ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಸಾಲದ ಹೊರೆ: ಹೆಚ್ಚಳ ನಿರಂತರ
ಆಳ–ಅಗಲ | ಸಾಲದ ಹೊರೆ: ಹೆಚ್ಚಳ ನಿರಂತರ
ದೇಶದ ಸಾಲ ಈ ವರ್ಷ ₹183.67 ಲಕ್ಷ ಕೋಟಿಗೆ ಏರುವ ಅಂದಾಜು
Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಭಾರತದ ಸಾಲ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಭಾರತದ ಒಟ್ಟು ಸಾರ್ವಜನಿಕ ಸಾಲ ಮತ್ತು ಜಿಡಿಪಿ ನಡುವಣ ಅನುಪಾತವು ಶೇ 100ರ ಗಡಿಯನ್ನು ಮೀರುತ್ತದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಇತ್ತೀಚೆಗೆ ಹೇಳಿತ್ತು. ಕೇಂದ್ರ ಸರ್ಕಾರವು ಇದನ್ನು ನಿರಾಕರಿಸಿತ್ತು. ಮಂಗಳವಾರವಷ್ಟೇ ಈ ಬಗ್ಗೆ ವಿವರಣೆ ನೀಡಿರುವ ಆರ್‌ಬಿಐ, ಹಣಕಾಸು ನಿಧಿಯ ಮುನ್ನೋಟಕ್ಕಿಂತ ಉತ್ತಮ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ ಇರಲಿದೆ ಎಂದು ಹೇಳಿದೆ. ಸಾಲ ಮತ್ತು ಜಿಡಿಪಿ ಅನುಪಾತವೂ ಕಡಿಮೆಯಾಗಲಿದೆ ಎಂದೂ ಹೇಳಿದೆ. ಆದರೆ ಹಿಂದಿನ 22 ವರ್ಷಗಳಲ್ಲಿ ದೇಶದ ಸಾಲದ ಸ್ಥಿತಿಗತಿ ಕೆಟ್ಟದಾಗಿದೆ ಎನ್ನುವುದನ್ನು ಕೇಂದ್ರ ಸರ್ಕಾರದ್ದೇ ದಾಖಲೆಗಳು ಹೇಳುತ್ತಿವೆ.

2023ರ ಡಿಸೆಂಬರ್‌ನಲ್ಲಿ ವರದಿ ಬಿಡುಗಡೆ ಮಾಡಿದ್ದ ಅಂತರರಾಷ್ಟ್ರೀಯ ಹಣಕಾಸು ನಿಧಿಯು 2027–28ನೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಭಾರತದ ಸಾಲ ಮತ್ತು ಜಿಡಿಪಿ ಅನುಪಾತವು ಶೇ 100ರ ಗಡಿಯನ್ನು ದಾಟುತ್ತದೆ ಎಂದು ಹೇಳಿತ್ತು. ಇದಕ್ಕೆ ಕೇಂದ್ರ ಹಣಕಾಸು ಸಚಿವಾಲಯವು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕೋವಿಡ್‌ನ ಕಾರಣದಿಂದ ವಿಶ್ವದ ಎಲ್ಲಾ ಆರ್ಥಿಕತೆಗಳು ಹಿನ್ನಡೆ ಅನುಭವಿಸಿದ್ದವು. ಆಗ ನಮ್ಮ ಸಾಲ–ಜಿಡಿಪಿ ಅನುಪಾತವು ಶೇ 88ರಷ್ಟು ಇದ್ದುದ್ದನ್ನು ಈಗ ಶೇ 81ರಷ್ಟಕ್ಕೆ ಇಳಿಸಲಾಗಿದೆ ಎಂದು ಹೇಳಿತ್ತು. ಆದರೆ ಭಾರತದ ಸಾಲ–ಜಿಡಿಪಿ ಅನುಪಾತ ಏರಿಕೆಯು 2014–15ನೇ ಸಾಲಿನಿಂದಲೇ ಆರಂಭವಾಗಿತ್ತು ಎಂಬುದನ್ನು ಹಣಕಾಸು ಸಚಿವಾಲಯವು ಸಂಸತ್ತಿಗೆ ನೀಡಿರುವ ದಾಖಲೆಗಳೇ ಹೇಳುತ್ತಿವೆ. ಕೋವಿಡ್‌ ಅವಧಿಯಲ್ಲಿ ಅದು ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಆನಂತರ ಅದು ಇಳಿಕೆಯಾದರೂ 20 ವರ್ಷಗಳ ಅವಧಿಯ ಗರಿಷ್ಠ ಮಟ್ಟದಲ್ಲೇ ಇದೆ ಎಂಬುದನ್ನು ಆ ದಾಖಲೆಗಳು ಹೇಳುತ್ತಿವೆ.

ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌ ನೀಡಿರುವ ವರದಿಯು, 2030–31ನೇ ಸಾಲಿನ ವೇಳೆಗೆ ಈ ಅನುಪಾತವು ಶೇ 73.4ರಷ್ಟಕ್ಕೆ ಇಳಿಕೆಯಾಗಲಿದೆ. ಶಿಸ್ತನ ಆರ್ಥಿಕ ಕ್ರಮಗಳ ಕಾರಣದಿಂದ ಇದು ಸಾಧ್ಯವಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಆದರೆ, ದೇಶದ ಸಾಲದ ಮೊತ್ತ ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ ಮತ್ತು ದೇಶದ ಜನರ ಮೇಲೆ ಇರುವ ತಲಾ ಸಾಲದ ಮೊತ್ತವೂ ಏರಿಕೆಯಾಗುತ್ತಿದೆ ಎಂಬುದನ್ನು ಕೇಂದ್ರ ಹಣಕಾಸು ಸಚಿವಾಲಯವೇ ತನ್ನ ವರದಿಗಳಲ್ಲಿ ಮತ್ತು ಪ್ರಕಟಣೆಗಳಲ್ಲಿ ಹೇಳಿದೆ.

  •  ಮನಮೋಹನ್‌ ಸಿಂಗ್ ಅವರ ನೇತೃತ್ವದ ಯುಪಿಎ–2 ಸರ್ಕಾರ ಅಸ್ತಿತ್ವಕ್ಕೆ ಬಂದಾಗ ದೇಶದ ಒಟ್ಟು ಸಾಲ ₹31.35 ಲಕ್ಷ ಕೋಟಿಯಷ್ಟು ಇತ್ತು. ಆ ಸರ್ಕಾರದ ಅವಧಿ ಮುಗಿದಾಗ ಒಟ್ಟು ಸಾಲದ ಮೊತ್ತ ₹55.87 ಲಕ್ಷ ಕೋಟಿಯಷ್ಟಾಗಿತ್ತು. ಐದು ವರ್ಷಗಳಲ್ಲಿ ದೇಶದ ಒಟ್ಟು ಸಾಲವು ಪ್ರತಿ ವರ್ಷ ₹4 ಲಕ್ಷ ಕೋಟಿಯಿಂದ ₹5 ಲಕ್ಷ ಕೋಟಿಯಷ್ಟು ಏರಿಕೆಯಾಗಿತ್ತು

  •  ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ–1 ಸರ್ಕಾರ ಅಧಿಕಾರಕ್ಕೆ ಬಂದಾಗ ₹55.87ರಷ್ಟಿದ್ದ ದೇಶದ ಸಾಲ ಐದು ವರ್ಷಗಳಲ್ಲಿ ₹90.56 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಆ ಐದು ವರ್ಷಗಳಲ್ಲಿ ದೇಶದ ಒಟ್ಟು ಸಾಲವು ಪ್ರತಿ ವರ್ಷ ಸರಾಸರಿ ₹6.9 ಲಕ್ಷದಷ್ಟು ಏರಿಕೆಯಾಗಿತ್ತು

  • ಮೋದಿ ನೇತೃತ್ವದ ಎನ್‌ಡಿಎ–2 ಸರ್ಕಾರದ ಅವಧಿಯಲ್ಲೂ ದೇಶದ ಒಟ್ಟು ಸಾಲವು ₹90 ಲಕ್ಷ ಕೋಟಿಯಿಂದ ₹168 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ದೇಶದ ಸಾಲವು ಪ್ರತಿ ವರ್ಷ ಸರಾಸರಿ ₹15.5 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ.

  • ಎನ್‌ಡಿಎ ಸರ್ಕಾರದ ಎರಡು ಅವಧಿಯಲ್ಲಿ ದೇಶದ ಒಟ್ಟು ಸಾಲವು ಎರಡು ಪಟ್ಟು ಏರಿಕೆಯಾಗಿದೆ. 2024–25ನೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಸಾಲವು ₹183.67 ಲಕ್ಷ ಕೋಟಿಯನ್ನು ಮೀರಲಿದೆ

ಸಾಲ ಮತ್ತು ಜಿಡಿಪಿಯ ಅನುಪಾತವು ದೇಶದ ಆರ್ಥಿಕತೆಯ ಸ್ಥಿತಿಯನ್ನು ತೋರಿಸುತ್ತದೆ. ಈ ಅನುಪಾತವನ್ನು ಶೇಕಡಾವಾರು ಪ್ರಮಾಣದಲ್ಲಿ ಲೆಕ್ಕಹಾಕಲಾಗುತ್ತದೆ. ಈ ಪ್ರಮಾಣವು ಕಡಿಮೆ ಇದ್ದಷ್ಟೂ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದರ್ಥ. ಅದು ಏರುತ್ತಾ ಹೋದರೆ, ಆರ್ಥಿಕತೆ ಬಿಗಡಾಯಿಸುತ್ತದೆ ಎಂದು ಅರ್ಥೈಸಲಾಗುತ್ತಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಪ್ರಕಾರ ಈ ಅನುಪಾತವು ಶೇ 64ರಷ್ಟು ಇದ್ದರೆ ಅದು ಆರ್ಥಿಕತೆ ಉತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ಪ್ರಮಾಣವು ಶೇ 64ಕ್ಕಿಂತಲೂ ಹೆಚ್ಚಾದರೆ, ದೇಶದ ಸಾಲ ತೀರಿಸುವ ಸಾಮರ್ಥ್ಯವು ಅಪಾಯಕಾರಿ ಮಟ್ಟಕ್ಕೆ ಕುಸಿಯುತ್ತಾ ಹೋಗುತ್ತದೆ. ಅದು ಹೆಚ್ಚುತ್ತಲೇ ಹೋದರೆ ಹತ್ತಾರು ದಶಕಗಳವರೆಗೂ ದೇಶಕ್ಕೆ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತದೆ ಐಎಂಎಫ್‌.

ಹಿಂದಿನ 22 ಆರ್ಥಿಕ ವರ್ಷಗಳನ್ನು ಗಮನಿಸಿದರೆ ದೇಶದ ಒಟ್ಟು ಸಾಲ ಮತ್ತು ಜಿಡಿಪಿ ಅನುಪಾತವು ಉತ್ತಮ ಮಟ್ಟದಲ್ಲಿ ಇದ್ದದ್ದು ಮನಮೋಹನ್‌ ಸಿಂಗ್‌ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಎಂಬುದನ್ನು ಕೇಂದ್ರ ಸರ್ಕಾರದ ದಾಖಲೆಗಳೇ ಹೇಳುತ್ತವೆ. ಕೇಂದ್ರ ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿರುವ ವರದಿಗಳು ಮತ್ತು ರಾಜ್ಯಸಭೆಯಲ್ಲಿ ನೀಡಿರುವ ಲಿಖಿತ ಉತ್ತರಗಳಲ್ಲಿ ಈ ಮಾಹಿತಿ ಇದೆ. ಆ ವರದಿಗಳು ಮತ್ತು ಲಿಖಿತ ಉತ್ತರಗಳ ಪ್ರಕಾರ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯ 2001–2002ರಲ್ಲಿ ಸಾಲ ಮತ್ತು ಜಿಡಿಪಿ ಅನುಪಾತವು ಶೇ 82.9ರಷ್ಟು ಇತ್ತು. ಅಂದರೆ ದೇಶದ ಆರ್ಥಿಕ ಸ್ಥಿತಿ ಅಂದೂ ಉತ್ತಮವಾಗಿ ಇರಲಿಲ್ಲ ಎಂಬುದನ್ನು ಈ ದತ್ತಾಂಶ ಹೇಳುತ್ತದೆ.

2014–15ನೇ ಸಾಲಿನಲ್ಲಿ ಬಿಜೆಪಿಯು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಗೆದ್ದು, ಎನ್‌ಡಿಎ ಮೈತ್ರಿಕೂಟದ ಸರ್ಕಾರವನ್ನು ರಚಿಸಿತು. ಆಗಲೂ ದೇಶದ ಸಾಲ–ಜಿಡಿಪಿ ಅನುಪಾತವು ಉತ್ತಮ ಮಟ್ಟದಲ್ಲಿಯೇ ಇತ್ತು. ಆದರೆ ಆನಂತರದ ವರ್ಷಗಳಲ್ಲಿ ಸಾಲದ ಪ್ರಮಾಣವೂ ಏರಿಕೆಯಾಯಿತು ಮತ್ತು ಅದರೊಂದಿಗೆ ಸಾಲ–ಜಿಡಿಪಿ ಅನುಪಾತದ ಪ್ರಮಾಣವೂ ಏರಿಕೆಯಾಯಿತು. ದೇಶದಲ್ಲಿ ಕೋವಿಡ್‌ ಬರುವ ಒಂದು ವರ್ಷ ಮೊದಲೇ ಈ ಅನುಪಾತವು ಶೇ 75ರ ಗಡಿಯನ್ನು ದಾಟಿತ್ತು. ಕುಂಠಿತ ಆರ್ಥಿಕ ಪ್ರಗತಿಯನ್ನು ಅದು ಸೂಚಿಸುತ್ತದೆ. ಕೋವಿಡ್ ಬಂದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಕೋವಿಡ್‌ನ ಕಾರಣಕ್ಕೆ ಈ ಅನುಪಾತವು ಏರಿಕೆಯಾದದ್ದು, 22 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ಆನಂತರ ಅದು ತುಸು ಇಳಿಕೆಯಾಗಿದೆಯಾದರೂ, ಶೇ 80ಕ್ಕಿಂತ ಕೆಳಗೆ ಬಂದಿಲ್ಲ. ಈ ಎಲ್ಲಾ ಅಂಶಗಳು ಎನ್‌ಡಿಎ ಸರ್ಕಾರದ ಈಚಿನ ಒಂಬತ್ತು ವರ್ಷಗಳಲ್ಲಿ ದೇಶದ ಸಾಲದ ಇಕ್ಕಟ್ಟು ಬಿಗಿಗೊಳ್ಳುತ್ತಿರುವುದನ್ನು ಸೂಚಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT