ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಲಕ್ಷದಿಂದ ಸಾವಿರಕ್ಕೆ ವಲಸೆ ಹಕ್ಕಿಗಳು

ಹಳೇ ಮೈಸೂರು ಭಾಗದಲ್ಲಿ ಕಡಿಮೆಯಾದ ಕಲರವ
Last Updated 29 ಜನವರಿ 2022, 19:45 IST
ಅಕ್ಷರ ಗಾತ್ರ

ಮೈಸೂರು: ಹಳೇ ಮೈಸೂರು ಭಾಗಕ್ಕೆ ಪ್ರತಿ ವರ್ಷ ಬಂದಿಳಿಯುತ್ತಿದ್ದ ವಲಸೆ ಹಕ್ಕಿಗಳು ಲಕ್ಷದಿಂದ ಸಾವಿರಕ್ಕಿಳಿದಿವೆ. ಕೆರೆ, ಕಟ್ಟೆಗಳ ಪರಿಸರದಲ್ಲಿ ಒಂದೂವರೆ ದಶಕದಿಂದ ನಡೆಯುತ್ತಿರುವ ಮಿತಿ ಮೀರಿದ ನಗರೀಕರಣ ಹಾಗೂ ಮೀನುಗಾರಿಕೆಯೇ ಕುಸಿತಕ್ಕೆ ಕಾರಣ.

ಪಕ್ಷಿಧಾಮಗಳಿಗೆ ಮಾದರಿಯಾಗಿದ್ದ ಶ್ರೀರಂಗಪಟ್ಟಣದ ರಂಗನತಿಟ್ಟು, ಮದ್ದೂರಿನ ಕೊಕ್ಕರೆ ಬೆಳ್ಳೂರಿನಲ್ಲಿ ಯುರೇಷ್ಯಾ, ಉತ್ತರ ಭಾರತ ಹಾಗೂ ಕರಾವಳಿ ತಟಗಳಿಂದ ಬರುವ ಹಕ್ಕಿಗಳಿಗಿಂತ ಸ್ಥಳೀಯ ಹಕ್ಕಿಗಳೇ ಹೆಚ್ಚಿವೆ. ನದಿಗಳ ಹಿನ್ನೀರು, ಕೆರೆ–ಕಟ್ಟೆಗಳಲ್ಲಿ 90ರ ದಶಕದಲ್ಲಿ ಪ್ರತಿ ವರ್ಷ 1.5 ಲಕ್ಷ ವಲಸೆ ಹಕ್ಕಿಗಳಿರುತ್ತಿದ್ದವು. ಈಗ 30 ಸಾವಿರದಷ್ಟು ಮಾತ್ರ ಹಕ್ಕಿಗಳು ಬರುತ್ತಿವೆ. ಹೀಗಾಗಿ ಮೂರು ತಿಂಗಳು ನಡೆಯುತ್ತಿದ್ದ ಹಕ್ಕಿಗಳ ಸಮೀಕ್ಷೆ ಕೆಲವೇ ದಿನಕ್ಕೆ ಮುಗಿಯುತ್ತಿದೆ.

ಕೊಕ್ಕರೆ ಬೆಳ್ಳೂರಿನಲ್ಲಿ ನೂರಾರು ಮಹಡಿ ಕಟ್ಟಡಗಳು ತಲೆಯೆತ್ತಿವೆ. ಪ್ರವಾಸೋದ್ಯಮಕ್ಕೆಂದು ನೂರಾರು ವರ್ಷದ ಹಳೆಯ ಆಲ, ಹುಣಸೆ, ಅರಳಿ ಮರಗಳನ್ನು ಕಡಿಯಲಾಗಿದೆ. ಹಕ್ಕಿಗೊಬ್ಬರದ ಜಾಗದಲ್ಲಿ ರಾಸಾಯನಿಕ ಗೊಬ್ಬರ ಬಂದಿದೆ. ಹೆಜ್ಜಾರ್ಲೆ (ಪೆಲಿಕನ್)–ಗ್ರಾಮಸ್ಥರ ನಡುವಿನ ಕರುಳುಬಳ್ಳಿಯ ಸಂಬಂಧವೂ ಕಳಚಿದೆ. ಪರಿಣಾಮ? ಐದು ವರ್ಷದ ಹಿಂದೆ ಅಲ್ಲಿ ಸುಮಾರು 800 ಹೆಜ್ಜಾರ್ಲೆಗಳಿದ್ದವು. ಈಗ 70ಕ್ಕೆ ಇಳಿದಿವೆ.

‘ನಾಲ್ಕರಿಂದ ಹತ್ತು ಕೆ.ಜಿ.ವರೆಗೂ ತೂಗುವ 250 ಹೆಜ್ಜಾರ್ಲೆಗಳಿಗೆ ಆಶ್ರಯ ನೀಡಿದ್ದ ಬೆಳ್ಳೂರಿನ ಆಲದಮರದ ಕೊಂಬೆಗಳನ್ನು ಕಡಿಯಲಾಯ್ತು. ಈಗ ಮರದಲ್ಲಿರುವುದು 10ರಿಂದ 20 ಹೆಜ್ಜಾರ್ಲೆ. ಜಂತುಹುಳು ಬಾಧೆಯಿಂದ ಮೂರ್ನಾಲ್ಕು ವರ್ಷದ ಹಿಂದೆ 200ಕ್ಕೂ ಹೆಚ್ಚು ಹೆಜ್ಜಾರ್ಲೆಗಳು ಮೃತಪಟ್ಟವು. ಈಗ ಹೆಚ್ಚು ಬರುತ್ತಿಲ್ಲ’ ಎನ್ನುತ್ತಾರೆ, ಮರದಿಂದ ಬಿದ್ದ ಮರಿ ಹಕ್ಕಿಗಳ ರಕ್ಷಣೆಯಲ್ಲಿ ತೊಡಗಿರುವ ರೈತ ಬಿ.ಲಿಂಗೇಗೌಡ.

‘ಶಿಂಷಾ ನದಿ, ಕೆರೆಗಳಿಗೆ ಮಲಿನ ನೀರು ಹೆಚ್ಚು ಸೇರುತ್ತಿದ್ದು, ಎರಡು ತಿಂಗಳಿಂದ 7 ಹೆಜ್ಜಾರ್ಲೆಗಳು ಮೃತಪಟ್ಟಿವೆ’ ಎಂದು ವಿಷಾದಿಸಿದರು.

‘ಬಂಗಾಳಕೊಲ್ಲಿಯ ಸುತ್ತ ವಾಸಿಸುವ ಹೆಜ್ಜಾರ್ಲೆ, ಬಣ್ಣದ ಕೊಕ್ಕರೆಗಳು ನವೆಂಬರ್‌ ವೇಳೆಗೆ ಬಂದು ಸಂತಾನೋತ್ಪತ್ತಿ ಮಾಡಿ ವಾಪಸಾಗುತ್ತವೆ. ಕೊಕ್ಕರೆ ಬೆಳ್ಳೂರಿನಲ್ಲಿ ಪಕ್ಷಿಗಳಿಗೆ ಜಿಪಿಎಸ್‌ ಟ್ಯಾಗ್‌ ಅಳವಡಿಸಲಾಗುತ್ತಿದ್ದು, ಅವುಗಳ ಚಲನೆ ಕುರಿತು ಅಧ್ಯಯನ ಆರಂಭಿಸಲಾಗಿದೆ’ ಎಂದು ಡಿಸಿಎಫ್‌ (ವನ್ಯಜೀವಿ) ವಿ.ಕರಿಕಾಳನ್ ತಿಳಿಸಿದರು.

ಯುರೇಷ್ಯಾದಿಂದ ಬರುತ್ತಿದ್ದ ವಲಸೆ ಹಕ್ಕಿಗಳ ಮೇಲೆ,ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಯುದ್ಧವೂ ಪರಿಣಾಮ ಬೀರಿದೆ. ಪಟ್ಟೆ ತಲೆ ಹೆಬ್ಬಾತು, ನಾರ್ದನ್ ಶೋವ್‌ಲರ್‌, ಗಾರ್ಗಾನಿ, ಮರಳು ಪೀಪಿಗಳು (ಸ್ಯಾಂಡ್‌ ಪೈಪರ್ಸ್) ಮೈಸೂರಿನ ಹದಿನಾರು, ಕಬಿನಿ ಹಿನ್ನೀರು, ಚಾಮರಾಜನಗರದ ಕುಂತೂರು, ಕೆಸ್ತೂರು, ಎರಯೂರು ಕೆರೆಗಳಲ್ಲಿ ಕಾಣಿಸುತ್ತವೆ.

ಹಾಸನದ ಹುಣಸಿನಕೆರೆ, ಸತ್ಯಮಂಗಲ ಕೆರೆ, ಹೇಮಾವತಿ ಹಿನ್ನೀರಿನಲ್ಲೂ ವಲಸೆ ಹಕ್ಕಿಗಳು ಕಡಿಮೆಯಾಗಿವೆ. ಹಿಂದೆ ಇಲ್ಲಿ ಹಕ್ಕಿ ಬೇಟೆಯೂ ನಡೆಯುತ್ತಿತ್ತು.

‘ಸದಾ ಕಾಲ ನೀರು ತುಂಬಿಸುವುದರಿಂದ ಮೈಸೂರು ಭಾಗದ ಕೆರೆಗಳ ನೈಸರ್ಗಿಕ ದಿನಚರಿಯೂ ಬದಲಾಗಿ, ವಲಸೆ ಹಕ್ಕಿಗಳು ತಮಿಳುನಾಡು, ಆಂಧ್ರ, ಕೇರಳದ ಕರಾವಳಿಯತ್ತ ಹೋಗುತ್ತಿವೆ’ ಎಂದು ಮೈಸೂರಿನ ಪಕ್ಷಿತಜ್ಞ, ಮ್ಯಾನ್‌ ಸಂಸ್ಥೆಯ ಕೆ.ಮನು ಹೇಳಿದರು.

-------

ರಂಗನತಿಟ್ಟಿನಲ್ಲಿ ಹೆಜ್ಜಾರ್ಲೆ‌ ಗುಂಪು

ಶ್ರೀರಂಗಪಟ್ಟಣ ಸಮೀಪವಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಸ್ಪೂನ್‌ ಬಿಲ್‌, ಓಪನ್‌ಬಿಲ್‌, ರಿವರ್ ಟರ್ನ್‌, ಸ್ಟೋನ್‌ ಫ್ಲವರ್‌, ನೈಟ್‌ ಹೆರೋನ್‌, ಗ್ರೇ ಹೆರೋನ್‌ ಸೇರಿ ಒಂದು ಸಾವಿರಕ್ಕೂ ಹೆಚ್ಚು ಪಕ್ಷಿಗಳು ಬಂದಿವೆ. ನಡುಗಡ್ಡೆಯಲ್ಲಿ ಹೆಜ್ಜಾರ್ಲೆಯ ದೊಡ್ಡ ಗುಂಪು ಕಾಣಿಸಿಕೊಂಡಿದೆ.

‘ಕೊಕ್ಕರೆ ಬೆಳ್ಳೂರಿನಲ್ಲಿ ಮರಗಳನ್ನು ಉಳಿಸಿಕೊಂಡಿದ್ದರೆ ಹೆಜ್ಜಾರ್ಲೆಗಳು ರಂಗನತಿಟ್ಟು, ಲಿಂಗಾಂಬುಧಿ ಕೆರೆಗಳಿಗೆ ಬರುತ್ತಿರಲಿಲ್ಲ. ನಡುಗಡ್ಡೆಗಳನ್ನು ಹೆಜ್ಜಾರ್ಲೆ ಆಕ್ರಮಿಸಿಕೊಂಡರೆ ಸ್ಥಳೀಯ ಹಕ್ಕಿಗಳಿಗೆ ಜಾಗವಿರುವುದಿಲ್ಲ. ಹೆಜ್ಜಾರ್ಲೆಯ ಗೂಡಿನ ತೂಕ, ಹಾಕುವ ಹಿಕ್ಕೆಯನ್ನು ನಡುಗಡ್ಡೆಯ ಮರಗಳು ತಾಳಿಕೊಳ್ಳುವುದಿಲ್ಲ. ಮುಂದೆ ಇಲ್ಲಿಯೂ ಹಕ್ಕಿಗಳು ಕಡಿಮೆಯಾಗಲಿವೆ’ ಎಂದು ಕೆ.ಮನು ಆತಂಕ ವ್ಯಕ್ತಪಡಿಸಿದರು.

--------

ಹಳೇ ಮೈಸೂರಿನಲ್ಲಿ ವಲಸೆ ಹಕ್ಕಿಗಳು

ವರ್ಷ;ಹಕ್ಕಿಗಳು

1991;1,84,190

2001;1,52,955

2011;34,551

2021;‌32,304

ಆಧಾರ: ಮ್ಯಾನ್‌ (ಮೈಸೂರು ಅಮೆಚೂರ್‌ ನ್ಯಾಚುರಲಿಸ್ಟ್ಸ್) ಹಾಗೂ ಮೈಸೂರು ನೇಚರ್‌ ಸಂಸ್ಥೆಯ ಸಮೀಕ್ಷೆ

(ಪೂರಕ ಮಾಹಿತಿ: ಮಂಡ್ಯ;ಎಂ.ಎನ್‌.ಯೋಗೇಶ್‌, ಹಾಸನ;ಕೆ.ಎಸ್‌.ಸುನೀಲ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT