7

ಜಲದ ಕಣ್ಣು

Published:
Updated:
ಜಲದ ಕಣ್ಣು

ಮೊನ್ನೆ ಅಜ್ಜನ ಊರಿಗೆ ಹೋಗಿದ್ದೆ. ಆಗ, ಅಜ್ಜಿ ಮನೆಯಂಗಳದಲ್ಲಿರುವ ಬಾವಿಯ ಕೊನೆಗಾಲದ ಕಥೆ ಹೇಳಿದರು. ಕೇಳಿ ಬೇಸರವಾಯಿತು. ಅಂಗಳಕೆ ಓಡಿ ಹೋಗಿ ಬಾವಿ ನೋಡುತ್ತಾ, ಬಾಲ್ಯದ ನೆನಪುಗಳಿಗೆ ಜಾರಿದೆ.

ನಾನು ಹೇಳುತ್ತಿರುವುದು ನಮ್ಮ ಮನೆಯಂಗಳದ ತೆರೆದ ಬಾವಿ ಕಥೆ. ಈ ಬಾವಿ ಮನೆಯಂಗಳದ ‘ನೀರು ಬಾವಿ’. ಅದು ನಮ್ಮ ಮನೆ ಮಾತ್ರವಲ್ಲ. ಸುತ್ತಲಿನ ಐದಾರು ಬೀದಿಗಳ ಜನ-ಜಾನುವಾರುಗಳ ಪೊರೆದ ಜೀವಜಲ. ಅದು ನಮ್ಮಂತೆ ನಡೆದಾಡುವುದಿಲ್ಲ. ಆದರೆ, ನಮ್ಮ ಮೂಲಕ ಉಸಿರಾಡುತ್ತದೆ.

ಅರವತ್ತು ವರ್ಷಗಳ ಹಿಂದೆ ಹತ್ತಾರು ಜನರ ಪರಿಶ್ರಮದಿಂದ ಹುಟ್ಟಿ, ಸುತ್ತ ಕಟ್ಟೆ ಕಟ್ಟಿಸಿಕೊಂಡು ತುಂಬಿ ತುಳುಕುತ್ತಾ ಅದೆಷ್ಟು ಜೀವಗಳ ಸಾಕಿದೆ. ಅದೆಷ್ಟು ಕೊನೆಯುಸಿರೆಳೆವ ಜೀವಗಳಿಗೆ ಕೊನೆಯ ಹನಿಯಾಗಿದೆ. ಮದುವೆ-ಮುಂಜಿ, ಹಬ್ಬ–ಹರಿದಿನಗಳಿಗೆ ದೈವಸ್ವರೂಪಿಯಾಗಿದೆ. ಕೊಳೆ-ಮೈಲಿಗೆಗಳ ತೊಳೆದು, ದುಡಿದು ದಣಿದು ಬಂದವರ ಮುಖದ ಮೇಲೆ ನೆಮ್ಮದಿಯ ಹನಿಯಾಗಿದೆ.

ಬಾವಿಯೊಂದಿಗೆ ಅನೇಕ ಬಾಲ್ಯದ ನೆನಪುಗಳಿವೆ. ಬಾವಿಗೆ ಪುಡಿಗಲ್ಲೆಸೆದು ಪುಳಕ್ಕೆನ್ನುವ ಸದ್ದು ಕೇಳಿ ಕುಣಿಯುವುದು, ಅಕ್ಕಂದಿರ ಜೊತೆ ಸಣ್ಣ ಬಿಂದಿಗೆ ಇಳಿಬಿಟ್ಟು ನೀರು ಸೇದುವುದು, ಬಾವಿ ಒಳಗಿದ್ದ ಆಮೆ, ವಟರುಗಪ್ಪೆ, ಪುಡಿಮೀನುಗಳು ಪುಳಕ್ಕನೆ ನೆಗೆಯುವುದನ್ನು ಇಣುಕಿ ನೋಡುವುದು, ಬಾವಿಕಟ್ಟೆಯ ಸುತ್ತ ‘ಜೂಟ್’ ಆಡುವುದು...

ಹೀಗೆ, ಅಂಥ ನೆನಪುಗಳನ್ನು ಮೆಲುಕು ಹಾಕುತ್ತಾ ಬಾವಿಕಟ್ಟೆಯ ನುಣುಪಾದ ಕಲ್ಲಿನ ಹಾಸುಗಳನ್ನು ಸವರುತ್ತಿದ್ದಾಗ, ಅಂಗಳಕ್ಕೆ ಬಂದ ಅಜ್ಜಿ, ಬಾವಿ ಕಟ್ಟಿಸಿದ ಹಿಂದಿನ ಕಥೆ ತೇಲಿಬಿಟ್ಟರು.

ದಶಕಗಳ ಹಿಂದೆ ನಮ್ಮ ಅಜ್ಜಿ, ಮನೆಗೆ ಬಂದ ನೆಂಟರಿಗೆ ಊಟ ಬಡಿಸಿ, ಕುಡಿಯುವ ನೀರು ಕೊಡಲು ನೋಡಿದಾಗ ಮನೆಯಲ್ಲಿ ನೀರು ಖಾಲಿಯಾಗಿತ್ತು. ದೂರದಲ್ಲಿದ್ದ ಸಂಬಂಧಿಯೊಬ್ಬರ ಮನೆಯಲ್ಲಿ ನೀರು ತರಲು ಹೋದಾಗ, ಸೇದುವ ಹಗ್ಗ ತುಂಡಾಗಿದೆಯೆಂದು ಸುಳ್ಳು ಹೇಳಿಬಿಟ್ಟರು. ಖಾಲಿ ಕೊಡದೊಡನೆ ಮನೆಗೆ ವಾಪಸು ಬಂದ ಅಜ್ಜಿಯನ್ನು, ಅಜ್ಜ ವಿಚಾರಿಸಿದರು.

ವಿಷಯ ಗೊತ್ತಾಯಿತು. ತಕ್ಷಣ, ತನ್ನಲ್ಲಿದ್ದ ಜೋಡಿ ಎತ್ತುಗಳನ್ನು ಮಾರಾಟ ಮಾಡಿ, ಶಿವರಾತ್ರಿಯಂದು ಬಾವಿ ತೊಡಿಸಲು ಶುರುಮಾಡಿದರು. ಹದಿನೈದು ದಿನಗಳಲ್ಲಿ ಬಾವಿ ತೋಡಿದರು. ಜಲದ ಕಣ್ಣು ಸಿಕ್ಕಿತು.

ಬಾವಿಯಲ್ಲಿ ನೀರು ತುಂಬಿಕೊಂಡಿತು. ನೂರಾರು ಜೀವಗಳ ದಾಹ ತೀರಿಸಿತು. ಯಾರು ಅಂದು ನೀರು ಕೊಡದೇ ಸುಳ್ಳಾಡಿ ವಾಪಸು ಕಳಿಸಿದ್ದರೋ ಅವರ ಜೀವದ ಕೊನೆ ಗಳಿಗೆಯಲ್ಲಿ ಇದೇ ಬಾವಿಯ ನೀರನ್ನು ಸ್ವತಃ ಅಜ್ಜನೇ ಬಾಯಿಗೆ ಬಿಟ್ಟಿದ್ದನಂತೆ!

ಕಾಲ ಹಾಗೆಯೇ ಉಳಿಯುದಿಲ್ಲವಲ್ಲ. ಈಗ ಬೀದಿಗೆರಡು-ಮೂರು ಕೊಳವೆಬಾವಿ ಕೊರೆಸಲು ಶುರುವಾದ ಮೇಲೆ ಹಂತಹಂತವಾಗಿ ಬಾವಿಯ ಜಲದ ಕಣ್ಣು ಇಂಗಿ ಹೋಗುತ್ತಾ ಈಗ ಒಡಲು ಬರಿದಾಗಿದೆ. ಬಾವಿ ಕಟ್ಟೆಯ ಕಟ್ಟೆಯ ಸುತ್ತಲೂ ಸುತ್ತಾಡುವಾಗ ನನ್ನ ನೆನಪುಗಳ ಕಣ್ಣಾಲಿ ಮಾತ್ರ ತುಂಬಿಕೊಂಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !