ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ | ಭರತನ ಮಕ್ಕಳಿಗೆ ನಾಟ್ಯಶಾಸ್ತ್ರದ ಪಾಠ

Last Updated 28 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

ಮೈಸೂರು ರಂಗಾಯಣದಿಂದ ನಿವೃತ್ತಿ ಪಡೆದದ್ದಾಯ್ತಲ್ಲ. ಆದರಆಯ್ದ ಕಾಯಕಕ್ಕ ನಿವೃತ್ತಿ ಅನ್ನೂದ ಇಲ್ಲಲ್ಲ. ನಿವೃತ್ತಿಯ ಹಿರಿತನ ಒಂದು ನಮೂನಿ ಸಣ್ಣವನನ್ನಾಗಿ ಮಾಡತದ. ಅಂದರ ಇನ್ನು ಮ್ಯಾಲಿಂದನಹೊಸ ಆಟ ಶುರುವಾಗ್ತದ. ಈ ಮೂವತ್ತೆರಡು ವರ್ಷ ಮೇಷ್ಟ್ರು ಹಾಕಿದ ಅಡಿಪಾಯದಲ್ಲಿ ಆಟ ಆಡಿದ ಜಗತ್ತು ಪೂರಾ ಭಾವನಾಮಯವಾಗಿತ್ತು. ಭಾಳ ಮಂದಿ ಹೊರಗಿನ ಜಗತ್ತಿಗೆ ಸ್ವಾಗತ ಕೋರಿದರು. ಹ್ಞಾಂ... ಇದೀಗ ನೀವು ಲೋಕಾರ್ಪಣೆ ಆಗುವ ಸಮಯ ಅಂದರು. ಹೌದು, ಈಗೀಗ ಅನ್ನಿಸಲಿಕ್ಕೆ ಶುರು ಆಗೇದ, ಹೊರಗಿನ ಜಗ ಭಾಳ ಚಂದದ.

ಕಲಬುರ್ಗಿ ರಂಗಾಯಣದ ನಿರ್ದೇಶಕ ನನ್ನ ನೀನಾಸಂ ಗೆಳೆಯ ಪ್ರಭಾಕರ ಜೋಷಿ, ‘ನಮ್ಮಲ್ಲಿಗೆ ಬಾ, ನಮ್ಮ ಹುಡುಗರ ಜೊತೆ ಅನುಭವ ಹಂಚಿಕೋ ಮಾರಾಯ’ ಅಂತ ಅಲವತ್ತುಕೊಂಡಿದ್ದ. ‘ಆತು ತಗೋ ಬರ್ತೇನಿ. ಮೇಷ್ಟ್ರು ಕಾರಂತರು ಎಲ್ಲರಿಗೂ ಕೊಟ್ಟಾಂಗ ನನಗೂ ನಾಕು ನಾಕು ಕಾಳು ಬಿತ್ತೋ ಬೀಜ ಕೊಟ್ಟಾರ. ಅವನ್ನ ಹಿಡುಕೊಂಡು ಬರ್ತೇನಿ. ಹಿಂದೆ ದ್ವಾಪರಯುಗ ಮುಗುದು ತ್ರೇತಾಯುಗದ ಮಧ್ಯಂತರದೊಳಗ ಕಾಮ, ಕ್ರೋಧಾದಿಗಳು, ಅನಾಚಾರಗಳು ತಲೆದೋರಿದುವಂತ. ಆಗ ಬ್ರಹ್ಮನು ತಾನು ಸೃಷ್ಟಿಸಿದ ನಾಲ್ಕು ವೇದಗಳಿಂದಾನss ಪಠ್ಯ, ಗೀತ, ಅಭಿನಯ, ರಸಗಳನ್ನು ಆಯ್ದು, ಪೋಣಿಸಿ ಇದು ಐದನೇ ವೇದ ಅಂದರ ‘ನಾಟ್ಯವೇದ’ ಅಂತ ಹೆಸರಿಟ್ಟನಂತ. ಆಮ್ಯಾಲ ಭರತಮುನಿಗೆ ಲೋಕಕಲ್ಯಾಣಕ್ಕಾಗಿ ಇದನ್ನು ಆಡಿಸು ಅಂತ ಕೊಟ್ಟನಂತ. ನಾವು ರಂಗಾಯಣದ ಕಲಾವಿದರು ಕಾರಂತರಲ್ಲೇ ಭರತಮುನಿಯನ್ನ ಕಂಡವರು. ಅಂದಾಗ ಗುರು ಕೊಟ್ಟ ಬೀಜಕ್ಕ ಜಾತಿ ಅಂತಿಲ್ಲ, ಧರ್ಮ ಅಂತಿಲ್ಲ, ಪಂಥ ಅಂತಿಲ್ಲ, ಬಿತ್ತಿದಲ್ಲಿ ಬೆಳೆಯೋ ಗುಣ ಅವುಕ್ಕದ’ ಅಂತೇಳಿದ್ದೆ.

ಅಷ್ಟರಾಗ ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿಯವರು ತಮ್ಮ ಕಲಾವಿದರು ಲಾಕ್‌ಡೌನ್ ಸಮಯದಾಗ ಕಳೆದುಹೋದಾರು ಎನ್ನುವ ಕಾಳಜಿಯಿಂದ ಆನ್‌ಲೈನ್‌ನಲ್ಲಿ ನಮ್ಮ ಹುಡುಗರ ಜೊತೆ ಸ್ವಲ್ಪಕಾಲ ಕಳೆಯಿರಿ ಅಂತ ಅಂದರು. ನನಗೂ ಹೊಸ ಅನುಭವ. ಆತುಅಂತ ಫೋನ್ನಾಗ ಮುಖ ತೂರಿಸಿ, ತೂರಿಸಿ ಭಾವನೆಯ ಬೇರುಗಳು ಅವರವರ ಊರುತನಕ ತಲುಪುವಂಗ ಮಾಡಿದೆ. ಎಲ್ಲೀತನಕ ಅಂದ್ರ ಶರತ್ ಅಂಬೋವ ಅವನ ಊರಾಗ, ಅವನ ಹೊಲದಾಗ, ಮರದ ಕೆಳಗ ಕೂತು ಕುರಿ ಕಾಯ್ತಿದ್ದ. ಅಲ್ಲೀಮಟ ನವರಸಗಳು ಹರ್ದು ಹೋದವು. ದಿನಕ್ಕೊಬ್ಬೊಬ್ಬರ ಪ್ರಶ್ನೆಗೆ ನನ್ನ ಅನುಭವದ ಹಿನ್ನೆಲೆಯೊಳಗ ಉತ್ತರ ಕೊಟ್ಟುಕೋಂತ, ನಾಟ್ಯಶಾಸ್ತ್ರದ ಕಡೆ ಹೊರಳಿ, ಒಂದೊಂದೇ ರಸಗಳ ಅವಲೋಕನ, ಅವುಗಳ ಲಕ್ಷಣ, ಅವುಗಳ ದೇವ್ರು, ಅವುಗಳ ಚಕ್ಬಂದಿ, ಅವುಗಳ ಜಾತಕವನ್ನು ಜಾಲಾಡಿದೆ.

ಈ ನವರಸಗಳ ಫ್ಯಾಮಿಲಿ ಗ್ರೂಪ್‌ ಫೋಟೊ ಕ್ಲಿಕ್‌ ಮಾಡಿದರ ಶೃಂಗಾರದ ಪಕ್ಕವೇ ಹಾಸ್ಯ ಕೂರಬೇಕು, ರೌದ್ರದ ಪಕ್ಕವೇ ಬೀಭತ್ಸ ಕೂರಬೇಕು, ಮತ್ತದರ ಪಕ್ಕವೇ ಕರುಣ ಕೂರಬೇಕು. ಶುದ್ಧ ವೀರರಸಕ್ಕೆ ಅಭಿಮನ್ಯುನಾ ಉದಾಹರಣೆ. ಆ ರಸದಲ್ಲಿ ಉತ್ಸಾಹವೇ ಸ್ಥಾಯಿಭಾವ. ಶ್ರೀರಾಮಚಂದ್ರ ಬಿಟ್ಟ ಅಶ್ವಮೇಧದ ಕುದುರೆಯನ್ನು ಕಟ್ಟುವಲ್ಲಿ ಲವ-ಕುಶರು ತೋರಿದ ಪರಿಯೂ ಶುದ್ಧ ವೀರದ್ದೇ. ಇನ್ನು ರೌದ್ರಕ್ಕ ಶುದ್ಧವಾದದ್ದು ರನ್ನನ ಗದಾಯುದ್ಧ. ರೌದ್ರದ ರಸಕ್ಕ ತುತ್ತಾದವನು ಮೈ ಮರಿತಾನ, ಆ ಹೊತ್ತಿಗೆ ತಿಳಿವಳಿಕೀನ ಅವನೊಳಗ ಮಾಯವಾಗಿರುತದ, ಕ್ರೋಧ ಸ್ಥಾಯಿಯಾಗಿ, ಇನ್ನದರ ದೇವರಾಗಿ ರುದ್ರ ಕಣ್ಣು ಬಿಟ್ಟುಗೊಂಡು ಕುಳಿತಿರುತ್ತಾನ. ಹುಬ್ಬೇರಿಸಿಗೊಂಡು, ಉರಿಗಣ್ಣುಗಳನ್ನ ಬಿಟ್ಟುಗೊಂಡು ಅಂಗೈಗಳನ್ನ ಒಂದಕ್ಕೊಂದು ತಿಕ್ಕೋಂತ ಹುರಿಗೊಂಡಿರ್ತಾನ. ರೌದ್ರಕ್ಕೆ ತುತ್ತಾದವರನ್ನ ನಾನು ಕಾರಾಗೃಹ ರಂಗಭೂಮಿಯಲ್ಲಿ ಬಹಳಷ್ಟು ಜನರನ್ನ ನೋಡೀನಿ. ನಮ್ಮ ನಿಜಜೀವನದಲ್ಲೂ, ಪ್ರಕೃತಿಯಲ್ಲೂ ಈ ನವರಸಗಳನ್ನು ಕಾಣಬಹುದು. ಯಾವ ನಟನೂ ತೋರದ ರೌದ್ರರಸವನ್ನು ಚಂಡಮಾರುತವು ತೋರುತದ.

ಹಾಂಗ ಕೋಕಿಲಾ ವಸಂತ ಕಾಲದಲ್ಲಿ ಮಾವಿನಮರದ ಮೇಲೆ ಕೂತು ತಳಿರೊಡೆದಿದೆ, ಚಿಗುರೊಡೆದಿದೆ ಬರ‍್ರಿ ಬರ‍್ರಿ ಅಂತ ಪ್ರಣಯಿಗಳಿಗೆ ಶೃಂಗಾರ ರಸದ ಆಹ್ವಾನ ನೀಡುತದ. ಮತ್ತೆ ಬರಗಾಲದಲ್ಲಿ ಕೆರೆ ಕಟ್ಟೆಗಳು ಒಣಗಿ, ಬಾಯ್ಬಿರಿದು ದನ ಕರುಗಳ ಬವಣೆ ನೋಡಲಾಗದ ಕರುಣವನ್ನು ಉಂಟು ಮಾಡುತಾವ. ಇನ್ನು ಈ ಗ್ರೂಪ್‌ ಫೋಟೊದಾಗ ಶೃಂಗಾರಕ್ಕ ವಿಶೇಷವಾದ ಮಣೆನಾ ಹಾಕಬೇಕು. ರಸಗಳ ರಾಜನೇ ಶೃಂಗಾರ. ಇದೊಂದರಲ್ಲೇ ಎಲ್ಲ ರಸಗಳೂ ತಲೆ ಎತ್ತುತಾವ. ಉದ್ಯಾನವನದಲ್ಲಿ ಕಾದು ಕಾದು ಪ್ರಣಯಿ ಬಾರದಿದ್ದಾಗ ‘ಶಂಕಾ’ ಎನ್ನುವ ವ್ಯಭಿಚಾರಿ ಭಾವ ನುಸುಳಿ, ಅದು ಈರ್ಷೆಯಾಗಿ ರೂಪುಗೊಂಡು, ‘ಮತ್ಸರ’ ಎನ್ನುವ ಹೆಸರು ಪಡೆದು ಮುಂದೆ ಅದು ವಿಪರೀತಕ್ಕ ಹೋದಾಗ ‘ರೌದ್ರ’ದ ಮೂಲಕ ಮರಣದಲ್ಲಿ ಮುಕ್ತಾಯ ಹಾಡತದ. ಇದಕ್ಕೆ ‘ಒಥೆಲೊ’ ಸರಿಯಾದ ಉದಾಹರಣೆ. ಹಾಂಗss ಸಂಚಾರಿ ಭಾವಗಳು ಮನುಷ್ಯನ ನರನಾಡಿಗಳಂತೆ ನವರಸಗಳಲ್ಲಿ ಹರಿದಾಡುತಾವ. ಅವುಕ್ಕ ತಡೆ ಎಂಬೋದಿಲ್ಲ.

ಚಪ್ಪರಮನೆ ಶ್ರೀಧರ ಹೆಗ್ಡೆಯವರು ಮಂಥರೆಯಾಗಿ ಕೈಕೇಯಿ ಹತ್ತಿರ ತನ್ನ ನಿಲುವನ್ನು ಸಮರ್ಥಿಸುವ ಪರಿಯೊಂದದ. ಆ ಪರಿಯೊಳಗ ದೈನ್ಯ, ನೋವು, ಅವಮಾನ, ಶಂಕಾ, ಕುತ್ಸಿತ, ಮಸಲತ್ತು, ಸೇಡು ಮೊದಲಾದುವಾಗಿ ಆಕಿಯೊಳಗ ಸಂಚರಿಸದಾ ಇರುವ ಭಾವಗಳಾ ಇಲ್ಲ. ಅಂತು ಶಿವಮೊಗ್ಗ‌ ರಂಗಾಯಣದ ಮಕ್ಕಳಿಗೆ ಇದನ್ನೆಲ್ಲ ಹೇಳಿ ಮುಗಿಸೋ ಹೊತ್ತಿಗೆ ಹೊತ್ತಾಗಿತ್ತು. ಮುಗಿಸಿ ಕಲಬುರ್ಗಿ ರಂಗಾಯಣಕ್ಕ ಹೊಂಡುಬೇಕಾತು. ಹೊಂಟೆ.

***

ಶಿವಮೊಗ್ಗೆಯ ರಂಗಾಯಣದಾಗ ಗರಿಬಿಚ್ಚಿದ ನಾಟ್ಯಶಾಸ್ತ್ರದ ಪಾಠ ಕಲಬುರ್ಗಿಯ ರಂಗಾಯಣದಾಗ ಮುಂದುವರೆದು, ನನ್ನಷ್ಟಕ್ಕ ನನಗಾ ವಿಸ್ಮಯವ‌ನ್ನುಂಟು ಮಾಡಿತು. ಇಲ್ಲೀತನ ಆದ ಅನುಭವಕ್ಕ ಕಡೆಗೋಲು ಇಟ್ಟು ಕಡೆದಾಂಗ ಆತು. ಶಿವನಾ... ಅದಾ ಶರೀರ, ಅದಾ ಶಾರೀರಾ, ಅವಾ ಕಣ್ಣು, ಅದಾ ಮೂಗು, ಅದಾ ಬಾಯಿ, ಆದರ ನಟನ ದೇಹದೊಳಗ ಪ್ರವೇಶ ಪಡೆದ ಆತ್ಮ ಮಾತ್ರ ಬ್ಯಾರೆ ಬ್ಯಾರೆ.

ಹುಡುಗರ ಪ್ರಶ್ನೆಗಳಿಗೆ ಉತ್ತರ ಕೊಟ್ಟುಕೋತ ಹೇಳಿದೆ, ‘ನಾವು ರಂಗದ ಮ್ಯಾಲೆ ಬರುವಾಗ, ವೇಷತೊಟ್ಟ ಆತ್ಮದೊಂದಿಗೆ ಬರಬೇಕು. ಅದರ ಹೆಣ ಹೊತ್ತುಗೊಂಡು ಬರಬಾರದು. ಆತ್ಮ ಒಳಹೊಕ್ಕ ದೇಹ ನಮ್ಮದಾಆದರೂ ಆ ಆತ್ಮ ನಮ್ಮದಾ ಕಣ್ಣು, ನಮ್ಮದಾ ಕಿವಿ, ನಮ್ಮದಾ ನಾಲಿಗೆಯಿಂದ ಪ್ರೇಕ್ಷಕರೊಂದಿಗೆ ಅನುಸಂಧಾನ ಮಾಡಬೇಕು. ಹಾಂಗ ರಂಗಕ್ಕ ಬಂದ ಎಲ್ಲ ನಟರ ದೇಹದೊಳಗ ವೇಷದ ಆತ್ಮಗಳು. ಹಾಡೋದು, ಹಾಕ್ಯಾಡೋದು, ರಮಿಸೋದು, ಮಸಲತ್ತು ಮಾಡೋದು, ಕತ್ತೀ ಮಸಿಯೋದು, ಮೀಸೀ ತಿರುವೋದು, ಅಳೋದು, ನಗೋದು, ಕನಿಕರಿಸೋದು, ಥೂತ್ಕರಿಸೋದು, ವ್ಯಾಕರಿಸೋದು ಮಾಡುತ ಇರತಾವ. ಭರತಮುನಿಯ ಮಕ್ಕಳು ಥೇಟ್ ಹೀಂಗss ರಂಗದ ಮ್ಯಾಲೆ ವೇಷತೊಟ್ಟ ‘ಆತ್ಮ’ದೊಂದಿಗೆ ಬರ್ತಾರ.

ಆಟ ಮುಗಿಯೋತನನಮ್ಮ ನಮ್ಮ ಇಡೀ ದೇಹಾನ ಬಾಡಿಗೀ ಬಿಟ್ಟಾಂಗ ಆಗಿರತದ. ನಟನ ದೇಹಕ್ಕ ಮುಪ್ಪು ಬಂದರೂ ಅದು ರಂಗದಮ್ಯಾಲ ಒಮ್ಮೊಮ್ಮೆ ತುಡುಗು ದನ ಓಡ್ಯಾಡಿದಾಂಗ ಮೈದುಂಬಿದ ಕರುವಿನ ಹಾಂಗ ಜಿಗಿದಾಡಬೇಕಾಗ್ತದ. ಆಗ ದೇಹ ತನಗ ಅಂಟಿಕೊಂಡ ಆತ್ಮಕ್ಕ ‘ಇತ್ತಿತ್ತಾನನ್ನ ಕೈಲಿ ಏನೂ ಆಗಣಿಲ್ಲೋ ಮಾರಾಯ’ ಅಂತ ಗೋಗರೀತದ. ಒಳಗೊಳಗ ರೋದಿಸ್ತದ (ಇವೆರಡೂ ಒನ್ನಮೂನಿ ಗಂಡ ಹೆಂಡತಿ ಇದ್ದಾಂಗ). ಆದರ ನಟನ ಆತ್ಮ ಇದೀಗ ಕಣ್ಣುಬಿಟ್ಟ ಕರುವಿನ ಹಾಂಗ, ಬೆದಿಗೆ ಬಂದ ಹೋರಿ ಹಾಂಗ ಜೀವನ ಪ್ರೀತಿನ ಅಂಗಳದ ತುಂಬ ಚೆಲ್ಯಾಡಿಕೋಂತ ಮುಪ್ಪಾದ ದೇಹಕ್ಕ ಹೇಳ್ತದ: ‘ಅರೇ...ಮೇರಾ ದೋಸ್ತ್ ಉಠೋ..ಉಠೋ..’ ನಾನು ತೊಡೋ ವೇಷ ಇನ್ನೂ ಬಾಕಿ ಭಾಳ ಉಳ್ದಾವ. ನಾನಿನ್ನೂ ಮುಸಲೋನಿ ಆಗಬೇಕು. ನಟಸಾಮ್ರಾಟದ ಗಣಪತರಾವ್ ದೇಶಮುಖನಾಗಬೇಕು. ಜೋಗಮ್ಮನಾಗಿ ಚೌಡಿಕಿ ಹಿಡುಕೊಂಡು ಎಗರಿ ಎಗರಿ ಕುಣಿದಾಡಬೇಕು. ಕಾಳಿದಾಸನ ವಿಕ್ರಮನಾಗಿ ಊರ್ವಶಿಗಾಗಿ ಹಪಹಪಿಸಬೇಕು. ಗೋಕರ್ಣದ ಗೌಡಶಾನಿ ಎಲೆಅಡಿಕಿ ತಿನ್ನಕೋಂತ, ತುಟಿ ಕಚ್ಚಿಕೋಂsತ, ಮಂಚದ ತನಾ ಬಂದು ಆ ಮಂಚದ ಐಸಿರಿ ನೋಡಿ, ‘ಅಯ್ಯಾ ಏನು ಚೆಂದೈತ ಯವ್ವಏರೋ ಗಂಡಸಿದ್ರ ಈ ಮಂಚದಮ್ಯಾಲೆ ಮಲಗೇನಂದೇನು’ ಅಂತ ಮುಲುಗತ ವಾರೆಗಣ್ಣಿಂದ ಗೌಡಗ ನೋಡಿದಾಗನಾವಾಂತಿವಿಲಾಸದ ಚಹಾದಂಗಡ್ಯಾಗ ಮಿರ್ಚಿ ಬಜ್ಜಿ ತಿಂದ ತಪ್ಪಿಗೆ ಕಚ್ಚಿ ಬಿಚ್ಚಿಕೋಂತ ತಂಬಿಗಿ ಹಿಡುಕೊಂಡು ಓಡೋ ಸೊಳಿಕ್ಯ ಗೌಡನಾನಾನಾಗಬೇಕು.

ಮತ್ತ ಆ ಚೋರ್ ಗುರುವಿಗೆ ಚಾಂಡಾಲ ಶಿಷ್ಯನಾಗಬೇಕು. ಆ ವೇಷ ತೊಡಬೇಕು, ಈ ವೇಷ ತೊಡಬೇಕು, ತೊಡೋ ವೇಷ ಇನ್ನೂ ಬಾಕಿ ಭಾಳ ಉಳ್ದಾವ, ನೀ ಆಗೋದಿಲ್ಲ ಅಂತ ಅನುಬ್ಯಾಡ. ಅಲ್ಲಿ ಆ ಮುದುಕ ತಲೆತಿರುಕ ಲಿಯರ್ ಕಾಯ್ತಕೂತಾನ, ‘ನನ್ನನ್ನ ರಂಗದ ಮ್ಯಾಲೆ ಹೊತುಗೊಂಡು ಓಡ್ಯಾಡಲೇ ಹುಡುಗಾ, ಕೂತು ಮಂದಿಗೆ ಹೇಳೋ ನಾಕು ಮಾತು ಉಳುದಾವ...

‘ನೋಡ್ರಪಾಮಂದಿಗೋಳಮುಪ್ಪಿನಾಗ ಹುಷಾರು ಇರ್ರಿ, ನನ್ನಂಗ ನೀವೂ ಆಗೋದು ಬ್ಯಾಡ, ರೂಪಾಯಿ ಮುರಿಸಿ ಮಕ್ಕಳಿಗೆ ಕೊಟ್ಟರೂ ನಾಕಾಣಿ ನೀವಿಟ್ಟುಕೊಳ್ಳೋದು ಮರಿಬ್ಯಾಡರಿ, ಇದು ಮುಪ್ಪಿನ ಗುಟ್ಟು ಅದ’ ಅಂತ ಹೇಳೋದದ ಅಂತ ಅಲುವತ್ತುಕೊಂತ ಕುಂತಾನ ಪಾಪ.

ನೀ ಆಗೋದುಲ್ಲ ಅನುಬಾರದು ಏಳು ಏಳು ಅಂತ ಆತ್ಮ ದೇಹಕ್ಕ ಒತ್ತಾಯದಲೇ ಒಪ್ಪಿಸತದ. ಆಗ ಈ ನಟನ ದೇಹದೊಳಗ ಮುದುಕ ಲಿಯರ್‌ನ ಆತ್ಮ ಒಳಹೊಕ್ಕು ನಟನ ಕಣ್ಣಿಂದ ಪ್ರೇಕ್ಷಕರನ್ನ ನೋಡಕ ಶುರುವಾಗ್ತದ, ಬಾಯಿ ಮಾತಾಡಲಿಕ್ಕ ಶುರು ಮಾಡ್ತದ, ನಟನ ಎದಿ ಲಿಯರ್‌ನ ಎದಿಯಾಗಿ ಉಬ್ಬತದ, ಕೈ ಕಾಲುಗಳು ಅವನುವಾಗಿ ಉಳಿಯೋದಿಲ್ಲ. ಅವನ ಒಳಹೊಕ್ಕ ಲಿಯರ್‌ನ ಆತ್ಮ ರಂಗದ ತುಂಬ ಓಡ್ಯಾಡಿ, ಗೋಳ್ಯಾಡಿ, ಬಡಬಡಿಸಿ, ಬೀಗಿ ಅಂತೂ ತನ್ನ ಕತಿ ಮುಗಿಸತದ. ಕತಿ ಮುಗೀಯೂತ್ಲೆ ವಿಕ್ರಮರಾಯನ ಬೇತಾಳ ಮರ ಕಂಡ ಕೂಡಲೇ ಸೊಯಿಂಕ್ ಅಂತ ಮ್ಯಾಲೋಗಿ ಮರದಾಗ ನೇತಾಡಿದಂಗ, ತೊಟ್ಟ ಬಟ್ಟಿ ಕಳಚಿದಾಂಗ, ಲಿಯರ್‌ನ ಆತ್ಮ ನಟನ ದೇಹ ಕಳಚಿ ಹೊಂಟ್ ಹೋಗ್ತದ. ಹೋಗಾಗ ಅವನೌನ ಒಂದು ಮಾತು ಕೂಡ ಹೇಳೋದಿಲ್ಲ. ಆದರೂ ಆಟ ಮುಗುದಾದ ಮ್ಯಾಲೆ ನೋಡಾಕ ಬಂದ ಮಂದಿ, ‘ಭಲೆ... ಭಲೆ ಶಹಬ್ಬಾಷ್‌’ ಅಂತ ಮೆಚ್ಚಿಗೆಯಿಂದ ಹೊಗಳಿದಾಗ ನಟನ ಎದಿ ಉಬ್ಬುತದ, ಆಮೇಲೆ ರಾತ್ರಿ ‘ಹೊಗಳಿಕೀ ಮುಳ್ಳು ಚುಚ್ಚಿ’ ಅವನ ನಿದ್ರಿ ಕೆಡ್ತದ.

ತೊಟ್ಟ ವೇಷದ ಉಮ್ಮಳ, ಉದ್ವೇಗ, ಉನ್ಮಾದಕ್ಕೊಳಗಾದ ನಟನ ದೇಹ ಹಿಂಡಿದ ಹಿಪ್ಪೆಯಾಂಗ, ಪುಂಡಿ ಸೊಪ್ಪಿನಾಂಗ ಆಗಿರ್ತದ, ನರಳತಿರತದ. ಇದನ್ನ ನೋಡಲಾರದ ಆತ್ಮ ರಮಿಸಿಗೋಂತ ದೇಹಕ್ಕ ‘ಹೆಂಡದಂಗಡಿಗೆ ಹೋಗೋಣು ನಡಿ ನೋವು ಕಮ್ಮಿ ಆಗತದ’ ಅಂತ ಕೈಹಿಡುಕೊಂಡು ನಡೀತದ.

ಇಲ್ಲಿ ನಾಟ್ಯಶಾಸ್ತ್ರದ ಹಿನ್ನೆಲೆಯಲ್ಲಿ ಮುದುಕ ಲಿಯರ್‌ನ ಕತಿ ನೋಡೋದಾದರ, ಅವ ಇದ್ದದ್ದನ್ನೆಲ್ಲ ಮಕ್ಕಳಿಗೆ ಹಂಚಿಕೊಟ್ಟಾಗ ಅವನಲ್ಲಿ ಹಮ್ಮಿತ್ತು, ಬಿಮ್ಮಿತ್ತು. ಜೊತೆಗೆ ಹೆಡ್ಡತನವೂ ಇತ್ತು. ತೊಗೊಂಡ ತಪ್ಪು ನಿರ್ಧಾರಕ್ಕ ದೈನ್ಯವು ಮನ ಕರಗುವಂತೆ ಇಲ್ಲಿ ಹರಿದಾಡಿತ್ತು. ಮಕ್ಕಳೆದುರು ಅವ ಮಂಡಿ ಊರಿ ಕೂತಾಗ, ಅವನ ಪರಗಟ್ಟಿದ ಪಾತ್ರಗಳು ವಿಷಾದದಲ್ಲಿ ಲೊಚಗುಡುತಾವ. ಮುಂದ ಅವನದ್ದು ‘ಬುರುಗಾಗಿ ಕರಗಿದ ಬದುಕು.’ ಹಮ್ಮಿನ ರಾಜನಾಗಿದ್ದಾಗ ಕಂಡರಿಯದ ಜನರನ್ನ, ಕಾಣದ ತಾಣಗಳನ್ನ ಕಾಣತಾನ, ಮಕ್ಕಳು ತೋರದ ಪ್ರೀತಿಯನ್ನ ಸೂರಿಲ್ಲದ ಹೆಸರಿಲ್ಲದ ಮುಖಗಳಲ್ಲಿ ಕಾಣುತಾನ. ಮುಪ್ಪಿನಲ್ಲಿ ಒದಗಿದ ಈ ಬದುಕಿಗೆ ಥೂತ್ಕರಿಸುತಾನ, ವ್ಯಾಕರಿಸುತಾನ.

ಮೊದಲು ಆವೇಗ, ಉದ್ವೇಗದಿಂದ ಶುರುವಾಗಿ, ಆಮ್ಯಾಲ ಅದು ಉನ್ಮಾದಕ್ಕ ತಿರುಗಿ, ಎತ್ತರೆತ್ತರದ ಗುಡ್ಡದ ಮ್ಯಾಲ ನಿಂತು, ಮೇಘಗಳ ಆರ್ಭಟಕ್ಕ ಎದೆ ತೆರೆದು, ತಲೆ ಕೊಡ ಕೊಡವಿ, ಸುಡು ಸುಡು ನನ್ನ ನೆತ್ತಿಯನ್ನು ಎಂದು ಗಹಗಹಿಸಿದನೋ, ಗೋಳಾಡಿದನೋ,ತೊದಲಿದನೋ ಹೇಶರಿಸಿದನೋ ಒಂದೂ ಗೊತ್ತಾಗುವುದಿಲ್ಲ. ಎತ್ತರದ ಬಂಡೆಯ ಮ್ಯಾಲೆ ಉನ್ಮಾದದಲ್ಲಿ ಘೀಳಿಡುವ ಇವನ ಆರ್ಭಟಕ್ಕ ಮೇಘಗಳೂ ಕರಗಿ, ಕನಿಕರಿಸಿ ಸ್ಮೃತಿ ದಪ್ಪಿದ ಇವನ ಮ್ಯಾಲೆ ಧೋ...ಧೋ... ಎಂದು ಮಳಿ ಸುರುಸತಾವ.

ಇವನ ಕತಿಯೊಳಗ ಪ್ರೇಕ್ಷಕನು ‘ಅಯ್ಯೋ ಪಾಪ’ ಅಂದಾಗಲೇ ಕರುಣ ರಸದ ಹಿನ್ನೆಲೆಯಲ್ಲಿ ವ್ಯಭಿಚಾರಿ ಭಾವಗಳು, ಸಂಚಾರಿ ಭಾವಗಳು ಎಗ್ಗಿಲ್ಲದೆ ಓಡಾಡಿರುತಾವ. ಇವನ ಈ ದುರ್ಗತಿಯಲ್ಲಿ ಗರ್ವ, ಹತಾಷೆ, ಮುಜುಗರ, ಕ್ರೋಧ, ಹೊಯ್ದಾಟ, ಅವಮಾನ, ಭ್ರಮೆ, ಉದ್ವೇಗ, ಉನ್ಮಾದ, ಶೋಕಗಳು ಭಾಗಿಯಾದರೆ, ಅವನ ಮಕ್ಕಳು ಮತ್ತು ಅವರನ್ನು ಸುತ್ತುವರಿದ ಪಾತ್ರಗಳಲ್ಲಿ ಸೋಗು, ಆಸೆ, ಅಸೂಯೆ, ಈರ್ಷೆ, ವ್ಯಭಿಚಾರ, ಸಂಚು, ದ್ವೇಷ, ಮಸಲತ್ತು, ಕತ್ತಿಮಸೆಯುವ ವ್ಯಭಿಚಾರಿ ಭಾವಗಳಿಂದ ವಿನ್ಯಾಸಗೊಂಡಾವ. ಇಲ್ಲಿ ಮಸಲತ್ತು ಮಾಡೋದಕೂ ಕತ್ತೀ ಮಸೆಯೋದಕೂ ವ್ಯತ್ಯಾಸ ಅದ. ಇವು ವ್ಯಭಿಚಾರಿ ಭಾವದೊಳಗ ಮೈದಾಳ್ತವ. ಉನ್ನತವಾದದ್ದನ್ನ ನೋಡಲು, ಸಹಿಸಲು ಅಸಾಧ್ಯವಾಗಿ, ಈರ್ಷೆಯ ಕಾವು ಹೆಚ್ಚಾಗಿ, ಉರಿದುರಿದು, ಆತ್ಮ ಶಮನಕ್ಕಾಗಿ ಹಪಹಪಿಸಿ ಉನ್ನತವಾದದ್ದರ ಅವನತಿಗಾಗಿ ತಂತ್ರ-ಕುತಂತ್ರಗಳಿಂದ ಸಂಚು ರೂಪಿಸಿ, ಅಳೆದು,ಸುರಿದುಮತ್ತೆ ಅಳೆದು, ಮತ್ತೆ ಸುರಿದು ತೂಗಿ, ತೂಗಿ ಆಮ್ಯಾಲ ನಿರ್ಧರಿತ ಸಂಚಿನ ಮುಂದಿನ ಕ್ರಿಯೆಯಾಗಿ ಮನುಷ್ಯ ಕತ್ತಿಮಸೆಯಲು ತೊಡಗುತ್ತಾನೆ. ಹೀಂಗ ಸಣ್ಣ ಸಣ್ಣ ವ್ಯತ್ಯಾಸ ಇರತಾವ. ಉದ್ವೇಗನಾ ಬ್ಯಾರೆ, ಉನ್ಮಾದನಾ ಬ್ಯಾರೆ ಇರ್ತದ. ಈ ಒಂಬತ್ತು ರಸಗಳು ಒಂದಕ್ಕೊಂದು ಅಂತರವಾಗಿ ನಿರ್ಮಿಸಿದ, ಬೃಹದಾಕಾರದ ಬಂಗಲೆಗಲೋಪಾದಿಯಲ್ಲಿ ಒಂಟೊಂಟಿಯಾಗಿ ನಿಂತಿರತಾವ. ಒಂದರ ವಿನ್ಯಾಸದಂತೆ ಇನ್ನೊಂದಿಲ್ಲ.

ಶೃಂಗಾರದ ಭಂಗಲೆಯ ಮೆಟ್ಟಿಲ ಮ್ಯಾಲೆ ರತಿ ಕೂತಿರತಾಳ, ಹಾಸ್ಯದ ಬಂಗಲೆಯ ಮೆಟ್ಟಿಲಮ್ಯಾಲೆ ಹಾಸ ಕುಣಿತಾ ಇರತದ, ಕರುಣ ರಸದ ಮೆಟ್ಟಿಲ ಮ್ಯಾಲೆ ಶೋಕ ಕಣ್ಣೀರಾಕ್ತ ಇರತದ, ವೀರದ ಬಂಗಲೆಯ ಮುಂದೆ ಉತ್ಸಾಹವು ಅದರ ಸ್ಥಾಯಿ ಭಾವವಾಗಿ, ಬಿಢೆ ಇಲ್ಲದೆ ತಲೆ ಎತ್ತಿ ಜಿಗಿದಾಡತ ಇರತದ, ಇನ್ನು ದೂರದಿಂದಲೇ ಗೊತ್ತಾಗತದ ಇದು ರೌದ್ರದ ಹೆಬ್ಬಾಗಿಲು ಅಂತ ಅಲ್ಲಿ ಕ್ರೋಧ ಇಣುಕಿಹಾಕತದ, ಭಯಾನಕದ ಬಂಗಲೆಯೊಳಗ, ನರಿಗಳು ಊಳಿಟ್ಟಾಂಗ, ಯಾರೋ ನರಳಿದಾಂಗ ಭಾಸವಾಗತದ, ಇನ್ನು ಬೀಭತ್ಸದ ಬಂಗಲೆ ಹತ್ತರ ಹೋದವರು ಅದರ ಮೆಟ್ಟಿಲ ಮ್ಯಾಲೆ ಕೂತ ಅಸಹ್ಯನ ನೋಡಲಾರದ ಕಣ್ಣುಮುಚ್ಚಿ ಮುಖ ಸೀಂಡರಿಸಿ ವ್ಯಾಕರಿಸತಾರ, ಹಾಂಗ ಅದ್ಭುತದ ಬಂಗಲೆಗೆ ಬಂದಾಗ ಬೆರಗಿನಿಂದ, ಸೋಜಿಗದಿಂದ ಕಣ್ಣು ಬಾಯಿ ಅರಳತಾವ, ಹುಬ್ಬೇರತದ.

ಕೊನೇದಾಗಿ ಶಾಂತದ ವಿನ್ಯಾಸವೇ ಬೇರೆ. ಈ ಎಲ್ಲ ಬಂಗಲೆಗಳ ಮುಂದೆ ಹಾಯ್ದು ಬಂದದ್ದೆಲ್ಲ ಸುಳ್ಳೆನಿಸಿ ನಿರ್ಭಾವದಿಂದ ನಿಂತ ಗೊಮ್ಮಟ ನೆನಪಾಗುತಾನ, ತಾಯ ಎದೆ‌ ಹಾಲು ಕುಡಿದು ತೊಟ್ಟಿಲಲ್ಲಿ ಮಲಗಿದ ಮಗು ನೆನಪಾಗತದ. ಇವನ್ನೆಲ್ಲ ನನ್ನ ಈ ನಿರಂತರ ಮೂವತ್ತೈದು ವರ್ಷದ ರಂಗದ ಮ್ಯಾಲಿನ ಅನುಭವದೊಂದಿಗೆ ಕಲಬುರಗಿ, ಶಿವಮೊಗ್ಗ ರಂಗಾಯಣದ ಯುವ ಕಲಾವಿದರ ಜೋಡಿ ಹಂಚಿಕೊಂಡೀನಿ.
ನನಗ ಅನುಸತದ ಹುಡುಗರದೇನೂ ತಪ್ಪಿಲ್ಲ. ತಪ್ಪೆಲ್ಲ ನಮ್ಮದದ. ಹುಡುಗರಿಗೆ ಅವರ ಭಾವಕೋಶದ ಸ್ವಿಚ್‌ ಎಲ್ಲದ ಅಂತ ಅವರಿಗ ಗೊತ್ತು ಇರೋದಿಲ್ಲ. ಕತ್ತಲ ಕ್ವಾಣ್ಯಾಗ ತಡಕ್ಯಾಡಿಕೋಂತ ಕೈಹಿಡಿದು ಕರಕೊಂಡುಹೋಗಿ ತೋರಿಸಿಕೊಡಬೇಕು. ಪ್ರತಿ ಒಬ್ಬಾವಗ ಈ ಸ್ವಿಚ್‌ಗಳು ಇದ್ದಾ ಇರ್ತಾವ. ಒಂದೊಂದು ರಸಕ್ಕೂ ಒಂದೊಂದರಂಗ ಇರ್ತಾವ. ಅವು ಆನ್‌ ಆಗಿಬಿಟ್ಟರ ಈ ಸಂಚಾರಿ, ವ್ಯಭಿಚಾರಿ ಭಾವಗಳು ಎಗ್ಗಿಲ್ಲದ ಹರಿದಾಡತಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT