ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಇಲ್ಲಿ ಹಸಿವಿನಿಂದ ಸಾಯುವುದಕ್ಕಿಂತ ಅಲ್ಲಿ ಸಾಯುವುದು ಉತ್ತಮ– ಕಾರ್ಮಿಕರು
ಆಳ–ಅಗಲ: ಇಲ್ಲಿ ಹಸಿವಿನಿಂದ ಸಾಯುವುದಕ್ಕಿಂತ ಅಲ್ಲಿ ಸಾಯುವುದು ಉತ್ತಮ– ಕಾರ್ಮಿಕರು
ಯುದ್ಧಪೀಡಿತ ಇಸ್ರೇಲ್‌ಗೆ ಭಾರತೀಯ ಕಾರ್ಮಿಕರು
Published 4 ಫೆಬ್ರುವರಿ 2024, 20:31 IST
Last Updated 5 ಫೆಬ್ರುವರಿ 2024, 2:28 IST
ಅಕ್ಷರ ಗಾತ್ರ
ನಾವು ಸಾಯಬೇಕು ಅಂತ ನಮ್ಮ ಹಣೆಯಲ್ಲಿ ಬರೆದಿದ್ದರೆ ನಾವು ಸಾಯುತ್ತೇವೆ. ಹಸಿವಿನಿಂದ ಸಾಯುವುದಕ್ಕಿಂತ ಇದು ಉತ್ತಮ. ಕೊನೆಪಕ್ಷ ನಮ್ಮ ಮಕ್ಕಳಿಗಾದರೂ ಏನಾದರೂ ಸಿಗಲಿ
ಜಬ್ಬರ್‌ ಸಿಂಗ್‌
ಇಲ್ಲಿ ಕೆಲಸವಿಲ್ಲ. ಅದಕ್ಕಾಗಿ ನಾನು ಎಲ್ಲಾದರೂ ಕೆಲಸ ಮಾಡಲೇಬೇಕು. ಯುದ್ಧಪೀಡಿತ ಜಾಗಕ್ಕೆ ಹೋಗುತ್ತಿದ್ದೇನೆ ಎಂದು ತಿಳಿದಿದೆ. ಆದರೆ, ನಾನು ನನ್ನ ಕುಟುಂಬದವರ ಹೊಟ್ಟೆಯನ್ನು ತುಂಬಿಸಬೇಕು. ಇಲ್ಲವಾದರೆ, ನನ್ನ ಮಕ್ಕಳು ಹಸಿವಿನಿಂದ ಸಾಯುತ್ತಾರಷ್ಟೆ
ಕೇಶವ್‌ ದಾಸ್‌
ಭಾರತದಲ್ಲಿ ಯಾವುದೇ ಉದ್ಯೋಗವಿಲ್ಲ. ಅದಕ್ಕಾಗಿ ಜನರು ಇಸ್ರೇಲ್‌ಗೆ ಹೊರಟಿದ್ದಾರೆ. ಸಾಯುವುದೇ ನಮ್ಮ ವಿಧಿಯಾದರೆ, ಇಲ್ಲಿ ಸತ್ತರೇನು, ಅಲ್ಲಿ ಸತ್ತರೇನು
ಲೇಖರಾಮ್‌
ಸರ್ಕಾರಿ ಉದ್ಯೋಗಕ್ಕಾಗಿ ನಾನು ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ನನ್ನದು ಬಡ ಕುಟುಂಬ. ಮುಂದೆ ಓದಲು ನನಗೆ ಸಾಧ್ಯವಿಲ್ಲ. ಭಾರತದಲ್ಲಿ ಕೆಲಸ ಸಿಗುವುದು ಕಷ್ಟ. ಅದಕ್ಕಾಗಿಯೇ ನಾನು ಇಸ್ರೇಲ್‌ಗೆ ಹೊರಟಿದ್ದೇನೆ
ದಿಲೀಪ್‌

ಭಾರತದ ಸುಮಾರು 10 ಸಾವಿರ ಜನರು ಯುದ್ಧಪೀಡಿತ ಇಸ್ರೇಲ್‌ಗೆ ಹೊರಟುನಿಂತಿದ್ದಾರೆ. ಭಾರತ ಸರ್ಕಾರವು ಈ ಎಲ್ಲರನ್ನೂ ಇಸ್ರೇಲ್‌ಗೆ ಕಳುಹಿಸುವ ಸಿದ್ಧತೆ ನಡೆಸಿದೆ ಮತ್ತು ಈ ವಾರದಿಂದಲೇ ಗುಂಪು ಗುಂಪಾಗಿ ಜನರು ಇಸ್ರೇಲ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಭಾರತದ ಜನರು ಇಸ್ರೇಲ್‌ಗೆ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ತೆರಳುತ್ತಿದ್ದಾರೆ. ಕೆಲವರು ಗಾರೆ ಕೆಲಸಕ್ಕಾಗಿ, ಕೆಲವರು ಕಬ್ಬಿಣ ತುಂಡು ಮಾಡುವ, ಮೊಂಡು ಮಾಡುವ ಕೆಲಸಕ್ಕಾಗಿ, ಕೆಲವರು ಫ್ರೇಮ್‌ವರ್ಕ್‌ ಕಾರ್ಮಿಕರಾಗಿ ಮತ್ತು ಸೆರಾಮಿಕ್‌ ಟೈಲ್ಸ್‌ ಕಾರ್ಮಿಕರಾಗಿ ಇಸ್ರೇಲ್‌ಗೆ ಹೊರಟಿದ್ದಾರೆ.

ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಶೇ 80ರಷ್ಟು ಕಾರ್ಮಿಕರು ಪ್ಯಾಲೆಸ್ಟೀನಿನ ಜನರು. ಸುಮಾರು 80 ಸಾವಿರ ಜನರು ವೆಸ್ಟ್‌ ಬ್ಯಾಂಕ್‌ನವರಾದರೆ, 17 ಸಾವಿರ ಜನರು ಗಾಜಾಪಟ್ಟಿಯವರು. ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ದಾಳಿ ನಡೆಸಿದರು ಎನ್ನುವ ಕಾರಣಕ್ಕಾಗಿ ಪ್ಯಾಲೆಸ್ಟೀನಿನ ಕಾರ್ಮಿಕರನ್ನು ಇಸ್ರೇಲ್‌ ಕೆಲಸಗಳಿಂದ ತೆಗೆದುಹಾಕಿತು. ನಾಲ್ಕು ತಿಂಗಳಿನಿಂದ ಯುದ್ಧ ನಡೆಯುತ್ತಿದೆ. ಇಸ್ರೇಲ್‌ನಲ್ಲಿ ಕಾರ್ಮಿಕರ ದೊಡ್ಡ ಕೊರತೆಯೇ ಉಂಟಾಗಿದೆ. ಇದೇ ಕಾರಣಕ್ಕೆ ಈಗ ಇಸ್ರೇಲ್‌ ಬೇರೆ ಬೇರೆ ದೇಶಗಳಿಂದ ಜನರನ್ನು ತನ್ನ ದೇಶಕ್ಕೆ ಕಾರ್ಮಿಕರಾಗಿ ಕರೆಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. 

ಯುದ್ಧ ನಡೆಯುತ್ತಿರುವ ದೇಶವೊಂದಕ್ಕೆ ಭಾರತದ ಜನರನ್ನು ಕಳುಹಿಸುವ ಕೇಂದ್ರ ಸರ್ಕಾರದ ಯತ್ನವು ಕಾರ್ಮಿಕ ಒಕ್ಕೂಟಗಳ ಆಕ್ರೋಶಕ್ಕೂ ಕಾರಣವಾಗಿದೆ. ಸರ್ಕಾರದ ನಡೆಯ ಕುರಿತು ನ್ಯಾಯಾಲಯದ ಮೆಟ್ಟಿಲೇರುವ ಎಚ್ಚರಿಕೆಯನ್ನೂ ಒಕ್ಕೂಟಗಳು ನೀಡಿವೆ. ಒಕ್ಕೂಟದ ಆಕ್ರೋಶಕ್ಕೆ ಹಲವು ಗಂಭೀರ ಕಾರಣಗಳೂ ಇವೆ. ಇದಿಷ್ಟು ಹಿನ್ನೆಲೆ.

ಜನರ ಹಸಿವು... ಇಲ್ಲದ ಉದ್ಯೋಗ

ದಿಲೀಪ್‌, ಜಬ್ಬರ್‌ ಸಿಂಗ್‌, ಲೇಖರಾಮ್‌ರಂಥ ಸಾವಿರಾರು ಜನರು ಇಸ್ರೇಲ್‌ಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇವರ ಹೇಳಿಕೆಗಳೇ ಅವರ ಸ್ಥಿತಿಯ ಕೈಗನ್ನಡಿಯಂತಿವೆ. ಉತ್ತರ ಪ್ರದೇಶ ಹಾಗೂ ಹರಿಯಾಣ ಸರ್ಕಾರವು ಈ ಬಗ್ಗೆ ಜಾಹೀರಾತುಗಳನ್ನು ನೀಡಿದ್ದವು. ಕಿ.ಮೀಗಟ್ಟಲೆ ಉದ್ದದ ಸರತಿಯಲ್ಲಿ ಸಾವಿರಾರು ಜನರು ನಿಂತಿದ್ದರು. ‘ಯುದ್ಧನಡೆಯುತ್ತಿದೆ ಎಂದು ಗೊತ್ತಿದೆ. ಆದರೂ ಕುಟುಂಬದ ಹೊಟ್ಟೆಹೊರೆಯಲು ಇಸ್ರೇಲ್‌ಗೆ ಹೋಗಬೇಕಿರುವುದು ಅನಿವಾರ್ಯ’ ಎನ್ನುವುದು ಎಲ್ಲ ಆಕಾಂಕ್ಷಿಗಳ ಅಭಿಪ್ರಾಯ. ‘ನೋಟು ರದ್ದತಿ, ಕೋವಿಡ್‌ ಕಾಲದಲ್ಲಿ ಆದ ಉದ್ಯೋಗ ನಷ್ಟವು ನಮ್ಮನ್ನು ಹೈರಾಣಾಗಿಸಿದೆ’ ಎನ್ನುತ್ತಾರೆ. 25 ವರ್ಷದಿಂದ 50 ವರ್ಷದ ಒಳಗಿನ ಪುರುಷರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು.

‘ಬಜೆಟ್‌ ಮಂಡನೆಯ ಬಳಿಕ, ವಿಕಸಿತ ಭಾರತದ ಕುರಿತು ಹಲವು ಚರ್ಚೆಗಳು ನಡೆಯುತ್ತಿವೆ. 2047ರ ಹೊತ್ತಿಗೆ ವಿಕಸಿತ ಭಾರತ ರೂಪುಗೊಳ್ಳುತ್ತದೆ. ನಮ್ಮದು ಐದು ಟ್ರಿಲಿಯನ್‌ ಆರ್ಥಿಕತೆ ಆಗಲಿದೆ ಎಂದು ಕೇಂದ್ರ ಸರ್ಕಾರವು ಹೇಳುತ್ತಿದೆ. ಆದರೆ, ದೇಶದ ಜನರು ಹಸಿವು ಹಾಗೂ ನಿರುದ್ಯೋಗದ ಕಾರಣಕ್ಕಾಗಿ ಯುದ್ಧಪೀಡಿತ ಇಸ್ರೇಲ್‌ಗೆ ತೆರಳುವುದಕ್ಕೆ ಅಣಿಯಾಗಿದ್ದಾರೆ. ಇದೆಂಥ ಪರಿಸ್ಥಿತಿ’ ಎಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ದೂರುತ್ತಿವೆ. ‘ಇಸ್ರೇಲ್‌–ಹಮಾಸ್‌ ಯುದ್ಧ ಆರಂಭಗೊಂಡಾಗ, ಆಪರೇಷನ್‌ ಅಜಯ್‌ ಮೂಲಕ ಇಸ್ರೇಲ್‌ನಲ್ಲಿದ್ದ ಭಾರತೀಯರನ್ನು ದೇಶಕ್ಕೆ ವಾಪಸು ಕರೆತಂದಿರಿ. ಆದರೆ, ಈಗ ಅದೇ ಜಾಗಕ್ಕೆ ದೇಶದ ಬಡವರನ್ನು ದೂಡುತ್ತಿದ್ದೀರಲ್ಲವೇ’ ಎಂದು ಉತ್ತರ ಪ್ರದೇಶದ ಕಾಂಗ್ರೆಸ್‌ ಘಟಕವು ಸರ್ಕಾರವನ್ನು ಪ್ರಶ್ನಿಸಿದೆ.

ಆಧಾರ: ಪಿಟಿಐ, ಎಪಿ, ಎಎಫ್‌ಪಿ, ಭಾರತೀಯ ವಿದೇಶಾಂಗ ಸಚಿವಾಲಯದ ಪ್ರಕಟಣೆಗಳು

ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ

ಇಸ್ರೇಲ್‌ ಹೊರಟಿರುವವರಿಗಿಲ್ಲ ಭದ್ರತೆ

ಕಾರ್ಮಿಕರ ವಲಸೆ ಎನ್ನುವುದು ದೇಶವೊಂದಕ್ಕೆ ಹೆಚ್ಚಿನ ಜವಾಬ್ದಾರಿಯುತ ಪ್ರಕ್ರಿಯೆ. ವಿದೇಶಗಳಲ್ಲಿನ ಭಾರತೀಯ ಕಾರ್ಮಿಕರ ಸುರಕ್ಷತೆ ಭದ್ರತೆ ಕೂಡ ಸರ್ಕಾರದ್ದೆ ಹೊಣೆಗಾರಿಕೆ. ಹೀಗೆ ಭಾರತೀಯರು ಇತರೆ ದೇಶಗಳಿಗೆ ಉದ್ಯೋಗಕ್ಕಾಗಿ ತೆರಳುವುದಕ್ಕೆ ಕೇಂದ್ರ ಸರ್ಕಾರವು ಹಲವು ಮಾರ್ಗಸೂಚಿಗಳನ್ನು ನಿಯಮಗಳನ್ನು ಹಾಕಿಕೊಂಡಿದೆ. ಸುಲಭದಲ್ಲಿ ಎಲ್ಲ ದೇಶಗಳಿಗೆ ಉದ್ಯೋಗಕ್ಕಾಗಿ ಭಾರತೀಯರನ್ನು ಕಳುಹಿಸುವುದೂ ಇಲ್ಲ. ಭಾರತೀಯರ ಭದ್ರತೆಗಾಗಿಯೇ ಕೇಂದ್ರ ಸರ್ಕಾರವು ವಲಸೆಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಯುದ್ಧಪೀಡಿತ ದೇಶಗಳಿಗೆ ಸಂಘರ್ಷ ಇರುವ ದೇಶಗಳಿಗೆ ತೆರಳುವುದಕ್ಕೆ ಮೊದಲು ಭಾರತೀಯರು ‘ಇ–ಮೈಗ್ರೇಟ್‌’ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಹೀಗೆ ನೋಂದಾಯಿಸಿಕೊಳ್ಳುವವರಿಗೆ ಸರ್ಕಾರವು ವಿಮೆ ಸೌಲಭ್ಯವನ್ನೂ ನೀಡುತ್ತದೆ. ಜೊತೆಗೆ ಭಾರತೀಯರಿಗೆ ಯಾವುದೇ ತೊಂದರೆಯಾದರೂ ಸರ್ಕಾರಕ್ಕೆ ಅದರ ಹೊಣೆಗಾರಿಕೆ ಇರುತ್ತದೆ. ಆದರೆ ಇಸ್ರೇಲ್‌ಗೆ ಹೊರಟಿರುವವರಿಗೆ ಇದ್ಯಾವುದೂ ಇಲ್ಲವಾಗಿದೆ. ಭಾರತೀಯ ಕಾರ್ಮಿಕರು ಇಸ್ರೇಲ್‌ಗೆ ಹೊರಟಿರುವುದು ಖಾಸಗಿ ನೇಮಕಾತಿ ಪ್ರಕ್ರಿಯೆ ಮೂಲಕ. ಇದಕ್ಕೆ ಇಸ್ರೇಲ್‌ ಹಾಗೂ ಭಾರತ ಸರ್ಕಾರದ ಒಪ್ಪಿಗೆ ಇದೆ. ಈ ಬಗ್ಗೆ ಎರಡೂ ಸರ್ಕಾರಗಳು 2023ರ ಮೇ ತಿಂಗಳಿನಲ್ಲಿಯೇ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಕಟ್ಟಡ ನಿರ್ಮಾಣ ಹಾಗೂ ನರ್ಸಿಂಗ್‌ ಕೆಲಸಕ್ಕಾಗಿ 42 ಸಾವಿರ ಭಾರತೀಯ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸುವ ಒಪ್ಪಂದವು ಏರ್ಪಟ್ಟಿತ್ತು.  ಇಸ್ರೇಲ್‌ಗೆ ಭಾರತೀಯರು ಹೊರಟಿರುವುದು ಖಾಸಗಿ ನೇಮಕಾತಿ. ಆದ್ದರಿಂದ ಭಾರತೀಯರು ಇ–ಮೈಗ್ರೇಟ್‌ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಅನಿರ್ವಾಯವಲ್ಲ. ಪ್ರವಾಸಿ ಭಾರತೀಯ ವಿಮಾ ಯೋಜನೆಯನ್ನು ಮಾಡಿಸಿಕೊಳ್ಳುವುದು ವಲಸೆ ಹೊರಟಿರುವ ಭಾರತೀಯರಿಗೆ ಕಡ್ಡಾಯ. ₹10 ಲಕ್ಷದವರೆಗೆ ವಿಮೆ ಸೌಲಭ್ಯ ಇದರಲ್ಲಿದೆ. ಆದರೆ ಇಸ್ರೇಲ್‌ಗೆ ಹೊರಟಿರುವವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಇಡೀ ನೇಮಕಾತಿ ಪ್ರಕ್ರಿಯೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಕೌಶಲ ಅಭಿವೃದ್ಧಿ ಪ್ರಾಧಿಕಾರ ವಹಿಸಿಕೊಂಡಿದೆ. ಇಸ್ರೇಲ್‌ನ ಬಿಲ್ಡರ್ಸ್‌ ಅಸೋಸಿಯೇಷನ್‌ ಭಾರತದಲ್ಲಿ ನೇಮಕಾತಿ ನಡೆಸಲು ಇಸ್ರೇಲ್‌ನ ಕೆಲವು ತಜ್ಞರನ್ನು ಕಳುಹಿಸಿಕೊಟ್ಟಿತ್ತು. ಒಂದು ಹಂತದ ಆಯ್ಕೆ ಪ್ರಕ್ರಿಯೆಯನ್ನು ಪ್ರಾಧಿಕಾರ ನಡೆಸಿತ್ತು. ನಂತರ ತಜ್ಞರ ತಂಡವು ಕಾರ್ಮಿಕರ ಕಟ್ಟಡ ಕೌಶಲವನ್ನು ನೋಡಿ ಆಯ್ಕೆ ಮಾಡಿದೆ. ನೇಮಕಾತಿ ಪ್ರಕ್ರಿಯೆಯನ್ನು ರಾಷ್ಟ್ರೀಯ ಕೌಶಲ ಅಭಿವೃದ್ಧಿ ಪ್ರಾಧಿಕಾರವು ನಡೆಸಿರುವುದಕ್ಕೆ ಕಾರ್ಮಿಕ ಒಕ್ಕೂಟಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕೌಶಲವನ್ನು ಹೇಳಿಕೊಡುವ ಪ್ರಾಧಿಕಾರವು ಹೇಗೆ ನೇಮಕಾತಿ ನಡೆಸುತ್ತಿದೆ ಎಂದು ಅವು ಕೇಳಿವೆ.  ಕಾರ್ಮಿಕರ ರಕ್ಷಣೆಗೆ ಇಲ್ಲ ಹೊಣೆಗಾರರು ‘ಇಸ್ರೇಲ್‌ಗೆ ತೆರಳುತ್ತಿರುವ ಕಾರ್ಮಿಕರ ರಕ್ಷಣೆಯ ಹೊಣೆಯನ್ನು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವಾಗಲೀ ವಿದೇಶಾಂಗ ಸಚಿವಾಲಯವಾಗಲಿ ಹೊತ್ತುಕೊಳ್ಳುತ್ತಿಲ್ಲ’ ಎಂದು  ಸೆಂಟರ್‌ ಫಾರ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ತಾಪನ್‌ ಸೇನ್‌ ದೂರಿದ್ದಾರೆ. ಆದರೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ಇಸ್ರೇಲ್‌ ಸರ್ಕಾರವು ಭಾರತೀಯ ಕಾರ್ಮಿಕರನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. ‘ಇಸ್ರೇಲ್‌ನಲ್ಲಿ ಕಠಿಣವಾದ ಕಾರ್ಮಿಕ ಕಾನೂನುಗಳಿವೆ ಎಂದು ನಮಗೆ ತಿಳಿದಿದೆ. ವಿದೇಶದಲ್ಲಿರುವ ಭಾರತೀಯರ ಜಬಾವ್ದಾರಿಯ ಕುರಿತು ನಮಗೆ ಅರಿವಿದೆ’ ಎಂದಿದ್ದಾರೆ.

ಇಸಿಆರ್‌ ಪಟ್ಟಿಯಲ್ಲಿಲ್ಲ ಇಸ್ರೇಲ್‌

  ಭಾರತೀಯರು ಕೆಲವು ದೇಶಗಳಿಗೆ ಉದ್ಯೋಗಕ್ಕಾಗಿ ತೆರಳಲು ಕೇಂದ್ರ ಸರ್ಕಾರವು ಕೆಲವು ಹೆಚ್ಚುವರಿ ನಿಯಮಗಳನ್ನು ರೂಪಿಸಿದೆ. ಇದು ಭಾರತೀಯರ ರಕ್ಷಣೆಗಾಗಿಯೇ ರೂಪುಗೊಂಡ ನಿಯಮಗಳು. ‘ವಲಸೆ ಪರಿಶೀಲನೆ ಅಗತ್ಯ ಇರುವ ದೇಶಗಳು’ ಎನ್ನುವ 17 ದೇಶಗಳ ಪಟ್ಟಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯವು ಸಿದ್ಧಪಡಿಸಿದೆ. ಕಠಿಣ ಕಾರ್ಮಿಕ ಕಾನೂನುಗಳಿರುವ ದೇಶ ಹಾಗೂ ಯುದ್ಧಪೀಡಿತ ಸದಾ ಜನಾಂಗೀಯ ಸಂಘರ್ಷಗಳಿಂದ ಪೀಡಿತವಾಗಿರುವ ದೇಶಗಳು ಈ ಪಟ್ಟಿಯಲ್ಲಿವೆ. ಈ ದೇಶಗಳಿಗೆ ಉದ್ಯೋಗಕ್ಕಾಗಿ ಭಾರತೀಯರು ತೆರಳಬೇಕು ಎಂದರೆ ‘ಎಮಿಗ್ರೇಷನ್‌ ಚೆಕ್‌ ರಿಕ್‌ವೈರ್ಡ್‌ (ಇಸಿಆರ್‌) ಇರುವ ಪಾಸ್‌ಪೋರ್ಟ್‌ ಪಡೆದುಕೊಳ್ಳುವುದು ಕಡ್ಡಾಯ. ಕೇಂದ್ರ ಸರ್ಕಾರವೇ ಇದನ್ನು ನೀಡುತ್ತದೆ. ಆದರೆ ಕಳೆದ ನಾಲ್ಕು ತಿಂಗಳಿನಿಂದ ಇಸ್ರೇಲ್‌ನಲ್ಲಿ ಯುದ್ಧ ನಡೆಯುತ್ತಿದೆ. ಹಾಗಿದ್ದರೂ ಇಸ್ರೇಲ್‌ ಅನ್ನು ‘ವಲಸೆ ಪರಿಶೀಲನೆ ಅಗತ್ಯ ಇರುವ ದೇಶಗಳು’ ಪಟ್ಟಿಗೆ ಸೇರಿಸಲಾಗಿಲ್ಲ.

ವಿದೇಶದ ಕನಸಿಗೆ ಪಾರ್ಸ್‌ಪೋರ್ಟ್‌!...

‘ವಿದೇಶದ ಕನಸಿಗೆ ಪಾರ್ಸ್‌ಪೋರ್ಟ್‌’ ಎನ್ನುವುದು ರಾಷ್ಟ್ರೀಯ ಕೌಶಲ ಅಭಿವೃದ್ಧ ನಿಗಮವು ಇಸ್ರೇಲ್‌ನಲ್ಲಿ ಉದ್ಯೋಗಾವಕಾಶ ಇದೆ ಎಂದು ನೀಡಿನ ಜಾಹೀರಾತಿನ ಟೈಟಲ್‌. ‘ಇಸ್ರೇಲ್‌ನಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಿ’ ಎಂದೂ ಅದು ಹೇಳಿತ್ತು. ತಿಂಗಳಿಗೆ ಸುಮಾರು ₹1.37 ಲಕ್ಷ ಸಂಬಳವನ್ನು ಇಸ್ರೇಲ್‌ ನೀಡುತ್ತಿದೆ ಎಂದಿತ್ತು. ಇಷ್ಟೆಲ್ಲಾ ಆಕರ್ಷಕ ಮಾಹಿತಿಗಳನ್ನು ತನ್ನ ಜಾಹೀರಾತಿನಲ್ಲಿ ನೀಡಿದರೂ ಕಾರ್ಮಿಕರ ಸುರಕ್ಷತೆ ಹಾಗೂ ಭದ್ರತೆ ಕುರಿತು ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಕೆಲವು ನಿಬಂಧನೆಗಳನ್ನು ಜಾಹೀರಾತಿನಲ್ಲಿ ನಿಗಮವು ನೀಡಿತ್ತು. ಇಸ್ರೇಲ್‌ಗೆ ತೆರಳಲು ಭಾರತೀಯ ಕಾರ್ಮಿಕರೇ ಖರ್ಚು ಮಾಡಬೇಕು. ಇದಲ್ಲದೆ ನಿಗಮವು ಕಾರ್ಮಿಕರಿಂದ ಸಹಾಯವೆಚ್ಚ ಎಂದು ₹10 ಸಾವಿರವನ್ನೂ ತೆಗೆದುಕೊಳ್ಳುತ್ತಿದೆ. ವಿಮೆ ನೀಡಲಾಗುವುದಿಲ್ಲ ಮತ್ತು ಉದ್ಯೋಗಕ್ಕೆ ಖಾತರಿಯನ್ನೂ ನೀಡಲಾಗುವುದಿಲ್ಲ ಎಂದು ನಿಗಮ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT