ಬುಧವಾರ, ಜೂನ್ 3, 2020
27 °C
ಕನ್ನಡನಾಡಿನ ಚಳಿಗಾಲದ ಪ್ರವಾಸಿ ತಾಣಗಳು

ಚಾರಣಿಗರ ಸ್ವರ್ಗ ಕಳವಾರ ಬೆಟ್ಟ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

ಪಾಪಾಗ್ನಿ ಮಠದ ಬಳಿ ಹೋದಾಗ ಇನ್ನೂ ಮಬ್ಬುಗತ್ತಲು. ಚಳಿಗೆ ಸ್ವೆಟರ್ ಧರಿಸಿ ಮಫ್ಲರ್ ಸುತ್ತಿಕೊಂಡಿದ್ದರೂ ಮೈನಡುಗುತ್ತಿತ್ತು. ‘ಬೆಟ್ಟ ಏರುತ್ತಾ ಹೋದಂತೆ ಮೈಬಿಸಿಯಾಗುತ್ತದೆ, ಬನ್ನಿ ಬೇಗ ಹೋಗೋಣ ಸೂರ್ಯೋದಯಕ್ಕೆ ಮುನ್ನವೇ ನಾವು ಬೆಟ್ಟದ ಮೇಲಿರಬೇಕು’ ಎಂದು ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಹುರಿದುಂಬಿಸಿದರು. ನಮ್ಮ ಮುಂದೊಬ್ಬ ಮಾರ್ಗದರ್ಶಿ ನಡೆಯುತ್ತಿದ್ದ. ಅವನ ಹಿಂದೆ ನಾವು. ‘ಬೇಗಬೇಗ ಹೋದರೆ ಒಂದರಿಂದ ಒಂದೂವರೆ ಗಂಟೆ ಸಮಯದಲ್ಲಿ ಬೆಟ್ಟ ಏರಬಹುದು’ ಎಂದು ಶ್ರೀನಿವಾಸ್ ಹೇಳಿದಾಗ, ನಮ್ಮ ಹಿಂದಿದ್ದವರೆಲ್ಲ, ‘ನಾವೆಲ್ಲಾ ನಿಮ್ಮಂತೆ ಕ್ರೀಡಾಪಟುಗಳಲ್ಲ, ಸ್ವಲ್ಪ ನಿಧಾನಿಸಿ’ ಎಂದರು.

ನಾವು ಹತ್ತಲು ಹೊರಟಿದ್ದುದು ಸ್ಕಂದಗಿರಿಯನ್ನು. ಅದಕ್ಕೆ ಕಳವಾರಬೆಟ್ಟ ಎಂದೂ ಕರೆಯುತ್ತಾರೆ. ಬೆಂಗಳೂರಿನಿಂದ 70 ಕಿ.ಮೀ ದೂರವಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ಚಳಿಗಾಲದಲ್ಲಿ ಇದು ಚಾರಣಿಗರ ಸ್ವರ್ಗವಾಗಿರುತ್ತದೆ.

ಟಾರ್ಚ್ ಬೆಳಕಿನಲ್ಲಿ ಹುಲ್ಲು, ಗಿಡಗಂಟೆಗಳು, ಮುಳ್ಳು ಪೊದೆಗಳ ನಡುವಿನ ಅಸ್ಪಷ್ಟ ದಾರಿಯಲ್ಲಿ ಸಾಗುತ್ತಿದ್ದೆವು. ಸ್ವಲ್ಪ ಹೊತ್ತಿಗೆ ಮಂದ ಬೆಳಕು ಮೂಡಿತು. ವೇಗದ ನಡಿಗೆಯಿಂದ ಮೈಚಳಿ ಕಡಿಮೆಯಾಯಿತು. ಬೀಸುವ ಗಾಳಿ ಹೊತ್ತು ತರುವ ಗಿಡಮರಗಳ ಪರಿಮಳ ಮನಸ್ಸನ್ನು ಪ್ರಫುಲ್ಲಗೊಳಿಸಿತ್ತು. ಬೆಟ್ಟದ ಮೇಲೆ ಏರುತ್ತಾ ಹೋದಂತೆ ಬೆಳಕೂ ಆಗುತ್ತಿತ್ತು. ಮಂಜು ಪಾರದರ್ಶಕ ತೆರೆ ಎಳೆದಂತೆ ಮುಸುಕಿದ್ದು, ಸುತ್ತಲಿನ ಹಸಿರು ಕಂಡೂ ಕಾಣದಂತೆ ನಿಗೂಢ ಲೋಕದ ಅನುಭವವನ್ನು ಕೊಡುತ್ತಿತ್ತು.

ಬೆಟ್ಟದ ತುದಿಗೆ ಬರುವ ಹೊತ್ತಿಗೆ ಸಾಕಷ್ಟು ಬೆಳಕು ಹರಿದಿತ್ತು. ಸೂರ್ಯೋದಯಕ್ಕೆ ಕ್ಷಣಗಣನೆ. ಕಣ್ಣು ಹಾಯಿಸಿದೆಡೆಯೆಲ್ಲ ಹತ್ತಿಯಂತೆ ಹಾಸಿರುವ ಮೋಡಗಳು. ಎಲ್ಲೆಡೆ ನಾವು ತಲೆ ಎತ್ತಿ ಮೋಡಗಳನ್ನು ನೋಡಿದರೆ ಇಲ್ಲಿ ತಲೆ ತಗ್ಗಿಸಿ ನೋಡುತ್ತಿದ್ದೆವು. ಈ ವಿಶಿಷ್ಟ ಅನುಭವ ಬೇರೆಲ್ಲೂ ಸಿಗದು. ಎಲ್ಲರೂ ಸೂರ್ಯ ಉದಯಿಸುವ ದಿಕ್ಕಿನೆಡೆ ನೋಡತೊಡಗಿದೆವು. ಸೂರ್ಯ ಇಣುಕುತ್ತಿದ್ದಂತೆ, ಮೈ ಮರೆತು ‘ಹೋ...’ ಎಂದು ಕೂಗಿದೆವು. ಕಿರಣಗಳು ವಿಸ್ತಾರವಾಗುತ್ತಲೇ ಮೋಡಗಳಿಗೆ ಹೊಂಬಣ್ಣದ ಲೇಪನವಾಯಿತು. ಅಪರೂಪದ ದೃಶ್ಯ ವೈಭದ ಅನಾವರಣವಾಯಿತು. ನಮ್ಮನ್ನು ಸ್ಪರ್ಶಿಸುತ್ತಾ ಸಾಗುವ ಮೋಡಗಳೊಂದಿಗೆ ಲೀನವಾಗಿ ನಮ್ಮನ್ನೇ ನಾವು ಮರೆತೆವು.

ಹಲವು ವರ್ಷಗಳ ಕಾಲ ಎಲೆಮರೆಯ ಕಾಯಿಯಂತಿದ್ದ ಕಳವಾರಬೆಟ್ಟ ಈಗ ಚಾರಣಿಗರ ಸ್ವರ್ಗವಾಗಿದೆ. ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಜತೆಗೂಡಿ ಚಾರಣಕ್ಕೆ ಅಧಿಕೃತ ಚಾಲನೆ ನೀಡಿವೆ. ಕಳವಾರ ಗ್ರಾಮದ ಬಳಿಯ ಪಾಪಾಗ್ನಿ ಮಠದ ಹಿಂದೆ ಅರಣ್ಯ ಇಲಾಖೆ ವಿಚಾರಣಾ ಕೇಂದ್ರವನ್ನು ತೆರೆದು ಅಲ್ಲಿ ಮಾರ್ಗದರ್ಶಕರನ್ನು ನಿಯೋಜಿಸಿದೆ. ಅಲ್ಲಿ ಮಾರ್ಗದರ್ಶಕರ ಸಹಾಯ ಪಡೆದು ಸುಮಾರು 3 ಕಿ.ಮೀ ಚಾರಣ ಮಾಡಬೇಕು. ಚಾರಣಕ್ಕೆ ಬೆಳಗ್ಗೆ 5 ರಿಂದ ಸಂಜೆ 5 ಗಂಟೆಯವರೆಗೆ ಅವಕಾಶವಿದೆ. ಆನ್ ಲೈನ್ ಬುಕ್ಕಿಂಗ್ ಮಾಡಿಕೊಂಡು ಬರುವ ಚಾರಣಿಗರನ್ನು ತಂಡಗಳಾಗಿ ವಿಂಗಡಿಸಿ ಪ್ರತಿ ತಂಡವನ್ನೂ ಒಬ್ಬೊಬ್ಬ ಮಾರ್ಗದರ್ಶಕರು ಮುನ್ನಡೆಸುತ್ತಾರೆ.

ಮಠದ ಹಿಂಬದಿಯಿಂದ ನಡಿಗೆ ಪ್ರಾರಂಭಿಸಿದರೆ ಬೆಟ್ಟದ ತುದಿ ತಲುಪಲು ಕನಿಷ್ಠ 2 ಗಂಟೆ ಬೇಕು. ಕಾಲುದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ಗಿಡಗಂಟಿಗಳಿದ್ದು, ಅಲ್ಲಲ್ಲಿ ಸಿಗುವ ಬಂಡೆಗಲ್ಲುಗಳ ಮೇಲೆ ಕುಳಿತು ವಿರಮಿಸುತ್ತಾ ಬೆಟ್ಟ ಹತ್ತಬಹುದು.

ಬೆಟ್ಟದ ಮೇಲೆ ಕೋಟೆ, ದೇವಸ್ಥಾನಗಳ ಅವಶೇಷಗಳಿವೆ. 1809ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಬ್ರಿಟಿಷ್ ಜನರಲ್ ಜೇಮ್ಸ್‌ವೆಲ್ಷ್‌ ತಮ್ಮ ಪುಸ್ತಕದಲ್ಲಿ ಈ ಬೆಟ್ಟವನ್ನು ಕುರ್ಮುಲ್‌ದುರ್ಗ ಅಥವಾ ಕುರ್ನಾಲಾ ಎಂದು ಕರೆದಿದ್ದಾರೆ. ಸ್ಥಳೀಯರು ಸ್ಕಂದಗಿರಿ, ಕಳವಾರದುರ್ಗ ಅಥವಾ ಕಳವಾರ ಬೆಟ್ಟ ಎಂದು ಕರೆಯುತ್ತಾರೆ.

ಸೂರ್ಯೋದಯದ ಸುಂದರ ದೃಶ್ಯ ಮತ್ತು ಹಾಲ್ಗಡಲಿನಂತೆ ಕಾಣುವ ಮೋಡಗಳನ್ನು ನೋಡಲು ಬೆಳಗ್ಗೆಯೇ ಬರುವುದು ಉತ್ತಮ.

***

ಹೋಗುವ ಮುನ್ನ ನೆನಪಿಡಿ

* ವರ್ಷಪೂರ್ತಿ ಕಳವಾರಬೆಟ್ಟದ ಚಾರಣ ಮಾಡಬಹುದು. ಮಳೆಗಾಲದ ನಂತರ ಸುತ್ತಣ ಪರಿಸರ ಹಸಿರಾಗಿರುತ್ತದೆ.

* ಅಲ್ಲಿ ಸುತ್ತಮುತ್ತ ತಿನ್ನಲು ಏನೂ ಸಿಗದು. ಊಟೋಪಚಾರದ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಬಾಟಲಿ, ಬಿಸ್ಕತ್, ತಿನಿಸು, ಊರುಗೋಲು ಇದ್ದರೆ ಉತ್ತಮ.

* ಸಮೂಹ ಚಾರಣ ಒಳ್ಳೆಯದು.

* ಸ್ಕಂದಗಿರಿ(ಕಳವಾರಬೆಟ್ಟ) ಚಾರಣಕ್ಕೆ ಬರುವವರು ಮುಂಚಿತವಾಗಿ ಪ್ರವಾಸೋದ್ಯಮ ಇಲಾಖೆಯ https://myecotrip.com/trailDetail/3/Skandagiri ಜಾಲತಾಣದ ಮೂಲಕ ಆನ್ ಲೈನ್ ಬುಕ್ಕಿಂಗ್ ಮಾಡಿಕೊಳ್ಳಬೇಕು. ತಲಾ ₹ 250 ಪ್ರವೇಶ ಶುಲ್ಕವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು