ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಆಮೆ ನಡಿಗೆಯಲ್ಲಿ ಯುಎಪಿಎ ಪ್ರಕರಣಗಳ ವಿಚಾರಣೆ
ಆಳ–ಅಗಲ: ಆಮೆ ನಡಿಗೆಯಲ್ಲಿ ಯುಎಪಿಎ ಪ್ರಕರಣಗಳ ವಿಚಾರಣೆ
Published 7 ಡಿಸೆಂಬರ್ 2023, 23:52 IST
Last Updated 7 ಡಿಸೆಂಬರ್ 2023, 23:52 IST
ಅಕ್ಷರ ಗಾತ್ರ
ದೇಶದ ಅತ್ಯಂತ ಕಠಿಣ ಕಾನೂನುಗಳಲ್ಲಿ ಯುಎಪಿಯ ಮೊದಲನೆಯದ್ದು. ಜಾಮೀನು ಕಷ್ಟಸಾಧ್ಯವಾದ ಈ ಕಾಯ್ದೆಯಡಿ ಸಾವಿರಾರು ಮಂದಿ ಬಂಧನದಲ್ಲಿದ್ದಾರೆ. ತನಿಖೆ ಮತ್ತು ವಿಚಾರಣೆ ಪೂರ್ಣಗೊಳ್ಳದೆ ನ್ಯಾಯದಾನ ವಿಳಂಬವಾಗುತ್ತಿರುವ ಕಾರಣ ಸಾವಿರಾರು ಆರೋಪಿಗಳು ಹಲವು ವರ್ಷಗಳ ಸೆರೆವಾಸ ಅನುಭವಿಸುವಂತಾಗಿದೆ. ತನ್ನ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪವೂ ಇದೆ

ವಿಧ್ವಂಸಕಾರಿ ಕೃತ್ಯಗಳು ಮತ್ತು ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ವಿಧಿಸಲಾಗುವ ‘ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ–ಯುಎಪಿಎ’ಯು ಭಾರತದಲ್ಲಿರುವ ಅತ್ಯಂತ ಕಠಿಣ ಕಾಯ್ದೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಈ ಕಾಯ್ದೆ ಅಡಿ ಪ್ರಕರಣ ದಾಖಲಿಸಿದರೆ, ಜಾಮೀನು ಸಿಗುವುದು ಕಷ್ಟಸಾಧ್ಯ. ಯುಎಪಿಎ ಅಡಿ ಬಂಧಿಸಲಾದ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಕಾಯ್ದೆ ಹೇಳುತ್ತದೆ. ಹೀಗಾಗಿ ಈ ಕಾಯ್ದೆ ಅಡಿ ಬಂಧನಕ್ಕೆ ಒಳಗಾದವರು, ಪ್ರಕರಣ ವಿಲೇವಾರಿಯಾಗದೆ ಬಿಡುಗಡೆಯಾಗುವುದು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. 

ಈ ಕಾಯ್ದೆ ಅಡಿ ಬಂಧನಕ್ಕೆ ಒಳಗಾದವರನ್ನು ತ್ವರಿತ ವಿಚಾರಣೆ ಇಲ್ಲದೇ ಸೆರೆವಾಸದಲ್ಲಿ ಇರಿಸಿದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. 2019–2022ರ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 7,526 ಜನರನ್ನು ಈ ಕಾಯ್ದೆ ಅಡಿ ಬಂಧಿಸಲಾಗಿದೆ. ಆದರೆ ಇವರಲ್ಲಿ ಶೇ 90.80ರಷ್ಟು ಆರೋಪಿಗಳು ತನಿಖೆ ಮತ್ತು ವಿಚಾರಣೆ ಪೂರ್ಣಗೊಳ್ಳದೆ ಸೆರೆವಾಸ ಅನುಭವಿಸುತ್ತಿದ್ದಾರೆ.

ಭೀಮಾ ಕೋರೆಂಗಾವ್‌ ಹಿಂಸಾಚಾರ–ಎಲ್ಗಾರ್ ಪರಿಷದ್‌ ಸಂಚು ಆರೋಪದಲ್ಲಿ ಹಲವು ಸಾಮಾಜಿಕ ಕಾರ್ಯಕರ್ತರ ವಿರುದ್ಧ 2018ರಲ್ಲಿ ಯುಎಪಿಎ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನ್‌ ಸ್ವಾಮಿ ಅವರನ್ನು 2020ರ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ಸೆರೆವಾಸದಲ್ಲಿ ಇದ್ದಾಗಲೇ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಹಲವು ಅರ್ಜಿಗಳ ಹೊರತಾಗಿಯೂ ಅವರಿಗೆ ಜಾಮೀನು ದೊರೆತಿರಲಿಲ್ಲ. ವಿಚಾರಣಾಧೀನ ಕೈದಿಯಾಗಿಯೇ ಅವರು ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದು ದೇಶ ಮಾತ್ರವಲ್ಲದೆ, ವಿದೇಶಗಳಲ್ಲೂ ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ, ಹೀಗೆ ತನಿಖೆ ಮತ್ತು ವಿಚಾರಣೆ ಪೂರ್ಣಗೊಳ್ಳದೆ 2019–2022ರ ಅವಧಿಯಲ್ಲಿ ಜೈಲಿನಲ್ಲೇ ದಿನಗಳನ್ನು ಕಳೆಯುತ್ತಿದ್ದಂತಹ ಆರೋಪಿಗಳ ಸಂಖ್ಯೆ 6,835. ಇವರಲ್ಲಿ ತನಿಖೆಯೇ ಪೂರ್ಣಗೊಳ್ಳದ ಆರೋಪಿಗಳ ಸಂಖ್ಯೆ 1,874ರಷ್ಟಿದ್ದರೆ, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಆರೋಪಿಗಳ ಸಂಖ್ಯೆ 4,961.

ಸಾಮಾನ್ಯವಾಗಿ ಭಯೋತ್ಪಾದನಾ ಚಟುವಟಿಕೆ, ಉಗ್ರರೊಂದಿಗೆ ಸಂಪರ್ಕ ಮತ್ತು ಹಣಕಾಸು ನೆರವು ನೀಡಿದವರ ಮೇಲೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಆದರೆ, 2019ರ ನಂತರ ಕೇಂದ್ರ ಸರ್ಕಾರದ ವಿರುದ್ಧ ದನಿ ಎತ್ತಿದವರ ವಿರುದ್ಧವೂ ಯುಎಪಿಎ ಪ್ರಯೋಗಿಸಲಾಗುತ್ತಿದೆ ಎಂಬುದು ವಿರೋಧ ಪಕ್ಷಗಳ ಆರೋಪ.

ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಅತ್ಯಾಚಾರವನ್ನು ತಡೆಗಟ್ಟುವಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಇದರ ವರದಿಗಾರಿಕೆಗೆ ತೆರಳಿದ್ದ ಕೇರಳದ ಪತ್ರಕರ್ತ ಸಿದ್ದಿಕ್‌ ಕಪ್ಪನ್‌ ಅವರನ್ನು 2020ರ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ಅವರ ವಿರುದ್ಧ ಯುಎಪಿಎ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಗಳಲ್ಲಿ ಜಾಮೀನು ದೊರೆತು, ಬಿಡುಗಡೆಯಾಗುವಷ್ಟರಲ್ಲಿ ಅವರು 846 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು. ಹೀಗೆ ಹಲವು ಪತ್ರಕರ್ತರ ವಿರುದ್ಧವೂ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

2019–2022ರ ಅವಧಿಯಲ್ಲಿ ಪೊಲೀಸರು ಒಟ್ಟು 3,841 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ 2022ರ ಡಿಸೆಂಬರ್ ಅಂತ್ಯಕ್ಕೆ ಇವುಗಳಲ್ಲಿ ತನಿಖೆ ಪೂರ್ಣಗೊಂಡು ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು 2,171 ಪ್ರಕರಣಗಳಲ್ಲಿ ಮಾತ್ರ. ಈ ಅವಧಿಯ ಅಂತ್ಯದಲ್ಲಿ 1,670 ಪ್ರಕರಣಗಳ ತನಿಖೆಯೇ ಪೂರ್ಣಗೊಂಡಿರಲಿಲ್ಲ. ಒಟ್ಟು ಪ್ರಕರಣಗಳಲ್ಲಿ ಶೇ 43ರಷ್ಟಿರುವ ತನಿಖಾ ಹಂತದ ಪ್ರಕರಣಗಳಲ್ಲಿ ಬಂಧಿತರಾಗಿರುವವರು, ವರ್ಷಗಳ ಕಾಲ ಜೈಲುವಾಸ ಅನುಭವಿಸುತ್ತಿದ್ದಾರೆ. ಈ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಒಟ್ಟು ಆರೋಪಿಗಳಲ್ಲಿ ಶಿಕ್ಷೆಯಾಗಿದ್ದು ಶೇ 3.8ರಷ್ಟು ಪ್ರಕರಣಗಳಲ್ಲಿ ಮಾತ್ರ. ಪ್ರಕರಣ ವಜಾ ಆಗಿ ಬಿಡುಗಡೆಯಾದವರು (ಶೇ 0.7ರಷ್ಟು) ಮತ್ತು ಖುಲಾಸೆ ಆದವರನ್ನು (ಶೇ 7.6ರಷ್ಟು) ಹೊರತುಪಡಿಸಿದರೆ, ಶೇ 88ರಷ್ಟು ಆರೋಪಿಗಳು ವಿಚಾರಣೆ ಪೂರ್ಣಗೊಳ್ಳದೆ ಜೈಲುವಾಸ ಅನುಭವಿಸುತ್ತಿದ್ದಾರೆ. 

ಇಂತಹ ಪ್ರಕರಣಗಳಲ್ಲಿ ನ್ಯಾಯದಾನ ಕ್ಷಿಪ್ರಗತಿಯಲ್ಲಿ ಆಗುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ನಿಜವಾಗಿಯೂ ಇಂತಹ ಕೃತ್ಯ ಎಸಗಿದ್ದವರಿಗೆ ಶಿಕ್ಷೆ ಘೋಷಣೆಯಾಗಿಲ್ಲ, ಇನ್ನೊಂದೆಡೆ ಹುಸಿ ಪ್ರಕರಣಗಳಲ್ಲಿ ಸೆರೆಯಲ್ಲಿರುವವರಿಗೆ ಬಿಡುಗಡೆಯೂ ದೊರೆತಿಲ್ಲ. ಸುಪ್ರೀಂ ಕೋರ್ಟ್‌ನ ವ್ಯಾಖ್ಯಾನದಂತೆ ಇದು ಮಾನವ ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ.

ಪ್ರಕರಣ ವಾಪಸ್‌ ಪಡೆದಿದ್ದ ತಮಿಳುನಾಡು
2019ರಲ್ಲಿ ತಮಿಳುನಾಡಿನಲ್ಲಿ ಯುಎಪಿಎ ಅಡಿಯಲ್ಲಿ 270 ಪ್ರಕರಣಗಳನ್ನು ದಾಖಲಿಸಲಾಗಿತ್ತು. 2018ರಲ್ಲಿ ತೂತುಕುಡಿಯಲ್ಲಿ ತಾಮ್ರ ಸಂಸ್ಕರಣ ಘಟಕ ಸ್ಥಾಪನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದ ನೂರಾರು ಜನರ ವಿರುದ್ಧ ಎಐಎಡಿಎಂಕೆ ಸರ್ಕಾರವು ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಸರ್ಕಾರದ ಈ ಕ್ರಮದ ವಿರುದ್ಧ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಮದ್ರಾಸ್‌ ಹೈಕೋರ್ಟ್‌ನಲ್ಲಿ ಹಲವು ವರ್ಷಗಳ ದೀರ್ಘ ಕಾನೂನು ಹೋರಾಟದ ನಂತರ ಡಿಎಂಕೆ ಸರ್ಕಾರವು ಈ ಪ್ರಕರಣಗಳನ್ನು ವಾಪಸ್‌ ಪಡೆದಿತ್ತು.

ಆಧಾರ: ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪರಾಧ’ ವರದಿಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT