ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ನಿಲ್ಲದ ಹಣ ವಸೂಲಿ– ನೀಡದ ಮೂಲಸೌಲಭ್ಯ
ಆಳ–ಅಗಲ: ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ನಿಲ್ಲದ ಹಣ ವಸೂಲಿ– ನೀಡದ ಮೂಲಸೌಲಭ್ಯ
31 ರಾಷ್ಟ್ರೀಯ ಹೆದ್ಧಾರಿಗಳ 41 ಟೋಲ್‌ ಘಟಕಗಳನ್ನು ಪರಿಶೀಲಿಸಿದ ಸಿಎಜಿ
Published 16 ಆಗಸ್ಟ್ 2023, 21:59 IST
Last Updated 16 ಆಗಸ್ಟ್ 2023, 21:59 IST
ಅಕ್ಷರ ಗಾತ್ರ

ಮುರಿದು ಬಿದ್ದಿರುವ ಕಮೋಡ್‌ಗಳು. ಕೆಲವು ಕಡೆ ಶೌಚಾಲಯವೇ ಇಲ್ಲ. ಒಂದು ವೇಳೆ ಇವೆರಡೂ ಇದೆ ಎಂದಿಟ್ಟುಕೊಳ್ಳೋಣ. ಶೌಚಾಲಯದ ಬಾಗಿಲು ತೆರೆಯದೆಯೇ ಹಲವು ವರ್ಷಗಳಾಗಿವೆ. ಇದು ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಘಟಕಗಳಲ್ಲಿ ಇರುವ ಶೌಚಾಲಯಗಳ ಸ್ಥಿತಿ. ಎಲ್ಲ ಟೋಲ್‌ ಘಟಕಗಳಲ್ಲೂ ‘ಹೈವೇ ನೆಸ್ಟ್‌ ಮಿನಿ’ ಇರಬೇಕು ಎಂಬ ನಿಯಮ ಇದೆ ನಿಜ. ಆದರೆ, ಕೆಲವು ಕಡೆಗಳಲ್ಲಂತೂ ನಿಜದಲ್ಲಿ ‘ನೆಸ್ಟ್‌’ ರೀತಿಯಲ್ಲಿಯೇ ವ್ಯವಸ್ಥೆ ಇದೆ. ಕೆಲವು ಕಡೆ ‘ನೆಸ್ಟ್‌’ನ ಚಾವಣಿ ಬಿದ್ದೇ ಹೋಗಿದೆ. ಟೋಲ್‌ಗಳಲ್ಲಿ ಕಡ್ಡಾಯವಾಗಿ ಆಂಬುಲೆನ್ಸ್‌ ವ್ಯವಸ್ಥೆ ಇರಬೇಕು. ಆದರೆ, ಈ ಸೌಲಭ್ಯವೂ ಉಪಯೋಗಕ್ಕೆ ಇಲ್ಲ. ಅದು ಕೇವಲ ಲಭ್ಯವಿದೆಯಷ್ಟೇ. ಅಪಘಾತಗಳು ಸಂಭವಿಸಿದರೆ ಅಥವಾ ಮತ್ಯಾವುದೋ ತುರ್ತು ಕಾರ್ಯಕ್ಕಾಗಿ ಇರಬೇಕಾದ ಗಸ್ತು ವಾಹನದ ಸ್ಥಿತಿ ನೋಡಿದರೆ, ಸುಸ್ತು ಆಗುವಂತಿದೆ. ವಾಹನದ ಸೀಟುಗಳು ಕಿತ್ತು ಹೋಗಿವೆ. ನಮಗೊಂದೇ ಅಲ್ಲ, ಗಸ್ತು ವಾಹನಕ್ಕೂ ತಿರುಗಾಡಿ ತಿರುಗಾಡಿ ಸುಸ್ತು ಆದಂತಿದೆ.

ಸಿಎಜಿ ಸಿದ್ಧಪಡಿಸಿರುವ ‘ದಕ್ಷಿಣ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಘಟಕಗಳ ನಿರ್ವಹಣೆ’ ವರದಿಯಲ್ಲಿ ಹೀಗೆ ಕೊರತೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಉತ್ತಮವಾದ ಹೆದ್ದಾರಿ, ತಲುಪಬೇಕಿರುವ ಊರುಗಳಿಗೆ ವೇಗವಾಗಿ ತಲುಪುವ ಅನುಕೂಲವೇನೋ ಆಗಿದೆ. ಆದರೆ, ರಸ್ತೆಯೊಂದನ್ನು ನಿರ್ವಹಿಸಿದರೆ ಸಾಕೆ? ಎಂಬ ಪ್ರಶ್ನೆ ಉದ್ಭವಿಸದೇ ಇರದು. ಸರ್ಕಾರವೇ ನೀಡಿರುವ ಮಾರ್ಗಸೂಚಿ ಅನ್ವಯ ರಸ್ತೆಯನ್ನು ನಿರ್ವಹಿಸಿದರೆ ಸಾಲುವುದಿಲ್ಲ. ಜನರಿಗೆ ಅಗತ್ಯ ಇರುವ ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಹಲವು ಸೌಲಭ್ಯಗಳನ್ನು ಆಗುಮಾಡುವುದೂ ಇದೇ ಕಂಪೆನಿಗಳ ಕರ್ತವ್ಯ. ಟೋಲ್‌ ಸಂಗ್ರಹ ಮಾಡುವಾಗ ಮಾತ್ರ ನಿರ್ವಹಣೆ ಸೇವೆಯನ್ನು ಸೇರಿ ಹಣ ವಸೂಲಿ ಮಾಡಲಾಗುತ್ತದೆ. ಆದರೆ, ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಜನರಿಗೆ ನೀಡಲೇಬೇಕಿರುವ ಕೆಲವು ಮೂಲಸೌಲಭ್ಯಗಳ ಕುರಿತು ದಕ್ಷಿಣ ಭಾರತದ 37 ರಾಷ್ಟ್ರೀಯ ಹೆದ್ದಾರಿಗಳ, ಒಟ್ಟು 41 ಟೋಲ್‌ ಘಟಕಗಳನ್ನು ಪರಿಶೀಲಿಸಿ ಸಿಎಜಿ ವರದಿ ಮಾಡಿದ್ದು, ಇಂಥ ಮೂಲಸೌಲಭ್ಯಗಳು ಇಲ್ಲದಿರುವ ಬಗ್ಗೆ ಬೆಳಕು ಚೆಲ್ಲಿದೆ.

ಉತ್ತರಿಸದ ಪ್ರಾಧಿಕಾರ ಮತ್ತು ಸಚಿವಾಲಯ: ಟೋಲ್‌ ಘಟಕಗಳಲ್ಲಿ ಮೂಲಸೌಕರ್ಯ ಇಲ್ಲದ ಕುರಿತು ಸಿಎಜಿ, ಹಲವು ಸ್ಪಷ್ಟೀಕರಣಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವನ್ನು ಕೇಳಿತ್ತು. ಆದರೆ, ಪ್ರಾಧಿಕಾರ ಮತ್ತು ಸಚಿವಾಲಯ ಸಿಎಜಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿಲ್ಲ.

‘ಸ್ವಚ್ಛ ಭಾರತ ಅಭಿಯಾನ’ದ ಅಡಿ ಶೌಚಾಲಯ ನಿರ್ಮಾಣ ಇಲ್ಲ

ಟೋಲ್‌ ಘಟಕದ ರಸ್ತೆಯ ಎರಡೂ ಬದಿಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ಕಡ್ಡಾಯ. ಟೋಲ್‌ ಘಟಕಗಳಲ್ಲಿ ಇರುವ ಆಡಳಿತ ಬ್ಲಾಕ್‌ಗಳಲ್ಲಿರುವ ಶೌಚಾಲಯವನ್ನು ಈ ಪಟ್ಟಿಗೆ ಸೇರಿಸುವಂತಿಲ್ಲ. ಅವೇ ಬೇರೆ, ‘ಸ್ವಚ್ಛ ಭಾರತ ಅಭಿಯಾನ’ದ ಅಡಿ ನಿರ್ಮಿಸಬೇಕಾಗಿರುವ ಶೌಚಾಲಯದ ಕಟ್ಟಡಗಳೇ ಬೇರೆ. ಹೀಗೆಂದು ಸಚಿವಾಲಯ ಹಾಗೂ ಪ್ರಾಧಿಕಾರ ಹೇಳಿವೆ. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಿರ್ಮಿಸಲಾಗಿರುವ ಶೌಚಾಲಯವನ್ನು ನಿರ್ವಹಿಸುವುದು, ಅವುಗಳು 24 ಗಂಟೆಯೂ ಕೆಲಸ ಮಾಡುವಂತೆ ನೋಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಜಾಗದ ಸಮಸ್ಯೆ: ಕೆಲವು ಟೋಲ್‌ ಘಟಕಗಳಲ್ಲಿ ಜಾಗದ ಸಮಸ್ಯೆ ಇದೆ. ಆ ಕಾರಣದಿಂದಾಗಿ ಶೌಚಾಲಯದ ನಿರ್ಮಾಣ ಸಾಧ್ಯವಾಗಿಲ್ಲ. ಕೆಲವು ಟೋಲ್‌ ಘಟಕಗಳಲ್ಲಿ ಶೌಚಾಲಯ ನಿರ್ಮಿಸಲು ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಪ್ರಾಧಿಕಾರ ಹಾಗೂ ಸಚಿವಾಲಯ ಉತ್ತರಿಸಿದೆ. ಆದರೆ, ಈ ಉತ್ತರವನ್ನು ಸಿಎಜಿ ಒಪ್ಪಿಕೊಂಡಿಲ್ಲ. ಜೊತೆಗೆ, 14 ಟೋಲ್‌ ಘಟಕಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಪ್ರಾಧಿಕಾರ ಹಾಗೂ ಸಚಿವಾಲಯ ಉತ್ತರಿಸಿಲ್ಲ. ಪ್ರಾಧಿಕಾರದ ಯೋಜನೆ ಜಾರಿ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.

ಶಿಫಾರಸು: ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ, ನಿರ್ಮಾಣದ ಗತಿ, ಗುತ್ತಿಗೆ ನೀಡುವ ಕುರಿತು ಪ್ರಾಧಿಕಾರವು ಗಮನಹರಿಸಬೇಕು. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಶೌಚಾಲಯ ನಿರ್ಮಿಸಿ ಸಾರ್ವಜನಿಕರಿಗೆ ಅದರ ಉಪಯೋಗ ದೊರೆಯುವಂತೆ ನೋಡಿಕೊಳ್ಳಬೇಕು.

ಕಾರ್ಯ ನಿರ್ವಹಿಸದ ಹೈವೇ ನೆಸ್ಟ್‌ ಮಿನಿ

ಟೋಲ್‌ ಘಟಕಗಳ ಇಕ್ಕೆಲಗಳಲ್ಲಿ ಹೈವೇ ನೆಸ್ಟ್‌ ಮಿನಿಯನ್ನು ನಿರ್ಮಿಸಬೇಕು ಎಂದು ಪ್ರಾಧಿಕಾರವು 2017ರಲ್ಲಿ ನಿಯಮ ರೂಪಿಸಿತ್ತು. ಈ ನೆಸ್ಟ್‌ಗಳಲ್ಲಿ ಶೌಚಾಲಯ, ದುಡ್ಡು ಹಾಕಿ ನೀರು ಪಡೆಯುವ ಸೌಲಭ್ಯ (ವಾಟರ್‌ ಎಟಿಎಂ), ಪ್ಯಾಕ್‌ ಮಾಡಿದ ಆಹಾರ, ತಂಪು ಪಾನೀಯಗಳ ವ್ಯವಸ್ಥೆ ಇರಬೇಕು. 2018ರ ಹೊತ್ತಿಗೆ ಎಲ್ಲಾ ಟೋಲ್ ಘಟಕಗಳಲ್ಲೂ ಇಂಥ ನೆಸ್ಟ್‌ಗಳನ್ನು ನಿರ್ಮಿಸಬೇಕು ಎಂದೂ ಹೇಳಿತ್ತು. ಆದರೆ, ಸುಮಾರು 11 ಟೋಲ್‌ ಘಟಕಗಳಲ್ಲಿ ಹೈವೇ ನೆಸ್ಟ್‌ ಮಿನಿಗಳ ನಿರ್ಮಾಣವೇ ಆಗಿಲ್ಲ.

ಜಾಗದ ಕೊರತೆ: ರಾಜ್ಯದ ನೆಲಮಂಗಲ ಟೋಲ್‌ ಘಟಕದಲ್ಲಿ ಹೈವೇ ನೆಸ್ಟ್‌ ಮಿನಿ ಅನ್ನು ನಿರ್ಮಿಸಲಾಗಿದೆ. ಆದರೆ, ಜಾಗದ ಕೊರತೆಯಿಂದ ಇದು ಕಾರ್ಯನಿರ್ವಹಿಸುತ್ತಿಲ್ಲ ಎಂದು ಪ್ರಾಧಿಕಾರ ಉತ್ತರಿಸಿದೆ. ಕಟ್ಟಡ ನಿರ್ಮಾಣವಾದ ಮೇಲೂ ಜಾಗದ ಕೊರತೆ ಯಾಕಾಗಬೇಕು ಎಂಬ ವಿವರಣೆಯನ್ನು ವರದಿಯಲ್ಲಿ ನೀಡಲಾಗಿಲ್ಲ.

‘ಕೆಲವು ಕಡೆಗಳಲ್ಲಿ ಹೈವೇ ನೆಸ್ಟ್‌ ಮಿನಿಗಳ ನಿರ್ಮಾಣಕ್ಕೆ ಸೂಚಿಸಲಾಗಿದೆ. ಕಲುಷಿತ ನೀರಿನ ಸಮಸ್ಯೆ ಇರುವ ಕಾರಣಕ್ಕಾಗಿ ಒಂದು ಘಟಕದಲ್ಲಿ ಹೈವೇ ನೆಸ್ಟ್‌ ಮಿನಿಯನ್ನು ನಿರ್ಮಿಸಲಾಗಿಲ್ಲ’ ಎಂದು ಪ್ರಾಧಿಕಾರ ಉತ್ತರಿಸಿದೆ. ಯಾಕಾಗಿ ಹೈವೇ ನೆಸ್ಟ್‌ ಮಿನಿ ನಿರ್ಮಾಣವಾಗಿಲ್ಲ ಎಂಬ ಪ್ರಶ್ನೆಗೆ ಕೆಲವು ಟೋಲ್‌ಗಳ ಬಗ್ಗೆ ಮಾತ್ರವೇ ಉತ್ತರಿಸಿರುವ ಪ್ರಾಧಿಕಾರವು ಆರು ಟೋಲ್‌ ಘಟಕಗಳ ಬಗ್ಗೆ ಮಾಹಿತಿ ನೀಡಿಲ್ಲ.

ಶಿಫಾರಸು: ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ, ನಿರ್ಮಾಣದ ಗತಿ, ಗುತ್ತಿಗೆ ನೀಡುವ ಕುರಿತು ಪ್ರಾಧಿಕಾರವು ಗಮನಹರಿಸಬೇಕು. ಹೈವೇ ನೆಸ್ಟ್‌ ಮಿನಿಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಅದರ ಉಪಯೋಗ ದೊರೆಯುವಂತೆ ನೋಡಿಕೊಳ್ಳಬೇಕು.

ಇಲ್ಲದ ತುರ್ತು ಸೇವೆಗಳು

ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರು ಸುರಕ್ಷತೆಯ ಕಾರಣಕ್ಕಾಗಿ ಅಪಘಾತದ ವೇಳೆಯ ಪರಿಣಾಮಕಾರಿ ನಿರ್ವಹಣೆಗಾಗಿ ಆಂಬುಲೆನ್ಸ್‌, ಗಸ್ತು ವಾಹನಗಳು ಹಾಗೂ ಕ್ರೇನ್‌ಗಳ ವ್ಯವಸ್ಥೆ ಮಾಡುವುದು ಪ್ರಾಧಿಕಾರ ವಿಧಿಸಿರುವ ನಿಮಯ. ಇದಕ್ಕಾಗಿ ಪ್ರಾಧಿಕಾರವು ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. 41 ಟೋಲ್‌ ಘಟಕಗಳಲ್ಲಿನ ಆಂಬುಲೆನ್ಸ್‌ ಹಾಗೂ ಗಸ್ತು ವಾಹನಗಳ ಪರಿಶೀಲನೆ ನಡೆಸಿದ ಸಿಎಜಿ, 14 ಟೋಲ್‌ ಘಟಕಗಳಲ್ಲಿ ಪ್ರಾಧಿಕಾರ ನೀಡಿರುವ ಮಾರ್ಗಸೂಚಿಯನ್ನು ಪಾಲಿಸಲಾಗಿಲ್ಲ ಎಂದಿದೆ.

ಟೋಲ್‌ ಘಟಕಗಳಲ್ಲಿ ಇರುವ ಆಂಬುಲೆನ್ಸ್‌ನಲ್ಲಿ ಕನಿಷ್ಠ ಇಬ್ಬರು ರೋಗಿಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇರಬೇಕು ಎಂದು ಪ್ರಾಧಿಕಾರದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆದರೆ, ಇಷ್ಟೊಂದು ದೊಡ್ಡ ಸಾಮರ್ಥ್ಯ ಇರುವ ಆಂಬುಲೆನ್ಸ್‌ಗಳು ಯಾವ ಘಟಕದಲ್ಲೂ ಇಲ್ಲ ಎಂದು ಸಿಎಜಿ ಪರಿಶೀಲನೆಯಲ್ಲಿ ತಿಳಿದುಬಂದಿದೆ.

ಇನ್ನು ಗಸ್ತು ವಾಹನಗಳಲ್ಲಿ ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಇರಬೇಕು. ಜೊತೆಗೆ ಪ್ರಥಮ ಚಿಕಿತ್ಸೆ ನೀಡಲು ಬೇಕಾಗಿರುವ ಔಷಧ ಸೌಲಭ್ಯ ಇರಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆದರೆ, ಈ ಯಾವ ವ್ಯವಸ್ಥೆಯೂ ಗಸ್ತು ವಾಹನಗಳಲ್ಲಿ ಇಲ್ಲ. ಜೊತೆಗೆ, ಈ ವಾಹನಗಳು ಹಳೆಯದಾಗಿವೆ, ಬಳಸಲು ಯೋಗ್ಯವಾಗಿಲ್ಲ ಎಂದು ಸಿಎಜಿ ಹೇಳಿದೆ.

ಅಗತ್ಯ ಕ್ರಮ ವಹಿಸಲಾಗುವುದು: ಗಸ್ತು ವಾಹನ ಹಾಗೂ ಆಂಬುಲೆನ್ಸ್‌ಗಳ ಸುಸ್ಥಿತಿ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ಹಾಗೂ ಸಚಿವಾಲಯ ತಿಳಿಸಿದೆ. ಆದರೂ, ಒಂಬತ್ತು ಟೋಲ್‌ ಘಟಕಗಳ ಕುರಿತು ಪ್ರಾಧಿಕಾರ ಮತ್ತು ಸಚಿವಾಲಯ ಮಾಹಿತಿ ನೀಡಿಲ್ಲ.

ಶಿಫಾರಸು: ತನ್ನದೇ ಮಾರ್ಗಸೂಚಿಯ ಅನ್ವಯ ಪ್ರಾಧಿಕಾರವು ಆಂಬುಲೆನ್ಸ್‌ ಹಾಗೂ ಗಸ್ತು ವಾಹನಗಳ ಸುಸ್ಥಿತಿಯ ಬಗ್ಗೆ ಗಮನ ಹರಿಸಬೇಕು.

ಆಧಾರ: ಸಿಎಜಿಯ ‘ದಕ್ಷಿಣ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ
ಟೋಲ್‌ ಘಟಕಗಳ ನಿರ್ವಹಣೆ’ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT