ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಗೌರಿ ಈಗ ಕನ್ನಡತಿ

Last Updated 2 ಜನವರಿ 2020, 19:30 IST
ಅಕ್ಷರ ಗಾತ್ರ

‘ಪುಟ್ಟಗೌರಿ ಮದುವೆ’ ಖ್ಯಾತಿಯ ನಟಿ ರಂಜನಿ ಹಿರಿತೆರೆಗೆ ಕಾಲಿಟ್ಟ ತಕ್ಷಣ, ಅವರಿಗೆ ತವರುಮನೆಯಂತಿರುವ ಕಿರುತೆರೆಯನ್ನೂಮರೆಯದೆ, ಧಾರಾವಾಹಿಯೊಂದರ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ‘ಸತ್ಯಂ’ ಚಿತ್ರದಲ್ಲಿ ನಟಿಸುತ್ತಿರುವ ಅವರು ಶೀಘ್ರದಲ್ಲೇಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿರುವ ‘ಕನ್ನಡತಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಅವರು ಈ ಬಾರಿ ಮಹಿಳಾ ವೀಕ್ಷಕರು ಕಣ್ಣೀರು ಸುರಿಸುವಂತೆ ಮಾಡುವ, ಪದೇ ಪದೇ ಸಾವು ಗೆದ್ದು ಬರುವ ಪುಟ್ಟಗೌರಿಯಂಥ ಪಾತ್ರ ಮಾಡುತ್ತಿಲ್ಲವಂತೆ. ಕನ್ನಡವನ್ನು ತಪ್ಪಾಗಿ ಬರೆಯುವ, ತಪ್ಪಾಗಿ ಮಾತನಾಡುವವರಿಗೆ ಶುದ್ಧ ಕನ್ನಡದ ಪಾಠ ಹೇಳುವ ಉಪನ್ಯಾಸಕಿ ‘ಕನ್ನಡತಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಯಲ್ಲಿ ಮಿತ್ರ ಅವರಂತಹ ಹಾಸ್ಯ ಕಲಾವಿದ ಕೂಡ ಬಣ್ಣ ಹಚ್ಚಿದ್ದಾರೆ. ಆಟೋ ಚಾಲಕನಾಗಿ ಕಾಣಿಸಿಕೊಂಡಿರುವ ಮಿತ್ರ ಆಟೋ ಹಿಂಭಾಗಕ್ಕೆ ಬರೆಸಿಕೊಂಡಿರುವ ‘ತಾಯಿಯ ಆಶೀರ್ವಾದ’ ಎನ್ನುವ ವಾಕ್ಯದಲ್ಲಿ ತ‍ಪ್ಪಾಗಿ ಬರೆದಿರುವ ‘ಆರ್ಶೀವಾದ’ ಪದವನ್ನು ಉಲ್ಲೇಖಿಸಿ ರಂಜನಿ ಕನ್ನಡ ವ್ಯಾಕರಣದ ಪಾಠ ಹೇಳಿಕೊಡುವ ಪ್ರೊಮೊ ಸದ್ದು ಮಾಡುತ್ತಿದೆ. ‘ಪುಟ್ಟಗೌರಿ’ಯ ನಟನೆಯನ್ನು ಮೆಚ್ಚಿರುವ ಕಿರುತೆರೆ ವೀಕ್ಷಕರು ಅವರನ್ನು ‘ಕನ್ನಡತಿ’ಯಾಗಿ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ.

ಮಿಲನಾ ಪ್ರಕಾಶ್‌ ಅವರ ಜೈಮಾತಾ ಬ್ಯಾನರ್‌ನಲ್ಲಿ ಈ ಧಾರಾವಾಹಿ ‌ನಿರ್ಮಾಣವಾಗುತ್ತಿದೆ. ಜನವರಿ ಅಂತ್ಯಕ್ಕೆ ಧಾರಾವಾಹಿ ಪ್ರಸಾರವಾಗುವ ನಿರೀಕ್ಷೆ ಇದೆ. ರಂಜನಿ ಈ ಹಿಂದೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಇಷ್ಟದೇವತೆ’ ಧಾರಾವಾಹಿಗೆ ಕಥೆ, ಚಿತ್ರಕಥೆ ಬರೆದು ಕ್ರಿಯೆಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದರು. ಈಗ ಹಿರಿತೆರೆ ಮತ್ತು ಕಿರುತರೆಯಲ್ಲೂ ಸಕ್ರಿಯವಾಗಿದ್ದಾರೆ.

‘ಕನ್ನಡದ ಅರೆಕಾಲಿಕ ಉಪನ್ಯಾಸಕಿಯ ಪಾತ್ರ ನನ್ನದು. ಧಾರಾವಾಹಿಯಲ್ಲಿ ಇಂತಹ ಪಾತ್ರಗಳು ಸಿಗುವುದು ವಿರಳ. ಈ ಪಾತ್ರ ಮೌಲ್ಯಗಳನ್ನು ಪರಿಪಾಲಿಸುತ್ತದೆ. ನೋಡುವವರಿಗೂ ಒಂದು ಪ್ರೇರಣೆಯಾಗಲಿದೆ.ಕನ್ನಡತಿಯ ಊರು ಮಲೆನಾಡಿನ ಸೆರಗು ಆಗಿರುವುದರಿಂದಆಗುಂಬೆ, ತೀರ್ಥಹಳ್ಳಿ ಭಾಗದಲ್ಲಿ ಶೂಟಿಂಗ್‌ ನಡೆಯಲಿದೆ. ಸತ್ಯಂ ಚಿತ್ರ ಕೂಡ ಶೇ.20ರಷ್ಟು ಚಿತ್ರೀಕರಣವಾಗಿದೆ. 2020 ನನ್ನ ಪಾಲಿಗೆ ತುಂಬಾ ಖುಷಿ ನೀಡುವ ವರ್ಷ. ಹೊಸ ವರ್ಷದಲ್ಲಿ ಎರಡು ಒಳ್ಳೆಯ ಪ್ರಾಜೆಕ್ಟ್‌ಗಳು ಕೈಯಲ್ಲಿವೆ’ಎನ್ನುವ ಮಾತು ಸೇರಿಸಿದರು ರಂಜನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT