ಸಿನಿಮಾಕ್ಕೂ ಸೈ, ಕಿರುತೆರೆಗೂ ಸೈ

7

ಸಿನಿಮಾಕ್ಕೂ ಸೈ, ಕಿರುತೆರೆಗೂ ಸೈ

Published:
Updated:
ವರುಣ್‌ ಗೌಡ

ಸಿನಿಮಾ, ನಟನೆ ಜಗತ್ತಿನೆಡೆಗೆ ಕುತೂಹಲವಿದ್ದರೂ, ಮಾಡೆಲಿಂಗ್‌ ಕಡೆಗೆ ಮನಸು ಹೊರಳಿರಲಿಲ್ಲ. ಮಾಡೆಲಿಂಗ್‌ ಕ್ಷೇತ್ರದ ಗಂಧ ಗಾಳಿಯೂ ಈ ಯುವಕನಿಗಿರಲಿಲ್ಲ. ಆದರೆ ಕಾಲೇಜಿನಲ್ಲಿ ಆಕಸ್ಮಾತ್‌ ಆಗಿ ಸ್ನೇಹಿತರ ಮೂಲಕ ಪರಿಚಯವಾಗಿದ್ದು ಮಾಡೆಲಿಂಗ್‌ ಲೋಕ. ಹಾಲ್ಗೆಂಪು ಬಣ್ಣ, ಕುರುಚಲು ಗಡ್ಡ, ಎತ್ತರ, ಆಕರ್ಷಕ ಅಂಗಸೌಷ್ಟವ ಹೊಂದಿದ್ದ ಯುವಕನಿಗೆ ಫ್ಯಾಷನ್‌ ಲೋಕದಲ್ಲಿ  ಅವಕಾಶಗಳು ಸಿಗಲು ಕಷ್ಟವಾಗಲೇ ಇಲ್ಲ. 

’ಮಾಡೆಲಿಂಗ್‌ ಅಂದ್ರೆ ಬರಿ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕುವುದಲ್ಲ. ವೇದಿಕೆ ಮೇಲೆ ನಮ್ಮನ್ನು ನಾವು ಸುಂದರವಾಗಿ ಪ್ರೆಸೆಂಟ್ ಮಾಡಿಕೊಂಡು ಆ ಮೂಲಕ ಉತ್ಪನ್ನಗಳನ್ನು ಗ್ರಾಹಕರ ಮನ ಸೆಳೆಯಬೇಕು. ಅದೇ ರೂಪದರ್ಶಿಯ ಪ್ರಮುಖ ಜವಾಬ್ದಾರಿ’ ಎಂದು ಹೇಳುವ ವರುಣ್‌ ಗೌಡ ನಗರದ ಚಾಮರಾಜಪೇಟೆಯವರು. ‘ಡಿಗ್ರಿಯಲ್ಲಿ ಸ್ನೇಹಿತರ ಮೂಲಕ ಮಾಡೆಲಿಂಗ್‌ಗೆ ಬಂದೆ. ಮೊದಲು ಹೆಜ್ಜೆ ಹಾಕಿದ್ದು ವಸ್ತ್ರವಿನ್ಯಾಸಕ ಮಹೇಶ್‌ ಅವರ ರ್‍ಯಾಂಪ್‌ ಷೋನಲ್ಲಿ. ಅಲ್ಲಿಂದ ಅವಕಾಶಗಳು ಹೆಚ್ಚುತ್ತಾ ಹೋದವು. ನನಗೆ ಮೊದಲಿಂದಲೂ ಈ ಕ್ಷೇತ್ರದ ಬಗ್ಗೆ ಕುತೂಹಲವಿತ್ತು. ಆದರೆ ನಾನೂ ಒಂದು ದಿನ ಇಲ್ಲಿ ಹೆಜ್ಜೆ ಹಾಕಬಹುದು ಎಂದು ಅಂದುಕೊಂಡಿರಲಿಲ್ಲ.ಈಗ ದೇಶದ ಪ್ರಸಿದ್ಧ ವಸ್ತ್ರವಿನ್ಯಾಸಕರ ರ್‍ಯಾಂಪ್‌ಗಳಲ್ಲಿ ಹೆಜ್ಜೆ ಹಾಕಿದ್ದೇನೆ’ ಎಂದು ಮಾಡೆಲಿಂಗ್‌ ಆರಂಭದ ದಿನಗಳ ಬಗ್ಗೆ ಹೇಳುತ್ತಾರೆ. 

ಹೈದರಾಬಾದ್‌, ಚೆನ್ನೈ ಮೊದಲಾದ ಕಡೆಗಳಲ್ಲಿ ಷೋಗಳಲ್ಲಿ ಭಾಗವಹಿಸಿರುವ ವರುಣ್‌ ಗೌಡ, ಜಾಹೀರಾತು ಲೋಕದಲ್ಲೂ ಸಕ್ರಿಯರಾಗಿದ್ದಾರೆ. ಬಾದ್‌ಷಾ, ಕೊಟೊಬ್ಲಾಗ್ ಜಾಹೀರಾತುಗಳಲ್ಲಿ ನಟಿಸಿರುವ ಅವರಿಗೆ ನಟನಾಗಿ ಉತ್ತಮ ಹೆಸರು ಗಳಿಸುವ ಇರಾದೆಯೂ ಇದೆ. 

ಸದ್ಯದಲ್ಲೇ ಚಂದನವನಕ್ಕೂ ನಾಯಕನಾಗಿ ಪ್ರವೇಶಿಸುವ ಸಿದ್ಧತೆಯಲ್ಲಿದ್ದಾರೆ. ಎರಡು ಸಿನಿಮಾಗಳ ಮಾತುಕತೆ ನಡೆದಿದ್ದು, ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇವೆರಡೂ ಹೊಸಬರ ಚಿತ್ರ. ಸಿನಿಮಾಗಳಲ್ಲಿ ನಟಿಸಿ ಯಶಸ್ವಿ ನಟನಾಗಿ ಗುರುತಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ವರುಣ್‌ ಅದಕ್ಕಾಗಿ ಪೂರ್ವ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ. ಆದರ್ಶ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಆರು ತಿಂಗಳ ನಟನಾ ತರಬೇತಿ ಪಡೆದಿದ್ದಾರೆ.‌ ಈಗನೃತ್ಯ ಹಾಗೂ ಫೈಟಿಂಗ್‌ ತರಗತಿಗಳಿಗೂ ವರುಣ್‌ ಹೋಗುತ್ತಿದ್ದಾರೆ.ಮುಮದಿನ ಆಗಸ್ಟ್‌ ತಿಂಗಳಲ್ಲಿ ಒಂದು ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

‘ಆ್ಯಕ್ಷನ್‌, ಕಮರ್ಷಿಯಲ್‌, ಸಾಮಾಜಿಕ ಚಿತ್ರಗಳಲ್ಲಿ ನಟಿಸಬೇಕು. ಆ ಮೂಲಕ ಎಲ್ಲಾ ಬಗೆಯ ಪಾತ್ರಗಳಲ್ಲಿ ನಟಿಸಬೇಕು’ ಎಂಬುದು ವರುಣ್‌ ಮನದ ಮಾತು. 

ಉತ್ತಮ ಅವಕಾಶಗಳು ಸಿಕ್ಕರೆ ಕಿರುತೆರೆಯಲ್ಲೂ ನಟಿಸುವ ಅಭಿಲಾಷೆಯನ್ನು ವರುಣ್‌ ಹೊಂದಿದ್ದಾರೆ. ‘ನನಗೆ ನನ್ನ ಕೆಲಸ, ಸಾಮರ್ಥ್ಯದಲ್ಲಿ ನಂಬಿಕೆಯಿದೆ. ಅವಕಶಗಳು ಸಿಕ್ಕಾಗ ಅದನ್ನು ಸದುಪಯೋಗಪಡಿಸಿ
ಕೊಳ್ಳುತ್ತೇನೆ. ಉತ್ತಮ ಅವಕಾಶ, ನಟನಾ ಪ್ರಾಮುಖ್ಯತೆ ಇರುವ ಪಾತ್ರ ಸಿಕ್ಕರೆ ಖಂಡಿತ ಕಿರುತೆರೆಯಲ್ಲೂ ನಟಿಸುತ್ತೇನೆ’ ಎನ್ನುತ್ತಾರೆ. 

ವರುಣ್‌ ಉತ್ಸಾಹಿ ಬೈಕ್‌ ರೈಡರ್‌. ಬೆಂಗಳೂರು. ಕೊಯಮತ್ತೂರು ಹಾಗೂ ದೇಶದ ವಿವಿಧ ಭಾಗಗಳಲ್ಲಿ ನಡೆದ ಬೈಕ್‌ ರೇಸ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಫೋಟೊಗ್ರಫಿ, ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಹೋಗುವುದು ಇವರ ನೆಚ್ಚಿನ ಹವ್ಯಾಸ. 

ಮಾಡೆಲಿಂಗ್‌ ಮತ್ತು ನಟನೆ ಎರಡೂ ಕ್ಷೇತ್ರದಲ್ಲೂ ಸೌಂದರ್ಯ ಮುಖ್ಯ ಎಂದು ವರುಣ್‌ ಹೇಳುತ್ತಾರೆ. ಸದ್ಯದಲ್ಲೇ ಸಿನಿಮಾದಲ್ಲೂ ನಟಿಸಲಿರುವುದರಿಂದ ದೇಹಾಕಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪ್ರತಿದಿನ ಬೆಳಿಗ್ಗೆ ಜಿಮ್‌ಗೆ ಹೋಗಿ, ಕಾರ್ಡಿಯೋ, ಸೈಕ್ಲಿಂಗ್‌ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಡೆಸುತ್ತಾರೆ. ನೃತ್ಯವನ್ನೂ ಕಲಿಯುತ್ತಿರುವ ವರುಣ್‌ಗೆ, ನೃತ್ಯವೂ ಫಿಟ್‌ನೆಸ್‌ ಕಾಯ್ದುಕೊಳ್ಳಲು ಸಹಾಯ ಮಾಡಿದೆಯಂತೆ.

ಆಹಾರ ವಿಚಾರದಲ್ಲಿ ಕಟ್ಟುನಿಟ್ಟಾಗಿ ಪಥ್ಯ ಪಾಲಿಸುವ ವರುಣ್‌, ಮಸಾಲೆ, ಜಂಕ್‌ಫುಡ್‌ ಹಾಗೂ ಕರಿದ ಪದಾರ್ಥಗಳನ್ನು ತಿನ್ನುವುದಿಲ್ಲ. ಮನೆಯೂಟವನ್ನೇ ಹೆಚ್ಚು ಸೇವಿಸುವ ಇವರು ಹೆಚ್ಚು ನೀರು ಹಾಗೂ ಹಣ್ಣುಗಳನ್ನು ಆಗಾಗ ತಿನ್ನುತ್ತಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !