ಭಾನುವಾರ, ಸೆಪ್ಟೆಂಬರ್ 19, 2021
31 °C

ಉತ್ಸಾಹಪೂರ್ಣ ಚಿನ್ನ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆಯುವ ಮೂಗುನತ್ತು, ಕೈಯಲ್ಲಿ ಮಿರಿಮಿರಿ ಎನ್ನುವ ಕೈಬಳೆ, ಕೊರಳಲ್ಲಿ ಆಗಲೇ ವಿರಾಜಮಾನವಾಗಿರುವ ನೆಕ್ಲೆಸ್. ಯಾವುದನ್ನು ಕೊಳ್ಳುವುದು ಯಾವುದನ್ನು ಬಿಡುವುದು ಎಂಬ ಗೊಂದಲದಲ್ಲಿ ಆ ಮಹಿಳೆ. ಹೌದು, ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ಮತ್ತೆ ಬಂದಿದೆ. ಚಿನ್ನದ ಹಬ್ಬ ಎಂದೇ ಹೆಸರಾಗಿರುವ ಅಕ್ಷಯ ತೃತೀಯ ಇದೇ ಮಂಗಳವಾರ ಮಂಗಳ ಹೊತ್ತು ತರುತ್ತದೆ ಎಂಬ ನಂಬಿಕೆಯಿಂದ ಜನರು ಆಭರಣದ ಅಂಗಡಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ನಗರದ ಬಹುತೇಕ ಆಭರಣ ಮಳಿಗೆಗಳು ಈಗಾಗಲೇ ಗಿಜಿಗುಡುತ್ತಿವೆ. ಅಕ್ಷಯ ತೃತೀಯ ದಿನದಂದು ಕಾಲಿಡಲು ಜಾಗವಿಲ್ಲದ ಸ್ಥಿತಿ ಇರಲಿದೆ ಎನ್ನುತ್ತಾರೆ ನವರತನ್‌ ಜ್ಯುವೆಲರ್ಸ್‌ ಸಿಬ್ಬಂದಿ. ಹೀಗಾಗಿ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಒಂದು ವಾರದಿಂದಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. 

ತಮಗಾಗಿ ಖರೀದಿಸುವವರು, ಆತ್ಮೀಯರಿಗೆ ಉಡುಗೊರೆ ನೀಡುವವರು, ಮದುವೆ ಸಮಾರಂಭಕ್ಕೆ ಚಿನ್ನ ಕೊಳ್ಳುವವರು ಸೇರಿದಂತೆ ಎಲ್ಲ ವರ್ಗದ ಜನರೂ ಹಳದಿ ಲೋಹದ ಮೊರೆ ಹೋಗಿದ್ದಾರೆ. ಅಕ್ಷಯ ತೃತೀಯಕ್ಕೆಂದೇ ಬಗೆಬಗೆಯ ಕಲೆಕ್ಷನ್‌ಗಳನ್ನೂ ಚಿನ್ನಾಭರಣ ಅಂಗಡಿಯವರು ಪರಿಚಯಿಸಿದ್ದಾರೆ. ಸ್ಟಡ್, ರಿಂಗ್, ಚಿನ್ನದ ನಾಣ್ಯ, ಕೈಬಳೆ ಮೊದಲಾದ ಆಭರಣಗಳ ಹೊಸ ಹೊಸ ನಮೂನೆಗಳನ್ನು ಮಾರಾಟಕ್ಕೆ ಇರಿಸಿದ್ದಾರೆ. 

ಆಫರ್.. ಆಫರ್..

ಕನಿಷ್ಟ ಕಿವಿಯೋಲೆಯನ್ನಾದರೂ ಖರೀದಿಸಿದರೆ ಸಾಕು ಎನ್ನುವವರಿಂದ ಹಿಡಿದು, ದುಬಾರಿ ಆ್ಯಂಟಿಕ್ ಜ್ಯುವೆಲ್ಸ್ ಮನೆಗೊಯ್ಯುವವರೂ ಈ ಬಾರಿ ಅಕ್ಷಯ ತೃತೀಯಕ್ಕಾಗಿ ಕಾಯುತ್ತಿದ್ದಾರೆ. ಇವರಿಗಾಗಿ ಬಗೆಬಗೆಯ ಆಫರ್‌ಗಳನ್ನೂ ವಿವಿಧ ಅಂಗಡಿಗಳು ನೀಡುತ್ತಿವೆ. ₹50 ಸಾವಿರ ಮೌಲ್ಯದ ಆಭರಣ ಖರೀದಿಗೆ 200 ಮಿಲಿಗ್ರಾಂ ತೂಕದ ಚಿನ್ನದ ನಾಣ್ಯ, ಅಷ್ಟೇ ಮೌಲ್ಯದ ವಜ್ರದ ಆಭರಣ ಖರೀದಿಗೆ 1 ಗ್ರಾಂ ಚಿನ್ನದ ನಾಣ್ಯವನ್ನು ಎಂ.ಜಿ.ರಸ್ತೆಯ ಜೋಯಾಲುಕ್ಕಾಸ್ ಮಳಿಗೆಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಮೇ 8ರವರೆಗೆ ಈ ಆಫರ್ ಚಾಲ್ತಿಯಲ್ಲಿದೆ. ಇಲ್ಲಿ ಎಸ್‌ಬಿಐ ಕಾರ್ಡ್ ಬಳಸಿ ₹25 ಸಾವಿರ ಪಾವತಿಸಿದರೆ ₹2,500 ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಇದೇ 7ರವರೆಗೆ ಇದು ಅನ್ವಯ. 

ಜಿಎಸ್‌ಟಿ ಹೊರೆಗೆ ಮದ್ದು 

ಜಿಎಸ್‌ಟಿಯಿಂದ ಜನರು ಆಭರಣಗಳ ಅಂಗಡಿ ಕಡೆಗೆ ಅಷ್ಟಾಗಿ ಬರಲಿಕ್ಕಿಲ್ಲ ಎಂಬ ಮಾತು ಸುಳ್ಳಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲೇ ಚಿನ್ನ, ಬೆಳ್ಳಿ ಆಭರಣ ಕೊಳ್ಳಲು ಮುಗಿಬೀಳುತ್ತಿದ್ದಾರೆ. ಆಭರಣಗಳ ಮೇಲೆ ಶೇ 3ರಷ್ಟು ಜಿಎಸ್‌ಟಿ ಇದೆ. ಆದರೆ ಜನರ ಉತ್ಸಾಹಕ್ಕೇನೂ ಕೊರತೆಯಾಗಿಲ್ಲ ಎನ್ನುತ್ತಾರೆ ಮಳಿಗೆಯೊಂದರ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು. ಜಿಎಸ್‌ಟಿ ಹೊರೆಯನ್ನು ತಗ್ಗಿಸಲು ವೇಸ್ಟೇಜ್‌ನಲ್ಲಿ ರಿಯಾಯಿತಿ ನೀಡುವ ಮೂಲಕ ಗ್ರಾಹಕಸ್ನೇಹಿ ವಾತಾವರಣ ನಿರ್ಮಿಸಲಾಗಿದೆ. 

ಪಾವತಿಗೆ ಹತ್ತಾರು ದಾರಿ 

ನಗದು ರಹಿತ ವ್ಯವಹಾರಕ್ಕೆ ಜ್ಯುವೆಲರ್ಸ್ ಮಾಲೀಕರು ಆದ್ಯತೆ ನೀಡುತ್ತಿದ್ದಾರೆ. ₹2 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ಆಭರಣಗಳನ್ನು ಖರೀದಿ ಮಾಡಿದರೆ ಪ್ಯಾನ್ ಸಂಖ್ಯೆ ಕಡ್ಡಾಯವಾಗಿ ನೀಡಬೇಕಿದೆ. ನಗದು ನೀಡಿ ಆಭರಣ ಖರೀದಿಗಿಂತ ಕಾರ್ಡ್‌ ಬಳಸುವಂತೆ ಅಂಗಡಿಯವರು ಸಲಹೆ ನೀಡುತ್ತಾರೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಗೂಗಲ್ ಪೇ, ಆರ್‌ಟಿಜಿಎಸ್‌ ಮೂಲಕವೂ ಸುಲಭವಾಗಿ ಪಾವತಿ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು