ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಭಾರತ ಸಂವಿಧಾನದ ಮೂಲಸ್ವರೂಪಕ್ಕೆ ಧಕ್ಕೆಯಾಯಿತೇ?
ಆಳ–ಅಗಲ: ಭಾರತ ಸಂವಿಧಾನದ ಮೂಲಸ್ವರೂಪಕ್ಕೆ ಧಕ್ಕೆಯಾಯಿತೇ?
ಸಂಪೂರ್ಣ ವಿವರಣೆ ಇಲ್ಲಿದೆ
Published 21 ಸೆಪ್ಟೆಂಬರ್ 2023, 0:32 IST
Last Updated 21 ಸೆಪ್ಟೆಂಬರ್ 2023, 0:32 IST
ಅಕ್ಷರ ಗಾತ್ರ

ನೂತನ ಸಂಸತ್ ಭವನದಲ್ಲಿ ಮೊದಲ ಅಧಿವೇಶನ ಮತ್ತು ಮೊದಲ ಕಲಾಪ ನಡೆಸುವ ಸಂಭ್ರಮದಲ್ಲಿ ಕಾನೂನು ಸಚಿವಾಲಯವು ಎಲ್ಲಾ ಸಂಸದರಿಗೆ ಸಂವಿಧಾನದ ಪ್ರತಿಯನ್ನು ಉಡುಗೊರೆಯಾಗಿ ನೀಡಿತ್ತು. ಹೀಗೆ ನೀಡಲಾದ ಸಂವಿಧಾನದಲ್ಲಿನ ಪ್ರಸ್ತಾವನೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಕೈಬಿಡಲಾಗಿದೆ. ಸಂವಿಧಾನದ ಮೂಲ ಪ್ರತಿಯಲ್ಲಿ ಈ ಪದಗಳು ಇರಲಿಲ್ಲ ಎಂಬುದು ಕೇಂದ್ರ ಕಾನೂನು ಸಚಿವಾಲಯವು ಸಂಸತ್ತಿಗೆ ನೀಡಿರುವ ಸಮರ್ಥನೆ. ಆದರೆ ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾದ ಅಂಶಗಳನ್ನು ಮನಸೋಇಚ್ಛೆ ಬದಲಿಸುವ ಸರ್ಕಾರದ ನಡೆಯು, ಸಂವಿಧಾನದ ತಿರುಚುವಿಕೆಯೇ ಸರಿ ಎಂಬುದು ವಿರೋಧ ಪಕ್ಷಗಳ ಪ್ರತಿಪಾದನೆ..

––––––

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಸಮಾಜವಾದಿ’, ‘ಜಾತ್ಯತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಕೈಬಿಟ್ಟು, ಮುದ್ರಿಸಲಾದ ಪ್ರತಿಗಳನ್ನು ಸಂಸದರಿಗೆ ಉಡುಗೊರೆಯಾಗಿ ನೀಡಿದೆ. 1949ರಲ್ಲಿ ಸಂವಿಧಾನವನ್ನು ಅಂಗೀಕರಿಸಿದಾಗಿನ ಪ್ರತಿಯಲ್ಲಿ ಈ ಪದ ಮತ್ತು ಪದಗುಚ್ಛಗಳು ಇರಲಿಲ್ಲವಾದರೂ, 1976ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಪ್ರಸ್ತಾವನೆಗೆ ಇವುಗಳನ್ನು ಸೇರಿಸಲಾಗಿತ್ತು. ಈಗ ಇವುಗಳನ್ನು ಸಂವಿಧಾನದ ಪ್ರಸ್ತಾವನೆಯಿಂದ ತೆಗೆದುಹಾಕಬೇಕು ಎಂದರೂ ಅದಕ್ಕಾಗಿ ಸಂವಿಧಾನ ತಿದ್ದುಪಡಿಯನ್ನು ಮಾಡಲೇಬೇಕು. ಯಾವುದೇ ತಿದ್ದುಪಡಿ ಮಸೂದೆಯನ್ನು ಮಂಡಿಸದೇ, ಆ ಮಸೂದೆಗೆ ಅನುಮೋದನೆ ಪಡೆಯದೇ ಸರ್ಕಾರವು ಈ ಪದ ಮತ್ತು ಪದಗುಚ್ಛಗಳನ್ನು ತೆಗೆದುಹಾಕಿದೆ. ಇದಕ್ಕಾಗಿಯೇ ಸರ್ಕಾರದ ಕೃತ್ಯವನ್ನು, ‘ಸಂವಿಧಾನವನ್ನು ತಿರುಚುವ ಕೆಲಸ’ ಎಂದು ವಿರೋಧ ಪಕ್ಷಗಳ ಸಂಸದರು ಲೋಕಸಭೆಯಲ್ಲೇ ಆರೋಪಿಸಿದ್ದಾರೆ.

ಸರ್ಕಾರವೂ ತನ್ನ ನಡೆಯನ್ನು ಲೋಕಸಭೆಯಲ್ಲೇ ಸಮರ್ಥಿಸಿಕೊಂಡಿತ್ತು. ಕೇಂದ್ರ ಕಾನೂನು ಸಚಿವ ಅರ್ಜುನ್ ಮೆಘವಾಲ್‌, ‘ಮೂಲ ಪ್ರತಿಯಲ್ಲಿ ಈ ಪದಗಳು ಇರಲಿಲ್ಲ’ ಎಂದು ಸಮರ್ಥಿಸಿಕೊಂಡಿದ್ದರು. ಆದರೆ ಸಂವಿಧಾನ ತಿದ್ದುಪಡಿ ಕಾಯ್ದೆಗಳ ಪ್ರಕಾರ, ತಿದ್ದುಪಡಿ ಜಾರಿಯಾದ ನಂತರ ಹಿಂದಿನ ಆವೃತ್ತಿಯ ಸಂವಿಧಾನದ ಪ್ರತಿಗಳನ್ನು ಮುದ್ರಿಸುವುದನ್ನು ನಿಲ್ಲಿಸಬೇಕು. ಆ ಪ್ರತಿಗಳನ್ನು ಯಾರೂ ಮುದ್ರಿಸಲೂಬಾರದು, ಮಾರಾಟ ಮಾಡಲೂಬಾರದು. ಸರ್ಕಾರವು 1976ಕ್ಕೂ ಮೊದಲು ಜಾರಿಯಲ್ಲಿದ್ದ ಸಂವಿಧಾನದಲ್ಲಿನ ಪ್ರಸ್ತಾವನೆಯನ್ನು ಬಳಸಿಕೊಂಡು ಈ ಹೊಸ ಪ್ರತಿಗಳನ್ನು ಮುದ್ರಿಸಿದೆ.

‘ಜಾತ್ಯತೀತ’ ಎಂಬುದು ಸಂವಿಧಾನದ ಮೂಲ ಸ್ವರೂಪದ ಅವಿಭಾಜ್ಯ ಅಂಗ. ಅದನ್ನು ಯಾವುದೇ ತಿದ್ದುಪಡಿಗಳ ಮೂಲಕವೂ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹಲವು ಭಾರಿ ಹೇಳಿದೆ. ಸಂವಿಧಾನದ ಮೂಲ ರಚನೆ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ನಡುವೆ ಈ ಹಿಂದೆ ಜಟಾ‍ಪಟಿಗಳೇ ನಡೆದಿವೆ. ಈಚೆಗೆ, ಕೊಲಿಜಿಯಂ ಪದ್ಧತಿಯಲ್ಲಿ ಬದಲಾವಣೆ ತರಬೇಕು ಎಂಬ ಪ್ರಸ್ತಾವದ ಸಂದರ್ಭದಲ್ಲೂ ‘ಸಂವಿಧಾನ ಮೂಲ ರಚನೆ ಸಿದ್ಧಾಂತ’ ಚರ್ಚೆಗೆ ಬಂದಿತ್ತು. ಆಡಳಿತಾರೂಢ ಬಿಜೆಪಿಯ ಹಲವು ನಾಯಕರು ಸಂವಿಧಾನವನ್ನು ಬದಲಿಸಬೇಕು ಎಂದು ಹಲವು ಬಾರಿ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು, ‘ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತಹ ಇಂತಹ ಕೃತ್ಯವು ಸಂವಿಧಾನದ ಮೇಲಿನ ದಾಳಿಯೇ ಸರಿ’ ಎಂದು ಆಪಾದಿಸಿವೆ.

‘ಜಾತ್ಯತೀತವೆಂಬುದು ಸಂವಿಧಾನದ ಮೂಲ ಸ್ವರೂಪದಲ್ಲೇ ಇದೆ...’

ಜಾತ್ಯತೀತ ಎಂಬುದು ಸಂವಿಧಾನದ ಮೂಲ ಸ್ವರೂಪದ ಭಾಗ ಎಂದು ನಾವು ಒಪ್ಪಿಕೊಂಡಿದ್ದೇವೆ. 1948ರ ಡಿಸೆಂಬರ್ 6ರಂದು ಸಂವಿಧಾನ ರಚನಾ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದಿತ್ತು. 19ನೇ ವಿಧಿಯಲ್ಲಿ ಇದ್ದ ‘ಜಾತ್ಯತೀತ ಚಟುವಟಿಕೆ’ ಎಂಬ ಪದಗಳ ಬಗ್ಗೆ ಮದ್ರಾಸ್‌, ಬಂಗಾಳ ಪ್ರಾಂತ್ಯದ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ತಿದ್ದುಪಡಿಯನ್ನು ಸೂಚಿಸಿದ್ದರು. ಆ ಪ್ರಸ್ತಾವಗಳನ್ನು ಅಂದು ಚರ್ಚೆಗೆ ಎತ್ತಿಕೊಳ್ಳಲಾಗಿತ್ತು. 

‘ನಾವು ಜಾತ್ಯತೀತ ಒಕ್ಕೂಟ ಎಂಬುದನ್ನು ಸಂವಿಧಾನದ ಅಡಿಯಲ್ಲಿ ಒಪ್ಪಿಕೊಂಡಿದ್ದೇವೆ ಎಂದು ಸೇರಿಸಿದ್ದೇವೆ. ಜಾತ್ಯತೀತ ಎಂಬುದು ಸರ್ಕಾರವು ಯಾವುದೋ ಒಂದು ಧರ್ಮದ ಪರವಾಗಿ ಇರಬಾರದು ಮತ್ತು ಸರ್ಕಾರವು ಯಾವುದೋ ಒಂದು ಧರ್ಮವನ್ನು ಎಲ್ಲರ ಮೇಲೆ ಹೇರಬಾರದು. ಹಾಗೆಂದು ಅದರ ಅರ್ಥ ದೇಶದಲ್ಲಿ ಧರ್ಮವೇ ಇರಬಾರದು ಎಂದಲ್ಲ. ಬದಲಿಗೆ ಧರ್ಮದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದರ್ಥ’ ಎಂದು ಎಚ್‌.ವಿ.ಕಾಮತ್ ಅವರು ಪ್ರತಿಪಾದಿಸಿದ್ದರು. ಹೀಗಾಗಿ ಜಾತ್ಯತೀತ ಎಂಬ ಪದವನ್ನು ತೆಗೆದುಹಾಕಬೇಕು ಮತ್ತು ಅದರ ಜತೆಯಲ್ಲಿ ಬೇರೆ ಪರಿಕಲ್ಪನೆಗಳನ್ನು ಸೇರಿಸಬೇಕು ಎಂಬ ಪ್ರಸ್ತಾವಗಳನ್ನು ಪರಿಗಣಿಸಬೇಕಿಲ್ಲ ಎಂದು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಸಹ ಈ ವಾದವನ್ನು ಪುರಸ್ಕರಿಸಿದ್ದರು. ಹೀಗಾಗಿ ಸಂವಿಧಾನ ರಚನಾ ಸಭೆಯಲ್ಲಿ ‘ಜಾತ್ಯತೀತ ಚಟುವಟಿಕೆ’ ಎಂಬ ಪದಗುಚ್ಛವನ್ನು ತೆಗೆದುಹಾಕುವ ಮತ್ತು ಮಾರ್ಪಡಿಸುವ ಸಂಬಂಧ ಸೂಚಿಸಲಾಗಿದ್ದ ಎಲ್ಲಾ ತಿದ್ದುಪಡಿಗಳು ವಜಾ ಆಗಿದ್ದವು.

ಸಂವಿಧಾನದ ಮೂಲ ಸ್ವರೂಪದ ಸಿದ್ಧಾಂತ ಎಂಬ ಪರಿಕಲ್ಪನೆ ಭಾರತದ ಸಂವಿಧಾನದಲ್ಲಿ ಇಲ್ಲ. ಇಂತಹ ಪರಿಕಲ್ಪನೆ ಮೊದಲ ಬಾರಿಗೆ ಬಳಕೆಗೆ ಬಂದದ್ದು ಕೇಶವಾನಂದ ಭಾರತಿ ವರ್ಸಸ್‌ ಕೇರಳ ಸರ್ಕಾರದ ಪ್ರಕರಣದಲ್ಲಿ. ಈ ಪ್ರಕರಣದ ವಿಚಾರಣೆ ನಡೆಸಿದ್ದ 13 ಸದಸ್ಯರ ಸಂವಿಧಾನ ಪೀಠವು, ‘ಜಾತ್ಯತೀತ ಎಂಬುದು ನಮ್ಮ ಸಂವಿಧಾನದ ಮೂಲ ಸ್ವರೂಪದಲ್ಲೇ ಇದೆ. ಧರ್ಮದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು’ ಎಂದು ಹೇಳಿತ್ತು. ಅದಕ್ಕಿಂತಲೂ ಮುಖ್ಯವಾದ ವಿಚಾರವೆಂದರೆ, ‘ಸಂವಿಧಾನದ ಮೂಲ ಸ್ವರೂಪವನ್ನು ಸಂಸತ್ತು ಯಾವುದೇ ತಿದ್ದುಪಡಿಗಳ ಮೂಲಕ ಬದಲಿಸಲು ಸಾಧ್ಯವಿಲ್ಲ’ ಎಂದು ಹೇಳಿತ್ತು. ಈ ತೀರ್ಪನ್ನೇ ‘ಸಂವಿಧಾನದ ಮೂಲ ಸ್ವರೂಪ ಸಿದ್ದಾಂತ’ ಎಂದು ಕರೆಯಲಾಗಿದೆ.

ಕಾಲಾನಂತರದಲ್ಲಿ ಈ ಸಿದ್ಧಾಂತವು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮೂಲಭೂತ ಹಕ್ಕುಗಳು, ಶಾಸಕಾಂಗ ಮತ್ತು ಕಾರ್ಯಾಂಗದ ಕಾರ್ಯಚಟುವಟಿಕೆಗಳನ್ನು ಪರಿಶೀಲನೆಗೆ ಒಳಪಡಿಸುವ ನ್ಯಾಯಾಂಗದ ಅಧಿಕಾರ ಇವೆಲ್ಲವೂ ಸಂವಿಧಾನದ ಮೂಲ ಸ್ವರೂಪದ ಭಾಗಗಳು ಎಂದು ಸುಪ್ರೀಂ ಕೋರ್ಟ್‌ ಪದೇ–ಪದೇ ಅರ್ಥೈಸಿದೆ. 1975ರಲ್ಲಿ ಇಂದಿರಾ ಗಾಂಧಿ ವರ್ಸಸ್‌ ರಾಜ್‌ ನಾರಾಯಣ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಇದನ್ನೇ ಪ್ರತಿಪಾದಿಸಿತ್ತು.

ಸಂವಿಧಾನದ 19ನೇ ವಿಧಿಯಲ್ಲಿ ‘ಜಾತ್ಯತೀತ ಚಟುವಟಿಕೆ’ ಎಂಬ ಪದಗಳಿದ್ದರೂ, ಸಂವಿಧಾನದ ಪ್ರಸ್ತಾವನೆಯಲ್ಲಿ ‘ಜಾತ್ಯತೀತ’ ಎಂಬ ಪದ ಇರಲಿಲ್ಲ. 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತಂದಿದ್ದ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು, ಪ್ರಸ್ತಾವನೆಯಲ್ಲಿ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಎಂಬ ಪದಗಳನ್ನು ಸೇರಿಸಿತ್ತು. ಜತೆಗೆ, ‘ರಾಷ್ಟ್ರದ ಏಕತೆ’ ಎಂಬ ಪದಗಳ ಬದಲಿಗೆ ‘ರಾಷ್ಟ್ರದ ಏಕತೆ ಮತ್ತು ಸಮಗ್ರತೆ’ ಎಂಬ ಪದಗಳನ್ನು ಸೇರಿಸಿತ್ತು. 1994ರಲ್ಲಿ ಎಸ್‌.ಆರ್‌.ಬೊಮ್ಮಾಯಿ ವರ್ಸಸ್‌ ಕೇಂದ್ರ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮೊದಲ ಬಾರಿಗೆ, ‘ಜಾತ್ಯತೀತ’ ಎಂಬ ಪದವೂ ಸಂವಿಧಾನದ ಮೂಲ ಸ್ವರೂಪದ ಭಾಗ ಎಂದು ಹೇಳಿತ್ತು.

ಕೇಶವಾನಂದ ಭಾರತಿ, ಇಂದಿರಾ ಗಾಂಧಿ ವರ್ಸಸ್ ರಾಜ್ ನಾರಾಯಣ್‌, 1980ರ ಮಿನರ್ವ ಮಿಲ್‌ ಪ್ರಕರಣ ಮತ್ತು ಎಸ್‌.ಆರ್‌.ಬೊಮ್ಮಾಯಿ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌, ‘ಸಂವಿಧಾನದ ಮೂಲ ಸ್ವರೂಪವನ್ನು ಬದಲಿಸುವಂತಹ ಯಾವುದೇ ತಿದ್ದುಪಡಿಗಳನ್ನು ಸಂಸತ್ತು ಮಾಡಬಾರದು’ ಎಂದು ಎಂದು ಪದೇ ಪದೇ ಹೇಳಿದೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪುಗಳ ಪ್ರಕಾರ, ‘ಜಾತ್ಯತೀತ ಚಟುವಟಿಕೆ’ ಮತ್ತು ‘ಜಾತ್ಯತೀತ’ ಎಂಬ ಪದಗಳು ಸಂವಿಧಾನದ ಮೂಲಸ್ವರೂಪದ ಅವಿಭಾಜ್ಯ ಅಂಗಗಳಾಗಿವೆ. ಅವುಗಳನ್ನು ಸಂವಿಧಾನ ತಿದ್ದುಪಡಿಯ ಮೂಲಕವೂ ತೆಗೆದುಹಾಕಲು ಅವಕಾಶವಿಲ್ಲ. ಹೀಗಿದ್ದೂ, ಸಂವಿಧಾನದ ಪ್ರಸ್ತಾವನೆಯಲ್ಲಿ ಇದ್ದ ಜಾತ್ಯತೀತ, ಸಮಾಜವಾದ ಎಂಬ ಪದಗಳನ್ನು ತೆಗೆದುಹಾಕಿ ಸಂವಿಧಾನದ ಹೊಸ ಪ್ರತಿಗಳನ್ನು ಕೇಂದ್ರ ಸರ್ಕಾರ ಮುದ್ರಿಸಿದೆ.

ಈಗಿನ ಅಧಿಕೃತ ಪ್ರಸ್ತಾವನೆ

ಭಾರತದ ಜನಗಳಾದ ನಾವು ಭಾರತವನ್ನು *(ಸಾರ್ವಭೌಮ ಸಮಾಜವಾದ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ) ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ:

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;

ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ;

ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು,** (ರಾಷ್ಟ್ರದ ಏಕತೆಯನ್ನು ಹಾಗೂ ಸಮಗ್ರತೆಯನ್ನು) ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃತ್ವ ಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ;

ನಮ್ಮ ಸಂವಿಧಾನ ಸಭೆಯಲ್ಲಿ 1949ನೆಯ ಇಸವಿ ನವೆಂಬರ್ ತಿಂಗಳ ಇಪ್ಪತ್ತಾರನೆಯ ತಾರೀಖಾದ ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ.

----

* 1976ರಲ್ಲಿ ಭಾರತ ಸಂವಿಧಾನಕ್ಕೆ ತಂದ 42ನೆಯ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ

** 1976ರಲ್ಲಿ ಭಾರತ ಸಂವಿಧಾನಕ್ಕೆ ತಂದ 42ನೆಯ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ

ಸರ್ಕಾರ ನೀಡಿದ ಪ್ರತಿಯಲ್ಲಿನ ಪ್ರಸ್ತಾವನೆ

ಭಾರತದ ಜನಗಳಾದ ನಾವು ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ:

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;

ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ;

ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು, ರಾಷ್ಟ್ರದ ಏಕತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃತ್ವ ಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ;

ನಮ್ಮ ಸಂವಿಧಾನ ಸಭೆಯಲ್ಲಿ 1949ನೆಯ ಇಸವಿ ನವೆಂಬರ್ ತಿಂಗಳ ಇಪ್ಪತ್ತಾರನೆಯ ತಾರೀಖಾದ ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ.

‘ಸರ್ವಥಾ ಸಮರ್ಥನೀಯವಲ್ಲ’

ಸಂವಿಧಾನ ಇವತ್ತು ಹೇಗಿದೆಯೊ ಹಾಗೆಯೇ ಇರುವ ಪ್ರತಿಯನ್ನು ಸಂಸದರಿಗೆ ನೀಡಬೇಕಿತ್ತು. ‘ಜಾತ್ಯತೀತ’ ಮತ್ತು ‘ಸಮಾಜವಾದ’ ಎಂಬ ಪದಗಳನ್ನು ಕಾನೂನುಬದ್ಧವಾಗಿ ತಿದ್ದುಪಡಿ ಮಾಡಿಯೇ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಅಳವಡಿಸಲಾಗಿದೆ. ಇದನ್ನು ಸುಪ್ರೀಂ ಕೋರ್ಟ್‌ ಕೂಡಾ ತನ್ನ ಸಾಕಷ್ಟು ತೀರ್ಪುಗಳಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ತೆಗೆದುಹಾಕಿದ ಸಂವಿಧಾನದ ಪ್ರತಿಯನ್ನು ಸಂಸದರಿಗೆ ನೀಡಿರುವುದು ಸರ್ವಥಾ ಸಮರ್ಥನೀಯವಲ್ಲ. ಇಂತಹ ಕೆಲಸದಿಂದ ಸಂವಿಧಾನದ ಕಗ್ಗೊಲೆಯಾಗುತ್ತದೆ

–ಹಷ್ಮತ್‌ ಪಾಷ, ಹಿರಿಯ ವಕೀಲರು, ಹೈಕೋರ್ಟ್‌

––

‘ಚಿಂತನೆಗೆ ಹಚ್ಚಿದೆ’

1949ರ ನವೆಂಬರ್ 26ರಂದು ಸಂವಿಧಾನ ಸಭೆ, ಕರಡನ್ನು ಅಂತಿಮಗೊಳಿಸುವಾಗ ಬಾಬಾ ಸಾಹೇಬ ಅಂಬೇಡ್ಕರ್‌, ‘ಜಾತ್ಯತೀತ’ ಪದವನ್ನು ಪ್ರತ್ಯೇಕವಾಗಿ ಸೇರಿಸುವ ಅಗತ್ಯವಿಲ್ಲ ಎಂದಿದ್ದರು. ಅಂತೆಯೇ, ‘ಸಮಾಜವಾದ’ ಪದವನ್ನು ಮೂಲಪ್ರತಿಯಲ್ಲಿ ಸೇರಿಸಲು ಜವಾಹರಲಾಲ್‌ ನೆಹರೂ ವಿರೋಧಿಸಿದ್ದರು. ತುರ್ತು ಪರಿಸ್ಥಿತಿ ವೇಳೆ ವಿರೋಧ ಪಕ್ಷದ ನಾಯಕರು ಜೈಲಿನಲ್ಲಿ ಇದ್ದಾಗ ಕಾಂಗ್ರೆಸ್‌ ಸರ್ಕಾರ ಈ ಪದಗಳನ್ನು ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಸೇರ್ಪಡೆ ಮಾಡಿತು. ಈಗ ತಿದ್ದುಪಡಿಗಳಿಲ್ಲದ ಮೂಲ ಪ್ರತಿಯನ್ನು ಸಂಸದರಿಗೆ ಹಂಚಲಾಗಿದೆ. ಇದರಿಂದ ಎಲ್ಲೆಲ್ಲಿ ತಿದ್ದುಪಡಿ ತರಲಾಗಿದೆ ಎಂಬುದನ್ನು ಗಮನಿಸಲು ಇದು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಂಸದರನ್ನು ಚಿಂತನೆಯ ಒರೆಗಲ್ಲಿಗೆ ಹಚ್ಚಲು ಪ್ರಧಾನಿ ಮೋದಿ ಸರ್ಕಾರ ಮುಂದಾಗಿದೆ

–ಪಿ.ಪಿ.ಹೆಗ್ಡೆ, ಹಿರಿಯ ವಕೀಲರು, ಹೈಕೋರ್ಟ್‌

ಆಧಾರ: ಸಂವಿಧಾನ ರಚನಾ ಸಭೆಯ ಚರ್ಚೆ (1948 ಡಿಸೆಂಬರ್ 6), ಕೇಶವಾನಂದ ಭಾರತಿ ಪ್ರಕರಣದ ತೀರ್ಪು, ಇಂದಿರಾಗಾಂಧಿ ವರ್ಸಸ್ ರಾಜ್‌ ನಾರಾಯಣ್‌ ಪ್ರಕರಣದ ತೀರ್ಪು, ಮಿನರ್ವ ಮಿಲ್‌ ಪ್ರಕರಣದ ತೀರ್ಪು, ಎಸ್‌.ಆರ್‌.ಬೊಮ್ಮಾಯಿ ಪ್ರಕರಣದ ತೀರ್ಪು, ಭಾರತ ಸಂವಿಧಾನದ ಅಧಿಕೃತ ಪ್ರತಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT