ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮ್‌ದಫಾ ಹಾರುವ ಅಳಿಲು 4 ದಶಕಗಳ ನಂತರ ಪತ್ತೆ!

Published 17 ಜನವರಿ 2024, 23:30 IST
Last Updated 17 ಜನವರಿ 2024, 23:30 IST
ಅಕ್ಷರ ಗಾತ್ರ

ಕಳೆದ 42 ವರ್ಷಗಳಿಂದ ಪರಿಸರದಲ್ಲಿ ಎಂದೂ ಕಂಡಿರದ ನಾಮ್‌ದಫಾ ಹಾರುವ ಅಳಿಲು ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಪರಿಸರಪ್ರಿಯರಲ್ಲಿ ಸಂಭ್ರಮ ಮೂಡಿಸಿದೆ.

ನಾಮ್‌ದಫಾ ಹಾರುವ ಅಳಿಲು (ಬಿಸ್ವಾಮೊಯೋಪ್ಟೆರಸ್ ಬಿಸ್ವಾಸಿ)

→ನಾಮ್‌ದಫಾ ಹಾರುವ ಅಳಿಲು (ಬಿಸ್ವಾಮೊಯೋಪ್ಟೆರಸ್ ಬಿಸ್ವಾಸಿ) ತೀವ್ರ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಯಲ್ಲಿದೆ. ಸಮೀಕ್ಷೆಗಳ ಪ್ರಕಾರ ಉದ್ಯಾನದಲ್ಲಿ ಲಭ್ಯವಿರುವ ಈ ಅಳಿಲುಗಳ ವಾಸಸ್ಥಾನದ ವ್ಯಾಪ್ತಿಪ್ರದೇಶ 100 ಕಿಲೋಮೀಟರ್‌ಗಳಿಗಿಂತ ಕಡಿಮೆ ಎಂದು ಅಂದಾಜಿಸಲಾಗಿದೆ. ಅವುಗಳ ವಾಸಸ್ಥಾನವು ಸಣ್ಣ ವ್ಯಾಪ್ತಿಯಲ್ಲಿ ಇರುವುದೇ ಈ ಪ್ರಬೇಧಗಳ ಅವನತಿಗೆ ಕಾರಣವಾಗಿದೆ ಎಂದು ಊಹಿಸಲಾಗಿದೆ.

→ಸಮುದ್ರಮಟ್ಟದಿಂದ 100ರಿಂದ 350 ಮೀಟರ್ ಎತ್ತರದಲ್ಲಿರುವ ಪೂರ್ವ ಹಿಮಾಲಯದ ಜೀವವೈವಿಧ್ಯ ವಲಯದಲ್ಲಿರುವ ಅತಿದೊಡ್ಡ ಸಂರಕ್ಷಿತ ಪ್ರದೇಶವಾದ ನಾಮ್‌ದಫಾ ರಾಷ್ಟ್ರೀಯ ಉದ್ಯಾನದಲ್ಲಿ 1981ರಲ್ಲಿ ಕಂಡ ಏಕೈಕ ಅಳಿಲೇ ಕಟ್ಟಕಡೆಯ ಅಳಿಲಾಗಿತ್ತು.

→1981ರ ಬಳಿಕ ಸಂಶೋಧಕರು ಈ ಕುತೂಹಲಕಾರಿ ಹಾರುವ ಅಳಿಲಿಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಬಾರಿ ಹುಡುಕಾಡಿದ್ದರೂ ಯಾವುದೇ ಕುರುಹುಗಳು ಕಂಡುಬಂದಿರಲಿಲ್ಲ.

→ವಿಜ್ಞಾನಿಗಳು ಈ ಪ್ರಭೇದವು ಒಮ್ಮೆ ನಶಿಸಿಹೋಗಿದೆ ಎಂದು ನಂಬಿದ್ದರು ಮಾತ್ರವಲ್ಲದೇ ಇದು ಆ ಪ್ರದೇಶದ ಉದ್ದಕ್ಕೂ ಒಣ ಎಲೆಉದುರುವ ಕಾಡುಗಳಲ್ಲಿನ ನದಿಗಳ ಅಂಚಿನಲ್ಲಿ ಕಂಡುಬರುವ ಪ್ರಾಣಿ ಎಂದು ಭಾವಿಸಿದ್ದರು. ಆದರೆ ಈಗ  ಇವುಗಳು ನಾಮ್‌ದಫಾ ರಾಷ್ಟ್ರೀಯ ಉದ್ಯಾನದೊಳಗಿನ ಒಂದು ಕಣಿವೆಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಬಹುದು ಎಂದು ಅಂದಾಜಿಸಿದ್ದಾರೆ. ಇದು ಮುಸ್ಸಂಜೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಪ್ರಾಣಿಯಾಗಿದ್ದು ವೃಕ್ಷಾವಲಂಬಿ(ಮರಗಳ ಮೇಲೆ ಜೀವಿಸುವ) ಜೀವಿಯಾಗಿದೆ.

→ವನ್ಯಜೀವಿ ಸಂರಕ್ಷಣಾ ಕಾಯಿದೆ - 1972ರ ಷೆಡ್ಯೂಲ್‌  I ರ ಅಡಿಯಲ್ಲಿ ಈ ಪ್ರಭೇದಗಳನ್ನು ಪಟ್ಟಿ ಮಾಡಲಾಗಿದೆ.

→ಈ ಪ್ರಭೇದಗಳಿಗೆ ಸೂಕ್ತ ರಕ್ಷಣೆಯ ಅವಶ್ಯಕತೆಯಿದೆ. ಇವುಗಳು ಇನ್ನೂ ಎಷ್ಟರ ಮಟ್ಟಿಗೆ ಉಳಿದಿವೆ? ಅವುಗಳ ಸಂರಕ್ಷಣೆ ಹೇಗೆ ಮತ್ತು ಪ್ರಸ್ತುತ ಅವುಗಳ ಪ್ರಸ್ತುತ ವಿತರಣಾ ವ್ಯಾಪ್ತಿ ಏನು ಎಂದು ನಿರ್ಧರಿಸಲು ವಿವರವಾದ ಕ್ಷೇತ್ರ ಸಮೀಕ್ಷೆಗಳನ್ನು ಕೈಗೊಳ್ಳುವ ಕಾರ್ಯ ನಡೆಯಬೇಕಿದೆ.

ನಾಮ್‌ದಫಾ ರಾಷ್ಟ್ರೀಯ ಉದ್ಯಾನ ಮತ್ತು ಹುಲಿಸಂರಕ್ಷಿತ ಪ್ರದೇಶ

→ರಾಷ್ಟ್ರೀಯ ಉದ್ಯಾನ ಮತ್ತು ಹುಲಿಸಂರಕ್ಷಿತ ಪ್ರದೇಶ ಎಂಬ ಎರಡೂ ಮನ್ನಣೆಗಳಿಗೆ ಪಾತ್ರವಾಗಿರುವ ನಾಮ್‌ದಫಾ ಅರಣ್ಯಪ್ರದೇಶವು  ತನ್ನ ವಿಸ್ತಾರವಾದ ಹಚ್ಚಹಸುರಿನ ದಟ್ಟ ಕಾಡುಗಳೊಂದಿಗೆ 1985.23 ಚದರ ಕಿಲೋಮೀಟರ್ ವಿಸ್ತೀರ್ಣಗಳವರೆಗೆ ಹಬ್ಬಿದೆ.

→ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯೊಳಗೆ ಭಾರತ ಮತ್ತು ಮ್ಯಾನ್ಮಾರ್ (ಬರ್ಮಾ) ನಡುವಿನ ಅಂತರರಾಷ್ಟ್ರೀಯ ಗಡಿಯಲ್ಲಿ ನೆಲೆಗೊಂಡಿರುವ ನಾಮ್‌ದಫಾ ರಾಷ್ಟ್ರೀಯ ಉದ್ಯಾನವು ಮಿಯಾವೊ ಜಿಲ್ಲೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದು, ನೋವಾ-ಡಿಹಿಂಗ್ ನದಿಯ ಉದ್ದಕ್ಕೂ ಹಬ್ಬಿರುವ ಹಿಮಾಚ್ಛಾದಿತ ನೀಲಿ ಬೆಟ್ಟಗಳ ನಡುವೆ ನೆಲೆಸಿದೆ.

→ತನ್ನ ವಿಸ್ತಾರವಾದ ಉಷ್ಣವಲಯದ ಮಳೆಕಾಡಿಗೆ ಹೆಸರುವಾಸಿಯಾಗಿರುವ ಈ ಅರಣ್ಯವನ್ನು 1983ರಲ್ಲಿ ಸರ್ಕಾರವು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿತು.

→ಈ ರಾಷ್ಟ್ರೀಯ ಉದ್ಯಾನವು   ಜೀವವೈವಿಧ್ಯದ ಸ್ವರ್ಗತಾಣ ಎನ್ನಬಹುದು. ಯಥೇಚ್ಛ ಅರಣ್ಯ ಸಂಪನ್ಮೂಲವನ್ನು ಹೊಂದಿದ್ದು  ಅಲ್ಲಿನ ಪ್ರಾಣಿ ಮತ್ತು ಸಸ್ಯ ಪ್ರಬೇಧಗಳು ಹಾಗೂ ಸುದೀರ್ಘ ಕಾಲದಲ್ಲಿ ನಡೆಯುವ ಆನುವಂಶಿಕ ಬದಲಾವಣೆಯ ಬಗ್ಗೆ ಸಮಗ್ರ ಅಧ್ಯಯನವನ್ನು ಕೈಗೊಳ್ಳಬೇಕಾಗಿದೆ.

ನಾಮ್‌ದಫಾ ಅರಣ್ಯಪ್ರದೇಶವು ಸಸ್ಯಶಾಸ್ತ್ರಜ್ಞರ ಕನಸಿನ ಸಂಶೋಧನಾ ತಾಣವಾಗಿದ್ದು, ಸಂಪೂರ್ಣ ಸಸ್ಯಶಾಸ್ತ್ರೀಯ ಸಮೀಕ್ಷೆಗೆ 50 ವರ್ಷಗಳ ಕಾಲ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

 ಈ ಪ್ರದೇಶವು ಭಾರತದಲ್ಲಿ ಬೇರೆಲ್ಲಿಯೂ ಕಂಡುಬರದ ಪೈನಸ್ ಮೆರ್ಕುಸಿ ಮತ್ತು ಅಬೀಸ್ ಡೆಲವಾವಿ ಸೇರಿದಂತೆ 150ಕ್ಕೂ ಹೆಚ್ಚು ಜಾತಿಯ ಮರಗಳನ್ನು ಹೊಂದಿದೆ.

ವಿಶೇಷವಾಗಿ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಆರ್ಕಿಡ್‌ಗಳಲ್ಲಿ ಒಂದಾದ ಬ್ಲೂ ವಂಡಾ ಆರ್ಕಿಡ್‌ಗಳು ಇಲ್ಲಿ ಬೆಳೆಯುತ್ತದೆ. ಉದ್ಯಾನದಲ್ಲಿ ಮಿಶಿಮಿ ಟೀಟಾ (ಕೋಪ್ಟಿ ಟೀಟಾ) ಸಸ್ಯಗಳು ಬೆಳೆಯುತ್ತಿದ್ದು ಇದು ಸ್ಥಳೀಯವಾಗಿ ಪ್ರಸಿದ್ಧ ಔಷಧೀಯ ಸಸ್ಯವಾಗಿದೆ. ಮಿಶಿಮಿ ಟೀಟಾ (ಕೋಪ್ಟಿ ಟೀಟಾ) ಸಸ್ಯಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ.

ನಾಮ್‌ದಫಾದ ವೈವಿಧ್ಯಮಯ ಸಸ್ಯವರ್ಗ ಮತ್ತು ಆವಾಸಸ್ಥಾನಗಳು ಅನೇಕ ರೀತಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಪೋಷಿಸುತ್ತವೆ. ಇದು ಜಗತ್ತಿನಲ್ಲಿಯೇ ಎಲ್ಲಾ ನಾಲ್ಕು ಬೆಕ್ಕಿನ ಪ್ರಭೇದಕ್ಕೆ ಸೇರುವ ದೊಡ್ಡ ಬೆಕ್ಕುಗಳನ್ನು ಒಂದೇ ಕಡೆ ಪೊರೆಯುವ ಏಕೈಕ ಉದ್ಯಾನವಾಗಿದೆ. ಹುಲಿ( ಪ್ಯಾಂಥೆರಾ ಟೈಗ್ರಿಸ್), ಚಿರತೆ (ಪ್ಯಾಂಥೆರಾ ಪಾರ್ಡಸ್), ಹಿಮಚಿರತೆ (ಪ್ಯಾಂಥೆರಾ ಅನ್ಸಿಯಾ), ಮತ್ತು ಕ್ಲೌಡೆಡ್ ಲೆಪರ್ಡ್ (ನಿಯೋಫೆಲಿಸ್ ನೆಬುಲೋಸಾ)

→ಅಸ್ಸಾಮಿ ಮಕಾಕ್, ಹಂದಿ-ಬಾಲದ ಮಕಾಕ್, ಸ್ಟಂಪ್-ಟೈಲ್ಡ್ ಮಕಾಕ್ ಮತ್ತು ಭಾರತದ ಏಕೈಕ ‘ವಾನರ’ ಜಾತಿಯ ಅಳಿವಿನಂಚಿನಲ್ಲಿರುವ ಹೂಲಾಕ್ ಗಿಬ್ಬನ್ಸ್ (ಹೈಲೋಬೇಟ್ಸ್ ಹೂಲಾಕ್) ಸೇರಿದಂತೆ ಹಲವು ಪ್ರೈಮೇಟ್ ಪ್ರಭೇದಗಳು ಈ ಅರಣ್ಯದಲ್ಲಿ ವಾಸಿಸುತ್ತವೆ. ಉಳಿದಂತೆ ಆನೆಗಳು, ಕಪ್ಪು ಕರಡಿಗಳು, ಭಾರತೀಯ ಕಾಡೆಮ್ಮೆ, ವಿವಿಧ ಜಿಂಕೆ ಜಾತಿಗಳು, ಸರೀಸೃಪಗಳು ಮತ್ತು ವಿವಿಧ ವೃಕ್ಷದ ಪ್ರಾಣಿಗಳು ಇಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ.

→ಈ ಉದ್ಯಾನದಲ್ಲಿ ಪಕ್ಷಿಸಂಕುಲವೂ ಬಲುದೊಡ್ಡ ಸಂಖ್ಯೆಯಲ್ಲಿದ್ದು  ಬಿಳಿ ರೆಕ್ಕೆಯ ಮರದ ಬಾತುಕೋಳಿಗಳು, ಅಳಿವಿನಂಚಿನಲ್ಲಿರುವ ಪ್ರಭೇದಗಳು, ಜೊತೆಗೆ ದೊಡ್ಡ ಇಂಡಿಯನ್ ಹಾರ್ನ್‌ಬಿಲ್‌ಗಳು, ಜಂಗಲ್ ಫೌಲ್‌ಗಳು ಮತ್ತು ಫೆಸೆಂಟ್‌ಗಳಂತಹ ಗಮನಾರ್ಹ ಪಕ್ಷಿಪ್ರಬೇಧಗಳಿಗೆ ಈ ಅರಣ್ಯವು ನೆಲೆವೀಡಾಗಿದೆ.

→ಆರ್ದ್ರ ಉಷ್ಣವಲಯದ ಮಳೆಕಾಡಿನ ಭವ್ಯತೆಯನ್ನು ಪ್ರದರ್ಶಿಸುವಂಥ, ದಟ್ಟವಾಗಿ ಹೆಣೆದುಕೊಂಡಿರುವ ಬೆತ್ತಗಳು, ಬಿದಿರುಗಳು ಮತ್ತು ವೈವಿಧ್ಯಮಯ ಸಸ್ಯವರ್ಗಗಳಿಂದ ಕೂಡಿದ ಸಮೃದ್ಧವಾದ ಗಿಡಗಂಟಿಗಳು, ವಿವಿಧ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಂತಾನೋತ್ಪತ್ತಿಯ ತಾಣವೂ ಆಗಿದೆ.

ಈ ಅರಣ್ಯಗಳ ದುರ್ಗಮತೆಯು ಅದರೊಳಗೆ ಹೆಚ್ಚು ಮಾನವ ಪ್ರವೇಶಕ್ಕೆ ಅವಕಾಶ ನೀಡದಿರುವುದರಿಂದ ಅರಣ್ಯಗಳ ಮೂಲಸ್ವರೂಪವನ್ನು ಕಾಪಾಡಲು ನೆರವಾಗಬಹುದು ಎನ್ನುವುದು ಪರಿಸರಪ್ರಿಯರ ಅಭಿಮತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT