ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ ಟೌನ್‌ಗೆ ಬಂದ ಹಾಲಿವುಡ್‌ ಸ್ಮಿತ್

Last Updated 14 ಜನವರಿ 2019, 14:30 IST
ಅಕ್ಷರ ಗಾತ್ರ

ಕಳೆದ ಅಕ್ಟೋಬರ್‌ನಲ್ಲಿ ‘ದಿ ಸ್ಟೂಡೆಂಟ್‌ ಆಫ್‌ ದಿ ಇಯರ್‌ 2’ ಸಿನಿಮಾದ ಸೆಟ್‌ನಿಂದ ನಾಯಕ ನಟಿ ಅನನ್ಯಾ ಪಾಂಡೆ ಒಂದು ಫೋಟೊ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್‌ ಮಾಡಿದ್ದರು. ‘ಈ ದಿಗ್ಗಜ ನಮ್ಮ ಸೆಟ್‌ಗೆ ಇವತ್ತು ಬಂದಿದ್ದರು’ ಎಂಬ ಅಡಿಟಿಪ್ಪಣಿಯನ್ನೂ ಹಾಕಿದ್ದರು. ಅನನ್ಯಾ ಹೇಳಿದ ‘ದಿಗ್ಗಜ’, ಹಾಲಿವುಡ್‌ ನಟ ವಿಲ್‌ ಸ್ಮಿತ್‌. ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಸ್ಮಿತ್‌ ಒಂದು ಹಾಡಿಗೂ ಹೆಜ್ಜೆ ಹಾಕಿದ್ದಾರೆ.

ಹಾಲಿವುಡ್‌ ಸಿನಿಮಾ, ರ‍್ಯಾಪ್‌ ಸಂಗೀತ ಮತ್ತು ಆಲ್ಬಂಗಳ ಮೂಲಕ ಅಮೆರಿಕದಲ್ಲಿ ಮನೆ ಮಾತಾಗಿರುವವರು ನಟ ವಿಲ್‌ ಸ್ಮಿತ್‌. ಇಂಗ್ಲಿಷ್‌ನ ಹಾರರ್‌ ಮತ್ತು ಹಾಸ್ಯ ಚಿತ್ರಗಳು ಅವರ ನಟನೆಯ ತಾಕತ್ತಿಗೆ ಸಾಕ್ಷಿ. ಭಾರತೀಯ ಚಿತ್ರರಂಗ ಅವರಿಗೆ ಕುತೂಹಲದ ತಾಣ. ಇಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಲೇ ಇದ್ದವರಿಗೆ ‘ದಿ ಸ್ಟೂಡೆಂಟ್‌ ಆಫ್‌ ದಿ ಇಯರ್‌ 2’ ಬಾಗಿಲು ತೆರೆದುಕೊಟ್ಟಿದೆ. ಈ ಮೂಲಕ ಹಿಂದಿ ಚಿತ್ರರಂಗಕ್ಕೆ ಮತ್ತೊಬ್ಬ ಹಾಸ್ಯ ನಟನ ಪ್ರವೇಶವಾದಂತಾಗಿದೆ.

ಸ್ಮಿತ್‌ ‌ಮೂಲ ಹೆಸರು ವಿಲ್ಲರ್ಡ್‌ ಕ್ಯಾರಲ್‌ ಸ್ಮಿತ್ ಜೂನಿಯರ್‌. ಹರೆಯ 51 (1968ರ ಸೆಪ್ಟೆಂಬರ್‌ 25). ಹಾಡುವುದು ಅವರ ನೆಚ್ಚಿನ ಹವ್ಯಾಸ. ಅದನ್ನೇ ವೃತ್ತಿಯಾಗಿ ಸ್ವೀಕರಿಸಿದಾಗ ರ‍್ಯಾಪ್‌ಪ್ರಿಯರು ಬೆನ್ನುತಟ್ಟಿದರು. ಸ್ವಯಂ ಮತ್ತು ಗುಂಪಿನಲ್ಲಿ ಹಾಡಿದ ಆಲ್ಬಂಗಳೆಲ್ಲವೂ ಜಗತ್ತಿನೆಲ್ಲೆಡೆ ಹಿಟ್ ಆದವು.

1980ರಲ್ಲಿ ರ‍್ಯಾಪ್‌ ಸಂಗೀತಗಾರರ ಜಗತ್ತಿನಲ್ಲಿ ‘ದಿ ಫ್ರೆಶ್‌ ಪ್ರಿನ್ಸ್‌’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಟನೆಯೂ ಜೊತೆಜೊತೆಗೇ ಸಾಗಿತು.1990ರಲ್ಲಿ ಸ್ಮಿತ್‌ ಕಿರುತೆರೆಯ ಮೂಲಕ ಮತ್ತೆ ಸುದ್ದಿಯಾದರು. ಎನ್‌ಬಿಸಿ ಟೆಲಿವಿಷನ್‌ನ ‘ದಿ ಫ್ರೆಷ್‌ ಪ್ರಿನ್ಸ್‌ ಆಫ್‌ ಬೆಲ್‌–ಏರ್‌’ ಸರಣಿ ಸ್ಮಿತ್‌ ತಾರಾ ವರ್ಚಸ್ಸನ್ನು ದುಪ್ಪಟ್ಟು ಮಾಡಿತು. ಅಲ್ಲಿಂದ ಸತತ ಆರು ವರ್ಷ ಅದೇ ಸರಣಿ ಜನಪ್ರಿಯವಾಗಲು ಸ್ಮಿತ್‌ ಕೂಡಾ ಕಾರಣರಾದರು. ಕಿರುತೆರೆಯಿಂದ ಸಿಗುವ ಜನಪ್ರಿಯತೆಯ ರುಚಿಕಂಡ ಸ್ಮಿತ್‌ ಅಲ್ಲಿಯೇ ಇನ್ನಷ್ಟು ಶೋ ಮತ್ತು ಸರಣಿಗಳಲ್ಲಿ ತೊಡಗಿಸಿಕೊಂಡರು.

ಸ್ಮಿತ್‌ ನಟಿಸಿದ ಬಹುತೇಕ ಇಂಗ್ಲಿಷ್‌ ಸಿನಿಮಾಗಳು ಸೂಪರ್‌ ಹಿಟ್‌ ಆದುದು ಗಮನಾರ್ಹ. ಇದರಿಂದಾಗಿ ನಿರ್ಮಾಪಕರು ಮತ್ತು ನಿರ್ದೇಶಕರು ಸ್ಮಿತ್‌ ಕಾಲ್‌ಶೀಟ್‌ಗಾಗಿ ಕಾದುಕೂರುವಂತಾಯಿತು. 1993ರಲ್ಲಿ ಸ್ಮಿತ್‌ ನಟಿಸಿದ ‘ಮೇಡ್‌ ಇನ್‌ ಅಮೆರಿಕ’ ಹಾಸ್ಯಪ್ರಧಾನ ಚಿತ್ರ ಅವರಿಗೆ ಜಾಗತಿಕ ಮಟ್ಟದ ಹಲವು ಪ್ರಶಸ್ತಿಗಳನ್ನು ಬಾಚಿಕೊಟ್ಟಿತು. ಇದೇ ಹವಾ ಮತ್ತಷ್ಟು ಸಿನಿಮಾಗಳಲ್ಲಿ ಮುಂದುವರಿಯಿತು. ಇದುವರೆಗೂ ಸ್ಮಿತ್‌ ನಟಿಸಿದ ಯಾವುದೆ ಸಿನಿಮಾ ಸೋತಿಲ್ಲ ಎಂಬುದು ಚಿತ್ರರಂಗದಲ್ಲಿ ದಾಖಲಾರ್ಹ ಸಂಗತಿ.

2007ರಲ್ಲಿ ‘ಹಾಲಿವುಡ್‌ನ ಅತ್ಯಂತ ಪ್ರಭಾವಿ ನಟ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಸ್ಮಿತ್‌. ಗೋಲ್ಡನ್‌ ಗ್ಲೋಬ್‌, ಗ್ರ್ಯಾಮಿ ಮತ್ತು ಆಸ್ಕರ್‌ ಪ್ರಶಸ್ತಿಗಳನ್ನು ಹತ್ತಾರು ಬಾರಿ ಗಳಿಸಿರುವ ಈ ನಟ, 2014ರ ಫೋರ್ಬ್ಸ್‌ ಸಮೀಕ್ಷೆಯಲ್ಲಿ ‘ಮೋಸ್ಟ್‌ ಬ್ಯಾಂಕೇಬಲ್‌ ಆ್ಯಕ್ಟರ್‌’ ಆಗಿ ಹೊರಹೊಮ್ಮಿದ್ದರು.

ಹಿಂದಿ ಚಿತ್ರ ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್ ಮತ್ತು ನಟ ರಣವೀರ್‌ ಸಿಂಗ್‌, ಸ್ಮಿತ್‌ ಅವರ ಪರಮಾಪ್ತ ಸ್ನೇಹಿತರು. ‘ದಿ ಸ್ಟೂಡೆಂಟ್‌ ಆಫ್‌ ದಿ ಇಯರ್ 2’ ಚಿತ್ರದಲ್ಲಿ ವಿಶೇಷ ಪಾತ್ರದ ಅವಕಾಶ ಕೊಟ್ಟಿದ್ದೂ ನಿರ್ಮಾಪಕ ಕರಣ್ ಅವರೇ. ಕಳೆದ ಫೆಬ್ರುವರಿಯಲ್ಲಿ ಇದೇ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸ್ಮಿತ್‌ ಬಂದವರು ತಾಜ್‌ಮಹಲ್‌ಗೆ ಭೇಟಿ ಕೊಟ್ಟಿದ್ದರು. ಆ ಫೋಟೊ ವೈರಲ್‌ ಆಗಿತ್ತು. ಆಗ ‘ದಿ ಸ್ಟೂಡೆಂಟ್..’ನ ಕೆಲವು ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಲ್ಲದೆ, ಅಕ್ಟೋಬರ್‌ನಲ್ಲಿ ಮತ್ತೆ ಬಂದಿದ್ದರು.

ಈ ನಟನಿಗೆ ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್, ಸಲ್ಮಾನ್‌ ಖಾನ್‌, ಟ್ವಿಂಕಲ್‌ ಖನ್ನಾ ಸೇರಿದಂತೆ ಹತ್ತಾರು ಸ್ನೇಹಿತರಿದ್ದಾರೆ. ಅಕ್ಷಯ್‌ ತಮ್ಮ ‘ರುಸ್ತುಂ’ ಚಿತ್ರ ಸೂಪರ್ ಹಿಟ್‌ ಆದ ಖುಷಿಗೆಹಮ್ಮಿಕೊಂಡಿದ್ದ ಸಕ್ಸೆಸ್‌ ಪಾರ್ಟಿಯಲ್ಲಿ ಅಲಿಯಾ ಭಟ್‌, ವರುಣ್‌ ಧವನ್‌, ಕರಣ್‌ ಜೋಹರ್‌, ಜಾಕ್ವೆಲಿನ್‌ ಫರ್ನಾಂಡಿಸ್‌ ಜೊತೆ ಸ್ಮಿತ್‌ ಹಾಡಿ ಕುಣಿದಿದ್ದರು.

ಬಾಲಿವುಡ್‌ನಲ್ಲಿ ಸ್ಮಿತ್‌ಗೆ ಇನ್ನಷ್ಟು ಅವಕಾಶಗಳು ತೆರೆದುಕೊಳ್ಳಲಿವೆ.ಕೆಜೋ ನಿರ್ಮಾಣದ ಹೊಸ ಚಿತ್ರಗಳಲ್ಲಿಯೂ ಸ್ಮಿತ್‌ ಇರುತ್ತಾರೆ ಎಂದು ಹೇಳಲಾಗುತ್ತಿದೆ. ಮುಂದೊಂದು ದಿನ ವಿಲ್‌ ಸ್ಮಿತ್‌, ದಕ್ಷಿಣ ಭಾರತದ ಚಿತ್ರರಂಗಕ್ಕೂ ಕಾಲಿಡುತ್ತಾರಾ ಎಂಬ ಕುತೂಹಲಕ್ಕೆ ಕಾಲವೇ ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT