ಮಾವು ನಾವು ನಲಿವು ತಾವು

ಸೋಮವಾರ, ಮಾರ್ಚ್ 18, 2019
31 °C
Mango, Maavu-taavu

ಮಾವು ನಾವು ನಲಿವು ತಾವು

Published:
Updated:

ಕಣ್ಮುಚ್ಚಿ ಮೂಗಿನ ಹೊರಳೆ ಹಿಗ್ಗಿಸಿದರೆ ಮಾವಿನ ಕಂಪು. ಎಳೆ ತಳಿರಿನ ನಡುವೆ ಅರಳಿದ ಪುಟ್ಟ ಹೂಗಳ ಸುವಾಸನೆ, ನೇರ ಮನೆಯ ಹಿತ್ತಲಕ್ಕೆ ಕೊಂಡೊಯ್ಯುವಂತೆ.

ವಯಸ್ಸು ಹಿಂದಕ್ಕೆ ಓಡಿ, ಬಾಲ್ಯಕ್ಕೆ ಕರೆದೊಯ್ದಂತೆ. ಔಷಧಿ ಹಾಕದ ಮರಗಳ ಬಳಿ ಸುಳಿದಾಡುವ ಜೇನ್ನೊಣ ಗುಂಞಗುಡುತ್ತಿದ್ದರೆ ಮತ್ತೆ ವಾಸ್ತವಕ್ಕೆ ವಾಪಸ್‌ ಆಗ್ತೀವಿ. ಆದರೂ ಕಾಲಿಗೆ ನೀರುಂಡ ಮಣ್ಣಿನ ಸ್ಪರ್ಶ, ಮುಳ್ಳುಗಳ ನಡುವೆ ಎಲ್ಲೋ ಜಿಂಕೆಕಣ್ಣುಗಳು ನಮ್ಮನ್ನೇ ದಿಟ್ಟಿಸುವಂಥ ಭಾವ.

ಮಕ್ಕಳಂತೂ ಪ್ರತಿ ಎಳೆ ಎಲೆಯೊಡನೆ ಆಡುತ್ತ, ಮರದ ರೆಂಬೆಗಳನ್ನು ಹತ್ತುವಾಗಲೇ ಶುರವಾಗುತ್ತದೆ, ಮಾವಿನ ಪಾಠ. ಒಮ್ಮೆ ಮಾವಿನ ಋತುಮಾನ ಮುಗಿದರೆ ಅಲ್ಲಿಂದಲೇ ಇನ್ನೊಂದು ಋತುವಿಗಾಗಿ ತಯಾರಿ ಆರಂಭವಾಗುತ್ತದೆ. ಈ ಮರಗಳನ್ನು ಪೋಷಿಸುವುದೇ ಒಂದು ಕಾಯಕ. 

ನೀರಿನ ವ್ಯವಸ್ಥೆ, ಕತ್ತರಿಸುವಾಗಿನ ಸಂಕಟ, ಎಳೆಯ ಹೂಗಳು ಗಾಳಿಗೆ ಉದುರಿದಾಗ ಆಗುವ ಸಂಕಟ, ಕಾಯಿಯೊಂದು ಹಣ್ಣಾಗಿ ಮಾಗುವಾಗ ಭಾರಕ್ಕೆ ಮರ ತೂಗುವ ಸಂಭ್ರಮ, ಹೀಗೆ ಎಲ್ಲವನ್ನೂ ವಿವರಿಸುತ್ತಾರೆ ಮಂಜುಳಾ.


ಗರುಡ ಸವಿ ಫಾರ್ಮ್‌ನ ನೋಟ

ಕೋಲಾರ ಜಿಲ್ಲೆಯ ಗರುಡ ಸವಿ ಫಾರ್ಮ್‌ನ ಮಾವುಯಾನದ ಮುಖ್ಯಾಂಶಗಳು. ಮೀನಾಕ್ಷಿ ಹಾಗೂ ಮಂಜುಳಾ ಇವರೊಟ್ಟಿಗೆ ಮಂಜುಳಾ ಅವರ ಅಮ್ಮ ಸಾವಿತ್ರಮ್ಮ ಮೂವರೂ ಕೈಗೂಡಿಸಿ, ಈ ಯಾನವನ್ನು ಆಯೋಜಿಸಿರುವುದು. ಅಮ್ಮನಿಗಂತೂ ಅಡುಗೆ ಮಾಡಿ, ಉಣಿಸುವುದೇ ಖುಷಿ. ಬಂದವರಿಗೆಲ್ಲ ನಗುಮೊಗದಿಂದ ಸ್ವಾಗತಿಸಿದರೆ ಮತ್ತೆ ಅಡುಗೆಮನೆಗೆ ಹೊರಟುಬಿಡುತ್ತಾರೆ. ಬಂದವರಿಗಾಗಿ ಉಪಚರಿಸಲು ಒಂದಷ್ಟು ಕುರುಕಲು, ತಣ್ಣನೆಯ ಜೂಸು ಅಂಗಳದಲ್ಲಿರುವ ಹಂದರಲ್ಲಿ ಹಾಜರಾಗಿರುತ್ತದೆ.

ಜೂಸು, ಹೀರಿ, ಅನ್ನನಾಳದ ಗುಂಟ ಆ ತಂಪನ್ನು ಅನುಭವಿಸುವಾಗಲೇ ಬೀಸುವ ತಂಗಾಳಿಗೆ ಎದೆಯ ಕವಾಟಗಳು ಹಿಗ್ಗಲಾರಂಭಿಸುತ್ತವೆ. ನಗರದಲ್ಲಿ ಸಿಗದ ತಾಜಾತನ ಸಾಕೆನಿಸುವಷ್ಟು ಹೀರುವಾಗಲೇ ಮತ್ತೆ ಮನೆಯಂಗಳದ ನೆನಪು. ಈ ಅಂಗಳದಲ್ಲಿ ಮಕ್ಕಳು ಹುಲ್ಲಲ್ಲಿ ಪಾದವೂರುತ್ತ ನಡೆಯುವಾಗ ನಮಗೇ ಪುಳಕ. ಪುಟ್ಟ ಪಾದಗಳಿಗೆ ಅಂಟಿಕೊಳ್ಳುವ ಮಣ್ಣು ಕೊಡುವುತ್ತ ಗಿಡ, ತಬ್ಬಿ, ಬಳ್ಳಿ ಎಲೆಗಳನ್ನು ಸವರುವಾಗಲೇ ಟ್ರ್ಯಾಕ್ಟರ್‌ ರೆಡಿ ಎಂಬ ಕೂಗು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಟ್ರ್ಯಾಕ್ಟರ್‌ ಹತ್ತಿ, ಮಾವಿನ ತೋಟಕ್ಕೆ ಸವಾರಿ ತೆರಳುವಾಗ ಎರಡೂ ಬದಿಯಲ್ಲಿ ಹೂ, ಮಿಡಿಗಾಯಿಗಳು. 

ತೋಟದ ನಡುವೆ ಹೆಜ್ಜೆ ಹಾಕುವಾಗ ಪ್ರತಿ ಮರದ ವಿವರ, ಯಾವ ತಳಿ, ಎಲ್ಲಿಯ ಮೂಲ, ಯಾವಾಗ ಮಾಗುತ್ತದೆ, ರುಚಿ, ವಾಸನೆ, ಎಲ್ಲದರ ವಿವರ ಮಂಜುಳಾ ಕೊಡುತ್ತಾರೆ. ಕೊಡುತ್ತಲೇ ಮಾವಿನ ಕಥೆಯ ಪಟಗಳು ನಮ್ಮೆದುರು ಬಿಚ್ಚಿಕೊಳ್ಳುತ್ತವೆ. ಇಡೀ ತೋಟದಲ್ಲಿ ಕಾಲಾಡಿಸಿಕೊಂಡು, ಬಂಡೆಗಲ್ಲುಗಳನ್ನು ದಾಟಿ, ಕರೆ ಬದುವಿನಿಂದ ಹಾದು ಮನೆ ಹಿತ್ತಲಿಗೆ ಬಂದರೆ ಬದನೆ, ಹೀರೆ, ಬೆಂಡೆ, ಹುರುಳಿ, ಅವರೆ ಎಲ್ಲ ತರಕಾರಿಗಳೂ ಕೈಬೀಸಿ ಕರೆಯುತ್ತವೆ. 

ಮಕ್ಕಳು ತರಕಾರಿಯ ಹೆಸರುಗಳನ್ನು ಹೇಳುತ್ತಲೇ ಕೀಳಬಹುದು. ಕಿತ್ತ ತರಕಾರಿಯನ್ನು ಅಲ್ಲಿಯೇ ಮಾರಾಟ ಮಾಡಲಾಗುತ್ತದೆ. ಇಷ್ಟೆಲ್ಲ ಓಡಾಡಿ ಬಂದವರಿಗೆ ಮನೆಯ ನೆರಳು, ರೆಡಾಕ್ಸೈಡ್‌ ನೆಲ ತಂಪಿನ ಅನುಭವ ನೀಡುತ್ತದೆ. ಕೈಕಾಲು ತೊಳೆದು ಬರುವುದರಲ್ಲಿ, ಬಾಳೆಲೆಯೂಟ ಕೈಬೀಸಿ ಕರೆಯುತ್ತದೆ.

ಸಾವಿತ್ರಮ್ಮ, ಒರಳು  ಕಲ್ಲಿನಲ್ಲಿ ಅರೆದ ಚಟ್ನಿ, ಹಿಟ್ಟು ಅರೆದು ಮಾಡಿದ ವಡೆಯ ಘಮ ಮೂಗಗಲಿಸುವಂತೆ ಮಾಡುತ್ತವೆ. ಅಪ್ಪಟ ತೋಟದ ಮನೆಯ ಸರಳ ಊಟ, ಕೋಸಂಬರಿ, ಚಿತ್ರನ್ನ, ಮುದ್ದೆ ಸಾರು, ಅಗತ್ಯವಿದ್ದವರಿಗೆ ಮಾಂಸದ ಖಾದ್ಯವೂ ಸಿಗುತ್ತದೆ. ಹೊಟ್ಟೆ ತುಂಬಿಸಿಕೊಂಡು ಆಚೆ ಬಂದರೆ ಹಣ್ಣು ತರಕಾರಿಗಳ ವ್ಯಾಪಾರ ಮುಗಿಸಬಹುದು. ಮಧ್ಯಾಹ್ನದ ನಂತರ ಮನೆಗೆ ಮರಳಬಹುದು. ಒಂದಷ್ಟು ನೆನಪಿನ ಬುತ್ತಿ ತುಂಬಿಕೊಂಡು, ಚೀಲದಲ್ಲಿ ತರಕಾರಿ ತುಂಬಿಸಿಕೊಂಡು!

ಮಾವಿನ ಋತುವಿನಲ್ಲಿ ಹೋದರೆ ಮಾವನ್ನೂ ಕೊಂಡು ಬರಬಹುದು. ಯಾವುದಕ್ಕೂ ಒಂದು ಆಹ್ಲಾದಕರ ಅನುಭವ ಈ ಯಾತ್ರೆಯದ್ದು.

ಹೆಚ್ಚಿನ ಮಾಹಿತಿಗೆ:  7899986349 , 9148608669 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !