ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ರಾಜ್ಯ ರಾಜಕಾರಣದ ಪುನರಾಗಮನ
ಆಳ–ಅಗಲ: ರಾಜ್ಯ ರಾಜಕಾರಣದ ಪುನರಾಗಮನ
ಯೋಗೇಂದ್ರ ಯಾದವ್‌ /ರಾಹುಲ್‌ ಶಾಸ್ತ್ರಿ/ಶ್ರೇಯಸ್‌ ಸರ್ದೇಸಾಯಿ
Published 11 ಜೂನ್ 2024, 23:37 IST
Last Updated 11 ಜೂನ್ 2024, 23:37 IST
ಅಕ್ಷರ ಗಾತ್ರ

ಈ ಬಾರಿಯ ಲೋಕಸಭಾ ಚುನಾವಣೆಯ ಆಘಾತಕಾರಿ ಫಲಿತಾಂಶವು ರಾಷ್ಟ್ರೀಯ ಚುನಾವಣೆಯಲ್ಲಿ ರಾಜ್ಯ ರಾಜಕಾರಣವು ಕೇಂದ್ರ ಬಿಂದುವಾಗಿ ಹೊರಹೊಮ್ಮಿರುವುದನ್ನು ಮಸುಕಾಗಿಸಿರುವಂತೆ ಕಾಣಿಸುತ್ತಿದೆ. 

ನಾವು ಜೂನ್‌ 4ಕ್ಕೂ (ಫಲಿತಾಂಶದ ದಿನ) ಮೊದಲು,  ಬಿಜೆಪಿಗೆ 237 ಸೇರಿದಂತೆ ಎನ್‌ಡಿಎಗೆ 286 ಸ್ಥಾನಗಳು, ಕಾಂಗ್ರೆಸ್‌ಗೆ 89 ಸೇರಿದಂತೆ ಇಂಡಿಯಾ ಒಕ್ಕೂಟಕ್ಕೆ 215 ಸ್ಥಾನಗಳು ಸಿಗಲಿವೆ ಎಂದು ಹೇಳಿದ್ದೆವು. ಈ ಅಂಕಿ ಅಂಶಗಳೊಂದಿಗೆ ಚುನಾವಣೆಯ ಅಂತಿಮ ಫಲಿತಾಂಶದ ಹೋಲಿಕೆ ಅಚ್ಚರಿ ತರುತ್ತದೆಯಲ್ಲವೇ? ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 292 (ಬಿಜೆಪಿ 240), ‘ಇಂಡಿಯಾ’ ಒಕ್ಕೂಟ 233 (ಕಾಂಗ್ರೆಸ್‌ 99) ಸ್ಥಾನ ಗಳಿಸಿವೆ. 

ಇಲ್ಲ, ಈ ಅಂಕಿ ಅಂಶಗಳು ಭವಿಷ್ಯವಾಗಿರಲಿಲ್ಲ. ಬದಲಿಗೆ, 2019ರ ಲೋಕಸಭಾ ಚುನಾವಣೆಯ ನಂತರ ರಾಜ್ಯಗಳಲ್ಲಿ ನಡೆದಿದ್ದ ವಿಧಾನಸಭಾ ಚುನಾವಣಾ ಫಲಿತಾಂಶಗಳ ಆಧಾರದಲ್ಲಿ ಮಾಡಿದ ‘ಅಂದಾಜು’ ಆಗಿತ್ತು. 

ಒಂದು ಲೋಕಸಭಾ ಕ್ಷೇತ್ರ ಹಲವು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವುದರಿಂದ, ರಾಜ್ಯಗಳಲ್ಲಿ ಇತ್ತೀಚೆಗೆ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳು ಪಡೆದಿರುವ ಮತಗಳ ಆಧಾರದಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಬಹುದಾದ ಪಕ್ಷವನ್ನು (ಅಥವಾ ಮೈತ್ರಿಕೂಟ, ಈಗಿನ ಮೈತ್ರಿಗೆ ಹೊಂದಾಣಿಕೆ ಮಾಡಿ) ಮರುಲೆಕ್ಕಾಚಾರ ಮಾಡಿದ್ದೆವು. ಅಂದಾಜು ಮಾಡಲಾದ ಈ ಅಂಕಿ ಅಂಶಗಳನ್ನು ಏಳು ಹಂತಗಳಲ್ಲಿ ನಡೆದಿರುವ ಚುನಾವಣೆಯ ಸಂದರ್ಭದಲ್ಲಿ  ‘ದಿ ಪ್ರಿಂಟ್‌’ನಲ್ಲಿ ಪ್ರಕಟವಾದ ಏಳು ಲೇಖನಗಳ ಸರಣಿಯ  ಪ್ರತಿಯೊಂದು ವರದಿಯಲ್ಲೂ ನಾವು ಉಲ್ಲೇಖಿಸಿದ್ದೆವು. 

ಹಿಂದಿನ ವಿಧಾನಸಭಾ ಫಲಿತಾಂಶದ ಆಧಾರದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶವನ್ನು ಅಂದಾಜಿಸಬಹುದು ಎಂದು ಹೇಳುವುದು ನಮ್ಮ ಉದ್ದೇಶ ಅಲ್ಲ. ಈ ಬಾರಿ ನಾವು ಹೇಳಿರುವ ಭವಿಷ್ಯ ನಿಜವಾಗಿರುವುದು ಕಾಕತಾಳೀಯ. ಆದರೆ, ಅಂದಾಜು ನಿಜವಾಗಿರುವುದು ಆಳವಾದ ವಿಚಾರವೊಂದರ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಹಿಂದಿನ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ, ರಾಜ್ಯ ಮಟ್ಟದ ಚುನಾವಣೆಗಳು ಈ ‌ಸಲದ ಲೋಕಸಭಾ ಚುನಾವಣೆಯ ಫಲಿತಾಂಶ ಹೇಗಿರಬಹುದು ಎಂಬ ಬಗ್ಗೆ ಉತ್ತಮ ಹೊಳಹುಗಳನ್ನು ನೀಡಿದವು. 

2019ರ ಫಲಿತಾಂಶವೇ ಪುನರಾವರ್ತನೆಯಾಗಲಿದೆ ಎಂಬ ನಿಲುವಿಗೆ ನೀವು ಅಂಟಿಕೊಳ್ಳದೆ, ಹಿಂದಿನ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದರೆ, ಬಿಜೆಪಿಯು ಈ ಬಾರಿ 60ರಷ್ಟು ಕಡಿಮೆ ಸ್ಥಾನಗಳನ್ನು ಪಡೆಯಲಿದೆ ಎಂಬುದನ್ನು ಅಂದಾಜಿಸಬಹುದಿತ್ತು. ಆದರೆ, ಇಡೀ ಚುನಾವಣಾ ವರದಿಗಾರಿಕೆ ಮತ್ತು ವಿಶ್ಲೇಷಣೆಗಳಲ್ಲಿ ಈ ವಾಸ್ತವಾಂಶವನ್ನು ನಿರ್ಲಕ್ಷಿಸಲಾಗಿತ್ತು. 

ಚುನಾವಣೆಯಲ್ಲಿದ್ದ ಸ್ಪರ್ಧೆಯ ಸ್ವರೂಪ ಮತ್ತು ಫಲಿತಾಂಶ ಯಾವ ರೀತಿ ಬರಬಹುದು ಎಂಬುದನ್ನು ‌ಅರ್ಥೈಸಿಕೊಳ್ಳಲು ಈ ವಿಶ್ಲೇಷಣೆ ನಮಗೆ ಹೇಗೆ ನೆರವಾಗುತ್ತಿತ್ತು ಎಂಬುದನ್ನು ಈ ಲೇಖನದ ಜೊತೆಗೆ ನೀಡಲಾಗಿರುವ ಕೋಷ್ಟಕದಲ್ಲಿರುವ ರಾಜ್ಯವಾರು ಚಿತ್ರಣವನ್ನು ಗಮನಿಸಬಹುದು.

ಉದಾಹರಣೆಗೆ ಪಶ್ಚಿಮ ಬಂಗಾಳ ರಾಜ್ಯವನ್ನೇ ತೆಗೆದುಕೊಳ್ಳೋಣ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಮತಗಳನ್ನು ನೋಡಿದರೆ, ಈ ಚುನಾವಣೆಯಲ್ಲಿ ಅದು 10 ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲಿದೆ ಎಂದು ನಿರೀಕ್ಷಿಸ ಬಹುದಿತ್ತು. ಹಾಗಾಗಿ, ಈ ಬಾರಿ ಬಿಜೆಪಿಯ ಸಾಧನೆ (12 ಸ್ಥಾನಗಳಲ್ಲಿ ಗೆಲುವು) ನಮ್ಮನ್ನು ಅಚ್ಚರಿಗೆ ಕೆಡವುತ್ತಿರಲಿಲ್ಲ. ಅದೇ ರೀತಿ, 2023ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಮತ ಹಂಚಿಕೆಯ ಅಧ್ಯಯನದ ಪ್ರಕಾರ, ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು 15 ಸ್ಥಾನಗಳನ್ನು ಪಡೆಯಲಿವೆ ಎಂದು ಅಂದಾಜಿಸಬಹುದಿತ್ತು. ಆದರೆ, 11 ಸ್ಥಾನಗಳನ್ನು ಗಳಿಸಿವೆ. ಇದೇ ಲೆಕ್ಕಾಚಾರ ಬಿಹಾರ, ಕರ್ನಾಟಕ ಮತ್ತು ತಮಿಳುನಾಡಿಗೂ ಅನ್ವಯಿಸುತ್ತದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಗುಜರಾತ್‌ನಲ್ಲೂ ರಾಜ್ಯ ವಿಧಾನಸಭಾ ಚುನಾವಣೆಗಳು ಬದಲಾವಣೆಯ ದಿಕ್ಕು ಗುರುತಿಸಲು ಸಹಾಯ ಮಾಡಿವೆ.

ಆದರೆ, ಇದು ಎಲ್ಲ ರಾಜ್ಯಗಳಿಗೂ ಅನ್ವಯವಾಗುವುದಿಲ್ಲ. 2019, 2024ರಲ್ಲಿ ಆಂಧ್ರ ಪ್ರದೇಶ, ಒಡಿಶಾದಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಒಟ್ಟಿಗೆ ನಡೆದಿದ್ದರಿಂದ ಎರಡೂ ರಾಜ್ಯಗಳಲ್ಲಿ ರಾಜಕೀಯ ಭೂಕಂಪನದ ಸೂಚನೆ ಸಿಕ್ಕಿರಲಿಲ್ಲ.   

ಮಹಾರಾಷ್ಟ್ರ, ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ನಂತರ ಮೈತ್ರಿಕೂಟಗಳಲ್ಲಿ ಪ್ರಮುಖ ಬದಲಾವಣೆಗಳಾಗಿದ್ದರಿಂದ ಈ ದತ್ತಾಂಶಗಳು ಹೆಚ್ಚು ಪ್ರಯೋಜನಕ್ಕೆ ಬಂದಿಲ್ಲ. ಕಳೆದ ವಿಧಾನಸಭಾ ಚುನಾವಣೆಗಳ ನಂತರ ನಾಟಕೀಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ತೆಲಂಗಾಣ, ಮಣಿಪುರ ಮತ್ತು ಪಂಜಾಬ್‌ ರಾಜ್ಯಗಳ ವಿಚಾರದಲ್ಲೂ ಈ ಮಾದರಿ ಕೆಲಸ ಮಾಡಿಲ್ಲ. ಆದರೆ, ರಾಜ್ಯ ಮಟ್ಟದ ಚುನಾವಣಾ ರೀತಿಗಳಲ್ಲಿ ಆಗಿರುವ ಬದಲಾವಣೆಯ ವಾಸ್ತವತೆಯನ್ನು ಈ ಎಲ್ಲ ರಾಜ್ಯಗಳ ಲೋಕಸಭಾ ಚುನಾವಣಾ ಫಲಿತಾಂಶ ಸೂಚಿಸುತ್ತದೆ.‌

ಆದರೆ, ಮಧ್ಯಪ್ರದೇಶ, ಛತ್ತೀಸಗಢ, ದೆಹಲಿ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ರಾಜ್ಯ ರಾಜಕಾರಣಕ್ಕೆ ಪ್ರಾಮುಖ್ಯ ಸಿಕ್ಕಿಲ್ಲ. ಈ ರಾಜ್ಯಗಳಲ್ಲಿ ಹಿಂದಿನ ವಿಧಾನಸಭಾ ಚುನಾವಣೆಗಳ ಮತ ಹಂಚಿಕೆಗೆ ಹೋಲಿಸಿದರೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ‌

ಸರಿದಾರಿಯತ್ತ ಪ್ರಜಾಪ್ರಭುತ್ವ

ಈ ಬಾರಿಯ ಲೋಕಸಭೆ ಚುನಾವಣಾ ಫಲಿತಾಂಶದ ಅಂಕಿ–ಅಂಶಗಳು ಭಾರತದ ರಾಜಕಾರಣದಲ್ಲಿ ಹೊಸ ಸಂಕಥನವೊಂದು ಉದಯಿಸಿದ್ದನ್ನು ಸೂಚಿಸುತ್ತಿದೆ. ಸುಮಾರು ಎರಡು ದಶಕಗಳ ಹಿಂದೆ, ನಮ್ಮಲ್ಲಿ ಒಬ್ಬರಾದ ಯೋಗೇಂದ್ರ ಯಾದವ್‌ ಅವರು
ಪ್ರೊ. ಸುಹಾಸ್‌ ಪಲಶಿಕರ್‌ ಅವರೊಡಗೂಡಿ ಸರಣಿ ಲೇಖನಗಳನ್ನು ಬರೆದಿದ್ದರು. 1990ರ ದಶಕದಲ್ಲಿ ಭಾರತೀಯ ರಾಜಕಾರಣವು ಹೊಸ ಶಕೆಗೆ ಪ್ರವೇಶ ಪಡೆಯಿತು ಮತ್ತು ರಾಷ್ಟ್ರ ಮಟ್ಟದ ಚುನಾವಣೆಯ ಕೇಂದ್ರ ಬಿಂದು ರಾಜ್ಯ ರಾಜಕಾರಣವಾಗಿತ್ತು ಎಂಬುದನ್ನು ಆ ಲೇಖನಗಳು ಚರ್ಚಿಸಿದ್ದವು. ಆ ಸರಣಿ ಲೇಖನಗಳಲ್ಲಿ ಈ ಶಕೆಯನ್ನು ಮೂರನೇ ಚುನಾವಣಾ ವ್ಯವಸ್ಥೆ ಎಂದು ಕರೆಯಲಾಗಿತ್ತು.

1970 ಹಾಗೂ 1980ರ ದಶಕಗಳಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜನರು, ತಾವು ಪ್ರಧಾನಿಯನ್ನು ಆರಿಸುತ್ತಿದ್ದೇವೆಯೋ ಎನ್ನುವಂತೆ ಮತ ಚಲಾಯಿಸುತ್ತಿದ್ದರು. ಇದಕ್ಕೆ ವಿರುದ್ಧವಾಗಿ 1990ರಲ್ಲಿ ಹಾಗೂ 2000ರ ಹೊತ್ತಿಗೆ ಲೋಕಸಭಾ ಚುನಾವಣೆಯ ವೇಳೆ ತಮ್ಮ ರಾಜ್ಯದ ಮುಖ್ಯಮಂತ್ರಿಯನ್ನೇ ಆರಿಸುತ್ತಿದ್ದೇವೆಯೋ ಎನ್ನುವಂತೆ ಜನರು ಹಕ್ಕು ಚಲಾಯಿಸಲು ಆರಂಭಿಸಿದರು. 

ನರೇಂದ್ರ ಮೋದಿ ಅವರು 2014ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಬಂದ ನಂತರ ಇವೆಲ್ಲವೂ ಬದಲಾದವು. ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ರಾಷ್ಟ್ರ ರಾಜಕಾರಣವನ್ನೇ ಪರಿಗಣನೆಗೆ ತೆಗೆದುಕೊಳ್ಳಲಾಯಿತು. ರಾಷ್ಟ್ರ ರಾಜಕಾರಣವೇ ಕೆಲವು ವಿಧಾನಸಭಾ ಚುನಾವಣೆಯ ಪ್ರಮುಖ ವಿಚಾರವಾಯಿತು.

ಈ ಬಾರಿಯ ಲೋಕಸಭಾ ಚುನಾವಣೆಯು ಮತ್ತೊಂದು ಸಂಕಥನವನ್ನು ಹುಟ್ಟುಹಾಕಿದೆ. ರಾಜ್ಯ ರಾಜಕಾರಣವು ಲೋಕಸಭಾ ಚುನಾವಣೆಯ ಮತದಾನದ ವೇಳೆ ಹೆಚ್ಚು ಪ್ರಾಮುಖ್ಯ ಪಡೆಯಲಿಲ್ಲ ಎಂಬುದು ನಿಜ. ಆದರೆ, ರಾಷ್ಟ್ರೀಯ ಚುನಾವಣೆಯಲ್ಲಿ ಮತವನ್ನು ಯಾರಿಗೆ ಹಾಕಬೇಕು ಎಂದು ಜನರು ನಿರ್ಧರಿಸುವಲ್ಲಿ ರಾಜ್ಯ ರಾಜಕಾರಣದ ವಿಚಾರಗಳು ಖಂಡಿತಾ ಪ್ರಭಾವಿಸಿವೆ.

2019ರ ಲೋಕಸಭಾ ಚುನಾವಣೆಯ ವೇಳೆ ರಾಜ್ಯ ರಾಜಕಾರಣವು ಜನರನ್ನು ಹೆಚ್ಚೇನು ಪ್ರಭಾವಿಸಿರಲಿಲ್ಲ. ಆದರೆ, ಈ ಬಾರಿ ಈ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಲೋಕನೀತಿ ಹಾಗೂ ಸಿಎಸ್‌ಡಿಎಸ್‌ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತವೆ. ಸಮೀಕ್ಷೆಯ ವೇಳೆ ಈ ಸಂಸ್ಥೆಗಳು ಜನರ ಮುಂದೆ ಕೆಲವು ಪ್ರಶ್ನೆಗಳನ್ನು ಇರಿಸಿದ್ದವು; ‘ಮತವನ್ನು ಯಾರಿಗೆ ಹಾಕಬೇಕು ಎಂದು ನಿರ್ಧರಿಸುವಾಗ, ಯಾವ ಸರ್ಕಾರದ (ರಾಜ್ಯ ಅಥವಾ ಕೇಂದ್ರ) ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳುತ್ತೀರಿ?’ ಎಂದು ಕೇಳಿತ್ತು. ಶೇ 23ರಷ್ಟು ಜನರು ಕೇಂದ್ರ ಸರ್ಕಾರ ಎಂದು ಹೇಳಿದರೆ, ಶೇ 21ರಷ್ಟು ಜನರು ರಾಜ್ಯ ಸರ್ಕಾರ ಎಂದು ಹೇಳಿದ್ದರು. ಇದೇ ವೇಳೆ, ಶೇ 41ರಷ್ಟು ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡನ್ನೂ ಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಇದೇ ಪ್ರಶ್ನೆಯನ್ನು 2019ರಲ್ಲಿ ಇದೇ ಸಂಸ್ಥೆಗಳು ಜನರ ಮುಂದಿರಿಸಿದಾಗ, ಶೇ 28ರಷ್ಟು ಜನರು ಕೇಂದ್ರ ಸರ್ಕಾರವನ್ನು ಹಾಗೂ ಶೇ 17ರಷ್ಟು ಜನರು ರಾಜ್ಯ ಸರ್ಕಾರವನ್ನು ಹೆಸರಿಸಿದ್ದರು.

ಭಾರತದಲ್ಲಿ ಕುಸಿಯುತ್ತಿರುವ ಪ್ರಜಾಪ್ರಭುತ್ವ ಭಾಗಶಃ ಸರಿದಾರಿಗೆ ಮರಳುತ್ತಿದೆ ಎನ್ನುವ ಚರ್ಚೆಯನ್ನು ಈ ಚುನಾವಣೆ ಹುಟ್ಟುಹಾಕಿದೆ. ಬಿಜೆಪಿ ಶೈಲಿಯ ರಾಜಕಾರಣದ ಬಗ್ಗೆ ಜನರಲ್ಲಿದ್ದ ಭ್ರಮೆ ಕಳಚಿರುವುದು ಇದಕ್ಕೆ ಕಾರಣ. ಈ ಚುನಾವಣೆಯಲ್ಲಿ ನಿತ್ಯದ ಬದುಕಿನ ವಿಚಾರಗಳು ಮುನ್ನೆಲೆಗೆ ಬಂದು, ರಾಷ್ಟ್ರೀಯತೆ ಎಂಬ ಭಾನಾತ್ಮಕವಾದ ಉತ್ತುಂಗದ ಸ್ಥಿತಿಯು ಹಿಂದೆ ಸರಿದಿದೆ. ರಾಜ್ಯ ರಾಜಕಾರಣವು ಮುನ್ನೆಲೆಗೆ ಮರಳುವ ಮೂಲಕ ಪ್ರಜಾಪ್ರಭುತ್ವದ ಮರುಸಮತೋಲನವು ಈ ಚುನಾವಣೆಯಲ್ಲಿ ಸಾಧ್ಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT