ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ಮೈ ಮುಚ್ಚಬೇಕು

Last Updated 25 ಏಪ್ರಿಲ್ 2019, 12:57 IST
ಅಕ್ಷರ ಗಾತ್ರ

ಉದಯ–2ನಲ್ಲಿ ನಿರೂಪಕಿಯಾಗಿದ್ದಶ್ವೇತಾ ರಾವ್‌ ಅದೇ ವಾಹಿನಿಯ ‘ಕ್ಷಮಾ’ ಧಾರಾವಾಹಿಯ ಕ್ಷಮಾ ಪಾತ್ರಧಾರಿಯಾಗಿದ್ದಾರೆ. ನಿರೂಪಕಿಯಿಂದ ಕಿರುತೆರೆ ನಟಿಯಾಗುವವರೆಗಿನ ಅವರ ವೃತ್ತಿ ಬದುಕಿನ ಕುರಿತು ಅವರಿಲ್ಲಿ ಮಾತನಾಡಿದ್ದಾರೆ.‌

ನಿರೂಪಣೆಯ ಒಲವು ಇಲ್ಲಿಗೆ

ಉದಯ 2ನಲ್ಲಿ ನಿರೂಪಕಿ ಆಗಿದ್ದವಳಿಗೆ ರಿಯಾಲಿಟಿ ಷೋ ನನ್ನ ಬದುಕಿನಲ್ಲಿ ಭವ್ಯ ಅವಕಾಶದ ಬಾಗಿಲನ್ನೇ ತೆರೆಯಿತು. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು–2’ ರಲ್ಲಿ ಸ್ಪರ್ಧೆಯಲ್ಲಿ ನಾನು ವಿಜಯಿಯಾದೆ. ನಂತರ ‘ಪ್ರಿಯದರ್ಶಿನಿ’ಯಲ್ಲಿ ಪುಟ್ಟ ಪಾತ್ರದ ಮೂಲಕ ಅಭಿನಯಕ್ಕೆ ಪ್ರವೇಶ ಮಾಡಿದೆ. ನಾನು ನಿರ್ದೇಶಕರು ಹೇಳಿದನ್ನು ಕೇಳುತ್ತಲೇ ನಟನೆಯಲ್ಲಿ ಕಲಿತಿದ್ದೇನೆ. ಇದಕ್ಕಾಗಿ ಯಾವ ತರಬೇತಿಯನ್ನೂ ತೆಗೆದುಕೊಂಡಿಲ್ಲ. ಅಷ್ಟೇ ಏಕೆ, ಕೊನೆಪಕ್ಷ ಕನ್ನಡಿ ಮುಂದೆ ನಿಂತು ಅನುಕರಣೆಯ ನಟನೆಯನ್ನು ಮಾಡಲಿಲ್ಲ.

* ಏನಾಗಬೇಕು ಅಂದು ಭಾವಿಸಿದ್ದೀರಿ?

ತುಂಬಾ ಕಷ್ಟದಲ್ಲಿ ಬೆಳೆದು ಬಂದಿದ್ದೇನೆ. ಒಳ್ಳೆಯ ನಟಿಯಾಗಿ ಬೆಳೆಯಬೇಕು ಎನ್ನುವುದು ನನ್ನ ಭಾವನೆ. ಕಿರುತೆರೆ ನನಗೆ ಇಷ್ಟ. ವಾರ್ಷಿಕ ಪುರಸ್ಕಾರದಲ್ಲಿ ‘ಬೆಸ್ಟ್‌ ಸೊಸೆ’ ‘ಬೆಸ್ಟ್‌ ಅತ್ತೆ’ ‘ಬೆಸ್ಟ್‌ ಅತ್ತಿಗೆ’ ‘ಬೆಸ್ಟ್‌ ಅಮ್ಮ’ ಹೀಗೆ ಒಂದೊಂದೇ ಪುರಸ್ಕಾರವನ್ನು ಪಡೆಯಬೇಕು. ಇಲ್ಲಿ ನಟಿಯಾಗಿ ಮಾತ್ರ ಬೆಳೆಯಲು ಇಷ್ಟಪಡುತ್ತೇನೆ. ಅದನ್ನಷ್ಟೇ ನಾನು ಯೋಚಿಸುವುದು ಅದಾರಾಚೆಯ ಯಾವ ಸಾಧ್ಯತೆಗಳೂ ನನಗೆ ಇಷ್ಟ ಇಲ್ಲ. ಕೆಲವರು ನನಗೆ ನಿರ್ಮಾಣ ಮಾಡುವ ಬಗ್ಗೆ ಪ್ರೆರೇಪಿಸಿದರು. ನನಗೆ ಅದು ಆಸಕ್ತಿ ಇಲ್ಲ. ಬೆಳೆಸಿಕೊಳ್ಳುವ ಬಯಕೆಯೂ ಇಲ್ಲ.

* ನಿಮ್ಮ ನಟನೆಯ ಪಯಣದಲ್ಲಿ ಅಂತಹ ಕಷ್ಟಗಳು ಏನಿದ್ದವು?

ಮೂಲತಃ ನಾನು ತುಮಕೂರಿನವಳು. ನನ್ನ ತಂದೆ ಬಣ್ಣದ ಲೋಕಕ್ಕೆ ಬರಗಾಗಬೇಡ ಎಂದು ಬೆದರಿಸುತ್ತಿದ್ದರು. ಅಮ್ಮ ನನ್ನ ಬಯಕೆಯನ್ನು ಪೋಷಿಸಿದರು. ತಂದೆ ಗೊತ್ತಿಲ್ಲದಂತೆ ಆರಂಭದಲ್ಲಿ ಟೀವಿಗೆ ಬಂದಿದ್ದೂ ಇದೆ. ಕೆಳಮಧ್ಯಮ ಕುಟುಂಬದಲ್ಲಿ ಹುಟ್ಟಿದ್ದರೂ ನನಗೆ ಏನೂ ಕಡಿಮೆಯಾಗದಂತೆ ಮನೆಯಲ್ಲಿ ನೋಡಿಕೊಂಡಿದ್ದರು. ‘ಪ್ಯಾಟಿಹುಡ್ಗೀರ್ ಹಳ್ಳಿ ಲೈಫು–2’ ಗೆದ್ದ ಮೇಲೆ ನಮ್ಮ ಕುಟುಂಬದ ಸ್ಥಿತಿಯೇ ಬದಲಾಯಿತು. ನಮ್ಮನ್ನು ದೂರದಿಂದಲೇ ನೋಡುತ್ತಿದ್ದ ಸಂಬಂಧಗಳು ಹತ್ತಿರವಾದವೂ. ಬಂದು ಆತ್ಮೀಯತೆಯನ್ನು ತೋಡಿಕೊಳ್ಳುವಂತೆ ಆಯಿತು. ಆರ್ಥಿಕವಾಗಿಯೂ ಅದು ಸಕಾಷ್ಟು ಸುಧಾರಣೆ ಆಯಿತು. ದುರದೃಷ್ಟ ಎಂದರೆ ಅಷ್ಟರಲ್ಲಿ ನಮ್ಮ ತಂದೆ ತೀರಿಹೋದರು.

ನಟನೆಯಲ್ಲಿ ಸಂಸಾರ– ಮಗು ಎಂದು ಆಗಾಗ ದೀರ್ಘಕಾಲದ ಬಿಡುವು ತೆಗೆದುಕೊಂಡಾಗ ಮತ್ತೆ ಪ್ರವೇಶ ಮಾಡುವುದು ಕಷ್ಟವಾಗುತ್ತಿತ್ತು. ಆಗೆಲ್ಲ ಇಲ್ಲದ ಸುದ್ದಿ ಹಬ್ಬಿ ಬಿಡುತ್ತಿತ್ತು. ಶ್ವೇತಾ ಸ್ವಲ್ಪ ದಿನ ನಟಿಸುವುದಿಲ್ಲವಂತೆ, ಆಕೆ ನಟಿಸುವುದಿಲ್ಲವಂತೆ, ಅವರು ನಟನೆಯನ್ನು ಬಿಟ್ಟಿದ್ದಾರೆ, ಇನ್ಮುಂದೆ ಶ್ವೇತಾ ನಟನೆಯನ್ನೇ ಮಾಡಲ್ಲ’ ಎಂಬ ಮಾತು ತೇಲಿ ಬರುತ್ತದೆ. ಅಷ್ಟಾದ ಮೇಲೂ ಬಣ್ಣ ಹಚ್ಚಿದರೆ, ಅಯ್ಯೋ ಮತ್ತೆ ಬಂದು ಬಿಟ್ರಾ ಬರಲ್ಲಾ ಅಂದಿದ್ರಂತೆ ಎನ್ನುವ ಮಾತುಗಳನ್ನು ಕೇಳಿದ್ದೇನೆ. ಆದರೆ ನಾನು ಎಂದೆಂದೂ ನಟಿಯಾಗಿಯೇ ಬೆಳೆಯಲು ಇಷ್ಟಪಡುತ್ತೇನೆ. ಜೀವನ ಸುಂದರವಾಗಿದೆ.

* ಸಿನಿಮಾ ಏಕೆ ಇಷ್ಟ ಆಗಲಿಲ್ಲ?

ಎರಡರಲ್ಲೂ ಅನುಭವ ಇರುವುದರಿಂದ ಹೇಳಬಲ್ಲೆ. ‘ಕಣ್ಣಂಚಲಿ’ ಸಿನಿಮಾ ಬಿಡುಗಡೆ ಆಗಲಿಲ್ಲ. ‘ಒಂದೇ ಒಂದು ಸಾರಿ’ ಸಿನಿಮಾ ಮಾಡಿದೆ. ಸಿನಿಮಾ ಮಾಡಬಾರದು ಎಂತ ಏನೂ ಇಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ಮಾಡುತ್ತೇನೆ. ಆದರೆ ಮೈ ಮುಚ್ಚುವಂತೆ ಬಟ್ಟೆ ತೊಡಬೇಕು. ಎಕ್ಸಪೋಸ್‌ ಡ್ರೆಸ್‌ ನನಗೆ ಇಷ್ಟ ಆಗಲ್ಲ ಅದಕ್ಕೆ ಟೀವಿ ಇಷ್ಟ ಆಗುತ್ತೆ.

* ನಿಮ್ಮದೇನು ಲವ್‌ ಮ್ಯಾರೇಜಾ ಅಥವಾ ಅರೇಜ್ಡಾ?

ಈ ಪ್ರಶ್ನೆಯನ್ನು ತುಂಬ ಜನ ಕೇಳ್ತಾರೆ. ನಮ್ಮದು ಅರೇಜ್ಡ್‌ ಮ್ಯಾರೇಜ್‌. ನನ್ನ ಪತಿ ಸುನಿಲ್‌ ಕುಮಾರ್‌, ಅವರೂ ತುಮಕೂರಿನವರೆ. ಸಾಫ್ಟವೇರ್‌ ಕಂಪನಿಯಲ್ಲಿ ಎಂಜಿನಿಯರ್‌ ನಮಗೆ ಮೂರು ವರ್ಷದ ಹೆಣ್ಣುಮಗು ಇದೆ. ನಮ್ಮ ಮನೆಯಲ್ಲಿ ನನ್ನನ್ನು ಗಂಡಿನಂತೆಯೇ ಬೆಳೆಸಿದ್ದಾರೆ. ತುಂಬಾ ಬೋಲ್ಡ್‌ ಯಾವುದಕ್ಕೂ ಹೆದರದ ದಿಟ್ಟತನ ಇದೆ. ಅದನ್ನು ನೋಡಿಯೇ ನಮ್ಮವರು ನನ್ನನ್ನು ಇಷ್ಟಪಟ್ಟಿದ್ದು. ಅವರೂ ನನ್ನ ಕಲೆಯನ್ನು ಪ್ರೋತ್ಸಾಹಿಸುತ್ತಾರೆ. ನನ್ನ ಸ್ವತಂತ್ರ, ದುಡಿಮೆ ಯಾವುದಕ್ಕೂ ಅವರು ಅಡ್ಡಿಪಡಿಸುವುದಿಲ್ಲ. ಯಾವುದರಲ್ಲೂ ಅವಲಂಬನೆ ಒಳ್ಳೆಯದಲ್ಲ ಎಂದು ಅವರು ಹೇಳುತ್ತಾರೆ.

* ಕ್ಷಮಾ ಹೇಗಿದ್ದಾಳೆ?

ಪಾಪ ಅನ್ನುವ ಮರುಕದ ಕಥೆ ಅವಳದು. ತುಂಬಾ ಮೃದು ಸ್ವಭಾವದ ಹೆಣ್ಣು. ಆಕೆಯ ಗಂಡ 8 ವರ್ಷದ ಹಿಂದೆಯೇ ಬಿಟ್ಟು ಹೋಗಿದ್ದಾನೆ. ಮಕ್ಕಳನ್ನು ಪಾಲನೆ ಮಾಡುವ ಜವಾಬ್ದಾರಿಯನ್ನು ಅವಳೇ ತೆಗೆದುಕೊಂಡಿದ್ದಾಳೆ. ಮಕ್ಕಳು ದೊಡ್ಡವರಾಗಿದ್ದಾರೆ. ಅವರನ್ನು ಪ್ರೀತಿಯಿಂದಲೇ ಬೆಳೆಸಿದ್ದಾಳೆ. ಅವರಿಗೆ ಯಾವ ತೊಂದರೆಯೂ ಆಗದಂತೆ ಅವರ ಅಗತ್ಯಗಳನ್ನು ನೀಗಿಸುವಲ್ಲಿ ಆಕೆಯ ಶ್ರಮ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT