ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್‌ ಮೋಹ; ಸದೃಢ ದೇಹ

Last Updated 3 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

‘ಸಿಕ್ಸ್‌ಪ್ಯಾಕ್’ ಈಗಿನ ಯುವಕರ ಮಂತ್ರವಾಗಿದೆ. ಅದರ ಜತೆಗೆ ಮಹಿಳೆಯರೂ ಫಿಟ್‌ನೆಸ್‌ಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಇದರ ಪ್ರಬಾವದಿಂದ ಪ್ರತಿ ನಗರಗಳಲ್ಲಿ ಜಿಮ್‌ಗಳ ಸಂಖ್ಯೆಯೂ ಹೆಚ್ಚುತ್ತಿವೆ.

ಇದಕ್ಕೆ ಕಲಬುರ್ಗಿಯೂ ಹೊರತಾಗಿಲ್ಲ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಇದು. ಇಲ್ಲಿ 25ಕ್ಕೂ ಹೆಚ್ಚು ಜಿಮ್‌ಗಳಿವೆ. ಇದರ ಆಧಾರದಲ್ಲಿ ಜನರಲ್ಲಿ ಫಿಟ್‌ನೆಸ್‌ ಬಗೆಗಿನ ಮೋಹವನ್ನು ಊಹಿಸಬಹುದು.

ಜಿಮ್‌ ಯುವಕರ ಕಸರತ್ತಿನ ತಾಣ. ಯುವತಿಯರು, ಕಾಲೇಜು ವಿದ್ಯಾರ್ಥಿನಿಯರು, ಮಧ್ಯಮ ವಯಸ್ಸಿನ ಮಹಿಳೆಯರು ಜಿಮ್ ಜತೆಗೆ ಏರೋಬಿಕ್ಸ್, ಪವರ್ ಯೋಗ, ಜುಂಬಾ ಕಲಿಕೆಗೆ ಆದ್ಯತೆ ನೀಡುತ್ತಾರೆ.

ಒಂದೂವರೆ ದಶಕದ ಹಿಂದೆ ಆರಂಭವಾದ ಜಿಮ್‌ನಿಂದ ಹಿಡಿದು, ಸ್ನ್ಯಾಪ್ ಫಿಟ್‌ನೆಸ್‌ನಂತಹ ಆಧುನಿಕ ಜಿಮ್‌ಗಳು ಸಹ ಇಲ್ಲಿವೆ. ಹಳೆಯ ಜಿಮ್‌ಗಳು ಯುವಕರ ಅಭಿರುಚಿಗೆ ತಕ್ಕಂತೆ ಆಧುನಿಕ ಉಪಕರಣಗಳನ್ನು ಅಳವಡಿಸಿದ್ದು, ಒಳಾಂಗಣ ವಿನ್ಯಾಸವನ್ನು ಬದಲಿಸಿಕೊಂಡು ಆಕರ್ಷಿಸುತ್ತಿವೆ.

ನಗರದಲ್ಲಿ ಇರುವ ಜಿಮ್‌ಗಳ ಪೈಕಿ ಸ್ಟ್ಯಾಂಡರ್ಡ್ ಜಿಮ್‌ ಹಳೆಯದು. 2000ನೇ ಸಾಲಿನಲ್ಲಿ ಅಬ್ದುಲ್‌ ಖದೀರ್ ಚುಹೆ ಇದನ್ನು ಆರಂಭಿಸಿದರು. ಕಳೆದ ಹತ್ತು ವರ್ಷಗಳಿಂದ ರಫೀಕ್ ಇದನ್ನು ನಡೆಸುತ್ತಿದ್ದಾರೆ. ಸದ್ಯ 350ಕ್ಕೂ ಹೆಚ್ಚು ಜನ ತರಬೇತಿ ಪಡೆಯುತ್ತಿದ್ದಾರೆ. ಅದರಲ್ಲಿ 90 ಮಹಿಳೆಯರು ಇರುವುದು ವಿಶೇಷ. ಈ ಜಿಮ್‌ಗಿಂತ ಎರಡು ವರ್ಷ ಮುಂಚೆ ಆರಂಭವಾದ ಬಿಲ್ಡೊ ಜಿಮ್‌ ದಶಕದ ಹಿಂದೆಯೇ ಮುಚ್ಚಿದೆ.

ಹವಾನಿಯಂತ್ರಿತ ವ್ಯವಸ್ಥೆ, ಪ್ರತ್ಯೇಕ ಲಾಕರ್‌, ಸ್ಟೀಮ್ ಬಾತ್‌, ಮಿನರಲ್ ವಾಟರ್‌ ಸೌಲಭ್ಯವನ್ನು ಜಿಮ್‌ನಲ್ಲಿ ಕಲ್ಪಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಅವಧಿಯನ್ನು ಸಹ ನಿಗದಿ ಮಾಡಲಾಗಿದೆ.

‘ಅಬ್ದುಲ್ ಖದೀರ್‌ ಅವರು ಕ್ರೀಡಾ ಸ್ಫೂರ್ತಿಯಿಂದ ಜಿಮ್‌ ಅರಂಭಿಸಿದರು. ಮೊದಮೊದಲು ಜನ ಅಷ್ಟಾಗಿ ಬರುತ್ತಿರಲಿಲ್ಲ. ಫಿಟ್‌ನೆಸ್ ಮಹತ್ವ ತಿಳಿದು ಕ್ರಮೇಣ ಜಿಮ್‌ನತ್ತ ಮುಖಮಾಡತೊಡಗಿದರು. ಈಗ ಫಿಟ್‌ನೆಸ್ ಬಗೆಗಿನ ಯುವಕರ ಮನೋಭಾವವೂ ಬದಲಾಗಿದೆ. ನ್ಯೂಟ್ರಿಷನ್, ಕಾರ್ಡಿಯೋ ಎಕ್ಸರ್‌ಸೈಸ್, ತೂಕ ಇಳಿಕೆ, ಆಹಾರ ಪದ್ಧತಿಯ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ’ ಎನ್ನುತ್ತಾರೆ ರಫೀಕ್.

ಯುಕವರು ಸದೃಢ ದೇಹ, ಸಿಕ್ಸ್‌ಪ್ಯಾಕ್‌ ಹೊಂದಲು ಬರುತ್ತಾರೆ. ಮಧ್ಯ ವಯಸ್ಸಿನರು ರಕ್ತದೊತ್ತಡ, ಮಧುಮೇಹ, ಮೊಣಕಾಲು ನೋವು, ಬೆನ್ನುನೋವು ನಿವಾರಣೆಗಾಗಿ ಕಸರತ್ತು ಮಾಡುತ್ತಾರೆ ಎಂಬುದು ತರಬೇತುದಾರರು ಆಗಿರುವ ಅವರ ವಿವರಣೆ.

ಕಳೆದ ಎರಡು ವರ್ಷಗಳಿಂದ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದೇನೆ. ಯಾವಾಗಲೂ ಫಿಟ್ ಆಗಿರಬೇಕು ಎಂಬುದು ನನ್ನ ಆಸೆ. ಹೀಗಾಗಿ ಯಾವತ್ತೂ ವರ್ಕೌಟ್‌ ತಪ್ಪಿಸಿಲ್ಲ. ಉತ್ತಮ ಸೌಲಭ್ಯಗಳಿರುವುದರಿಂದ ಈ ಜಿಮ್‌ ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ಮಲ್ಲಿಕಾರ್ಜುನ್‌.

ಯಾವುದೇ ಸಲಕರಣೆಗಳಿಲ್ಲದೆ, ಮನರಂಜನೆ ಮೂಲಕ ಫಿಟ್ ಆಗಲು ಏರೋಬಿಕ್ಸ್‌, ಜುಂಬಾ ತುಂಬಾ ಪರಿಣಾಮಕಾರಿ.

ನಗರದಲ್ಲಿ ಮೊದಲು ಏರೋಬಿಕ್ಸ್‌, ಜುಂಬಾ ತರಬೇತಿ ಆರಂಭಿಸಿದ್ದು ಡಿಜೆ ಡಾನ್ಸ್ ಅಂಡ್ ಫಿಟ್‌ನೆಸ್ ಅಕಾಡೆಮಿಯ ದಯಾನಂದ ಹಿರೇಮಠ.

ನಮ್ಮ ಭಾಗದಲ್ಲಿ ಏರೋಬಿಕ್ಸ್‌ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಆರಂಭದಲ್ಲಿ ಕೇವಲ ಮೂವರು ಮಹಿಳೆಯರು ಮಾತ್ರ ತರಬೇತಿ ಪಡೆಯುತ್ತಿದ್ದರು. ನಿರಂತರವಾಗಿ ಅದರ ಮಹತ್ವವನ್ನು ತಿಳಿಸಲಾಯಿತು. ಈಗ 50ಕ್ಕೂ ಹೆಚ್ಚು ಜನ ಇದ್ದಾರೆ ಎಂದು ಹೇಳಿದರು.

ಪುಣೆಯಲ್ಲಿ ಫಿಟ್‌ನೆಸ್‌ ತರಬೇತಿ ಪಡೆದಿರುವ ಅವರು, ಪವರ್‌ ಯೋಗ, ಸ್ಟ್ರಾಂಗ್ ಜುಂಬಾ, ಬಾಲಿವುಡ್‌ ಸ್ಟೈಲ್ ಏರೋಬಿಕ್ಸ್‌ ತರಬೇತಿಯನ್ನೂ ನೀಡುತ್ತಾರೆ. ಕೊಬ್ಬು ಕರಗಿಸಲು, ತೂಕ ಇಳಿಸಲು, ಸದಾ ಫಿಟ್ ಆಗಿರಲು ಬಹುತೇಕರು ಇದರ ಮೊರೆ ಹೋಗುತ್ತಾರೆ ಎಂಬುದು ಅವರ ಮಾಹಿತಿ.

ಎರಡು ವರ್ಷಗಳಿಂದ ಏರೋಬಿಕ್ಸ್ ತರಬೇತಿ ಪಡೆಯುತ್ತಿದ್ದೇವೆ. ಬೆಳಿಗ್ಗೆ ಕೆಲವು ಸಮಯ ಅಭ್ಯಾಸ ಮಾಡಿದರೆ ಇಡೀ ದಿನ ಉಲ್ಲಾಸದಿಂದ ಇರಬಹುದು. ಅಲ್ಲದೆ, ಮುಖದ ಹೊಳಪೂ ಹೆಚ್ಚುತ್ತದೆ. ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಗೃಹಿಣಿಯರಾದ ಜಮುನಾ, ಪ್ರತಿಮಾ, ಮಂದಾಕಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT