳಲ್ಲಿನ ಪಾತ್ರಗಳನ್ನು ನೋಡುವ ಕ್ರಮದಲ್ಲಿಯೇ ಪಲ್ಲಟ ಉಂಟಾಯಿತು. ಪುರುಷ ಪ್ರಧಾನ ಪ್ರಪಂಚ ಪ್ರಶ್ನಾತೀತವಾಗಿ ಉಳಿಯಲಿಲ್ಲ.

ಬದುಕನ್ನು ಸಾಹಿತ್ಯದ ಮೂಲಕ ಪರಿಭಾವಿಸುವ ಮತ್ತು ಅದನ್ನು ಅಭಿವ್ಯಕ್ತಿಸುವ ಕ್ರಮವಾಗಿ ನವೋದಯ, ನವ್ಯ, ಬಂಡಾಯ ಇನ್ನಿತರ ಶಾಖೆಗಳು ಹೇಗೆ ಒಡಮೂಡಿದವೋ ಹಾಗೇ ಸ್ತ್ರೀವಾದವೂ ಚಾಲನೆಗೆ ಬಂದಿತು. ಅದರ ಮುಖ್ಯ ಧ್ಯೇಯವೆಂದರೆ “Feminism is the radical notion that women are human beings.” ಎಂಬುದು. 

ಈಚೆಗೆ ಬೆಂಗಳೂರಿನ ರಂಗಶಂಕರದಲ್ಲಿ ದೃಶ್ಯ ರಂಗತಂಡ ಪ್ರದರ್ಶಿಸಿದ ʼಮಹಿಳಾ ಭಾರತʼ ನಾಟಕ ಕೂಡ ಮೇಲೆ ಹೇಳಿರುವ ರಾಡಿಕಲ್‌ ನೋಷನನ್ನೇ ಪ್ರಧಾನ ಭೂಮಿಕೆಯಾಗಿ ಇರಿಸಿಕೊಂಡಿದೆ. ಈ ನಾಟಕದಲ್ಲಿ ಎರಡು ಪಾತಳಿಗಳಿವೆ. ಒಂದು ವಾಸ್ತವದ ಬದುಕು; ಎರಡನೆಯದು ಆ ವಾಸ್ತವದ ಬದುಕಿಗೆ ತಳುಕು ಹಾಕಿಕೊಂಡಿರುವ ಮಹಾಭಾರತದಲ್ಲಿನ ಮಹಿಳೆಯರ ಬದುಕು. 

ತಮಿಳಿನ ಪ್ರಸಿದ್ಧ ಲೇಖಕ ಕೆ. ಮಾಧವನೆಯವರ ರಚನೆಯ ಈ ನಾಟಕವನ್ನು ಅಭಿಲಾಷ ಅವರು ಕನ್ನಡಕ್ಕೆ ರೂಪಾಂತರಿಸಿದ್ಧಾರೆ. ನಾಟಕದಲ್ಲಿ ಮಾಧವನೆ ಅವರು ವಾಸ್ತವದ ಪಾತಳಿಯಿಂದ ಮಹಾಭಾರತದ ಮಹಿಳಾ ಪಾತ್ರಗಳನ್ನು- ಅದರಲ್ಲೂ ಪುರುಷರ ಏಕಮುಖೀ ಧೋರಣೆಗಳ ಇಕ್ಕಳಕ್ಕೆ ಸಿಲುಕಿಕೊಂಡು ನಲುಗುವ ಸ್ತ್ರೀಯರ ಬದುಕಿನ ಒಳತೋಟಿಗಳನ್ನು ನಿಕಷಕ್ಕೆ ಒಡ್ಡಿದ್ದಾರೆ. ಸ್ತ್ರೀವಾದಿ ಸ್ತ್ರೀಯೇ ಆಗಿರಬೇಕಿಲ್ಲ. ಪುರುಷರು ಸ್ತ್ರೀವಾದಿ ಹಿನ್ನೆಲೆಯಲ್ಲಿ ಮಹಾಭಾರತವನ್ನು ದರ್ಶಿಸಿರುವ ಬಗೆಗೆ ಈ ನಾಟಕ ಉತ್ತಮ ಉದಾಹರಣೆ.

ಸ್ತ್ರೀಯೇ ಇದನ್ನು ಬರೆದಿದ್ದರೆ ಅವು ಸಹಜ ಸ್ಫೋಟದ ಕಥನಗಳಾಗಿ ಕಾಣಿಸುತ್ತಿದ್ದವು. ಇಲ್ಲಿ ಮಾಧವನೆ ಹೆಣ್ಣುಗಳ ಆಂತರ್ಯವನ್ನು ಒಳಹೊಕ್ಕು ಶೋಧಿಸಿರುವ ಬಗೆ ಅಭ್ಯಾಸಯೋಗ್ಯವಾದದ್ದು. ಜೇನ್‌ ಆಸ್ಟಿನ್‌ ಒಂದು ಕಡೆ- “I hate to hear you talk about all women as if they were fine ladies instead of rational creatures. None of us want to be in calm waters all our lives.” ಎಂದಿದ್ದಾರೆ. ಹೆಣ್ಣನ್ನು ವೈಚಾರಿಕ ಪ್ರಭೇದವಾಗಿ ಕಾಣದೆ ಕೇವಲ ಚೆಂದದ ಹೆಣ್ಣುಗಳು ಎಂದು ಭಾವಿಸುವ ಬಗೆ ಸರಿಯಾದ ಕ್ರಮ ಅಲ್ಲ. ತಿಳಿಗೊಳದಲ್ಲಿ ಸದಾ ಕಾಲ ಕಳೆಯಲು ಬಯಸುವುದಿಲ್ಲ ಎನ್ನುವುದು ವಾಸ್ತವವಾದಿ ನೆಲೆಯ ಸ್ತ್ರೀಯರ ಅಭಿಮತ. ಈ ನೆಲೆಯನ್ನು ಸಮರ್ಥಿಸುವ ಸನ್ನಿವೇಶ  ʼಮಹಿಳಾ ಭಾರತʼ ನಾಟಕದಲ್ಲಿದೆ.

ಸ್ವಯಂವರದಲ್ಲಿ ಭೀಷ್ಮ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರನ್ನು ಗೆದ್ದು ತರುತ್ತಾನೆ. ತಾನು ಮದುವೆಯಾಗುವ ಸಲುವಾಗಿ ಅಲ್ಲ. ಬದಲಿಗೆ ವಿಚಿತ್ರವೀರ್ಯನೊಂದಿಗೆ ಮದುವೆ ಮಾಡಿಸಲು. ಆದರೆ ಅಂಬೆಗೆ ಸಾಲ್ವನಲ್ಲಿ ಪ್ರೇಮ ಉಂಟಾಗಿದೆ. ಅವಳು ಅದನ್ನು ಪ್ರಕಟಿಸಿದಾಗ ಭೀಷ್ಮ ಸಾಲ್ವನಲ್ಲಿಗೆ ಕಳುಹಿಸುತ್ತಾನೆ. ಆದರೆ ಸಾಲ್ವ ಅಂಬೆಯನ್ನು ತಿರಸ್ಕರಿಸುತ್ತಾನೆ. ಮರಳಿ ಬರುವ ಅಂಬೆ ಭೀಷ್ಮನ ಬಳಿ ರಾಷನಲ್‌ ಕ್ರಿಯೇಚರ್‌ ಆಗಿ ವಾದಕ್ಕೆ ನಿಲ್ಲುತ್ತಾಳೆ. ಭೀಷ್ಮ ಇದನ್ನು ಲೆಕ್ಕಿಸುವುದಿಲ್ಲ. ಇದಕ್ಕೆ ಇಂದಿನ ಸ್ತ್ರೀವಾದ ಕಂಡುಕೊಂಡಿರುವ ಉತ್ತರವೆಂದರೆ ವರ್ಜಿನೀಯ ವುಲ್ಫ್‌ ಹೇಳುವ ಹಾಗೆ- “Women have served all these centuries as looking glasses possessing the magic and delicious power of reflecting the figure of man at twice its natural size.”

ಹೆಣ್ಣು ಶತಮಾನಗಳಿಂದ ಗಂಡನ್ನು ಅವನು ಇರುವ ಗಾತ್ರಕ್ಕಿಂತ ಎರಡು ಪಟ್ಟು ದೊಡ್ಡದಾಗಿ ಪರಿಭಾವಿಸಿಕೊಂಡು ಬಂದಿರುವುದು ಎನ್ನುವುದು. ಮಹಾಭಾರತದಲ್ಲಿ ಅಂಬೆಯ ಸಂಘರ್ಷವಿದೆಯಾದರೂ ಹೆಣ್ಣುಗಳ  ಬಗೆಗಿನ ಪುರುಷರ ಅಸಡ್ಡಾಳತನ ಲೇಖಕಿ ವರ್ಜಿನಿಯಾ ವುಲ್ಫ್ ಮೂಲಕ ಕಾಣಿಸಲು ಆರಂಭಿಸುತ್ತದೆ. ಇದು ಈ ನಾಟಕದಲ್ಲಿರುವ ಧ್ವನಿಪೂರ್ಣತೆ. ಈ ಎಲ್ಲವನ್ನು ಒಂದೇ ಪಾತಳಿಯಲ್ಲಿ ಮಹಾಭಾರತವನ್ನು ನಿಕಷಕ್ಕೆ ಒಡ್ಡಿದ್ದರೆ ನಾಟಕಕ್ಕೆ ಅಷ್ಟು ಸಾಂದ್ರತೆ ಬರುತ್ತಿರಲಿಲ್ಲವೇನೋ. ಆದರೆ ಮಾಧವನೆ ವಾಸ್ತವದ ಬದುಕಿನಲ್ಲಿನ ಗಂಡಸರ ಕ್ರೌರ್ಯವನ್ನು ಮುಖಾಮುಖಿಯಾಗಿಸುವ ಬಗೆ ಚೆಂದ. ಅಲ್ಲಿ ಅಂಬೆಯನ್ನು ತಿರಸ್ಕರಿಸುವ ಸಾಲ್ವ ಇಲ್ಲಿ ವಾಸ್ತವದಲ್ಲಿ ಕುಡುಕನಾಗಿ ತನ್ನ ಹೆಂಡತಿಯನ್ನು ಅನುಮಾನಿಸುವ ಬಗೆಯ ಮೂಲಕ ಲೇಖಕರು ಸಮೀಕರಿಸಿದ್ದಾರೆ. ಹಾಗಾಗಿ ನಾಟಕ ಎರಡು ಪಾತಳಿಗಳಲ್ಲಿ ತನ್ನ ಪದರಗಳನ್ನು ಬಿಡಿಸಿಕೊಳ್ಳುತ್ತಾ ಸಾಗುತ್ತದೆ.

ಅಂಬೆ ಒಬ್ಬಳೇ ಅಲ್ಲ. ರೋಹಿಣಿ ಇದ್ದಾಳೆ. ಜೊತೆಗೆ ದ್ರೌಪದಿ, ಕುಂತಿ, ಸತ್ಯವತಿ, ಗಾಂಧಾರಿ, ಉತ್ತರೆ ಇದ್ದಾರೆ. ಎಲ್ಲರದೂ ಒಂದೊಂದು ಅಳಲು. ಈ ಎಲ್ಲರೂ ಗಂಡಸರನ್ನು ಶಪಿಸುವವರೇ. ಶಾಪಕ್ಕೆ ಹಿನ್ನೆಲೆಯಾಗಿ ಹೆಣ್ಣಿನ ಆಳದ ದುಗುಡವನ್ನು ಇಲ್ಲಿ ಚಿತ್ರಿಸಲಾಗಿದೆ. ತಾಯೊಬ್ಬಳ ಕಣ್ಣು ಮತ್ತು ಅವಳ ಭಾವುಕ ಮತ್ತು ಭ್ರಾಮಕ ಜಗತ್ತಿನಿಂದ ಮಹಾಭಾರತದಲ್ಲಿನ ಶೋಷಿತ ಹೆಣ್ಣುಗಳ ಕಥನಗಳನ್ನು ಇಲ್ಲಿ ಸಮರ್ಥವಾಗಿ ಕಟ್ಟಿಕೊಡಲಾಗಿದೆ. ಅಮ್ಮನ ಕಥನಗಳಿಗೆ ಕಿವಿಯಾಗುವ ಮಗಳು ತನ್ನ ನವಿರು ಹಾಸ್ಯದ ಪ್ರಶ್ನೆಗಳ ಮೂಲಕವೇ ಮಹಾಭಾರತದ ಗಂಡಸರ ಬದುಕಿನ ಬಗೆಯನ್ನು ಮರುಚಿಂತಿಸುವಂತೆ ಮಾಡುತ್ತಾಳೆ. ತಂಗಿ ಉಲ್ಲೇಖವಾಗಿ ಬಳಸುವ ಬದನೆ ಮುಳ್ಳುಗಳು, ಹಾವು, ಚೇಳು ಇತ್ಯಾದಿಗಳು ಪುರುಷರಿಗೆ ಪರ್ಯಾಯ ಸಂಕೇತಗಳಾಗುವ ಬಗೆಯಿಂದಲೇ ಮಹಾಭಾರತದಲ್ಲಿನ ಹೆಣ್ಣುಗಳ ಪಾತ್ರಗಳ ಕಥನವನ್ನು ಮರುವಿಶ್ಲೇಷಣೆಗೆ ಒಳಗು ಮಾಡುತ್ತವೆ.

ನಾಟಕದ ಯಶಸ್ಸು ಇರುವುದು ಇಲ್ಲಿಯೇ. ಎರಡು ಪಾತಳಿಗಳಿರುವ ಈ ನಾಟಕಕ್ಕೆ ಪ್ರಸಿದ್ಧ ರಂಗನಿರ್ದೇಶಕರಾದ ಶ್ರೀಪಾದ ಭಟ್‌ ಅವರು ತಮ್ಮ ವಿನ್ಯಾಸದ ಮೂಲಕವೇ ಸ್ಪಷ್ಟತೆ ದಕ್ಕಿಸಿಕೊಟ್ಟಿದ್ದಾರೆ. ಅವರ ವಿನ್ಯಾಸ ನಿರ್ದೇಶನಕ್ಕೆ ಅನುವು ಮಾಡಿಕೊಟ್ಟಿದೆ. ವಾಸ್ತವ ಪಾತ್ರಗಳ ಅಭಿವ್ಯಕ್ತಿ ಮತ್ತು ಮಹಾಭಾರತದ ಪಾತ್ರಗಳ ಅಭಿವ್ಯಕ್ತಿ ಕ್ರಮದಲ್ಲಿ ಅವರು ಕಾಣಿಸಿರುವ ಸ್ಪಷ್ಟ ಭೇದ ನಾಟಕವನ್ನು ಗೋಜಲಾಗಿಸಿಕೊಳ್ಳದೆ ನೋಡಲು ಅನುವು ಮಾಡಿಕೊಡುತ್ತದೆ. ಈ ನಾಟಕದಲ್ಲಿ ಒಬ್ಬರ ಮನಸ್ಸಲ್ಲಿ ಒಬ್ಬರು ಸುಳಿಯುವ, ಆತ್ಮದಂತೆ ಕದಲುವ ತಂತ್ರವಿದೆ. ಶ್ರೀಪಾದ ಭಟ್‌ ಅವರ ತಂತ್ರಗಾರಿಕೆಯ ಕೌಶಲ್ಯ ಕಾಣುವುದು ಇಲ್ಲಿಯೇ. ಎಲ್ಲ ನಟಿಯರಿಗೆ ಅವರು ಕಟ್ಟಿಕೊಟ್ಟಿರುವ ಆಂಗಿಕ ಬೇರೆ ಬೇರೆ. ಮಾತಿನ ಏರಿಳಿತ ಬೇರೆ. ರಂಗದ ಮೇಲೆ ಕದಲುವ ಕ್ರಮವೂ ಬೇರೆಯೇ. ನಂತರ ಈ ಎಲ್ಲವನ್ನು ಒಟ್ಟಂದದಲ್ಲಿ ಒಂದು ಕ್ರಮವಾಗಿ ಹೆಣೆದಿರುವ ಬಗೆ ಚೆಂದ. ರೋಹಿಣಿಯಾಗಿ ಅನಘ, ಕುಂತಿಯಾಗಿ ವೈಷ್ಣವಿ ಮನೋಜ್ಞವಾಗಿ ಅಭಿನಯಿಸಿದರು.

ಅಂಬೆಯಾಗಿ ಮಹಿಮಾರ ಮಾತಲ್ಲಿ ಚುರುಕುತನವಿತ್ತು. ಮಗಳಾಗಿ ಅಪೂರ್ವ ಲವಲವಿಕೆ ತಂದರು. ತಾಯಿ ಮತ್ತು ದ್ರೌಪದಿಯ ಪಾತ್ರ ನಿರ್ವಹಿಸಿದ ನಟಿಯರ ಅಭಿನಯದಲ್ಲಿ ಸಾಂದ್ರತೆ ಇತ್ತು. ಭೀಷ್ಮ ಹಾಗೂ ಕರ್ಣನ ಪಾತ್ರಧಾರಿಯ ತನ್ಮಯತೆ ಶ್ಲಾಘಿಸಬೇಕು. ಮಂಜುನಾರಾಯಣರ ಬೆಳಕು ನಿಚ್ಚಳ. ರಂಗಸಜ್ಜಿಕೆ ಸರಳ ಮತ್ತು ಸುಂದರ. ಕಟ್ಟಕಡೆಗೆ ಮನಸ್ಸಿನಲ್ಲಿ ಉಳಿಯುವುದು ಶ್ರೀಪಾದ್‌ ಭಟ್‌ ಅವರ ವಿನ್ಯಾಸ ಹಾಗೂ ಸ್ತ್ರೀವಾದಿ ನೆಲೆಯ ಹಿನ್ನೆಲೆಯಲ್ಲಿ ಮಹಾಭಾರತದ ಕೆಲ ಮಹಿಳೆಯರ ಬದುಕನ್ನು ಮರುದರ್ಶಿಸಬೇಕೆನ್ನುವ ಇಚ್ಛೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT