ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ|ಶಾಂತಿಪ್ರಿಯರ ಕಿರ್ಗಿಸ್ತಾನದಲ್ಲಿ 
ವಿದೇಶಿ ವಿದ್ಯಾರ್ಥಿಗಳ ಮೇಲೇಕೆ ಹಲ್ಲೆ?
ಆಳ–ಅಗಲ|ಶಾಂತಿಪ್ರಿಯರ ಕಿರ್ಗಿಸ್ತಾನದಲ್ಲಿ ವಿದೇಶಿ ವಿದ್ಯಾರ್ಥಿಗಳ ಮೇಲೇಕೆ ಹಲ್ಲೆ?
Published 19 ಮೇ 2024, 22:30 IST
Last Updated 19 ಮೇ 2024, 22:30 IST
ಅಕ್ಷರ ಗಾತ್ರ

ಮಧ್ಯ ಏಷ್ಯಾದ ಪುಟ್ಟ ದೇಶ ಕಿರ್ಗಿಸ್ತಾನ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಈಚೆಗೆ ಕಿರ್ಗಿಸ್ತಾನದ ಸ್ಥಳೀಯರು ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಕೆಲವು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂಬ ಸುದ್ದಿಗಳು ಇವೆಯಾದರೂ ಅಲ್ಲಿನ ಸರ್ಕಾರ ಅದನ್ನು ದೃಢಪಡಿಸಿಲ್ಲ. ಹೀಗೆ ಹಲ್ಲೆಗೆ ಗುರಿಯಾದ ವಿದ್ಯಾರ್ಥಿಗಳಲ್ಲಿ ಪಾಕಿಸ್ತಾನದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ಭಾರತದ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆದಿದೆ. ಈಗ ಪರಿಸ್ಥಿತಿ ತಿಳಿಯಾಗಿದೆ ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ. ಈವರೆಗೂ ಸುದ್ದಿಯಲ್ಲಿ ಇರದಿದ್ದ ಈ ದೇಶದಲ್ಲಿ ಇದ್ದಕ್ಕಿದ್ದಂತೆ ಇಂತಹ ಕಲಹ ನಡೆಯಲು ಕಾರಣಗಳೇನು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ

ಕಿರ್ಗಿಝ್‌ ಭಾಷೆಯನ್ನಾಡುವ ಜನರ ಪುಟ್ಟ ನಾಡು ಕಿರ್ಗಿಸ್ತಾನ. ಒಂದೆಡೆ ಚೀನಾ, ದಕ್ಷಿಣದಲ್ಲಿ ತಜಕಿಸ್ತಾನ, ಉತ್ತರದಲ್ಲಿ ಕಜಕಸ್ತಾನದಿಂದ ಸುತ್ತುವರಿದಿರುವ ಈ ದೇಶ ಮತ್ತು ಅಲ್ಲಿನ ಜನರು ಶಾಂತಿಪ್ರಿಯರೆಂದು ಹೆಸರಾದವರು. ಆಂತರಿಕ ಕಲಹಗಳಾಗಲೀ, ನೆರೆಯ ದೇಶಗಳೊಂದಿಗೆ ಸಂಘರ್ಷವಾಗಲೀ ಇಲ್ಲದ ಈ ನಾಡು ವಿದೇಶಿಯರಿಗೂ ಹೆಚ್ಚು ಸುರಕ್ಷಿತ ಎಂದು ಹೆಸರಾಗಿತ್ತು. ಅಂತಹ ದೇಶದಲ್ಲಿ ಈಚೆಗೆ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಕೆಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿರಾರು ವಿದೇಶಿ ವಿದ್ಯಾರ್ಥಿಗಳು ತಮ್ಮ ತಾಯ್ನಾಡಿಗೆ ಮರಳಿದ್ದಾರೆ.

1991ಕ್ಕೂ ಮುನ್ನ ಯುಎಸ್‌ಎಸ್‌ಆರ್‌ನ ಸದಸ್ಯ ರಾಷ್ಟ್ರವಾಗಿದ್ದ ಕಿರ್ಗೀಝಿಯಾ, 1991ರ ಆಗಸ್ಟ್‌ 31ರಂದು ಸ್ವತಂತ್ರವಾಯಿತು. ದೇಶದ ಹೆಸರನ್ನು ಆಗ ಕಿರ್ಗಿಸ್ತಾನ ಎಂದು ಬದಲಿಸಲಾಗಿತ್ತು. ಕಿರ್ಗಿಝ್‌ ಇಲ್ಲಿನ ಮನೆಮಾತಾಗಿದ್ದರೂ ಯುಎಸ್‌ಎಸ್‌ಆರ್‌ನಡಿಯಲ್ಲಿ ಇದ್ದುದ್ದರಿಂದ ಈಗಲೂ ರಷ್ಯನ್‌ ಭಾಷೆಯೇ ಆಡಳಿತ ಭಾಷೆಯಾಗಿದೆ. ಯುಎಸ್‌ಎಸ್‌ಆರ್‌ನಿಂದ ಹೊರಬಂದ ನಂತರ ಕಿರ್ಗಿಸ್ತಾನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿತು. ಕಿರ್ಗಿಸ್ತಾನದ ವೈದ್ಯಕೀಯ ಕಾಲೇಜುಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಪಡೆದುಕೊಳ್ಳುವ ಮೂಲಕ ವಿದೇಶಿ ವಿದ್ಯಾರ್ಥಿಗಳಿಗೂ ಕೋರ್ಸ್‌ಗಳನ್ನು ಒದಗಿಸಲು ಆರಂಭಿಸಿತು. ಕಡಿಮೆ ವೆಚ್ಚ ಮತ್ತು ಉತ್ತಮ ಶೈಕ್ಷಣಿಕ ವಾತಾವರಣದ ಕಾರಣದಿಂದಲೇ ಕಿರ್ಗಿಸ್ತಾನದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಹೀಗೆ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ಸ್ಥಳೀಯರು ಮತ್ತು ವಿದೇಶಿಯರ ಮಧ್ಯೆ ಈವರೆಗೆ ಕಲಹ ನಡೆದಿರಲಿಲ್ಲ. ಆದರೆ ಈಗ ಅಂಥ ಕಲಹ ನಡೆದಿದೆ.

ವಿದೇಶಿಯರಿಗೆ ವೈದ್ಯಕೀಯ ಕೋರ್ಸ್‌ ನೀಡುವ ಪ್ರಮುಖ ವೈದ್ಯಕೀಯ ಕಾಲೇಜುಗಳು ದೇಶದ ರಾಜಧಾನಿ ಬಿಶ್ಕೇಖ್‌ನಲ್ಲಿಯೇ ಇವೆ. ಇದೇ ಮೇ 12ರಂದು ಬಿಶ್ಕೇಖ್‌ನ ಕಾಲೇಜೊಂದರ ಬಳಿ ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿತ್ತು. ಆ ಘರ್ಷಣೆ ನಡೆದದ್ದು ಏಕೆ ಎಂಬುದರ ಬಗ್ಗೆ ಕಿರ್ಗಿಸ್ತಾನ ಸರ್ಕಾರ ಈವರೆಗೆ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಘರ್ಷಣೆ ನಡೆದಾಗ ಈಜಿಪ್ಟ್‌ನ ವಿದ್ಯಾರ್ಥಿಗಳ ಗುಂಪು, ಸ್ಥಳೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿತ್ತು ಎನ್ನಲಾಗಿದೆ. ಆ ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಂಚಿಕೆಯಾಗಿತ್ತು. ಕಲಹ ತೀವ್ರಗೊಳ್ಳಲು ಈ ವಿಡಿಯೊಗಳೇ ಕಾರಣ ಎನ್ನಲಾಗಿದೆ. ವಿಡಿಯೊ ಹಂಚಿಕೆಯಾದ ಕೆಲವೇ ದಿನಗಳಲ್ಲಿ ಸ್ಥಳೀಯ ಯುವಕರ ಗುಂಪೊಂದು ವಿದೇಶಿ ವಿದ್ಯಾರ್ಥಿಗಳು ತಂಗಿರುವ ವಿದ್ಯಾರ್ಥಿ ನಿಲಯಗಳ ಮೇಲೆ ದಾಳಿ ನಡೆಸಿತ್ತು. ವಿದ್ಯಾರ್ಥಿಗಳನ್ನು ಹೊರಗೆ ಎಳೆದು ಹಲ್ಲೆ ನಡೆಸಿತ್ತು. ಆ ಹಲ್ಲೆಯ ವಿಡಿಯೊಗಳೂ ಹಂಚಿಕೆಯಾದವು. ಆನಂತರ ಮತ್ತಷ್ಟು ಹಲ್ಲೆಗಳು ನಡೆದವು.

ಹೀಗೆ ಹಲ್ಲೆಗೆ ಗುರಿಯಾದವರಲ್ಲಿ ಪಾಕಿಸ್ತಾನದ ವಿದ್ಯಾರ್ಥಿಗಳ ಸಂಖ್ಯೆಯೇ ದೊಡ್ಡದು. ಜತೆಗೆ ಭಾರತ ಮತ್ತು ಬಾಂಗ್ಲಾದೇಶದ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆದ ಆರೋಪಗಳು ಕೇಳಿಬಂದವು. ಭಾರತದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ನಿಲಯಗಳಿಂದ ಹೊರಬರಬಾರದು ಎಂದು ವಿದೇಶಾಂಗ ಸಚಿವಾಲಯ ಸಲಹೆ ನೀಡಿತು. ಕಿರ್ಗಿಸ್ತಾನದ ವಿದೇಶಾಂಗ ಸಚಿವಾಲಯದ ಜತೆಗೆ ಮಾತುಕತೆಯನ್ನೂ ನಡೆಸಿತು. ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿನ ಕಿರ್ಗಿಸ್ತಾನ ರಾಯಭಾರಿಯನ್ನು ಕರೆಸಿ, ಪ್ರತಿಭಟನೆ ದಾಖಲಿಸಿತು. ಈ ಎಲ್ಲಾ ಬೆಳವಣಿಗೆಗಳ ನಂತರ ಕಿರ್ಗಿಸ್ತಾನ ಸರ್ಕಾರವು ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದ ಈಜಿಪ್ಟ್‌ನ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿತು. ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ 30ಕ್ಕೂ ಹೆಚ್ಚು ಸ್ಥಳೀಯರನ್ನು ಬಂಧಿಸಿತು. ಸ್ಥಳೀಯರು ಮತ್ತು ವಿದೇಶಿ ವಿದ್ಯಾರ್ಥಿಗಳ ಜತೆಗೆ ಮಾತುಕತೆ ನಡೆಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು.

ಆದರೆ ವಾತಾವರಣ ಇನ್ನೂ ಪೂರ್ಣ ಪ್ರಮಾಣದಲ್ಲಿ ತಿಳಿಯಾಗಿಲ್ಲ. ಭಾರತೀಯರೂ ಸೇರಿ ವಿದೇಶಿ ವಿದ್ಯಾರ್ಥಿಗಳು ನೆಲೆಸಿರುವ ವಿದ್ಯಾರ್ಥಿ ನಿಲಯಗಳು, ಪಿ.ಜಿ.ಗಳ ಭದ್ರತೆಗೆ ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ಸ್ಥಳೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ
ಪ್ರತ್ಯೇಕ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಇದೇ ವ್ಯವಸ್ಥೆಯನ್ನು ಮುಂದುವರಿಸುವುದಾಗಿ ಕಿರ್ಗಿಸ್ತಾನ ಸರ್ಕಾರ ಭರವಸೆ ನೀಡಿದೆ. ಕಿರ್ಗಿಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

15,000 ಭಾರತೀಯ ವಿದ್ಯಾರ್ಥಿಗಳು
ಕಿರ್ಗಿಸ್ತಾನದಲ್ಲಿ ವೈದ್ಯಕೀಯ ಕೋರ್ಸ್‌ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯರ ಸಂಖ್ಯೆಯೂ ಗಣನೀಯ. ಈಗ ಕಿರ್ಗಿಸ್ತಾನದಲ್ಲಿ 15,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ. ನಿಖರ ಮಾಹಿತಿ ಲಭ್ಯವಿಲ್ಲ. ಆದರೆ ಕೈಗೆಟುಕವ ವೆಚ್ಚದಲ್ಲಿ ಇಲ್ಲಿ ವೈದ್ಯಕೀಯ ಪದವಿ ಪಡೆಯಲು ಅವಕಾಶವಿರುವ ಕಾರಣ ಭಾರತೀಯ ವಿದ್ಯಾರ್ಥಿಗಳು ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ ಎನ್ನಲಾಗಿದೆ. ಬೇರೆ ದೇಶಗಳಲ್ಲಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ಇರುವಂತೆ ಕಿರ್ಗಿಸ್ತಾನದಲ್ಲಿ ಪ್ರವೇಶ ಪರೀಕ್ಷೆ ಇಲ್ಲ. ಇಲ್ಲಿ ವಿದೇಶಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ವೈದ್ಯಕೀಯ ಕೋರ್ಸ್‌ಗೆ ನೇರವಾಗಿ ಪ್ರವೇಶ ಪಡೆಯಬಹುದು. ಕಿರ್ಗಿಸ್ತಾನದಲ್ಲಿನ ವೈದ್ಯಕೀಯ ಕೋರ್ಸ್‌ಗಳಿಗೆ, ವೈದ್ಯಕೀಯ ಪದವಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ಇದೆ. ಜತೆಗೆ ಅಮೆರಿಕ, ರಷ್ಯಾ, ಭಾರತ ಮತ್ತು ಐರೋಪ್ಯ ದೇಶಗಳಲ್ಲೂ ಈ ಪದವಿಗೆ ಮಾನ್ಯತೆ ಇದೆ. ವೈದ್ಯಕೀಯ ಶಿಕ್ಷಣವು ಕಿರ್ಗಿಸ್ತಾನದ ಪ್ರಮುಖ ಆದಾಯದ ಮೂಲಗಳಲ್ಲಿ ಒಂದು. ಹೀಗಾಗಿ ಅಲ್ಲಿನ ಸರ್ಕಾರವು ವಿದೇಶಿ ವಿದ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಕ ಮತ್ತು ಸಾಮಾಜಿಕ ವಾತಾವರಣವನ್ನು ರೂಪಿಸಿದೆ. ಹೀಗಾಗಿಯೇ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿದ್ಯಾರ್ಥಿಗಳು ಕಿರ್ಗಿಸ್ತಾನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ವೈದ್ಯಕೀಯ ಪದವಿ ಕೋರ್ಸ್‌ ಪೂರೈಸಲು ₹1 ಕೋಟಿಯಿಂದ ₹1.5 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಆದರೆ ಕಿರ್ಗಿಸ್ತಾನದಲ್ಲಿ ₹15 ಲಕ್ಷದಿಂದ ₹30 ಲಕ್ಷದೊಳಗೆ ಆರು ವರ್ಷಗಳ ಕೋರ್ಸ್‌ ಮುಗಿಸಬಹುದು. ಇಲ್ಲಿ ನೀಟ್‌ ಪರೀಕ್ಷೆಯಲ್ಲಿ ಸೀಟು ಪಡೆಯಲಾಗದ ವಿದ್ಯಾರ್ಥಿಗಳು ರಷ್ಯಾ, ಉಕ್ರೇನ್‌ ಮತ್ತು ಕಿರ್ಗಿಸ್ತಾನಕ್ಕೆ ಹೋಗುತ್ತಾರೆ. ಪ್ರವೇಶ ಪರೀಕ್ಷೆ ಇಲ್ಲದಿರುವ ಕಾರಣಕ್ಕೂ ವಿದೇಶಿ ವಿದ್ಯಾರ್ಥಿಗಳನ್ನು ಕಿರ್ಗಿಸ್ತಾನವು ಸೆಳೆಯುತ್ತದೆ ಎಂದು ಭಾರತದ ಕೆಲವು ಕೋಚಿಂಗ್‌ ಕೇಂದ್ರಗಳು ಸುದ್ದಿಸಂಸ್ಥೆಗಳಿಗೆ ಮಾಹಿತಿ ನೀಡಿವೆ. ಕಿರ್ಗಿಸ್ತಾನದಲ್ಲಿ ಕಾಲೇಜುಗಳೇ ವಿದೇಶಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡುತ್ತವೆ. ಭಾರತೀಯ ವಿದ್ಯಾರ್ಥಿಗಳಿಗೆ ಭಾರತೀಯ ಊಟವನ್ನೂ ಒದಗಿಸಿಕೊಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಖರ್ಚುವೆಚ್ಚಗಳನ್ನು ಹೊಂದಿಸಿಕೊಳ್ಳಲು ಕಾಲೇಜುಗಳೇ ಅರೆಕಾಲಿಕ ಉದ್ಯೋಗವನ್ನೂ ಒದಗಿಸಿಕೊಡುತ್ತವೆ. ಇದಲ್ಲದೇ ಐದು ವರ್ಷಗಳ ಕೋರ್ಸ್‌ ಮತ್ತು ಒಂದು ವರ್ಷದ ಇಂಟರ್ನ್‌ಶಿಪ್‌ ನೀಡುತ್ತವೆ. ಇದರಿಂದ ಬೋಧನಾ ಚಟುವಟಿಕೆಗಳ ಜತೆಗೆ ಪ್ರಾಯೋಗಿಕ ಶಿಕ್ಷಣವೂ ಸುಲಭವಾಗಿ ದೊರೆಯುತ್ತದೆ. ಕಿರ್ಗಿಸ್ತಾನದ ಆಡಳಿತ ಭಾಷೆ ರಷ್ಯನ್‌ ಆಗಿದ್ದರೂ, ಪ್ರಮುಖ ಬೋಧನಾ ಮಾಧ್ಯಮ ಇಂಗ್ಲಿಷ್‌ ಆಗಿದೆ. ಈ ಕಾರಣದಿಂದ ವಿದೇಶಿ ವಿದ್ಯಾರ್ಥಿಗಳಿಗೂ ಕಲಿಕೆ ಇಲ್ಲಿ ಸುಲಭವಾಗಲಿದೆ. ಈ ಎಲ್ಲಾ ಕಾರಣದಿಂದ ಭಾರತೀಯ ವಿದ್ಯಾರ್ಥಿಗಳು ಕಿರ್ಗಿಸ್ತಾನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಈ ಕೋಚಿಂಗ್‌ ಕೇಂದ್ರಗಳು ಮಾಹಿತಿ ನೀಡಿವೆ.
ಪಾಕ್‌ಗೆ ಮರಳಿದ 670 ವಿದ್ಯಾರ್ಥಿಗಳು
ಕಿರ್ಗಿಸ್ತಾನದಲ್ಲಿ ಪಾಕಿಸ್ತಾನದ 11,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ. ಈಗ ಕಿರ್ಗಿಸ್ತಾನದಲ್ಲಿ ದಾಳಿಗೆ ಗುರಿಯಾದವರಲ್ಲಿ ಪಾಕಿಸ್ತಾನದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಪಾಕ್‌ ಸರ್ಕಾರವು ತೆರವು ಕಾರ್ಯಾಚರಣೆಯನ್ನೂ ನಡೆಸಿದೆ. ಈವರೆಗೆ ಎರಡು ವಿಶೇಷ ವಿಮಾನಗಳ ಮೂಲಕ ಒಟ್ಟು 670 ವಿದ್ಯಾರ್ಥಿಗಳನ್ನು ವಾಪಸ್‌ ಕರೆತರಲಾಗಿದೆ. ಮೊದಲ ವಿಮಾನದಲ್ಲಿ ಶನಿವಾರ 130 ಮತ್ತು ಭಾನುವಾರ 540 ವಿದ್ಯಾರ್ಥಿಗಳನ್ನು ಇಸ್ಲಾಮಾಬಾದ್‌ಗೆ ವಾಪಸ್‌ ಕರೆತರಲಾಗಿದೆ. ಅಗತ್ಯವಾದರೆ, ಅಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ವಾಪಸ್‌ ಕರೆತರಲಾಗುತ್ತದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ. ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಪಾಕಿಸ್ತಾನದ ಕೆಲವು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಆದರೆ ಅಂತಹ ಯಾವುದೇ ಘಟನೆ ವರದಿಯಾಗಿಲ್ಲ ಎಂದು ಕಿರ್ಗಿಸ್ತಾನ ಸರ್ಕಾರ ಹೇಳಿದೆ.
ಭಾರತೀಯರು ಸುರಕ್ಷಿತ
ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದ್ದರೂ, ಆ ಸಂಖ್ಯೆ ತೀರಾ ಕಡಿಮೆ ಇದೆ. ಅವರಿಗೆ ಎಲ್ಲಾ ಸ್ವರೂಪದ ಭದ್ರತೆಯನ್ನು ಒದಗಿಸಲಾಗಿದೆ ಎಂದು ಕಿರ್ಗಿಸ್ತಾನ ಸರ್ಕಾರ ಹೇಳಿದೆ. ಹೀಗಾಗಿ ಭಾರತದ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಭಾವಿಸಲಾಗಿದೆ. ಈ ಕಾರಣದಿಂದಲೇ ಅಲ್ಲಿಂದ ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್‌ ಕರೆಸಿಕೊಳ್ಳುವ ಯಾವುದೇ ಕಾರ್ಯಾಚರಣೆಯನ್ನು ಆರಂಭಿಸಿಲ್ಲ ಎನ್ನಲಾಗಿದೆ. ಅಂತಹ ಪರಿಸ್ಥಿತಿ ಎದುರಾದರೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗುತ್ತದೆ. ಆದರೆ ಅಂತಹ ಪರಿಸ್ಥಿತಿ ತಲೆದೋರುವ ಯಾವುದೇ ಸೂಚನೆ ಇಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT