ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024 ಒಂದು ಮುನ್ನೋಟ | ಶಾಂತಿ, ಸಮೃದ್ಧಿ, ಸೌಹಾರ್ದದ ನಿರೀಕ್ಷೆಯ ಹೊಸ ಬೆಳಗು

Published 1 ಜನವರಿ 2024, 0:30 IST
Last Updated 1 ಜನವರಿ 2024, 0:30 IST
ಅಕ್ಷರ ಗಾತ್ರ

2024, ಲೋಕಸಭೆ ಚುನಾವಣೆಯ ವರ್ಷ. ಕಳೆದ ವರ್ಷ ರಾಜಕೀಯವಾಗಿ ಹಲವು ಬೆಳವಣಿಗೆಗಳು ನಡೆದವು. 2023ರ ಅಂತ್ಯಕ್ಕೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಗಳು ಮತ್ತು ಅದರ ಫಲಿತಾಂಶ ಕೂಡ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಲೋಕಸಭೆ ಚುನಾವಣೆಯು ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ತಮ್ಮ ಒಲವು–ನಿಲುವುಗಳನ್ನು ಸ್ಪಷ್ಟವಾಗಿ ತೋರುತ್ತಿವೆ.

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದ್ದ ಸ್ಥಿತಿ ಈಗ ಇಲ್ಲ. 28 ವಿರೋಧ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟವನ್ನು ರೂಪಿಸಿಕೊಂಡಿವೆ. ಎನ್‌ಡಿಎ ಜೊತೆಗಿದ್ದ ಎಐಎಡಿಎಂಕೆ ಪಕ್ಷವು ಅದರಿಂದ ಹೊರಬಂದಿದೆ. ಜೆಡಿ (ಯು) ಹಾಗೂ ಅಕಾಲಿ ದಳವು ಈ ಹಿಂದೆಯೇ ಹೊರಬಂದಿದ್ದವು. 2019ರ ವೇಳೆಗೆ ಎಐಎಡಿಎಂಕೆ, ಜೆಡಿ(ಯು) ಹಾಗೂ ಅಕಾಲಿ ದಳವು ಎನ್‌ಡಿಎನ ಭಾಗವೇ ಆಗಿತ್ತು. ಆದರೆ, ಈ ಚುನಾವಣೆ ವೇಳೆಗೆ ಈ ಪಕ್ಷಗಳು ಬೇರೆ ಬೇರೆ ಹಾದಿ ಹಿಡಿದಿವೆ. ಆದ್ದರಿಂದ, ಈ ಎಲ್ಲ ಕಾರಣಗಳಿಗಾಗಿ ಈ ಬಾರಿಯ ಚುನಾವಣೆಯಲ್ಲಿ ಈ ಹಿಂದಿನ ಚುನಾವಣೆಗಳಿಗಿಂತ ಭಿನ್ನ ಹೋರಾಟ, ಭಿನ್ನ ಸಂಕಥನಗಳು ರೂಪುಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

ಈ ಬಾರಿಯ ಚುನಾವಣೆಯನ್ನು ಒಂದು ರೂಪಕವಾಗಿ ನೋಡುವುದಾದರೆ ಅಥವಾ ಅದನ್ನು ಸೈದ್ಧಾಂತಿಕವಾಗಿ ಗಮನಿಸುವುದಾದರೆ ಎರಡು ಅಂಶಗಳು ಪ್ರಮುಖವಾಗುತ್ತವೆ. ಒಂದು, ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಬೇಕು ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದ್ದು. ಈ ಬಗ್ಗೆ ಈಗಾಗಲೇ ಚರ್ಚೆಗಳು, ಸಂಕಥನಗಳು ಆರಂಭವಾಗಿವೆ. ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಈ ಬಗ್ಗೆ ಇತ್ತೀಚೆಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಹಿಂದೂ ಹೃದಯ ಸಾಮ್ರಾಟ’ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದ್ದರು. ಖರ್ಗೆ ಅವರ ರಾಜಕೀಯ ನಿಲುವು, ಅವರು ಪ್ರತಿನಿಧಿಸುವ ಜಾತಿ–ಸಮುದಾಯ, ಅವರ ಹಿರಿತನ... ಈ ಎಲ್ಲ ಕಾರಣಗಳಿಗಾಗಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸುವುದನ್ನು
ಪ್ರತಿ–ರೂಪಕವಾಗಿ ನೋಡಬಹುದು.

ಇನ್ನೊಂದು, ಜನವರಿ 14ರಿಂದ ಆರಂಭವಾಗಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ ನ್ಯಾಯ ಯಾತ್ರೆ’. 2022–23ರಲ್ಲಿ ನಡೆದಿದ್ದ ‘ಭಾರತ ಜೋಡೊ ಯಾತ್ರೆ’ಯು ಪಕ್ಷಕ್ಕೆ ದೊಡ್ಡ ಮಟ್ಟದ ಉತ್ಸಾಹ ಹಾಗೂ ವಿಶ್ವಾಸವನ್ನು ತಂದುಕೊಟ್ಟಿತ್ತು. ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ನಡೆಯುವ ‘ನ್ಯಾಯ ಯಾತ್ರೆ’ ಕೂಡ ಪಕ್ಷಕ್ಕೆ ಇನ್ನಷ್ಟು ಹುಮ್ಮಸ್ಸು ತಂದುಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ, ಈ ಯಾತ್ರೆಯು ಮಣಿಪುರದಿಂದ ಆರಂಭವಾಗುವುದರಿಂದ ಹೊಸ ಹೊಸ ಚರ್ಚೆಗಳನ್ನೂ ಇದು ಹುಟ್ಟುಹಾಕಬಹುದು. ಯಾತ್ರೆಯ ಹಾದಿಯ ಬಗ್ಗೆ ಕಾಂಗ್ರೆಸ್‌ನಲ್ಲಿ ಅಪಸ್ವರವೂ ಎದ್ದಿದೆ. ವರ್ಷದ ಆರಂಭದಿಂದಲೇ ಈ ಎರಡು ರೂಪಕಗಳ ಅಥವಾ ಸಿದ್ಧಾಂತಗಳ ಚರ್ಚೆಗಳು ಹೆಚ್ಚು ಸ್ಪಷ್ಟವಾಗುತ್ತವೆ ಮತ್ತು ಇವೇ ಲೋಕಸಭೆ ಚುನಾವಣೆಯ ಫಲಿತಾಂಶ ನಿರ್ಧಾರದ ಅಂಶಗಳೂ ಆಗಬಹುದು.

ದಕ್ಷಿಣ ಮತ್ತು ಉತ್ತರ ಭಾರತ ಎಂಬ ವಿಭಜನೆ ಕಳೆದ ವರ್ಷದ ಅಂತ್ಯದಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಯ ಫಲಿತಾಂಶದ ವಿಶ್ಲೇಷಣೆಯಲ್ಲಿ ಕಂಡುಬಂದ ಪ್ರಮುಖ ಅಂಶ. ಮೊದಲೇ ಹೇಳಿದ ಹಾಗೆ ಎನ್‌ಡಿಎ ಜೊತೆಯಲ್ಲಿ ಈಗ ಎಐಎಡಿಎಂಕೆ ಇಲ್ಲ. ಇದು ಕೂಡ ಪ್ರಮುಖ ಅಂಶವಾಗಲಿದೆ. ಈ ಎಲ್ಲ ಅಂಶಗಳು ಚುನಾವಣೆಯ ಫಲಿತಾಂಶದ ಮೇಲೆ ಹೇಗೆಲ್ಲಾ ಪರಿಣಾಮ ಬೀರಲಿದೆ ಎನ್ನುವುದು ಬೇರೆ ಚರ್ಚೆ. ಆದರೆ, ಈ ಬಾರಿಯ ಚುನಾವಣೆಯು ಒಂದು ವಿಷಯವನ್ನಂತೂ ಸ್ಪಷ್ಟಪಡಿಸಲಿದೆ. ಜನರು ಸೈದ್ಧಾಂತಿಕವಾಗಿ ಹೆಚ್ಚು ಹೆಚ್ಚು ಸ್ಪಷ್ಟತೆ ಪಡೆಯುತ್ತಾರೆ. ಒಂದು ವೇಳೆ, ‘ಇಂಡಿಯಾ’ ಮೈತ್ರಿಕೂಟವು ಅಧಿಕಾರ ಹಿಡಿಯಲು ಸಫಲವಾಗದಿದ್ದಲ್ಲಿ, ಮೈತ್ರಿಕೂಟದ ಪಕ್ಷಗಳಲ್ಲಿ ಹತಾಶೆ ಮೂಡಬಹುದು ಅಥವಾ ಆಯ್ಕೆಗೊಂಡ ಸರ್ಕಾರದ ವಿರುದ್ಧ ಇನ್ನಷ್ಟು ಪ್ರಬಲವಾಗಿ ಹೋರಾಡುವ ಸಂಕಲ್ಪವನ್ನು ಮೂಡಿಸಬಹುದು.

ವಿದೇಶಿ ಚುನಾವಣೆಗಳು: ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಇದೇ ವರ್ಷ ನಡೆಯಲಿದೆ. ಪ್ರಾಥಮಿಕ ಚುನಾವಣೆ ಮತ್ತು ಉಮೇದುವಾರಿಕೆ ಪ್ರಕ್ರಿಯೆಗಳು ಜನವರಿ ಮೊದಲನೇ ವಾರದಲ್ಲಿ ಆರಂಭವಾಗಲಿದೆ. ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಇದು ಮಹತ್ವದ ಚುನಾವಣೆಯಾಗಿದೆ. ಅವರ ಹಣಕಾಸು ನೀತಿಗಳು ಮತ್ತು ವಿದೇಶಾಂಗ ನೀತಿಗಳು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ವಿಶ್ಲೇಷಿಸಲಾಗಿದೆ. ನವೆಂಬರ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಪಾಕಿಸ್ತಾನದಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ, ಹಂಗಾಮಿ ಸರ್ಕಾರದ ಆಡಳಿತ ಕೊನೆಯಾಗಲಿದೆ. ಅಲ್ಲಿ ಆಯ್ಕೆಯಾಗುವ ಸರ್ಕಾರವು ಭಾರತದ ಜೊತೆಗಿನ ಸಂಬಂಧವನ್ನು ಯಾವ ರೀತಿ ನಿರ್ವಹಿಸಬಹುದು ಎಂಬುದು ಕುತೂಹಲಕರ. ಬ್ರಿಟನ್‌ನಲ್ಲಿ 2024ರಲ್ಲೇ ಚುನಾವಣೆಗೆ ಹೋಗುವುದಾಗಿ ಪ್ರಧಾನಿ ರಿಷಿ ಸುನಕ್‌ ಹೇಳಿದ್ದಾರೆ. ಸುನಕ್‌ ಅವರ ಸರ್ಕಾರದ ವೀಸಾ ನೀತಿಯು ಭಾರತೀಯ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಬ್ರಿಟನ್‌ನಲ್ಲಿ ಈ ವರ್ಷವೇ ಚುನಾವಣೆ ನಡೆದರೆ, ಭಾರತಕ್ಕೂ ಅದು ಮಹತ್ವದ್ದಾಗಿರುತ್ತದೆ.

‘ಸುಪ್ರೀಂ’ ಅಂಗಳ

ಸುಪ್ರೀಂ ಕೋರ್ಟ್‌ ಈ ವರ್ಷದಲ್ಲಿ ಮಹತ್ತರವಾದ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಮತ್ತು ಕೆಲವು ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನೂ ನೀಡಬೇಕಿದೆ. ಇಲ್ಲಿನ ಕೆಲವು ಅರ್ಜಿಗಳು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವಂತಹ ವಿಚಾರಗಳಿಗೆ ಸಂಬಂಧಿಸಿರುವುದಾದರೆ, ಕೆಲವು ಅರ್ಜಿಗಳು ರಾಜಕೀಯವಾಗಿ ಮಹತ್ವ ಪಡೆದವುಗಳಾಗಿವೆ.

ಹಣಕಾಸು ಮಸೂದೆ (ಮನಿ ಬಿಲ್‌): ತೆರಿಗೆ ಬದಲಾವಣೆ, ಸಾಲ ಮತ್ತು ಸರ್ಕಾರದ ವೆಚ್ಚಗಳಿಗೆ ಸಂಬಂಧಿಸಿದ ಹಣಕಾಸು ಮಸೂದೆಯ (ಮನಿ ಬಿಲ್‌) ಹೆಸರಿನಲ್ಲಿ ಕಾನೂನು ಮಸೂದೆಗಳನ್ನು ಪಾಸು ಮಾಡಕೊಳ್ಳುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಇದೇ ಜನವರಿಯಲ್ಲಿ ಕೈಗೆತ್ತಿಕೊಳ್ಳಲಿದೆ. ಹಣಕಾಸು ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಿದರೆ ಸಾಕು, ರಾಜ್ಯ ಸಭೆಯ ಅಂಗೀಕಾರ ಅಗತ್ಯವಿಲ್ಲ. 

ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯಕ್ಕೆ ಹೆಚ್ಚಿನ ಅಧಿಕಾರ ಕೊಡುವ ಮಸೂದೆಯನ್ನು ಎನ್‌ಡಿಎ ಸರ್ಕಾರವು ಹಣಕಾಸು ಮಸೂದೆಯ ಹೆಸರಿನಲ್ಲಿ ಅಂಗೀಕರಿಸಿಕೊಂಡು, ಜಾರಿಗೆ ತಂದಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಜಾರಿ ನಿರ್ದೇಶನಾಲಯಕ್ಕೆ ಹೆಚ್ಚಿನ ಅಧಿಕಾರ ಕೊಟ್ಟ ಕ್ರಮವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಆದರೆ ಕಾನೂನು ಮಸೂದೆಗಳನ್ನು ಹಣಕಾಸು ಮಸೂದೆಗಳ ಹೆಸರಿನಲ್ಲಿ ಅಂಗೀಕರಿಸಿಕೊಳ್ಳುವ ಕ್ರಮದ ಸಾಂವಿಧಾನಿಕ ಸಿಂಧುತ್ವವನ್ನು ವಿಸ್ತೃತ ಪೀಠದ ಪರಿಶೀಲನೆಗೆ ನೀಡಿತ್ತು.

ಬಿಲ್ಕಿಸ್‌ ಬಾನು ಪ್ರಕರಣ: ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಕ್ರಮದ ವಿರುದ್ಧದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಅರ್ಜಿಗೆ ಸಂಬಂಧಿಸಿದ ತೀರ್ಪು ಈ ವರ್ಷ ಬರುವ ನಿರೀಕ್ಷೆ ಇದೆ.

ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳು: ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಶೇ25–ಶೇ50ರಷ್ಟು ಇದ್ದರೆ, ಅವುಗಳಿಗೆ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಮಾನ್ಯತೆ ನೀಡಲಾಗುತ್ತದೆ. ಈ ಮಾನದಂಡವನ್ನು ಮರುಪರಿಶೀಲಿಸಿ ಎಂದು 2023ರಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗವು ಈ ನಾಲ್ಕೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿತ್ತು. ಆಯೋಗದ ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಚಾರಣೆಯನ್ನು ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಜನವರಿ ಎರಡನೇ ವಾರದಲ್ಲಿ ನಡೆಸಲಿದೆ.

ಯುದ್ಧದ ಕಾರ್ಮೋಡ

*2022ರಲ್ಲಿ ಆರಂಭವಾಗಿದ್ದ ರಷ್ಯಾ–ಉಕ್ರೇನ್‌ ಯುದ್ಧವು ಈವರೆಗೂ ಮುಗಿದಿಲ್ಲ. 2023ರ ಡಿಸೆಂಬರ್ ಕೊನೆಯ ವಾರದಲ್ಲೂ ರಷ್ಯಾ ಉಕ್ರೇನ್‌ನ ಮೇಲೆ ದಾಳಿ ನಡೆಸಿದೆ. ಉಕ್ರೇನ್‌ಗೆ ಅಮೆರಿಕ, ಐರೋಪ್ಯ ಒಕ್ಕೂಟದ ದೇಶಗಳು ಶಸ್ತ್ರಾಸ್ತ್ರ ನೆರವು ಒದಗಿಸುತ್ತಿವೆ. ರಷ್ಯಾವು ಪದೇ–ಪದೇ ದಾಳಿ ನಡೆಸುತ್ತಲೇ ಇದೆ. 2024ರಲ್ಲೂ ಈ ಯುದ್ಧ ಮುಂದುವರಿಯಲಿದೆ 

*ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರ ವಿರುದ್ಧ ಇಸ್ರೇಲ್‌ ನಡೆಸುತ್ತಿರುವ ಯುದ್ಧವು ಈ ವರ್ಷವೂ ಮುಂದುವರಿಯುತ್ತದೆ ಎಂದು ಅಂದಾಜಿಸಲಾಗಿದೆ. ಸಶಸ್ತ್ರ ಸಂಘರ್ಷದಿಂದ ಹಿಂದೆ ಸರಿಯುವ ಬಗ್ಗೆ ಎರಡೂ ಕಡೆ ಒಲವು ಇಲ್ಲದೇ ಇರುವುದರಿಂದ ಈ ಪ್ರದೇಶದಲ್ಲಿ ಮತ್ತಷ್ಟು ಸಾವು–ನೋವು ಸಂಭವಿಸಬಹುದು

*ಕೆಂಪು ಸಮುದ್ರ, ಅರಬ್ಬಿ ಸಮುದ್ರದ ವ್ಯಾಪ್ತಿಯಲ್ಲಿ ವ್ಯಾಪಾರಿ–ಸರಕು ಸಾಗಣೆ ಹಡಗುಗಳ ಮೇಲೆ ಡ್ರೋನ್‌ ದಾಳಿ ನಡೆದಿದೆ. ಕೆಲವು ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಕೆಲವು ದೋಣಿಗಳನ್ನು ಅಮೆರಿಕದ ನೌಕಾಪಡೆ ಧ್ವಂಸಮಾಡಿದೆ. ಭಾರತದ ನೌಕಾಪಡೆಯೂ ದೊಡ್ಡ ಮಟ್ಟದಲ್ಲಿಯೇ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ

*ಉತ್ತರ ಕೊರಿಯಾವು ದಕ್ಷಿಣ ಕೊರಿಯಾದ ಮೇಲೆ ಯುದ್ಧ ನಡೆಸುವ ಬೆದರಿಕೆಯನ್ನು ಹಾಕಿದೆ. 2022, 2023ರ ಯುದ್ಧೋನ್ಮಾನ ಮತ್ತೊಂದು ಹೊಸ ಯುದ್ಧಕ್ಕೆ ಕಾರಣವಾಗುವ ಅಪಾಯ ತಲೆದೋರಲಿದೆ

ಕರ್ನಾಟಕದಲ್ಲಿ...

*ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಪೈಕಿ ಕೊನೆಯ ಗ್ಯಾರಂಟಿ, ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಹಣ ನೀಡುವ ‘ಯುವನಿಧಿ’ ಯೋಜನೆಗೆ ಜನವರಿ 12ರಂದು ಚಾಲನೆ ಸಿಗಲಿದೆ. ಈ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹3 ಸಾವಿರ, ಡಿಪ್ಲೊಮಾ ಹೊಂದಿರುವವರಿಗೆ ₹1,500 ಆರ್ಥಿಕ ನೆರವು ನೀಡಲಾಗುತ್ತದೆ. ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷ ಅವಧಿಯಲ್ಲಿ ಯಾವುದು ಮೊದಲೋ ಅಲ್ಲಿಯವರಿಗೆ ಈ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ

*ಇತ್ತೀಚೆಗಷ್ಟೇ ಬಿಜೆಪಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಬಿ.ವೈ.ವಿಜಯೇಂದ್ರ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವ ಸವಾಲು ಇದೆ. 2019ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 28ರಲ್ಲಿ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು

*ಲೋಕಸಭೆ ಚುನಾವಣೆ ಬಳಿಕ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿ ಚುನಾವಣೆಗಳು ನಡೆಯಬೇಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT