ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರ ನಡುವಿನ ಶಿರೂರ ಶಾಲೆ

Last Updated 24 ಜೂನ್ 2019, 19:30 IST
ಅಕ್ಷರ ಗಾತ್ರ

ಸಮುದಾಯದ ಪಾಲ್ಗೊಳ್ಳುವಿಕೆ, ಶಿಕ್ಷಕರ ಆಸಕ್ತಿ, ಮಕ್ಕಳ ಉತ್ಸಾಹ ಎಲ್ಲವೂ ಸೇರಿದರೆ ಸರ್ಕಾರಿ ಶಾಲೆಯೊಂದು ಅಭಿವೃದ್ಧಿಯ ಪಥದಲ್ಲಿ ಸಾಗಬಲ್ಲದು. ಶಾಲಾ ಆವರಣ ಹಸಿರಿನಿಂದ ಕಂಗೊಳಿಸುವ ಜೊತೆಗೆ ಮಕ್ಕಳ ಶೈಕ್ಷಣಿಕ ಉನ್ನತಿಯೂ ಸಾಧ್ಯ. ಇದಕ್ಕೆ ಉತ್ತಮ ಉದಾಹರಣೆ ನವಲಗುಂದ ತಾಲ್ಲೂಕಿನ ಶಿರೂರಿನ ಎಸ್‌.ಜಿ.ಬಾಳನಗೌಡ್ರ ಸರ್ಕಾರಿ ಪ್ರೌಢಶಾಲೆ.

ಸಮುದಾಯದ ಪಾಲ್ಗೊಳ್ಳುವಿಕೆ, ಶಿಕ್ಷಕರ ಆಸಕ್ತಿ, ಮಕ್ಕಳ ಉತ್ಸಾಹ ಎಲ್ಲವೂ ಸೇರಿದರೆ ಸರ್ಕಾರಿ ಶಾಲೆಯೊಂದು ಅಭಿವೃದ್ಧಿಯ ಪಥದಲ್ಲಿ ಸಾಗಬಲ್ಲದು. ಶಾಲಾ ಆವರಣ ಹಸಿರಿನಿಂದ ಕಂಗೊಳಿಸುವ ಜೊತೆಗೆ ಮಕ್ಕಳ ಶೈಕ್ಷಣಿಕ ಉನ್ನತಿಯೂ ಸಾಧ್ಯ. ಇದಕ್ಕೆ ಉತ್ತಮ ಉದಾಹರಣೆ ನವಲಗುಂದ ತಾಲ್ಲೂಕಿನ ಶಿರೂರಿನ ಎಸ್‌.ಜಿ.ಬಾಳನಗೌಡ್ರ ಸರ್ಕಾರಿ ಪ್ರೌಢಶಾಲೆ.

ಈ ಶಾಲೆಯ ಆವರಣ ಪ್ರವೇಶಿಸಿದರೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನೊಳಗೆ ಹೋದ ಅನುಭವವಾಗುತ್ತದೆ. ಹಚ್ಚಹಸಿರಿನಿಂದ ಕಂಗೊಳಿ ಸುವ ಗಿಡಗಳು. ಸರಸ್ವತಿ ದೇವಿ ವಿಗ್ರಹ ನಿಮ್ಮಲ್ಲಿನ ಭಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಸಾಧಕರ ಪುತ್ಥಳಿಗಳು ಮಕ್ಕಳ ಮನದಲ್ಲಿ ಸಾಧನೆಯ ಹಾದಿಯಲ್ಲಿ ಸಾಗಲು ಮುನ್ನುಡಿ ಬರೆಯುತ್ತವೆ.

ಶಾಲಾ ಆವರಣದಲ್ಲಿ ಸಾಗವಾನಿ, ಬಾದಾಮಿ, ಬೇವು, ಬೆಟ್ಟದ ನೆಲ್ಲಿಕಾಯಿ, ಅಶೋಕ, ಪಾಪಸ್‌, ಒಂದೆಲಗ, ತಾವರೆ, ತುಳಸಿ, ದಾಸವಾಳ, ಗುಲಾಬಿ ಸೇರಿದಂತೆ 200ಕ್ಕೂ ಹೆಚ್ಚು ವೈವಿಧ್ಯಮಯ ಗಿಡಗಳಿವೆ. ಈ ಬಾರಿ ಮತ್ತೆ 50 ಸಸಿಗಳನ್ನು ನೆಡಲಾಗಿದೆ.

ಈ ಶಾಲೆಯ ಕಟ್ಟಡವು 2010ರಲ್ಲಿ ನಿರ್ಮಾಣ ಗೊಂಡಿದೆ. ಶಾಲೆಯಲ್ಲಿ ಪೀಠೋಪಕರಣಗಳ ಕೊರತೆ ಇತ್ತು. ಆಗ ಗ್ರಾಮಸ್ಥರು ₹ 60 ಸಾವಿರ ನೆರವು ನೀಡುವ ಮೂಲಕ ಪೀಠೋಪಕರಣ ನೀಡುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ‌ಈ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ರಚನೆಯೇ ಬೇಡ ಎಂದು ತೀರ್ಮಾನಿಸಿದ್ದಾರೆ. ಎಸ್‌ಡಿಎಂಸಿ ರಚನೆ ಮಾಡಿದರೆ ಕೆಲವರಿಗಷ್ಟೇ ಸೀಮಿತವಾಗುತ್ತದೆ. ಈಗ ಶಾಲಾ ಸುಧಾರಣೆಯ ಸಮಿತಿ ಎಲ್ಲ ಗ್ರಾಮಸ್ಥರ ಮೇಲಿದೆ. ಹಾಗೆಯೇ ಇರಲಿ ಬಿಡಿ ಎನ್ನುವುದು ಗ್ರಾಮಸ್ಥರ ವಾದ.

ಕ್ರೀಡೆ, ಚಿತ್ರಕಲೆ ಸೇರಿದಂತೆ ಎಂಟು ವಿಷಯಗಳನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ. ಪ್ರತಿ ವಿಷಯದಲ್ಲಿ ಸಾಧನೆ ಮಾಡಿದ ಒಬ್ಬೊಬ್ಬರ ಪುತ್ಥಳಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಕುವೆಂಪು, ವಿಕ್ರಂ ಸಾರಾಭಾಯಿ, ಸಂತ ಕಬೀರದಾಸ, ವಿಲಿಯಂ ಶೇಕ್ಸ್‌ಪಿಯರ್‌, ಚಾಣಕ್ಯ, ಧ್ಯಾನಚಂದ, ಶ್ರೀನಿವಾಸ ರಾಮಾನುಜಂ, ರವಿವರ್ಮನ ಮೂರ್ತಿಗಳಿವೆ. ವಚನ ಚಳವಳಿಯ ಅಕ್ಕಮಹಾದೇವಿಯವರ ಮೂರ್ತಿಯೂ ಈ ಸಾಲಿನಲ್ಲಿದೆ. ಮಕ್ಕಳಿಗೆ ಸಾಧಕರ ಹಾದಿಯಲ್ಲಿ ಸಾಗುವ ಉತ್ಸಾಹ ಉಕ್ಕಲಿ ಎನ್ನುವುದು ಶಾಲೆಯವರ ಆಶಯ.

ಶಾಲೆಯ ಆವರಣದಲ್ಲಿ ಸರಸ್ವತಿಮೂರ್ತಿ ಪ್ರತಿಷ್ಠಾಪಿಸಲಾಗಿದೆ. ನಿತ್ಯ ಬೆಳಿಗ್ಗೆ ಮಕ್ಕಳು ಸರಸ್ವತಿ ಮೂರ್ತಿಗೆ ನಮಿಸಿಯೇ ಶಾಲೆಯೊಳಕ್ಕೆ ಹೋಗುತ್ತಾರೆ. ಶಾಲಾ ಸಮವಸ್ತ್ರ ಧರಿಸಿರುವ ಇಬ್ಬರು ಮಕ್ಕಳ ಮೂರ್ತಿಗಳು ನಿಮ್ಮನ್ನು ಕೈಬಿಸಿ ಕರೆಯುತ್ತವೆ.

ಓದಿನಲ್ಲೂ ಮುಂದೆ

ಗಿಡಗಳನ್ನು ಬೆಳೆಸುವಲ್ಲಿ ಮಾತ್ರ ಈ ಶಾಲೆಯ ವಿದ್ಯಾರ್ಥಿಗಳು ಮುಂದಿಲ್ಲ. ಓದು ಹಾಗೂ ಕ್ರೀಡೆಯಲ್ಲಿಯೂ ಮುಂದಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 90ಕ್ಕಿಂತ ಹೆಚ್ಚಿದೆ. ಶಾಲೆಯ ಮಕ್ಕಳು ಹರ್ಡಲ್‌ ಜಂಪ್‌ನಲ್ಲಿ ರಾಜ್ಯಮಟ್ಟ, ವಾಲಿಬಾಲ್‌, ರಿಲೇ ಮುಂತಾದ ಕ್ರೀಡೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮಕ್ಕಳಷ್ಟೇ ಅಲ್ಲ ಶಿಕ್ಷಕರೂ ಸಾಧನೆ ಮಾಡುತ್ತಿದ್ದಾರೆ. ಇಲ್ಲಿನ ಶಿಕ್ಷಕರ ಸಾಧನೆಗೆ ಮುಖ್ಯ ಶಿಕ್ಷಕಿ ಜಿಲ್ಲಾ ಉತ್ತಮ ಮುಖ್ಯ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದರೆ, ನಾಲ್ವರು ಶಿಕ್ಷಕರು ತಾಲ್ಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2015 ಹಾಗೂ 2016 ಮತ್ತು 2017ರಲ್ಲಿ ಹಸಿರು ಮಿತ್ರ ಶಾಲೆ ಪ್ರಶಸ್ತಿಗೆ ಈ ಶಾಲೆ ಭಾಜನವಾಗಿದೆ.

ಎರಡು ಬಾರಿ ನಿರಂತರವಾಗಿ ಪ್ರಶಸ್ತಿ ಪಡೆದಿರುವ ಕಾರಣ ಈ ವರ್ಷದ ಸ್ಪರ್ಧೆಯಲ್ಲಿ ಶಾಲೆಯು ಭಾಗವಹಿಸುವಂತಿರಲಿಲ್ಲ. ಹಾಗೆಂದು ಇಲ್ಲಿ ಹಸಿರಿಗೇನೂ ಕೊರತೆಯಾಗಿಲ್ಲ. ಪ್ರಶಸ್ತಿ ಬರಲಿ, ಬಿಡಲಿ. ಹಸಿರೇ ಇಲ್ಲಿನ ಶಿಕ್ಷಕರ, ಮಕ್ಕಳ ಉಸಿರಾಗಿದೆ.

ಮಕ್ಕಳ ಸಂಖ್ಯೆ ಹೆಚ್ಚಳ

ಶಾಲೆಯ ಸುಂದರ ಪರಿಸರ, ಗ್ರಾಮಸ್ಥರ ಸಹಕಾರ, ವಿದ್ಯಾರ್ಥಿಗಳ ಓದನ್ನು ಗಮನಿಸಿದ ಅಕ್ಕಪಕ್ಕದ ಗ್ರಾಮಗಳ ಪೋಷಕರೂ ಇದೇ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ.

ಪ್ರೌಢಶಾಲೆಯ ಮೂರು ತರಗತಿಗಳಿಗೆ ಆರಂಭದ ವರ್ಷಗಳಲ್ಲಿ 170 ರಿಂದ 180 ಮಕ್ಕಳು ಇರುತ್ತಿದ್ದರು. ಈಗ 230 ರಿಂದ 240 ಮಕ್ಕಳಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮುಖ್ಯ ಶಿಕ್ಷಕಿ ಭಾಗ್ಯಜ್ಯೋತಿ ಕೋಟಿಮಠ.

ವ್ಯಕ್ತಿಯಿಂದ ಉತ್ತಮ ಶಾಲೆ ನಿರ್ಮಾಣವಾಗು ವುದಿಲ್ಲ. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಸೇರಿದರೆ ಮಾತ್ರ ಉತ್ತಮ ಶಾಲೆಯಾಗುತ್ತದೆ. ಗ್ರಾಮಸ್ಥರ ನೆರವಿನಿಂದಲೇ ಇದಕ್ಕೆ ಮಾದರಿ ಶಾಲೆಯ ಪಟ್ಟ ದೊರೆತಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT