ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಜಾರಿ ನಿರ್ದೇಶನಾಲಯ– ಸಮನ್ಸ್‌ ಮತ್ತು ಬಂಧನದ ನಡುವೆ ಹಲವು ನಿಯಮಗಳು
ಆಳ–ಅಗಲ: ಜಾರಿ ನಿರ್ದೇಶನಾಲಯ– ಸಮನ್ಸ್‌ ಮತ್ತು ಬಂಧನದ ನಡುವೆ ಹಲವು ನಿಯಮಗಳು
ಇ.ಡಿ. ನೀಡಿರುವ ಸಮನ್ಸ್‌ ಅನ್ನು ಎಷ್ಟು ಬಾರಿ ತಿರಸ್ಕರಿಸಬಹುದು? ಹಲವು ಬಾರಿ ಸಮನ್ಸ್‌ ಅನ್ನು ತಿರಸ್ಕರಿಸಿದರೆ ಏನಾಗುತ್ತದೆ?
Published 19 ಫೆಬ್ರುವರಿ 2024, 20:57 IST
Last Updated 19 ಫೆಬ್ರುವರಿ 2024, 20:57 IST
ಅಕ್ಷರ ಗಾತ್ರ

‘ಜಾರಿ ನಿರ್ದೇಶನಾಲಯವು ನನಗೆ ಸಮನ್ಸ್‌ ನೀಡುತ್ತಿರುವುದು ಕಾನೂನುಬಾಹಿರವಾಗಿದೆ’ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಸಂಚಾಲಕ ಆಗಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಸೋಮವಾರ ಮತ್ತೊಮ್ಮೆ ಹೇಳಿದ್ದಾರೆ. ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿ ಕೇಜ್ರಿವಾಲ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಆರು ಬಾರಿ ಸಮನ್ಸ್‌ ನೀಡಿದೆ. ಕೇಜ್ರಿವಾಲ್‌ ಅವರು ಒಮ್ಮೆಯೂ ಇ.ಡಿ. ಎದುರು ವಿಚಾರಣೆಗೆ ಹಾಜರಾಗಿಲ್ಲ. ಸಮನ್ಸ್‌ ನೀಡಿರುವ ಕುರಿತು ಅವರು ಇ.ಡಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಪತ್ರ ಬರೆಯುತ್ತಲೇ ಇದ್ದಾರೆ. ಹಾಗಾದರೆ, ಇ.ಡಿ. ನೀಡಿರುವ ಸಮನ್ಸ್‌ ಅನ್ನು ಎಷ್ಟು ಬಾರಿ ತಿರಸ್ಕರಿಸಬಹುದು? ಹಲವು ಬಾರಿ ಸಮನ್ಸ್‌ ಅನ್ನು ತಿರಸ್ಕರಿಸಿದರೆ ಏನಾಗುತ್ತದೆ?

ಸಂಬಂಧಿತ ಕಾನೂನಿನಲ್ಲಿ ಈ ಯಾವುದಕ್ಕೂ ನಿಖರವಾದ ಉತ್ತರವಿಲ್ಲ. ಯಾವುದೇ ಪ್ರಕರಣದಲ್ಲಿ ಹಣವು ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದಾದರೆ, ಆ ಪ್ರಕರಣವನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ವಿಚಾರಣೆ ನಡೆಸಲಾಗುತ್ತದೆ. ಈ ಕಾಯ್ದೆಯ ಸೆಕ್ಷನ್‌ 50(2)ರ ಅನ್ವಯ ಇ.ಡಿ ಅಧಿಕಾರಿಗಳು ವ್ಯಕ್ತಿಯೊಬ್ಬರಿಗೆ ಸಮನ್ಸ್‌ ನೀಡಬಹುದು. ಇದೇ ಕಾಯ್ದೆಯ ಸೆಕ್ಷನ್‌ 19 (1)ರಲ್ಲಿ ವ್ಯಕ್ತಿಯನ್ನು ಬಂಧಿಸುವ ಅಧಿಕಾರವನ್ನು ಇ.ಡಿ. ಅಧಿಕಾರಿಗಳಿಗೆ ನೀಡಲಾಗಿದೆ. ಈ ಯಾವುದೇ ಸೆಕ್ಷನ್‌ಗಳಲ್ಲೂ ಇ.ಡಿ. ಅಧಿಕಾರಿಗಳು ಎಷ್ಟು ಬಾರಿ ಸಮನ್ಸ್‌ ನೀಡಬಹುದು ಅಥವಾ ಇಷ್ಟೇ ಬಾರಿ ಸಮನ್ಸ್‌ ನೀಡಬೇಕು ಎಂಬಂಥ ಯಾವುದೇ ವಿವರಣೆಯನ್ನು ನೀಡಿಲ್ಲ. ಇನ್ನು ಬಂಧನದ ಕುರಿತು ಚರ್ಚಿಸುವ ಸೆಕ್ಷನ್‌ 19 (1)ರಲ್ಲಿಯೂ ಯಾವಾಗ ಬಂಧನ ಮಾಡಬೇಕು? ಒಂದು ವೇಳೆ ಇಂತಿಷ್ಟು ಸಮನ್ಸ್‌ ನೀಡಿದರೂ ವ್ಯಕ್ತಿಯು ವಿಚಾರಣೆಗೆ ಹಾಜರಾಗದೇ ಇದ್ದರೆ ಆಗ ಬಂಧಿಸಬಹುದು ಎಂಬುದನ್ನೂ ವಿವರಿಸಿಲ್ಲ. 

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ವಿರುದ್ದ ಸಾಕ್ಷ್ಯಗಳು ಇದ್ದರೆ, ಜಾರಿ ನಿರ್ದೇಶನಾಲಯವು ಅಂತಹ ವ್ಯಕ್ತಿಯನ್ನು ನೇರವಾಗಿ ಬಂಧಿಸಬಹುದು. ಬಂಧನಕ್ಕೂ ಮುನ್ನ ಆ ವ್ಯಕ್ತಿಗೆ ಅಧಿಕಾರಿಗಳು ಕಾರಣಗಳನ್ನು ಒದಗಿಸಬೇಕಿಲ್ಲ. ಬಂಧನದ ನಂತರ ಒದಗಿಸಿದರೆ ಸಾಕು. ಆದರೆ ಬಂಧನಕ್ಕೆ ಅರ್ಹವಾದ ಸೆಕ್ಷನ್‌ಗಳ ಅಡಿಯಲ್ಲಿ (ಪಿಎಂಎಲ್‌ಎ ಕಾಯ್ದೆಯ ವಿವಿಧ ಸೆಕ್ಷನ್‌ಗಳು) ಪ್ರಕರಣ ದಾಖಲಾಗಿರಬೇಕು. ಮೊದಲೇ ಮಾಹಿತಿ ಒದಗಿಸಿದೆಯೂ ಬಂಧಿಸಲು ಅವಕಾಶವಿರುವ ಕಾರಣಕ್ಕೇ, ಜಾರಿ ನಿರ್ದೇಶನಾಲಯಕ್ಕೆ ಇರುವ ಈ ಅಧಿಕಾರದ ಬಗ್ಗೆ ಅಪಸ್ವರವಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನದಲ್ಲಿರುವ ಎಎಪಿಯ ಹಲವು ನಾಯಕರ ಬಂಧನವೂ ಇದೇ ರೀತಿ ನಡೆದಿತ್ತು. ಈಗ ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೂ ಜಾರಿ ನಿರ್ದೇಶನಾಲಯವು ಸಮನ್ಸ್‌ ನೀಡುತ್ತಲೇ ಇದೆ. ಅವರು ಸಮನ್ಸ್‌ ಅನ್ನು ಸ್ವೀಕರಿಸುತ್ತಲೇ ಇಲ್ಲ. ತಮ್ಮನ್ನು ವಿಚಾರಣೆಗೆಂದು ಕರೆದು, ನಂತರ ಬಂಧಿಸುವ ಯೋಜನೆ ಇದು
ಎಂದು ಕೇಜ್ರಿವಾಲ್ ಆರೋಪಿಸುತ್ತಲೇ ಇದ್ದಾರೆ.

ಇದೇ ರೀತಿ ಬಂಧನ ನಡೆದಿದ್ದ ಪ್ರಕರಣಗಳಲ್ಲಿ, ಅಂತಹ ಬಂಧನವನ್ನು ಅಮಾನ್ಯಗೊಳಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ವಿಚಾರಣೆಗೆಂದು ಕರೆದು (ಪಿಎಂಎಲ್‌ಎ ಸೆಕ್ಷನ್‌ 50ರ ಅಡಿಯಲ್ಲಿ), ಬಂಧಿಸುವುದು ಸರಿಯಲ್ಲ. ಬಂಧಿಸುವುದು ಅಗತ್ಯವಾಗಿದ್ದರೆ, ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲೇ ಬಂಧಿಸಿ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಹಲವು ಬಾರಿ ಸಮನ್ಸ್‌ ನೀಡಿದ ಮೇಲೂ ವ್ಯಕ್ತಿಯು ವಿಚಾರಣೆಗೆ ಹಾಜರಾಗದೇ ಇದ್ದರೆ, ಜಾರಿ ನಿರ್ದೇಶನಾಲಯವು ಕೋರ್ಟ್‌ ಮೇಟ್ಟಿಲೇರುತ್ತದೆ. ವಿಚಾರಣೆಗೆ ಸಹಕರಿಸುತ್ತಿಲ್ಲ ಆದ್ದರಿಂದ ವ್ಯಕ್ತಿಯನ್ನು ಬಂಧಿಸಲು, ಜಾಮೀನುರಹಿತ ಬಂಧನ ವಾರೆಂಟ್‌ ಜಾರಿ ಮಾಡುವಂತೆ ನ್ಯಾಯಾಲಯವನ್ನು ಕೋರಬಹುದು. ಕೇಜ್ರಿವಾಲ್‌ ಪ್ರಕರಣದಲ್ಲೂ ಇ.ಡಿ ಅಧಿಕಾರಿಗಳು ದೆಹಲಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಇದೇ ಕಾರಣಕ್ಕಾಗಿಯೇ ಕೇಜ್ರಿವಾಲ್‌ ಅವರು ‘ನ್ಯಾಯಾಲಯದ ಆದೇಶ ಬರುವವರೆಗೂ ಕಾಯಿರಿ. ಪದೇ ಪದೇ ಸಮನ್ಸ್‌ ನೀಡಬೇಡಿ’ ಎಂದು ಸೋಮವಾರ ಹೇಳಿದ್ದಾರೆ.

2023ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪೊಂದನ್ನು ನೀಡಿತ್ತು. ‘ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನುವ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಇ.ಡಿ. ಅಧಿಕಾರಿಗಳು ಬಂಧಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮತ್ತೊಂದು ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಕೂಡ ಇಂತದ್ದೇ ತೀರ್ಪು ನೀಡಿದೆ.

ಸೆಕ್ಷನ್‌ 50 (2) ಏನು ಹೇಳುತ್ತದೆ?

* ವ್ಯಕ್ತಿಯೊಬ್ಬರ ಬಳಿ ಪ್ರಕರಣವೊಂದಕ್ಕೆ ಸಂಬಂಧಿಸಿದ ಸಾಕ್ಷ್ಯ ಇದೆ ಮತ್ತು ಆತ ವಿಚಾರಣೆಗೆ ಹಾಜರಾಗುವುದು ಅನಿವಾರ್ಯ ಎಂದೆನಿಸಿದಾಗ ‌ಇ.ಡಿ ಅಧಿಕಾರಿಯು ವ್ಯಕ್ತಿಯೊಬ್ಬರಿಗೆ ಸಮನ್ಸ್ ನೀಡಬಹುದು

ಸೆಕ್ಷನ್‌ 19 (1) ಏನು ಹೇಳುತ್ತದೆ?

* ವ್ಯಕ್ತಿಯೊಬ್ಬರು ಪ್ರಕರಣವೊಂದರಲ್ಲಿ ತಪ್ಪಿತಸ್ಥ ಎಂದು ಅನ್ನಿಸಿದರೆ, ಅದಕ್ಕೆ ಪೂರಕವಾದ ಸಾಕ್ಷ್ಯಗಳು ಹಾಗೂ ಸಕಾರಣಗಳು ಇ.ಡಿ ಅಧಿಕಾರಿಗಳ ಬಳಿ ಇದ್ದರೆ, ಅಧಿಕಾರಿಗಳು ಅಂಥ ವ್ಯಕ್ತಿಯನ್ನು ಬಂಧಿಸಬಹುದು. ಬಂಧನವಾದ ಬಳಿಕ, ಯಾವ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಆ ವ್ಯಕ್ತಿಗೆ ಆದಷ್ಟು ಬೇಗ ತಿಳಿಸಬೇಕು. ಇ.ಡಿ. ಅಧಿಕಾರಿಗಳ ಬಳಿ ವ್ಯಕ್ತಿಯನ್ನು ಬಂಧಿಸುವ ಕುರಿತ ಸಕಾರಣಗಳು ಬರಹ ರೂಪದಲ್ಲಿ ಇರಬೇಕು

ಹಲವು ಬಾರಿ ಸಮನ್ಸ್‌ ನೀಡಿದ ಮೇಲೂ ವ್ಯಕ್ತಿಯು ವಿಚಾರಣೆಗೆ ಹಾಜರಾಗದೇ ಇದ್ದರೆ, ಜಾರಿ ನಿರ್ದೇಶನಾಲಯವು ಕೋರ್ಟ್‌ ಮೇಟ್ಟಿಲೇರುತ್ತದೆ. ವಿಚಾರಣೆಗೆ ಸಹಕರಿಸುತ್ತಿಲ್ಲ ಆದ್ದರಿಂದ ವ್ಯಕ್ತಿಯನ್ನು ಬಂಧಿಸಲು, ಜಾಮೀನುರಹಿತ ಬಂಧನ ವಾರೆಂಟ್‌ ಜಾರಿ ಮಾಡುವಂತೆ ನ್ಯಾಯಾಲಯವನ್ನು ಕೋರಬಹುದು. ಕೇಜ್ರಿವಾಲ್‌ ಪ್ರಕರಣದಲ್ಲೂ ಇ.ಡಿ ಅಧಿಕಾರಿಗಳು ದೆಹಲಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಇದೇ ಕಾರಣಕ್ಕಾಗಿಯೇ ಕೇಜ್ರಿವಾಲ್‌ ಅವರು ‘ನ್ಯಾಯಾಲಯದ ಆದೇಶ ಬರುವವರೆಗೂ ಕಾಯಿರಿ. ಪದೇ ಪದೇ ಸಮನ್ಸ್‌ ನೀಡಬೇಡಿ’ ಎಂದು ಸೋಮವಾರ ಹೇಳಿದ್ದಾರೆ.

2023ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪೊಂದನ್ನು ನೀಡಿತ್ತು. ‘ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನುವ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಇ.ಡಿ. ಅಧಿಕಾರಿಗಳು ಬಂಧಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮತ್ತೊಂದು ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಕೂಡ ಇಂತದ್ದೇ ತೀರ್ಪು ನೀಡಿದೆ.

‘ಅಸಹಕಾರ ಎನ್ನುವ ಕಾರಣಕಷ್ಟೇ ಬಂಧಿಸುವಂತಿಲ್ಲ’

‘ಸಮನ್ಸ್‌ ಅನ್ನು ತಿರಸ್ಕರಿಸಿದರು, ವಿಚಾರಣೆಗೆ ಹಾಜರಾಗಲಿಲ್ಲ, ತನಿಖೆಗೆ ಅಸಹಕಾರ ನೀಡಿದರು ಎಂದು ವ್ಯಕ್ತಿಯುನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧಿಸುವಂತಿಲ್ಲ’ ಎಂದು 2023 ಅಕ್ಟೋಬರ್‌ 4ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಪಂಕಜ್‌ ಬನ್ಸಾಲ್‌ ಹಾಗೂ ಬಸಂತ್‌ ಬನ್ಸಾಲ್‌ ಅವರ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಈ ತೀರ್ಪು ನೀಡಿತ್ತು.

ಸುಪ್ರೀಂ ಕೋರ್ಟ್‌ ಹೇಳಿದ್ದೇನು?

l  ವಿಚಾರಣೆ ನಡೆಸುವುದು ಎಂದರೆ ಅದು ತಪ್ಪೊಪ್ಪಿಗೆ ಪ್ರಕ್ರಿಯೆ ಅಲ್ಲ. ವಿಚಾರಣೆಗೆ ಹಾಜರಾಗಲಿಲ್ಲ ಆದ್ದರಿಂದ ಆತ ತಪ್ಪಿತಸ್ಥ ಎಂದು ಬಂಧಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ, ಅದು ನಿಮ್ಮ (ಇ.ಡಿ. ಅಧಿಕಾರಿಗಳು) ಬೇಜವಾಬ್ದಾರಿಯಾಗುತ್ತದೆ

l  ಸೆಕ್ಷನ್‌ 50ರ ಅಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಸಮನ್ಸ್‌ ನೀಡಿ, ಅವರು ವಿಚಾರಣೆಗೆ ಹಾಜರಾಗಲಿಲ್ಲ ಅಥವಾ ವಿಚಾರಣೆಗೆ ಸಹಕರಿಸಲಿಲ್ಲ ಎಂದಾಕ್ಷಣ ಸೆಕ್ಷನ್‌ 19ರ ಅಡಿಯಲ್ಲಿ ಅವರನ್ನು ಬಂಧಿಸಲಾಗದು

l  ಇ.ಡಿ. ಅಧಿಕಾರಿಗಳು ಕೇಳಿದ ಪ್ರಶ್ನೆಗೆ ವ್ಯಕ್ತಿಯು ಉತ್ತರಿಸಲು ಸಾಧ್ಯವಾಗಲಿಲ್ಲ ಎನ್ನುವುದು ಆತನನ್ನು ಬಂಧಿಸುವುದಕ್ಕೆ ಇರುವ ಸಕಾರಣವಲ್ಲ

l  ವ್ಯಕ್ತಿಯ ಬಂಧನಕ್ಕೆ ಅಗತ್ಯವಾದ ಸಾಕ್ಷ್ಯಗಳನ್ನು, ಸಕಾರಣಗಳನ್ನು ಇ.ಡಿ ಅಧಿಕಾರಿಗಳು ಕಲೆ ಹಾಕಬೇಕಿರುವುದು ಮುಖ್ಯ

l  ಇ.ಡಿ. ಅಧಿಕಾರಿಗಳು ವ್ಯಕ್ತಿಯೊಬ್ಬರನ್ನು ಬಂಧಿಸಿರುವುದು ನ್ಯಾಯಸಮ್ಮತವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ವಿಚಾರಣಾ ನ್ಯಾಯಾಲಯದ ಕರ್ತವ್ಯ

l  ಸರಿಯಾಗಿ ಪರಿಶೀಲನೆ ನಡೆಸದೆ, ವ್ಯಕ್ತಿಯನ್ನು ಬಂಧಿಸುವುದಕ್ಕೆ ವಿಚಾರಣಾ ನ್ಯಾಯಾಲಯವು ಆದೇಶ ನೀಡಬಾರದು

l  ಬಂಧನವು ಸೆಕ್ಷನ್‌ 19ರ ಅನ್ವಯವೇ ಇದೆಯೇ ಎಂಬುದನ್ನು ವಿಚಾರಣಾ ನ್ಯಾಯಾಲಯವು ಖಚಿತಪಡಿಸಿಕೊಳ್ಳಬೇಕು

l  ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಡಿಸೆಂಬರ್‌ನಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಬಂಧನದ ನಂತರ ಬಂಧಿತ ವ್ಯಕ್ತಿಗೆ ಮೌಖಿಕವಾಗಿ ಮಾಹಿತಿ ನೀಡಿದರೂ ಸಾಕು. ಆದರೆ 24 ಗಂಟೆಗಳ ಒಳಗೆ ಲಿಖಿತ ರೂಪದಲ್ಲಿ ಕಾರಣಗಳನ್ನು ಒದಗಿಸಬೇಕು ಎಂದು ಹೇಳಿತ್ತು.

‘ಸುಪ್ರೀಂ’ ತೀರ್ಪು ಉಲ್ಲೇಖಿಸಿದ್ದ ದೆಹಲಿ ಹೈಕೋರ್ಟ್‌

‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ 50ರ ಅಡಿಯಲ್ಲಿ ಸಮನ್ಸ್‌ ನೀಡಲಾಗಿದೆ ಎಂದ ಮಾತ್ರಕ್ಕೆ ವ್ಯಕ್ತಿಯೊಬ್ಬರನ್ನು ಬಂಧಿಸಲು ಅಧಿಕಾರವಿದೆ ಎಂದರ್ಥವಲ್ಲ’ ಎಂದು ದೆಹಲಿ ಹೈಕೋರ್ಟ್‌ 2023ರ ಅಕ್ಟೋಬರ್‌ 19ರಂದು ತೀರ್ಪು ನೀಡಿತ್ತು. ಆಶಿಶ್‌ ಮಿತ್ತಲ್‌ ಅವರ ಅರ್ಜಿ ಸಂಬಂಧ ನ್ಯಾಯಾಲಯವು ಈ ತೀರ್ಪು ನೀಡಿತ್ತು.

‘ಹೀಗೆಂದ ಮಾತ್ರಕ್ಕೆ ಸಮನ್ಸ್‌ ನೀಡಿದರೆ, ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿಯೇ ಬಂಧಿಸುತ್ತಾರೆ ಎನ್ನುವ ಕಾರಣಕ್ಕೆ ಇ.ಡಿ. ಅಧಿಕಾರಿಗಳು ಸಮನ್ಸ್‌ ನೀಡುವುದನ್ನು ತಡೆಹಿಡಿಯುವುದಕ್ಕೆ ಸಾಧ್ಯವಿಲ್ಲ ಮತ್ತು ವ್ಯಕ್ತಿಯನ್ನು ಬಂಧಿಸಬೇಡಿ ಎನ್ನುವುದಕ್ಕೂ ಸಾಧ್ಯವಿಲ್ಲ’ ಎಂದೂ ಅದು ಹೇಳಿತ್ತು.  

ಹೈಕೋರ್ಟ್‌ ಹೇಳಿದ್ದೇನು?

l  ಇ.ಡಿ. ಅಧಿಕಾರಿಗಳ ಇಷ್ಟ–ಕಷ್ಟಗಳ ಆಧಾರದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲು ಸೆಕ್ಷನ್‌ 19ಅನ್ನು ಬಳಸಿಕೊಳ್ಳುವಂತಿಲ್ಲ. ಬಂಧನ ಮಾಡುವ ಮೊದಲು ಮೂರು ಹಂತಗಳನ್ನು ಅಧಿಕಾರಿಗಳು ಹಾದು ಹೋಗಲೇ ಬೇಕು

1.  ವ್ಯಕ್ತಿಯನ್ನು ಬಂಧಿಸಲಾಗುತ್ತಿದೆ ಎಂದರೆ, ಇ.ಡಿ ಅಧಿಕಾರಿಗಳ ಬಳಿ ಬಲವಾದ ಸಾಕ್ಷ್ಯವಿರಬೇಕು. ಬಂಧನವನ್ನು ಸಮರ್ಥಿಸಿಕೊಳ್ಳಲು ಸಕಾರಣಗಳಿರಬೇಕು. ಜೊತೆಗೆ, ವ್ಯಕ್ತಿಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿಯೇ ಬಂಧಿಸಬೇಕು ವಿನಾ ಇತರೆ ಕಾಯ್ದೆಗಳ ಅಡಿಯಲ್ಲಿ ಬಂಧಿಸುವಂತಿಲ್ಲ

2.  ಬಂಧಿಸಲು ಇರುವ ಸಕಾರಣಗಳು ಬರಹ ರೂಪದಲ್ಲಿ ಇರಬೇಕು

3.  ಬಂಧನಕ್ಕೆ ಇರುವ ಸಕಾರಣಗಳು, ಅಧಿಕಾರಿಗಳ ಬಳಿ ಇರುವ ದಾಖಲೆ ಅಥವಾ ಸಾಕ್ಷ್ಯಗಳನ್ನೇ ಆಧಾರಿಸಿರಬೇಕು

l  ಕಾಯ್ದೆಯ ಸೆಕ್ಷನ್‌ 19 (1) ಹಾಗೂ ಸೆಕ್ಷನ್‌ 19(2) ಅನ್ನು ಅಧಿಕಾರಿಗಳು ಅನುಸರಿಸಲೇಬೇಕು. ಇದಕ್ಕೆ ಯಾವುದೇ ವಿನಾಯಿತಿಯನ್ನು ನೀಡಲು ಸಾಧ್ಯವಿಲ್ಲ

(ಸೆಕ್ಷನ್‌ 19 (2): ವ್ಯಕ್ತಿಯನ್ನು ಬಂಧಿಸಿದ ತಕ್ಷಣದಲ್ಲಿಯೇ ಬಂಧನದ ಸಕಾರಣಗಳನ್ನು ಉನ್ನತ ಅಧಿಕಾರಿಗೆ ನೀಡಬೇಕು. ಜೊತೆಗೆ, ಅಧಿಕಾರಿಗಳು ತಮ್ಮ ಬಳಿ ಇರುವ ಸಾಕ್ಷ್ಯಗಳನ್ನೂ ಉನ್ನತ ಅಧಿಕಾರಿಗೆ ನೀಡಬೇಕು)

ಆಧಾರ: ಪಿಟಿಐ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ, ದೆಹಲಿ ಹೈಕೋರ್ಟ್‌ ತೀರ್ಪು ಹಾಗೂ ಸುಪ್ರೀಂ ಕೋರ್ಟ್‌ ತೀರ್ಪು

************

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT