ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ ಅಗಲ | ಚುನಾವಣಾ ಬಾಂಡ್‌: ಸಿದ್ಧವಿರುವ ಮಾಹಿತಿ ನೀಡಲು ಹಲವಾರು ನೆಪ
ಆಳ ಅಗಲ | ಚುನಾವಣಾ ಬಾಂಡ್‌: ಸಿದ್ಧವಿರುವ ಮಾಹಿತಿ ನೀಡಲು ಹಲವಾರು ನೆಪ
Published 11 ಮಾರ್ಚ್ 2024, 23:59 IST
Last Updated 11 ಮಾರ್ಚ್ 2024, 23:59 IST
ಅಕ್ಷರ ಗಾತ್ರ

ಚುನಾವಣಾ ಬಾಂಡ್‌ ಯೋಜನೆ ಜಾರಿಗೆ ತಂದಾಗ ಕೇಂದ್ರ ಸರ್ಕಾರವು, ‘ಕಪ್ಪು ಹಣವು ಚುನಾವಣೆ ಮೂಲಕ ರಾಜಕೀಯಕ್ಕೆ ಬರುವುದನ್ನು ತಡೆಯಬೇಕಿದೆ. ಹೀಗಾಗಿಯೇ ಚುನಾವಣಾ ಬಾಂಡ್‌ ಯೋಜನೆ ತರಲಾಗುತ್ತಿದೆ’ ಎಂದು ಹೇಳಿತ್ತು. ರಾಜಕೀಯ ಪಕ್ಷಗಳ ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದ ಈ ಯೋಜನೆಯು ದೇಣಿಗೆ ನೀಡಿದವರ ಮತ್ತು ಅದನ್ನು ಪಡೆದುಕೊಂಡವರ ಮಾಹಿತಿಯನ್ನು ಬಚ್ಚಿಡುತ್ತಿದ್ದುದೇ ಹೆಚ್ಚು. ಆ ಎಲ್ಲಾ ಮಾಹಿತಿಯನ್ನು ರಹಸ್ಯವಾಗಿ ಇಡಲು ಸಂಬಂಧಿತ ಕಾನೂನಿನಲ್ಲಿ ಅವಕಾಶವಿತ್ತೇ ಹೊರತು, ಮಾಹಿತಿಯನ್ನು ಸಂಗ್ರಹಿಸಲು ಯಾವುದೇ ನಿರ್ಬಂಧ ಇರಲಿಲ್ಲ. ಬಾಂಡ್‌ ನೀಡುವ ಮುನ್ನ, ಭಾರತೀಯ ಸ್ಟೇಟ್‌ ಬ್ಯಾಂಕ್‌, ಖರೀದಿದಾರರ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದೇ ನಿಯಮದಲ್ಲಿ ಹೇಳಲಾಗಿದೆ.

2018ರ ಜನವರಿಯಲ್ಲಿ ಜಾರಿಗೆ ಬಂದ ‘ಚುನಾವಣಾ ಬಾಂಡ್‌ ಯೋಜನೆ’ಯ ಸೆಕ್ಷನ್‌ 7 ಸಂಪೂರ್ಣವಾಗಿ ಬಾಂಡ್‌ ಖರೀದಿದಾರರ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ್ದಾಗಿದೆ. ಯಾವುದೇ ಭಾರತೀಯ ವ್ಯಕ್ತಿ, ಕುಟುಂಬ, ಕಂಪನಿ, ಸಂಸ್ಥೆ ಈ ಬಾಂಡ್‌ಗಳನ್ನು ಖರೀದಿಸಬಹುದು. ಹಾಗೆಂದು ಸೀದಾ ಎಸ್‌ಬಿಐ ಶಾಖೆಗೆ ಹೋಗಿ ಬಾಂಡ್‌ ಖರೀದಿಸಲು ಸಾಧ್ಯವಿಲ್ಲ. ಬಾಂಡ್‌ ಖರೀದಿ ಅವಧಿಗೂ ಮುನ್ನ ಎಸ್‌ಬಿಐ ಅರ್ಜಿಗಳನ್ನು ಹೊರಡಿಸುತ್ತದೆ. ಬಾಂಡ್‌ ಖರೀದಿಸಲು ಉದ್ದೇಶಿಸುವವರು, ಆ ಅರ್ಜಿಗಳನ್ನು ಭರ್ತಿ ಮಾಡಿ ಎಸ್‌ಬಿಐಗೆ ಸಲ್ಲಿಸಬೇಕಿತ್ತು. ಎಸ್‌ಬಿಐ ಅರ್ಜಿಗಳನ್ನು ಮಾನ್ಯ ಮಾಡಿದರಷ್ಟೇ, ಬಾಂಡ್‌ ಖರೀದಿಸಲು ಅವಕಾಶವಿತ್ತು.

ಚುನಾವಣಾ ಬಾಂಡ್‌ ಅರ್ಜಿಗಳಲ್ಲಿ ಖರೀದಿದಾರರು ನಮೂದಿಸಬೇಕಿದ್ದ ಮಾಹಿತಿ ವಿಸ್ತೃತವಾಗಿಯೇ ಇತ್ತು. ಖರೀದಿಸುವವರು ತಮ್ಮ ಹೆಸರು, ವಾಸದ ವಿಳಾಸ, ಪಾಸ್‌ಪೋರ್ಟ್‌/ಆಧಾರ್/ಮತದಾರರ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಿತ್ತು. ಜತೆಗೆ ಫೋನ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ವಿಳಾಸವನ್ನೂ ನೀಡಬೇಕಿತ್ತು. ಈ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿಯೇ ಅರ್ಜಿಗಳನ್ನು ಸಲ್ಲಿಸಬೇಕಿತ್ತು. ಅಂತಹ ಅರ್ಜಿಗಳನ್ನು ಎಸ್‌ಬಿಐ ಪರಿಶೀಲಿಸಬೇಕಿತ್ತು. ಈ ಮಾಹಿತಿಗಳು ಸರಿಯಾಗಿ ಇಲ್ಲದೇ ಇದ್ದರೆ ಅಂತಹವರಿಗೆ ಬಾಂಡ್‌ ಮಾರಾಟ ಮಾಡುವಂತಿಲ್ಲ ಎಂದೇ ಸೆಕ್ಷನ್‌ 7 ವಿವರಿಸುತ್ತದೆ.

ಈ ಪ್ರಕಾರ, ಈವರೆಗೆ ಮಾರಾಟವಾದ ಎಲ್ಲಾ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರು ಯಾರು ಎಂಬ ಮಾಹಿತಿ ಎಸ್‌ಬಿಐ ಬಳಿ ಇರಲೇಬೇಕು. ಅಂತಹ ಮಾಹಿತಿ ತನ್ನ ಬಳಿ ಇದೆ ಎಂದು ಎಸ್‌ಬಿಐ ಈ ಹಿಂದೆಯೇ ಸುಪ್ರೀಂ ಕೋರ್ಟ್‌ಗೆ ಹಲವು ಬಾರಿ ಹೇಳಿದೆ. ಆದರೆ, ಅದೇ ಮಾಹಿತಿಯನ್ನು ಈಗ ನೀಡಿ ಎಂದು ಸು‍ಪ್ರೀಂ ಕೋರ್ಟ್‌ ಆದೇಶಿಸಿದಾಗ, ಮಾಹಿತಿ ತಾಳೆ ನೋಡಲು ಸಮಯ ಕೇಳಿತ್ತು. 

ಚುನಾವಣಾ ಬಾಂಡ್‌ಗಳಿಂದ ಅತಿ ಹೆಚ್ಚಿನ ದೇಣಿಗೆ ಬಂದಿರುವುದು ಬಿಜೆಪಿಗೆ. ಯಾವ ಉದ್ಯಮಿಯಿಂದ ಆಡಳಿತಾರೂಢ ಪಕ್ಷಕ್ಕೆ ಎಷ್ಟು ದೇಣಿಗೆ ಬಂದಿದೆ ಎಂಬುದು ಬಹಿರಂಗವಾದರೆ, ಆತ ಅಷ್ಟು ದೇಣಿಗೆ ನೀಡಿದ್ದು ಏಕೆ ಎಂಬುದೂ ಗೊತ್ತಾಗುತ್ತದೆ.  ಈ ಎಲ್ಲಾ ಮಾಹಿತಿ ಬಹಿರಂಗವಾದರೆ ಚುನಾವಣೆಯಲ್ಲಿ ಬಿಜೆಪಿಗೆ ಅದರಿಂದ ಸ್ವಲ್ಪ ತೊಡಕಾಗಲಿದೆ. ಹೀಗಾಗಿಯೇ ಮಾಹಿತಿ ನೀಡಲು ಜೂನ್‌ ಅಂತ್ಯದವರೆಗೆ ಸಮಯ ಕೇಳಲಾಗಿತ್ತು ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಹೀಗೆ ಮಾಹಿತಿ ನೀಡಲು ಸಮಯ ಕೇಳಬಹುದು ಎಂದು ಈ ಮೊದಲೇ ಅಂದಾಜಿಸಿದ್ದ ಸುಪ್ರೀಂ ಕೋರ್ಟ್‌ ಫೆ.15ರ ತೀರ್ಪಿನಲ್ಲಿ ಅದನ್ನು ಉಲ್ಲೇಖಿಸಿತ್ತು. ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಎಸ್‌ಬಿಐ ಬಳಿ, ರಾಜಕೀಯ ಪಕ್ಷಗಳ ಬಳಿ, ಬಾಂಡ್‌ ಮೂಲಕ ದೇಣಿಗೆ ನೀಡಿದ ಮೊತ್ತದ ಬಗ್ಗೆ ಕಂಪನಿಗಳು ತಮ್ಮ ಲೆಕ್ಕಪುಸ್ತಕದಲ್ಲಿ ಇದ್ದೇ ಇರುತ್ತದೆ. ಇನ್ನು ಮಾಹಿತಿಯನ್ನು ಸಿದ್ಧಪಡಿಸಿಟ್ಟುಕೊಳ್ಳಿ ಎಂದು 2019ರ ಮಧ್ಯಂತರ ಆದೇಶದಲ್ಲೂ ಸೂಚಿಸಲಾಗಿತ್ತು. ಹೀಗಾಗಿ ಈಗ ಮಾಹಿತಿ ನೀಡಿ ಎಂದು ಹೇಳಿದಾಗ, ಯಾರೂ ನಾವಿದನ್ನು ನಿರೀಕ್ಷಿಸಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಲು ಅವಕಾಶವಿಲ್ಲ. ಮಾಹಿತಿ ನೀಡಲು ಸಮಯ ಕೇಳುವಂತೆಯೂ ಇಲ್ಲ. ಅದನ್ನು ಒಪ್ಪಲೂ ಸಾಧ್ಯವಿಲ್ಲ ಎಂದು ಸಂವಿಧಾನ ಪೀಠವು ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿತ್ತು. ಸುಪ್ರೀಂ ಕೋರ್ಟ್‌ ಅದೇ ಮಾತನ್ನು ಈಗ ಮತ್ತೊಮ್ಮೆ ಹೇಳಿದೆ.

‘ಮಾಹಿತಿ ಸಿದ್ಧವಿರಬೇಕು’

ಚುನಾವಣಾ ಬಾಂಡ್‌ ಖರೀದಿಗೆ ಬ್ಯಾಂಕ್‌ ಖಾತೆ/ಡಿಮ್ಯಾಂಡ್‌ ಡ್ರಾಫ್ಟ್‌/ಚೆಕ್‌/ಆನ್‌ಲೈನ್‌ ಪಾವತಿ ಮೂಲಕ ಮಾತ್ರ ಹಣವನ್ನು ಪಾವತಿಸುವ ಅವಕಾಶವಿದೆ. ಜತೆಗೆ ನೀವು (ಎಸ್‌ಬಿಐ) ಬಾಂಡ್‌ ನೀಡುವ ಮುನ್ನ ಖರೀದಿದಾರನ ಕೆವೈಸಿ ದಾಖಲೆಗಳನ್ನು ಪಡೆದುಕೊಂಡಿದ್ದೀರಿ. ಆ ಮಾಹಿತಿಯೆಲ್ಲಾ ನಿಮ್ಮ ಬಳಿಯೇ ಇದೆ. ಅದನ್ನು ಚುನಾವಣಾ ಆಯೋಗಕ್ಕೆ ಒದಗಿಸಿ ಎಂದು ಫೆ.15ರ ತೀರ್ಪಿನಲ್ಲಿ ಸಂವಿಧಾನ ಪೀಠವು ಆದೇಶಿಸಿತ್ತು.

ಇನ್ನು ಬಾಂಡ್ ನಗದೀಕರಿಸಿಕೊಳ್ಳಲು ಅವಕಾಶವಿರುವುದು ಎಸ್‌ಬಿಐ ಶಾಖೆಗಳ ಮೂಲಕ ಮಾತ್ರ. ಈ ಎಲ್ಲಾ ಪ್ರಕ್ರಿಯೆಗಳು ಬ್ಯಾಂಕ್‌ ಮೂಲಕವೇ ನಡೆಯುತ್ತದೆ. ಎಲ್ಲಾ ಖಾತೆಗಳ ವಿವರ, ವಹಿವಾಟಿನ ವಿವರ ಎಲ್ಲವೂ ಎಸ್‌ಬಿಐ ಶಾಖೆಗಳ ಮೂಲಕವೇ ನಡೆಯುತ್ತದೆ. ಹೀಗಿರುವಾಗ ಬಾಂಡ್‌ಗಳನ್ನು ಯಾವ ಪಕ್ಷ ನಗದೀಕರಿಸಿಕೊಂಡಿತು ಎಂಬ ಮಾಹಿತಿ ಸಿದ್ಧವಿರುತ್ತದೆ. ಇದರಲ್ಲಿ ಮಾಹಿತಿ ಗೋಪ್ಯತೆಯ ಪ್ರಶ್ನೆಯೇ ಇಲ್ಲ. ಹೀಗಾಗಿ ಎಲ್ಲಾ ಮಾಹಿತಿಯನ್ನು ಒದಗಿಸಿ ಎಂದು ಪೀಠವು ಆದೇಶಿಸಿತ್ತು.

2018ರಿಂದ 2023ರ ಅಂತ್ಯದವರೆಗೆ ಎಸ್‌ಬಿಐ ಸುಮಾರು 24,000 ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದೆ. ಆ ಬಾಂಡ್‌ಗಳು ಖರೀದಿಸಿವರ ಮತ್ತು ಅದನ್ನು ನಗದೀಕರಿಸಿಕೊಂಡವರ ಮಾಹಿತಿ ಬ್ಯಾಂಕ್‌ ಬಳಿ ಲಭ್ಯವಿದೆ. ಆ 24 ಸಾವಿರ ಬಾಂಡ್‌ಗಳ ಮಾಹಿತಿಗಳನ್ನು ತಾಳೆ ನೋಡಲು ಎಷ್ಟು ಸಮಯಬೇಕು ಎಂದೂ ವಿರೋಧ ಪಕ್ಷಗಳು ಮತ್ತು ಬಾಂಡ್‌ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಿದ್ದ ಅರ್ಜಿದಾರರು ಪ್ರಶ್ನಿಸಿದ್ದಾರೆ.

ರಾಜಕೀಯ ಪಕ್ಷಗಳಿಗೆ ದೊರೆತ ದೇಣಿಗೆಗೆ ಕೇಂದ್ರ ಸರ್ಕಾರದಿಂದ ₹10.47 ಕೋಟಿ ಶುಲ್ಕ

ಚುನಾವಣಾ ಬಾಂಡ್‌ ಖರೀದಿದಾರರಿಂದ ಮತ್ತು ಅವುಗಳನ್ನು ನಗದೀಕರಿಸಿಕೊಳ್ಳುವವರಿಂದ ಎಸ್‌ಬಿಐ ಯಾವುದೇ ಕಮಿಷನ್‌ ಅಥವಾ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ನಿಯಮ ಹೇಳುತ್ತದೆ. ಹಾಗಿದ್ದರೆ ಎಸ್‌ಬಿಐ ಉಚಿತವಾಗಿ ಈ ಕೆಲಸ ಮಾಡಿಕೊಟ್ಟಿತೇ ಎಂಬ ಪ್ರಶ್ನೆ ಏಳುತ್ತದೆ. ಆ ಶುಲ್ಕವನ್ನು ಕೇಂದ್ರ ಸರ್ಕಾರ ಪಾವತಿಸಿದೆ ಎಂದು ಆ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.

ಏಕೆಂದರೆ ಚುನಾವಣಾ ಬಾಂಡ್‌ ಮುದ್ರಣ ವೆಚ್ಚ ಎಂದು ‘ಸೆಕ್ಯುರಿಟಿ ಪ್ರಿಂಟಿಂಗ್‌ ಅಂಡ್‌ ಮಿಂಟಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌’ಗೆ ಕೇಂದ್ರ ಸರ್ಕಾರವು ಒಟ್ಟು ₹1.90 ಕೋಟಿ ಶುಲ್ಕ ಪಾವತಿ ಮಾಡಿದೆ. ಚುನಾವಣಾ ಬಾಂಡ್‌ ಯೋಜನೆ ನಿರ್ವಹಣೆಗೆ ಎಂದು ಎಸ್‌ಬಿಐಗೆ ಕೇಂದ್ರ ಸರ್ಕಾರವು ಒಟ್ಟು ₹8.57 ಕೋಟಿ ಪಾವತಿಸಿದೆ.

ಹಣಕಾಸು ಸಚಿವಾಲಯವು ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ ರಾಜಕೀಯ ಪಕ್ಷಗಳಿಗೆ ಈವರೆಗೆ ₹16,518 ಕೋಟಿ ದೇಣಿಗೆ ಚುನಾವಣಾ ಬಾಂಡ್‌ಗಳ ರೂಪದಲ್ಲಿ ಬಂದಿದೆ. ಆ ಬಾಂಡ್‌ಗಳ ಖರೀದಿ ವೇಳೆ ಜಿಎಸ್‌ಟಿ ಸೇರಿ ಯಾವ ಸ್ವರೂಪದ ತೆರಿಗೆಯನ್ನೂ ವಿಧಿಸಿಲ್ಲ. ಬಾಂಡ್‌ಗಳ ಖರೀದಿ ವೇಳೆಯೂ ಯಾವುದೇ ತೆರಿಗೆ ವಿಧಿಸಿಲ್ಲ. ಬದಲಿಗೆ ಬಾಂಡ್‌ಗಳ ಮುದ್ರಣ ವೆಚ್ಚ ಮತ್ತು ಯೋಜನೆ ನಿರ್ವಹಣೆ ವೆಚ್ಚ ಎಂದು ಕೇಂದ್ರ ಸರ್ಕಾರವು ತನ್ನ ಬೊಕ್ಕಸದಿಂದ ₹10.47 ಕೋಟಿ ವ್ಯಯ ಮಾಡಿದೆ.

ಅಂದರೆ ಬಾಂಡ್‌ ಖರೀದಿಸಿದವರೂ ತೆರಿಗೆ ಪಾವತಿಸಿಲ್ಲ, ದೇಣಿಗೆ ಪಡೆದುಕೊಂಡವರೂ ತೆರಿಗೆ ಪಾವತಿಸಿಲ್ಲ. ಬದಲಿಗೆ ಜನರ ತೆರಿಗೆ ಹಣವನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ಅಷ್ಟೂ ವೆಚ್ಚವನ್ನು ಭರಿಸಿದೆ.

ಚುನಾವಣಾ ಬಾಂಡ್‌ ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಫೆ.15ರಂದು ತೀರ್ಪು ನೀಡಿತ್ತು. ಯಾವೆಲ್ಲಾ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಬೇಕು ಎಂಬುದರ ಕುರಿತು ವಿಸ್ತೃತವಾಗಿಯೇ ನ್ಯಾಯಾಲಯ ಹೇಳಿತ್ತು. ಎಲ್ಲ ಮಾಹಿತಿಗಳನ್ನು ವಿವರವಾಗಿಯೇ ಹೇಳಿದರೂ ಮಾಹಿತಿ ತಾಳೆನೋಡಲು ಸಮಯಾವಕಾಶ ನೀಡಬೇಕು ಎಂದು ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಚುನಾವಣಾ ಬಾಂಡ್‌ ಯೋಜನೆ–2018 ಅನ್ವಯವೂ ಎಸ್‌ಬಿಐ ಬಳಿ ಎಲ್ಲ ಮಾಹಿತಿಗಳು ಸಿದ್ಧವಾಗಿರಬೇಕು. ನ್ಯಾಯಾಲಯಗಳು ಎಂದು ಕೇಳಿದರೂ ಅಂದು ಮಾಹಿತಿಗಳು ನೀಡುವಂತಿರಬೇಕು. ಈ ಅಂಶವನ್ನು ಸುಪ್ರೀಂ ಕೋರ್ಟ್‌ ತನ್ನ ಸೋಮವಾರದ ಆದೇಶದಲ್ಲಿ ಉಲ್ಲೇಖಿಸಿದೆ.

ಕೋರ್ಟ್‌ ಹೇಳಿದ್ದು

  • 2019 ಏಪ್ರಿಲ್‌ 12ರಂದು ಸುಪ್ರೀಂ ಕೋರ್ಟ್‌ ನೀಡಿದ ಮಧ್ಯಂತರ ಆದೇಶದ ದಿನದಿಂದ ಆರಂಭಗೊಂಡು 2024 ಫೆ.15ರ ಒಳಗೆ ಖರೀದಿಸಲಾದ ಎಲ್ಲ ಚುನಾವಣಾ ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಬಾಂಡ್‌ಗಳನ್ನು ಖರೀದಿಸಿದ ದಿನಾಂಕ, ಯಾರು ಈ ಬಾಂಡ್‌ಗಳನ್ನು ಖರೀಸಿದರು, ಯಾವ ಮುಖಬೆಲೆಯ ಬಾಂಡ್‌ಗಳನ್ನು ಖರೀದಿಸಲಾಯಿತು ಎಂಬ ವಿವರವನ್ನು ಆಯೋಗಕ್ಕೆ ನೀಡಬೇಕು

  • 2019 ಏಪ್ರಿಲ್‌ 12ರಂದು ಸುಪ್ರೀಂ ಕೋರ್ಟ್‌ ನೀಡಿದ ಮಧ್ಯಂತರ ಆದೇಶದ ದಿನದಿಂದ ಆರಂಭಗೊಂಡು 2024 ಫೆ.15ರ ಒಳಗೆ ಯಾವೆಲ್ಲ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ಪಡೆದುಕೊಂಡಿದ್ದಾವೆ ಎಂಬ ವಿವರಗಳನ್ನು ಸಲ್ಲಿಸಬೇಕು. ಈ ವಿವರಗಳಲ್ಲಿ ಪಕ್ಷವೊಂದು ಯಾವ ದಿನಾಂಕದಂದು ಬಾಂಡ್‌ಗಳನ್ನು ನಗದೀಕರಿಸಿಕೊಂಡಿದೆ ಮತ್ತು ಯಾವ ಮುಖಬೆಲೆಯ ಬಾಂಡ್‌ಗಳನ್ನು ನಗದೀಕರಿಸಿಕೊಂಡಿದೆ ಎಂಬ ವಿವರ ಸಲ್ಲಿಸಬೇಕು

ಯಾವ ದಿನಾಂಕದಲ್ಲಿ ಚುನಾವಣಾ ಬಾಂಡ್‌ಅನ್ನು ಖರೀದಿಸಲಾಗಿದೆ, ಯಾವ ಮುಖಬೆಲೆ ಯದ್ದನ್ನು ಖರೀದಿಸಲಾಗಿದೆ ಮತ್ತು ಯಾರು ಖರೀದಿಸಿದರು ಎನ್ನುವ ಮಾಹಿತಿ ಜೊತೆಯಲ್ಲಿ ಈ ಬಾಂಡ್‌ಗಳನ್ನು ಯಾವ ಪಕ್ಷವು ಪಡೆದುಕೊಂಡಿತು, ಯಾವ ದಿನಾಂಕದಲ್ಲಿ ನಗದೀಕರಿಸಿಕೊಂಡಿತು ಎಂಬೆಲ್ಲಾ ಮಾಹಿತಿಗಳನ್ನು ತಾಳೆನೋಡಿಕೊಡುತ್ತೇವೆ. ಇದಕ್ಕಾಗಿ ಜೂನ್‌ 30ವರೆಗೆ ಸಮಯಾವಕಾಶ ನೀಡಿ ಎಂದು ಎಸ್‌ಬಿಐ ಸುಪ್ರೀಂ ಕೋರ್ಟ್‌ ಅನ್ನು ಕೋರಿ ಕೊಂಡಿತ್ತು. ವಾಸ್ತವದಲ್ಲಿ ನ್ಯಾಯಾಲಯವು ಹೀಗೆ ಯಾವ ಮಾಹಿತಿ ಗಳನ್ನು ತಾಳೆನೋಡಿ ಕೊಡುವುದಕ್ಕೆ ಎಸ್‌ಬಿಐಗೆ ಕೇಳಿಯೇ ಇರಲಿಲ್ಲ. 

ಈಗ ನ್ಯಾಯಾಲಯವು, ಬ್ಯಾಂಕ್‌ ಬಳಿ ಇರುವ ಮಾಹಿತಿಗಳನ್ನು ನೀಡಿ, ಅಗತ್ಯ ಇದ್ದವರು ಈ ದತ್ತಾಂಶಗಳ ತಾಳೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದೆ.

ಆಧಾರ: ಚುನಾವಣಾ ಬಾಂಡ್‌ ಯೋಜನೆ–2018 ದಾಖಲೆ ಪತ್ರಗಳು, 2019ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶ, 2024ರ ಫೆಬ್ರುವರಿ 15ರಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ನೀಡಿದ ತೀರ್ಪು, ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಸ್‌ಬಿಐನ ‘ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು–ಎಫ್‌ಎಕ್ಯು’, ಲೋಕಸಭೆಗೆ ಕೇಂದ್ರ ಹಣಕಾಸು ಸಚಿವಾಲಯ ನೀಡಿದ ಮಾಹಿತಿಗಳು, ಎಡಿಆರ್‌ನ ವರದಿಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT