6

ಮಳೆಹಕ್ಕಿಯ ವಲಸೆ

Published:
Updated:

ಪುಟ್ಟ ದೇಹ, ಸುಂದರ ಕಣ್ಣು, ಸಂತಾನೋತ್ಪತ್ತಿ ಕಾಲದಲ್ಲಿ ಬದಲಾಗುವ ಮೈಬಣ್ಣ. ಇವು ಫೆಸಿಫಿಕ್ ಗೋಲ್ಡನ್ ಪ್ಲೊವರ್‌ ಪಕ್ಷಿಯ ಸೌಂದರ್ಯದ ವಿವರಣೆ. ಉತ್ತರದ ಆರ್ಕಿಟಿಕ್‌ನಿಂದ ದಕ್ಷಿಣದ ಆಸ್ಟ್ರೇಲಿಯಾವರೆಗೂ ಸಾವಿರಾರು ಕಿಲೋಮೀಟರ್‌ ವಲಸೆ ಹೋಗುವ ಈ ಪುಟ್ಟ ಪಕ್ಷಿಗಳ ದಂಡು ಈ ಬಾರಿ ಧಾರವಾಡಕ್ಕೂ ಬಂದಿತ್ತು.

ಸಮೀಪದ ಮಾವಿನಕೊಪ್ಪ ಕೆರೆಗೆ ಬಂದ ಈ ಅಪರೂಪದ ಅತಿಥಿಗಳ ಮಾಹಿತಿ ತಿಳಿಯುತ್ತಿದ್ದಂತೆ ಪಕ್ಷಿ ಪ್ರಿಯರು ಕೆರೆಗೆ ದೌಡಾಯಿಸಿದರು. ಕೆರೆಯಂಗಳದಲ್ಲಿದ್ದ ನೀರಿನಲ್ಲೇ ಓಡಾಡಿಕೊಂಡಿದ್ದ ಪ್ಲೊವರ್ ಹಕ್ಕಿಯ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು. 

‘ಪ್ಲುವಿಯಾಲಿಸ್‌ ಫುಲ್ವಾ’ ಎಂಬ ಪ್ರಬೇಧಕ್ಕೆ ಸೇರಿದ ಪ್ಲೊವರ್‌ 23ರಿಂದ 26 ಸೆಂ.ಮೀ. ಉದ್ದವಿರುವ ದೊಡ್ಡ ಹಕ್ಕಿ.  ವಲಸೆ ಕಾಲದಲ್ಲಿ ಆರು ಸಾವಿರ ಕಿಲೋಮೀಟರ್‌ ದೂರ ಪ್ರಯಾಣಿಸುತ್ತದೆ. ಅಚ್ಚರಿಯ ಸಂಗತಿ ಎಂದರೆ ಸುಮಾರು ನಾಲ್ಕೂವರೆ ಸಾವಿರ ಕಿಲೋಮೀಟರ್‌ ದೂರ ಯಾವುದೇ ವಿಶ್ರಾಂತಿ ಇಲ್ಲದೆ ಕ್ರಮಿಸುತ್ತದೆ ಎಂದರೆ ಈ ಪುಟ್ಟ ಗಾತ್ರದ ಹಕ್ಕಿಯ ಸಾಮರ್ಥ್ಯವನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ.

ಹಳದಿ ಬಣ್ಣದ ಮುಖ, ಎದೆಭಾಗ ಹೊಂದಿರುವ ಈ ಹಕ್ಕಿಯ ಕೆಳಭಾಗ ಬಿಳಿಬಣ್ಣದ್ದಾಗಿರುತ್ತದೆ. ಕಪ್ಪು ಕಣ್ಣು, ಚೂಪಾದ ಕೊಕ್ಕು, ನೀಳ ಕಾಲುಗಳ ದೇಹರಚನೆ. ಆದರೆ ಸಂತಾನೋತ್ಪತ್ತಿ ಸಂದರ್ಭದಲ್ಲಿ ಇದರ ದೇಹ ಬಣ್ಣವೇ ಬದಲಾಗುತ್ತದೆ. ಎದೆ ಭಾಗ ಕಪ್ಪು ವರ್ಣಕ್ಕೆ ತಿರುಗಿ, ರೆಕ್ಕೆಗಳ ಮೇಲೆ ಬಿಳಿ ಹಾಗೂ ಬಂಗಾರದ ವರ್ಣದ ಪುಕ್ಕಗಳನ್ನು ಕಾಣಬಹುದು. ಕಣ್ಣಿನ ಸುತ್ತಲೂ ಬಿಳಿ ಬಣ್ಣದಿಂದ ಆಕರ್ಷಿಸುವುದು ಇದಕ್ಕೆ ನಿಸರ್ಗ ನೀಡಿರುವ ಕೊಡುಗೆ.

ಇಂಥ ಬಹಳಷ್ಟು ಪಕ್ಷಿಗಳು ವಲಸೆ ಬರುತ್ತವೆ. ಆದರೆ ಇದರಲ್ಲಿರುವ ವಿಶೇಷವೆಂದರೆ ಇದನ್ನು ‘ಮಳೆ ಹಕ್ಕಿ’ ಎಂದೇ ಕರೆಯಲಾಗಿದೆ. ಪ್ಲೊವರ್ ಎಂಬ ಪದ ಲ್ಯಾಟಿನ್‌ನಿಂದ ಬಂದಿದ್ದು. ಲ್ಯಾಟಿನ್‌ನಲ್ಲಿ ಪ್ಲೊವಿಯಾ ಎಂದರೆ ಮಳೆ ಎಂದರ್ಥ. ‘ಉತ್ತಮ ಮಳೆಯ ಮುನ್ಸೂಚನೆ ಇದ್ದಲ್ಲಿ ಅಲ್ಲಿ ಪ್ಲೊವರ್ ಇರುತ್ತವೆ’ ಎಂದೇ ನಂಬಲಾಗಿದೆ. ಇಂಥದ್ದೊಂದು ಹಕ್ಕಿ ಇತ್ತೀಚೆಗೆ ಧಾರವಾಡದ ಕೆರೆಗಳಲ್ಲಿ ಕಂಡುಬಂದಿದ್ದು ಪಕ್ಷಿಪ್ರಿಯರಲ್ಲಿ ಸಂತಸ, ಕುತೂಹಲ ತರಿಸಿತ್ತು.

ಹಿಮಚಾದರ ಪ್ರದೇಶದಿಂದ ಅಕ್ಟೋಬರ್‌ನಲ್ಲಿ ಬರುವ ಪ್ಲೊವರ್‌ ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ತನ್ನ ನಾಡಿಗೆ ಮರಳುವುದು ವಾಡಿಕೆ. ಈ ಪಕ್ಷಿಗಳು ಆರ್ಕಿಟಿಕ್ ಮೂಲಕ ಯುರೋಪ್, ಅಫ್ಗಾನಿಸ್ತಾನ, ಪಾಕಿಸ್ತಾನದಿಂದ ಗುಜರಾತ್ ಮೂಲಕ ಭಾರತವನ್ನು ಪ್ರವೇಶಿಸುತ್ತವೆ. ಅಲ್ಲಿಂದ ಪಶ್ಚಿಮ ಘಟ್ಟದ ಜಾಡನ್ನೇ ಹಿಡಿದು ಬರುವ ಈ ಹಕ್ಕಿ, ದಕ್ಷಿಣದಲ್ಲಿ ಲಕ್ಷದ್ವೀಪ, ಶ್ರೀಲಂಕಾ , ಆಸ್ಟ್ರೇಲಿಯಾವರೆಗೂ ಹೋಗಿ ಸಂತಾನೋತ್ಪತ್ತಿ ಮಾಡಿ ಮರಳುತ್ತವೆ. ಆದರೆ ಈ ಬಾರಿ ಎರಡು ತಿಂಗಳು ತಡವಾಗಿ ಧಾರವಾಡದಲ್ಲಿ ಕಾಣಸಿಕ್ಕಿದ್ದು ಆಶ್ಚರ್ಯದ ಸಂಗತಿ ಎಂದು ಪಕ್ಷಿ ತಜ್ಞ ಅಶೋಕ ಮನಸೂರ್ ಅಭಿಪ್ರಾಯಪಟ್ಟರು. 

‘ಧಾರವಾಡದಲ್ಲಿ ಗೋಲ್ಡನ್ ಪ್ಲೊವರ್‌ ನೋಡಿ ಬಹಳ ವರ್ಷಗಳೇ ಕಳೆದವು. ಆದರೆ ಈ ಬಾರಿ ಅದರಲ್ಲೂ ಮೇ ಅಂತ್ಯ ಹಾಗೂ ಜೂನ್ ಆರಂಭದವರೆಗೂ  ಕಂಡುಬಂದಿದ್ದು ವಿಶೇಷ. ಇಷ್ಟು ಮಾತ್ರವಲ್ಲ ಸಂತಾನೋತ್ಪತ್ತಿ ಸಂದರ್ಭದಲ್ಲಿ ದೇಹ ಬಣ್ಣ ಬದಲಿಸಿದ್ದನ್ನು ನೋಡಿ ಸಂತಸವಾಯಿತು. ಎಪ್ರಿಲ್ ಹಾಗೂ ಮೇ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಕೆಲ ಕೆರೆಗಳು ತುಂಬಿದ್ದವು. ಜತೆಗೆ ಮಳೆ ಮಾರುತದ ಮುನ್ಸೂಚನೆ ಪಡೆದ ಇವು ಉಳಿದಿರುವ ಸಾಧ್ಯತೆಯೂ ಹೆಚ್ಚಿದೆ’ ಎಂದರು.

ಪ್ಲೊವರ್‌ಗಳು ಮರದ ಬದಲಾಗಿ ಒಣ ಹಾಗೂ ಬಯಲು ಪ್ರದೇಶದ ನೆಲದ ಮೇಲೆ ಗೂಡು ಕಟ್ಟುತ್ತವೆ. ಆದರೆ ಧಾರವಾಡದಲ್ಲಿ ಕೆಲ ದಿನಗಳ ಕಾಲ ಮಾತ್ರ ತಂಗಿದ್ದ ಈ ಹಕ್ಕಿ, ಉತ್ತರದ ಕಡೆ ಪ್ರಯಾಣದಲ್ಲಿ ಮಾರ್ಗಮಧ್ಯೆ ತಂಗಿರಬಹುದು. ಕೆರೆಯ ಅಂಗಳದಲ್ಲಿ ಹುಳ ಹಾಗೂ ಕೆಲ ಜಾತಿಯ ಹಣ್ಣುಗಳನ್ನು ತಿಂದು ಇಲ್ಲಿ ವಿಶ್ರಾಂತಿ ಮಾಡಿದ್ದವು. ಪ್ಲೊವರ್ ಹೋದ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯಲಾರಂಭಿಸಿತು. ಮಳೆಯ ಮುನ್ಸೂಚನೆ ನೀಡಬಲ್ಲ ಈ ಹಕ್ಕಿ ಶುಭಸೂಚಕವಲ್ಲದೆ ಮತ್ತೇನು?

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !