ನಗುವ ಕಣ್ಣಲಿ ವಿಸ್ಮಯವಿರಲಿ...

7

ನಗುವ ಕಣ್ಣಲಿ ವಿಸ್ಮಯವಿರಲಿ...

Published:
Updated:

ರಿಯಾಲಿಟಿ ಶೋಗಳ ಸುಳಿಗೆ ಸಿಲುಕಿ ಮಕ್ಕಳ ಮುಗ್ಧತೆ ಮರೆಯಾಗುತ್ತಿದೆಯೇ? ನಟನೆಯ ಕಲಿಕೆ ಹೇಗಿರಬೇಕು. ಪೋಷಕರ ಜವಾಬ್ದಾರಿ ಏನು ಎಂಬ ಪ್ರಶ್ನೆಗಳಿಗೆ ನಿರ್ದೇಶಕ ಡಿ. ಸತ್ಯಪ್ರಕಾಶ್‌ ಮತ್ತು ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್‌ನ ನಿರ್ದೇಶಕ ಶರಣಯ್ಯ ನೀಡಿದ ಉತ್ತರ ಇಲ್ಲಿದೆ.

ಚಿಣ್ಣರು ಟಿ.ವಿ.ಯಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಪೋಷಕರ ಮಹದಾಸೆ. ಆದರೆ, ಬಲವಂತವಾಗಿ ಅವರನ್ನು ರಿಯಾಲಿಟಿ ಶೋಗಳ ವೇದಿಕೆಗೆ ದೂಡುವುದು ಸಲ್ಲದು. ನಟನೆ ಬಗ್ಗೆ ಮಗುವಿಗೆ ಆಸಕ್ತಿ ಇದ್ದರೆ ಪ್ರೋತ್ಸಾಹ ನೀಡಬೇಕು.‌ ಅವರಿಗೆ ಯಾವ ವಿಷಯದ ಮೇಲೆ ಆಸಕ್ತಿ ಇದೆ ಎನ್ನುವ ಅರಿವು ತಂದೆ– ತಾಯಿಗೆ ಇರಬೇಕು. ಅದಕ್ಕೆ ಪೂರಕವಾಗಿ ಸೂಕ್ತ ಮಾರ್ಗದರ್ಶನ ನೀಡುವುದು ಅತ್ಯಗತ್ಯ. 

ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಹೆಸರು ಮಾಡುವುದು ಒಳ್ಳೆಯದಲ್ಲ. ಅದನ್ನು ಬಹುಕಾ‍ಲ ಕಾಪಿಟ್ಟುಕೊಳ್ಳುವುದು ಕಷ್ಟಕರ. ಅವರ ತಲೆಯಲ್ಲಿ ತಾವು ‘ಸ್ಟಾರ್’ ಆಗಬೇಕೆಂಬುದು ಇರುವುದಿಲ್ಲ. ನಾವು ಎಲ್ಲರ ಆಕರ್ಷಣೀಯ ಕೇಂದ್ರವಾಗಬೇಕು ಎನ್ನುವುದು ಅವರ ತಲೆಯಲ್ಲಿ ಇರುತ್ತದೆ. ಅದಕ್ಕಾಗಿಯೇ ಹಾಡುತ್ತಾರೆ; ಕುಣಿಯುತ್ತಾರೆ. ಅವರಿಗೆ ದುಡ್ಡು ಮಾಡುವ ಹುಚ್ಚು ಇರುವುದಿಲ್ಲ. ಆ ರುಚಿ ಹತ್ತಿಸಿದರೆ ತಮಗೆ ಅದು ಯಾವಾಗಲೂ ಬೇಕು ಅನಿಸುತ್ತದೆ. ಆದರೆ, ಅದು ಬಯಸಿದಾಕ್ಷಣ ಸಿಗದೇ ಇರಬಹುದು. ಇದು ಅವರ ಶಿಕ್ಷಣ, ಭವಿಷ್ಯದ ಬದುಕಿನ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.   

ಇಂದು ಸಾಂಸಾರಿಕ ಜೀವನ ಪಲ್ಲಟಗೊಂಡಿದೆ. ಇದು ಮಕ್ಕಳ ಮೇಲೂ ಗಾಢ ಪರಿಣಾಮ ಬೀರಿದೆ. ಚಿಟಿಕೆ ಹೊಡೆಯುವಷ್ಟರಲ್ಲಿ ತಮಗಿಷ್ಟವಾಗಿದ್ದು ಮಕ್ಕಳ ಕೈಸೇರುತ್ತಿದೆ. ಹಾಗಾಗಿ, ಅವರ ಬದುಕಿನಲ್ಲಿ ವಿಸ್ಮಯವೇ ಇಲ್ಲ. ಇದು ಅವರ ಬೆಳವಣಿಗೆ ದೃಷ್ಟಿಯಿಂದ ಅಪಾಯಕಾರಿ. ಆಧುನಿಕಯುಗದ ಭರಾಟೆಯ ನಡುವೆ ಅವರಲ್ಲಿನ ಮುಗ್ಧತೆ ಕಳೆದುಹೋಗುತ್ತಿದೆ. ಇನ್ನೊಂದೆಡೆ ಪೋಷಕರು ಮುಗ್ಧತೆಯನ್ನು ತಮಗೆ ಅರಿವು ಇಲ್ಲದಂತೆಯೇ ಹೊಸಕಿ ಹಾಕುತ್ತಿದ್ದಾರೆ ಎನಿಸುತ್ತಿದೆ. ಸಾಮಾಜಿಕ ಜೀವನದ ಬದಲಾವಣೆ, ಪೋಷಕರ ಪ್ರತಿಷ್ಠೆಯು ಇದಕ್ಕೆ ಕಾರಣವಾಗಿದೆ.

ಏಳರಿಂದ ಹತ್ತು ವರ್ಷದ ಮಕ್ಕಳಿಗೆ ನಟನೆಯನ್ನು ಹೇಳಿಕೊಡುವ ಅಗತ್ಯವಿಲ್ಲ. ಅವರು ಏನೇ ಮಾಡಿದರೂ ಚಂದವಾಗಿ ಕಾಣುತ್ತದೆ. ಆದರೆ, ಮಗುವಿನಲ್ಲಿ ಕೊಂಚ ಧೈರ್ಯ ಇರಬೇಕು ಅಷ್ಟೇ. ವೇದಿಕೆ ಮೇಲೆ ನಿರ್ದೇಶಕ ಹೇಳಿಕೊಟ್ಟಿದ್ದನ್ನು ಮಾಡುವ ಧೈರ್ಯ ಇದ್ದರೆ ನಟನೆ ಸುಲಭ. ಜೊತೆಗೆ, ಮಕ್ಕಳಿಗೆ ರಂಗ ತರಬೇತಿ ಕೊಡಿಸುವುದು ಉತ್ತಮ. ಬಾಲ್ಯದಲ್ಲಿಯೇ ನಟನೆ ಕರಗತವಾದರೆ ಅವರು ಪ್ರಬುದ್ಧ ವಯಸ್ಸಿಗೆ ಬಂದಾಗ ಯಶಸ್ಸು ಸುಲಭವಾಗಿ ದಕ್ಕುತ್ತದೆ. ಇದರಿಂದ ಭವಿಷ್ಯದಲ್ಲಿ ಅವರು ಉತ್ತಮ ಕಲಾವಿದರಾಗಿ ಬೆಳೆಯುತ್ತಾರೆ. 

ಮಕ್ಕಳ ಸಿನಿಮಾದ ಶೂಟಿಂಗ್‌ ವರ್ಷಾನುಗಟ್ಟಲೆ ನಡೆಯುವುದಿಲ್ಲ. ಒಂದೂವರೆ ತಿಂಗಳೊಳಗೆ ಮುಗಿದುಹೋಗುತ್ತದೆ. ಶಾಲೆಯ ಆರಂಭದಲ್ಲಿ ದಿನಗಳಲ್ಲಿ ಚಿತ್ರೀಕರಣ ನಡೆಸಿದರೆ ಮಕ್ಕಳ ಕಲಿಕೆಗೆ ತೊಂದರೆಯಾಗುವುದು ಕಡಿಮೆ. ರಜಾ ದಿನಗಳಲ್ಲಿ ಶೂಟಿಂಗ್‌ ನಡೆದರೆ ಮಕ್ಕಳು ಮತ್ತು ನಿರ್ದೇಶಕರಿಗೂ ತೊಂದರೆ ಇಲ್ಲ. ಆದರೆ, ಬಹಳಷ್ಟು ವೇಳೆ ನಮ್ಮ ಈ ಲೆಕ್ಕಾಚಾರ ದಿಕ್ಕುತಪ್ಪುತ್ತದೆ.

–ಡಿ. ಸತ್ಯಪ್ರಕಾಶ್‌ ನಿರ್ದೇಶಕ


ನಿರ್ದೇಶಕ ಡಿ. ಸತ್ಯಪ್ರಕಾಶ್

***

ಅದು ಕೊಪ್ಪಳ ಜಿಲ್ಲೆಯ ಹಂಚಿನಾಳ. ಆ ಊರಿನ ಹುಡುಗನ ಹೆಸರು ಮಂಜ. ಅವನ ತಂದೆ– ತಾಯಿಗೆ ಕೂಲಿಯೇ ಜೀವನಾಧಾರ. ಮಂಜನಿಗೆ ತನ್ನ ಸುತ್ತಮುತ್ತ ನಡೆಯುತ್ತಿರುವ ಎಲ್ಲ ಘಟನೆಗಳ ಅರಿವಿದೆ. ಅವನಿಗೆ ನಟನೆಯೂ ಗೊತ್ತಿದೆ. ಆದರೆ, ಸೂಕ್ತ ವೇದಿಕೆ ಸಿಕ್ಕಿಲ್ಲ. ಮುಗ್ಧತೆ ಇರುವುದರಿಂದಲೇ ಆತ ಡ್ರಾಮಾ ಜೂನಿಯರ್ಸ್‌ ವೇದಿಕೆ ಏರಿದ್ದಾನೆ. ಅಂತಹ ಮಕ್ಕಳಿಗೆ ರಿಯಾಲಿಟಿ ಶೋ ವೇದಿಕೆ ಕಲ್ಪಿಸುತ್ತದೆ. ಇಂತಹ ಕಾರ್ಯಕ್ರಮಗಳಿಂದ ಮುಗ್ಧತೆ ಕಳೆದುಹೋಗುವುದಿಲ್ಲ. ಅವರ ಕಲಿಕೆಗೆ ಇದು ಸೂಕ್ತ ವೇದಿಕೆ. 

ಮಕ್ಕಳು ನಟನೆ ಕಲಿಯುವಲ್ಲಿ ಪೋಷಕರ ಜವಾಬ್ದಾರಿಯೂ ಹೆಚ್ಚಿದೆ. ಎಲ್ಲರೂ ಶ್ರೇಷ್ಠರಾಗಲು ಸಾಧ್ಯವಾಗುವುದಿಲ್ಲ. ಚಿಣ್ಣರ  ಬೌದ್ಧಿಕ ಸಾಮರ್ಥ್ಯ ಅರಿತು ಪೋಷಕರು ಮುನ್ನಡೆಯುವುದು ಒಳಿತು. ಅವರ ಆಸಕ್ತಿಗೆ ನೀರೆರೆದು ಪ್ರೋತ್ಸಾಹಿಸಬೇಕು. ಒಂದು ಮಗು ನಟನೆಯಲ್ಲಿ ಚೆನ್ನಾಗಿದ್ದು, ಓದಿನಲ್ಲಿ ಹಿಂದುಳಿದಿದೆ ಎಂದಾಕ್ಷಣ ಆತ ದಡ್ಡನಲ್ಲ. ನಾವು ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಅವರನ್ನು ಅರಿತುಕೊಂಡಾಗಲಷ್ಟೇ ಚಿಣ್ಣರ ಬದುಕು ಹಸನಾಗುತ್ತದೆ.

ಜೀವನ ಎಂದರೆ ರಿಯಾಲಿಟಿ ಶೋಗಳಲ್ಲ. ಅದು ಒಂದು ಅಥವಾ ಎರಡು ತಿಂಗಳು ಮೂಡಿಬರುವ ಕಾರ್ಯಕ್ರಮ ಅಷ್ಟೇ. ಮಕ್ಕಳಲ್ಲಿರುವ ಕಲೆಗೆ ಪ್ರೋತ್ಸಾಹ ನೀಡುವುದು ಕಾರ್ಯಕ್ರಮದ ಮೂಲ ಉದ್ದೇಶ. ಕರ್ನಾಟಕದ ಮಕ್ಕಳು ನಟನೆ, ಡಾನ್ಸ್‌ನಲ್ಲಿ ಮುಂದಿದ್ದಾರೆ ಎಂದು ತೋರಿಸುವುದಕ್ಕೆ ಇದೊಂದು ವೇದಿಕೆ.  ಅದೇ ಬದುಕಲ್ಲ. ಈ ಕುರಿತು ಪೋಷಕರಿಗೂ ಸ್ಪಷ್ಟ ಅರಿವು ಅತ್ಯಗತ್ಯ. 

ರಿಯಾಲಿಟಿ ಶೋಗಳಲ್ಲಿ ಗೆದ್ದ ಮಕ್ಕಳು ಓದಿನಲ್ಲೂ ಮುಂದಿದ್ದಾರೆ. ಮಕ್ಕಳನ್ನು ದಾರಿತಪ್ಪಿಸದಂತೆ ಪೋಷಕರಿಗೆ ನಾವು ಕಿವಿಮಾತು ಹೇಳಿದ್ದೇವೆ. ಪಠ್ಯವನ್ನೇ ನಾವು ವೇದಿಕೆ ಮೇಲೆ ತರುತ್ತೇವೆ. ಡ್ರಾಮಾ ಜೂನಿಯರ್ಸ್‌ ಕಾರ್ಯಕ್ರಮ ಗುರುಕುಲ ಇದ್ದಂತೆ. ಇಲ್ಲಿ ನೀನಾಸಂ ಸೇರಿದಂತೆ ವಿದೇಶದಲ್ಲಿ ರಂಗಶಿಕ್ಷಣ ಪಡೆದವರಿದ್ದಾರೆ. ಅಕ್ಷರಗಳ ಉಚ್ಚಾರಣೆ ಬಗ್ಗೆಯೂ ಹೇಳಿಕೊಡುತ್ತೇವೆ. ಸ್ಟಾರ್‌ ನಟನೆ ಅನುಕರಣೆಯನ್ನು ಹೇಳಿಕೊಡುವುದಿಲ್ಲ. ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್‌, ಬಸವಣ್ಣ, ಭಗತ್‌ಸಿಂಗ್‌ರಂತಹ ಆದರ್ಶ ವ್ಯಕ್ತಿಗಳ ಸಾಧನೆಯನ್ನೂ ಹೇಳಿಕೊಡುತ್ತೇವೆ. ಇದು ಅವರ ಕಲಿಕೆಗೂ ಪೂರಕವಾಗಲಿದೆ. 

ಪ್ರಸ್ತುತ ವಿಷಕಾರಿ ಪ್ರವೃತ್ತಿ ಹೆಚ್ಚುತ್ತಿದೆ. ಎಡ–ಬಲ ಸಿದ್ಧಾಂತ ಕರಿನೆರಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಮಚಿತ್ತದಿಂದ ಮಕ್ಕಳಿಗೆ ನಟನೆ ಕಲಿಸುವುದೇ ನಮ್ಮ ಮೊದಲ ಆದ್ಯತೆ. ಮಕ್ಕಳು ಚೆನ್ನಾಗಿರುವುದು ದೇಶದ ಅಭಿವೃದ್ಧಿಯ ಶುಭಸೂಚಕ. ಅವರು ಹಾಳಾದರೆ ದೇಶವೂ ಅಧಃಪತನದ ಹಾದಿ ಹಿಡಿದಂತೆ.

–ಶರಣಯ್ಯ ಡ್ರಾಮ್‌ ಜೂನಿಯರ್ಸ್‌ನ ನಿರ್ದೇಶಕ, ಜೀ ಕನ್ನಡ ವಾಹಿನಿ

ನಿರೂಪಣೆ: ಕೆಎಚ್. ಓಬಳೇಶ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !