ಮನೆಯೇ ಮ್ಯೂಸಿಯಂ

7

ಮನೆಯೇ ಮ್ಯೂಸಿಯಂ

Published:
Updated:
Deccan Herald

ಮನೆಯ ಮುಂದೆ ಫಿರಂಗಿ. ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ತೂಗುಯ್ಯಾಲೆ. ಮುಂಬಾಗಿಲು ಪಕ್ಕದಲ್ಲಿ ಗೋಡೆಗಳ ಮೇಲೆ ಗಣಿತದ ಲೆಕ್ಕಾಚಾರಗಳು, ವಂಶವೃಕ್ಷ, ವಿವಿಧ ಕಾಲದ ವಸ್ತುಗಳು...

ಹೀಗೆ ಮನೆ ಪೂರ್ತಿ ಹಳೆಯ ಕಾಲದ ವಸ್ತುಗಳಿಂದ ತುಂಬಿ ಹೋಗಿದೆ. ಒಂದೊಂದು ಗೋಡೆಯೂ ಇತಿಹಾಸದ ಕಥೆ ಹೇಳುತ್ತದೆ. ವ್ಯಾಪಾರ, ಪ್ರವಾಸಕ್ಕೆ ಹೋದ ಕಡೆಗಳಲೆಲ್ಲ ಸಿಗುವ ವಸ್ತುಗಳನ್ನು ಸಂಗ್ರಹಿಸುತ್ತಾ ಬಂದಿರುವ ಹುಬ್ಬಳ್ಳಿಯ ರೇಣುಕಾ ನಗರದ ನಿವಾಸಿ ಎಂ.ಕೆ. ಶಿವಪ್ಪ ಅವರು, ಮನೆಯನ್ನೇ ವಸ್ತು ಸಂಗ್ರಹಾಲಯವನ್ನಾಗಿಸಿಕೊಂಡಿದ್ದಾರೆ.

ಒಂದು ಗೋಡೆಯ ಮೇಲೆ ಗಣಿತದ ಸರಳ ಸೂತ್ರಗಳನ್ನು ಬರೆಯಿಸಿದ್ದಾರೆ. ತಾವೇ ವರ್ಲಿ ಪೇಂಟಿಂಗ್‌ ಮಾಡುವ ಮೂಲಕ ಮನೆ ಹೊರ ಹಾಗೂ ಒಳ ಗೋಡೆಯನ್ನು ಕಲಾತ್ಮಕವಾಗಿ ಅಂದಗೊಳಿಸಿದ್ದಾರೆ.

ಶಿವಪ್ಪ ದಾವಣಗೆರೆ ಮೂಲದವರು. ಮೂರು ದಶಕಗಳಿಂದ ಹುಬ್ಬಳ್ಳಿಯಲ್ಲಿ ಹತ್ತಿ ನೂಲು ತಯಾರಿಕೆ ಉದ್ಯಮ ನಡೆಸುತ್ತಿದ್ದಾರೆ. ವ್ಯಾಪಾರಿಯಾಗಿದ್ದರೂ, ಹಳೆಯ ವಸ್ತುಗಳ ಸಂಗ್ರಹದ ಹವ್ಯಾಸ ಮುಂದುವರಿಸಿದ್ದಾರೆ. ‌

ವ್ಯಾಪಾರ ನಿಮಿತ್ತ ದೇಶದ ದಕ್ಷಿಣ ಭಾಗದ ರಾಜ್ಯಗಳನ್ನೆಲ್ಲ ಸುತ್ತಾಡಿದ್ದಾರೆ. ಜತೆಗೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲೂ ಪ್ರವಾಸ ಮಾಡಿದ್ದಾರೆ. ಎಲ್ಲಿಗೆ ಹೋದರೂ, ಗಮನ ಸೆಳೆಯುವಂತಹ, ವಿಭಿನ್ನವಾದ ವಸ್ತುವನ್ನು ಕಂಡರೆ ಅದನ್ನು ತೆಗೆದುಕೊಂಡು ಬರುತ್ತಾರೆ. 1976 ರಿಂದ ಈ ಹವ್ಯಾಸ ಅಭಿಯಾನದ ರೀತಿ ಮುಂದುವರಿದಿದೆ.


ಕಿನ್ನಾಳದ ಆಕರ್ಷಕ ಚೌಕಟ್ಟು ಹಾಗೂ ಗೊಂಬೆಗಳು

ತಾಳೆಗರಿಗಳು

ಹರಿಶ್ಚಂದ್ರ ಕಾವ್ಯ, ಗಿರಿಜಾ ಕಲ್ಯಾಣ, ಮೈದುನ ರಾಮಯ್ಯನ ಸುವ್ವಿಪದ, ಶಬ್ದಮಣಿ ದರ್ಪಣ ಸೇರಿದಂತೆ ಹಲವು ಸಾಹಿತ್ಯ ಮತ್ತು ಪೌರಾಣಿಕ ಕೃತಿಗಳನ್ನು ಸಂಗ್ರಹಿಸಿದ್ದಾರೆ. ಕೈವಲ್ಯ ಪದ್ಧತಿ, ದೀಪದ ಕಲಿ ಕಾವ್ಯದ ಹಸ್ತಪ್ರತಿಗಳನ್ನೂ ಸಂಗ್ರಹಿಸಿಟ್ಟಿದ್ದಾರೆ.

ವಿಜಯನಗರ ಹಾಗೂ ವಿಕ್ಟೋರಿಯಾ ಕಾಲದ ಎರಡು ಚಿನ್ನದ ನಾಣ್ಯಗಳನ್ನು ಸರದಲ್ಲಿ ಪೋಣಿಸಿ ಇಟ್ಟಿದ್ದಾರೆ. ಟಿಪ್ಪು, ವಿಕ್ಟೋರಿಯಾ, ಜಾರ್ಜ್‌, ವಿಲಿಯಂ, ಸ್ವಾತಂತ್ರ್ಯಪೂರ್ವದ ಹಲವಾರು ನಾಣಗಳ ಸಂಗ್ರಹ ಇವರ ಬಳಿ ಇದೆ.
ಶೂನ್ಯದಿಂದ ಸಂಖ್ಯೆಗಳ ಉಗಮ, ಬೀಜಗಣಿತ, ಪೈಥಾಗೊರಸ್‌ ಸೇರಿದಂತೆ ಹಲವು ಬಗೆಯ ಗಣಿತದ ಸೂತ್ರಗಳನ್ನು ಗೋಡೆಗಳ ಮೇಲೆ ಬರೆದಿರುವುದಷ್ಟೇ ಅಲ್ಲ, ಆ ಬಗ್ಗೆ ಸುಲಲಿತವಾಗಿ ಮಾತನಾಡುತ್ತಾರೆ. ಗಣಿತದ ಮ್ಯಾಜಿಕ್ ಸ್ಕ್ವೇರ್‌ ಸೇರಿದಂತೆ ಹಲವು ಪ್ರಾತ್ಯಕ್ಷಿಕೆಗಳಿವೆ.

ಮನೆಯಲ್ಲಿನ ವಸ್ತುಗಳನ್ನು ನೋಡುತ್ತಿದ್ದಾಗ, ಕಟ್ಟಿಗೆಯಿಂದ ತಯಾರಿಸಿದ ದೊಡ್ಡ ನಿಂಬೆಗಾತ್ರ ಚೆಂಡೊಂದು ಗಮನ ಸೆಳೆಯುತ್ತದೆ. ಅದರ ವಿಶೇಷವೆಂದರೆ, ಒಂದೇ ಕಟ್ಟಿಗೆಯಲ್ಲಿ ಜೋಡಿಸದೇ ಒಂದರೊಳಗೊಂದರಂತೆ ಏಳು ಚೆಂಡುಗಳನ್ನು ಕೆತ್ತಲಾಗಿದೆ. ಎಲ್ಲವೂ ಬಿಡಿ, ಬಿಡಿಯಾಗಿದ್ದು, ತಿರುಗುತ್ತವೆ. ಅದನ್ನು ಹೇಗೆ ಕೆತ್ತಿದ್ದಾರೆ ಎಂಬುದು ಚೆಂಡು ನೋಡಿದವರಿಗೆ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ.


ಮನೆಯಲ್ಲಿ ಸಂಗ್ರಹಿಸಿಟ್ಟಿರುವ ವಿವಿಧ ವಸ್ತುಗಳು

ವಿವಿಧ ರಾಜ್ಯಗಳ ಕರಡಿಗೆಗಳು

ರಾಜ್ಯದ ವಿವಿಧ ಭಾಗಗಳಲ್ಲಿ ಬಳಕೆ ಮಾಡುವ ಕರಡಿಗೆಗಳನ್ನು ಮನೆಯಲ್ಲಿ ಜೋಡಿಸಿದ್ದಾರೆ. ಪ್ರಸ್ತುತ ತಮಿಳುನಾಡು, ಕಾಶ್ಮೀರ, ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ಬಳಕೆ ಮಾಡುತ್ತಿರುವ ಕರಡಿಗೆಗಳು (ಲಿಂಗು ಇಟ್ಟುಕೊಳ್ಳುವುದು) ಇಲ್ಲಿವೆ. ಒಂದೊಂದು ಕರಡಿಗೆಯೂ ವಿಭಿನ್ನ ಆಕಾರದಲ್ಲಿದ್ದು, ನೋಡುಗರ ಗಮನ ಸೆಳೆಯುತ್ತವೆ. ಇವುಗಳಲ್ಲಿ ತಿರುಗಣಿಯುಳ್ಳ ಕರಡಿಗೆಗಳೂ ಇವೆ.

ಒಂದು ಕೋಣೆಯಲ್ಲಿ ಎರಡು ಮೂತಿಗಳಿರುವ ಅಡಕೆ ಒಡೆಯುವ ಅಡಕತ್ತರಿ, ಹಳೆಯ ಕಂದೀಲು, ನಾಯಿ ಆಕಾರದ ಲಾಕ್‌, ಬೆಳ್ಳಿಯ ಸುರಗಿ, ತಾಮ್ರದ ದುಂಡನೆಯ ಕಾಯಿ ಆಕಾರದಲ್ಲಿರುವ ಸುಣ್ಣದ ಡಬ್ಬಿ, ಕಿನ್ನಾಳದ ಗೊಂಬೆಗಳು, ರಾಜಸ್ಥಾನದ ಕಲ್ಲು, 70 ವರ್ಷ ಹಳೆಯದಾದ ಗಡಿಯಾರ, ಕಿಟಕಿಗೆ ಕಿನ್ನಾಳದ ಚೌಕಟ್ಟು, ಹೊಳೆಆಲೂರಿನ ವಿಭಿನ್ನ ಕೆತ್ತನೆಯ ಬಾಗಿಲು ಚೌಕಟ್ಟು... ಹೀಗೆ ನೋಡುತ್ತಾ ಹೋದರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ.

ಶಿವಪ್ಪ ಅವರು ತಮ್ಮ ಮ್ಯೂಸಿಯಂ ಮನೆಯನ್ನು ಜನರು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಮನೆಯ ಎದುರು ಫಿರಂಗಿಯ ಮಾದರಿಯನ್ನು ಇಟ್ಟಿದ್ದಾರೆ!


ವಿವಿಧ ಬಗೆಯ ಕರಡಿಗೆಗಳು


ಮನೆಯ ಮುಂದಿರುವ ಫಿರಂಗಿ ಮಾದರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !