ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀರ್ತಿ ಬೆಳಗಿದ ‘ಕನ್ನಡಿಗ’ ಮನೀಷ್‌...

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

‘ನಮ್ಮ ಅಕಾಡೆಮಿಯಲ್ಲಿ 2005ರಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ತರಬೇತಿ ನೀಡಲು ಇಂಗ್ಲೆಂಡ್‌ನಿಂದ ರಾಸ್‌ ಎಡ್ವರ್ಡ್‌ ಬಂದಿದ್ದರು. ಅವರು ಅಕಾಡೆಮಿಗೆ ಬಂದ ಮೊದಲ ದಿನ ನೆಟ್ಸ್‌ನಲ್ಲಿ ಆ ಹುಡುಗನ ಬ್ಯಾಟಿಂಗ್‌ ನೋಡಿ ಐದೇ ನಿಮಿಷದಲ್ಲಿ ನನ್ನ ಬಳಿ  ಬಂದರು.  ಆ ಹುಡುಗನನ್ನು ನಾನು ಇಂಗ್ಲೆಂಡ್‌ಗೆ ಕರೆದುಕೊಂಡು ಹೋಗುತ್ತೇನೆ. ‌ಅಲ್ಲಿ ದೊಡ್ಡ ಕ್ರಿಕೆಟಿಗನನ್ನಾಗಿ ಮಾಡುತ್ತೇನೆ ಎಂದರು.

ಐದು ನಿಮಿಷದಲ್ಲಿ ಅವನ ಬಗ್ಗೆ ನಿಮಗೇನು ಗೊತ್ತಾಯಿತು ಎಂದು ನಾನು ಪ್ರಶ್ನಿಸಿದೆ. ಬ್ಯಾಟಿಂಗ್‌ ಶೈಲಿ ಹಾಗೂ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ ಅವನಿಗೆ ತುಂಬಾ ಚೆನ್ನಾಗಿ ಗೊತ್ತಿದೆ ಎಂದು ಎಡ್ವರ್ಡ್‌ ಉತ್ತರಿಸಿದರು. ಆ ಹುಡುಗನೇ ಮನೀಷ್‌ ಪಾಂಡೆ...’

–ಜವಾನ್ಸ್ ಕ್ಲಬ್‌ನ ಕೋಚ್‌ ಇರ್ಫಾನ್‌ ಸೇಠ್‌ ತಮ್ಮ ಕ್ಲಬ್ ಆಟಗಾರನ ಪ್ರತಿಭೆಯನ್ನು ವಿವರಿಸಿದ್ದು ಹೀಗೆ.

ಬಲಗೈ ಬ್ಯಾಟ್ಸ್‌ಮನ್‌ ಮನೀಷ್‌ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜುಲೈ 10ರಿಂದ ಆರಂಭವಾಗಲಿರುವ ಜಿಂಬಾಬ್ವೆ ಎದುರಿನ ಏಕದಿನ ಮತ್ತು ಟ್ವೆಂಟಿ–20 ಸರಣಿಗೆ ಸ್ಥಾನ ಗಳಿಸಿದ್ದಾರೆ. 19 ವರ್ಷದ ಒಳಗಿನವರ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಭಾರತ ತಂಡದಲ್ಲಿ ಮನೀಷ್ ಇದ್ದರು.ಐಪಿಎಲ್‌ನಲ್ಲಿ ಆರ್‌ಸಿಬಿ, ಪುಣೆ ವಾರಿಯರ್ಸ್‌ ತಂಡದಲ್ಲಿ ಆಡಿದ್ದರು. ಈಗ ಕೋಲ್ಕತ್ತ ನೈಟ್‌ ರೈಡರ್ಸ್‌ನಲ್ಲಿದ್ದಾರೆ.

2008ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮನೀಷ್ ಒಟ್ಟು 70 ಪಂದ್ಯಗಳನ್ನು ಆಡಿದ್ದಾರೆ. 15 ಶತಕ ಮತ್ತು 20 ಅರ್ಧಶತಕ ಸೇರಿದಂತೆ ಒಟ್ಟು 4832 ರನ್ ಕಲೆ ಹಾಕಿದ್ದಾರೆ.25 ವರ್ಷದ ಮನೀಷ್‌ ಪಾಂಡೆ ಹುಟ್ಟಿದ್ದು ಉತ್ತರಾಂಚಲದ ನೈನಿತಾಲ್‌ನಲ್ಲಿ.ಕ್ರಿಕೆಟ್ ಜೀವನ ಆರಂಭವಾಗಿದ್ದು ಬೆಂಗಳೂರಿನಲ್ಲಿ. ಅವರು ತಮ್ಮ ಸಾಧನೆಯ ಜೊತೆಗೆ ಕರ್ನಾಟಕದ ಕೀರ್ತಿಯನ್ನೂ ಬೆಳಗಿದ್ದಾರೆ.ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ವಿವರ ಇಲ್ಲಿದೆ.

*ಹಿಂದೆ ಕೈತಪ್ಪಿದ್ದ ಅವಕಾಶ ಈಗ ಮತ್ತೆ ಒಲಿದು ಬಂದಿದೆ. ಏನೆನಿಸುತ್ತಿದೆ?
ವೆಸ್ಟ್‌ ಇಂಡೀಸ್ ಎದುರಿನ ಸರಣಿಗೆ ಅವಕಾಶ ಸಿಕ್ಕಾಗ ತುಂಬಾ ಖುಷಿಪಟ್ಟಿದ್ದೆ. ಅದರ ಹಿಂದೆಯೇ ನಿರಾಸೆ ಅಡಗಿತ್ತು. ಆ ಸರಣಿಯೇ ರದ್ದಾಗಿತ್ತು. ಮತ್ತೆ ಅವಕಾಶ ಸಿಗುತ್ತದೆ ಎಂದು ತುಂಬಾ ಕಾಯುತ್ತಿದ್ದೆ. ಕೊನೆಗೂ ಆಸೆ ಈಡೇರಿದ್ದಕ್ಕೆ ಖುಷಿಯಾಗಿದೆ.

*ಕ್ರಿಕೆಟ್‌ ಆಡಲು ಆರಂಭಿಸಿದ ದಿನಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸುವಷ್ಟು ಎತ್ತರಕ್ಕೇರುತ್ತೇನೆ ಎನ್ನುವ  ನಿರೀಕ್ಷೆ ಇತ್ತೇ?
ಅಪ್ಪ ಮಿಲಿಟರಿಯಲ್ಲಿ ಇದ್ದ ಕಾರಣ ಆಗಾಗ್ಗೆ ಊರೂರು ಸುತ್ತುವುದು ಸಾಮಾನ್ಯವಾಗಿತ್ತು. ಆದ್ದರಿಂದ ನಾನೂ ಅವರ ಜೊತೆ ಹೋಗಬೇಕಾಗುತ್ತಿತ್ತು. ಆರೇಳು ವರ್ಷದವನಿದ್ದಾಗಲೇ ಕ್ರಿಕೆಟ್‌ ಆಡಬೇಕೆಂದು  ಆಸೆಯಿತ್ತು. ಎಂಟು ವರ್ಷದವನಿದ್ದಾಗ ಜವಾನ್ಸ್‌ ಕ್ಲಬ್‌ ಸೇರಿಕೊಂಡೆ. ಆದರೆ, ರಾಷ್ಟ್ರೀಯ ತಂಡದಲ್ಲಿ ಆಡುವ ತನಕ ಅವಕಾಶ ಲಭಿಸುತ್ತದೆ ಎನ್ನುವ ಸಣ್ಣ ಕಲ್ಪನೆಯೂ ನನ್ನಲ್ಲಿರಲಿಲ್ಲ. ಅನಿರೀಕ್ಷಿತವಾಗಿ ಒಲಿದು ಬಂದ ಅವಕಾಶ ಹೊಸ ಕನಸುಗಳನ್ನು ಹುಟ್ಟು ಹಾಕಿದೆ.

*ಭಾರತ ಮತ್ತು ಭಾರತ ‘ಎ’ ತಂಡದಲ್ಲಿ ಕರ್ನಾಟಕದ ಏಳು ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಹೇಳಿ?
ಎರಡು ವರ್ಷಗಳ ಅವಧಿಯಲ್ಲಿ ನಾವೆಲ್ಲರೂ ಪಟ್ಟ ಕಷ್ಟಕ್ಕೆ ಲಭಿಸಿದ ಫಲವಿದು. ಮೊದಲೆಲ್ಲಾ ರಾಜ್ಯ ತಂಡಕ್ಕೆ ಆಯ್ಕೆಯಾಗುವುದೇ ದೊಡ್ಡ ಸಾಧನೆ ಅಂದುಕೊಳ್ಳುತ್ತಿದ್ದೆವು. ಈಗ ಪ್ರತಿ ಆಟಗಾರನಿಗೂ ರಾಷ್ಟ್ರೀಯ ತಂಡದಲ್ಲಿರಬೇಕೆನ್ನುವ ಆಸೆಯಿದೆ. ಅದಕ್ಕೆ ತಕ್ಕ ಸಾಮರ್ಥ್ಯವೂ ನಮ್ಮಲ್ಲಿದೆ. ರಣಜಿ, ಇರಾನಿ, ವಿಜಯ್‌ ಹಜಾರೆ ಸೇರಿದಂತೆ ಹಲವು ದೇಶಿ ಟೂರ್ನಿಗಳಲ್ಲಿ ಕರ್ನಾಟಕ ಪ್ರಾಬಲ್ಯ ಮೆರೆದಿರುವ ಕಾರಣ ಮುಂದಿನ ದಿನಗಳಲ್ಲಿ ರಾಜ್ಯದ ಆಟಗಾರರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.

*ಇತ್ತೀಚಿನ ದಿನಗಳಲ್ಲಿ ಜಿಂಬಾಬ್ವೆ ತಂಡ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಎದುರಿನ ಪಂದ್ಯಗಳಲ್ಲಿ ಜಯಿಸಿದೆ. ಆ ತಂಡದ ಸವಾಲನ್ನು ಎದುರಿಸಲು ಹೇಗೆ ಸಜ್ಜಾಗಿದ್ದೀರಿ?
ಯುವ ಆಟಗಾರರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ. ನಮ್ಮ ಸಾಮರ್ಥ್ಯ ತೋರಿಸಲು ಇದು ಅತ್ಯುತ್ತಮ ಅವಕಾಶ. ಹಲವು ವರ್ಷ ಭಾರತ ತಂಡದ ಭಾಗವಾಗಿರಬೇಕು ಎಂಬುದು ನನ್ನ ಆಸೆ. ವಿವಿಧ ವಲಯ ಮತ್ತು ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಆಡುವ ಪ್ರತಿ ಆಟಗಾರನಿಗೂ ದೇಶ ಪ್ರತಿನಿಧಿಸಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಆದ್ದರಿಂದ ಸಹಜವಾಗಿ ಪೈಪೋಟಿಯೂ ಹೆಚ್ಚಿದೆ.

* ಹೇಗೆ ನಡೆಯುತ್ತಿದೆ ಅಭ್ಯಾಸ?
ಐಪಿಎಲ್ ಮುಗಿದ ಬಳಿಕ ಒಂದು ತಿಂಗಳು ವಿಶ್ರಾಂತಿ ಪಡೆದೆ. ನಂತರ ಫಿಟ್‌ನೆಸ್‌ನತ್ತ ಗಮನ ಹರಿಸಿದೆ. ದೇಶಿ ಕ್ರಿಕೆಟ್‌ನಲ್ಲಿ ಸಾಕಷ್ಟು ಬೌಲರ್‌ಗಳನ್ನು ಎದುರಿಸಿದ್ದೇನೆ. ಆದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗ ಹೊಸ ಸವಾಲು ಎದುರಾಗಿದೆ. ಆದ್ದರಿಂದ ನೆಟ್ಸ್‌ನಲ್ಲಿ  ಹೆಚ್ಚು ಸಮಯ ಕಳೆಯುತ್ತಿದ್ದೇನೆ.

* ಮನೀಷ್‌ ಕರ್ನಾಟಕ ತಂಡದಲ್ಲಿ ಹೆಚ್ಚು ಕೀಟಲೆ ಮಾಡುವ ಹುಡುಗ ಎಂದು ಎಲ್ಲರೂ ಹೇಳುತ್ತಾರೆ. ಇದು ನಿಜವೇ?
ಹೌದು. ನಾವು ಎಲ್ಲಿಯೇ ಇದ್ದರೂ ಖುಷಿಯಾಗಿರಬೇಕೆಂಬುದಷ್ಟೇ ನನ್ನ ಆಸೆ. ಪಂದ್ಯ ಅಡುವಾಗ ಸೋಲೊ–ಗೆಲುವೊ ಅದರ ಬಗ್ಗೆ ಚಿಂತಿಸುವುದಿಲ್ಲ. ಸಹ ಆಟಗಾರರ ಜೊತೆ ಕೀಟಲೆ ಮಾಡುತ್ತಾ ಸದಾ ಸಂತೋಷವಾಗಿರಬೇಕು. ರಾಜ್ಯ ತಂಡದಲ್ಲಿ ಎಲ್ಲರೂ ಯುವ ಆಟಗಾರರೇ ಇರುವ ಕಾರಣ ನನ್ನ ಕೀಟಲೆ ಕೊಂಚ ಜಾಸ್ತಿಯೇ ಇರುತ್ತದೆ.

ಕೊನೆಯ ಅವಕಾಶ ಕೈತಪ್ಪಿ ಹೋಗಿದ್ದರೆ...
‘ಮನೀಷ್‌ ಪಾಂಡೆ’ 19 ವರ್ಷದ ಒಳಗಿನವರ ಕ್ರಿಕೆಟ್‌ ಟೂರ್ನಿ ಆಡುವ ವೇಳೆ ನಡೆದ ಘಟನೆಯಿದು. ಆಗ ಬೆಂಗಳೂರು ವಲಯ ತಂಡವನ್ನು ಪ್ರತಿನಿಧಿಸಿದ್ದ ಮನೀಷ್‌ ಲೀಗ್‌ ಹಂತ ಮತ್ತು ಕ್ವಾರ್ಟರ್‌ ಫೈನಲ್‌ನಲ್ಲಿ ವೈಫಲ್ಯ ಕಂಡಿದ್ದರು. ‘ಆ ಹುಡುಗನನ್ನು ತಂಡದಲ್ಲಿ ಏಕೆ ಆಡಿಸುತ್ತೀರಿ’ ಎನ್ನುವ ಟೀಕೆಗಳೂ ಕೇಳಿ ಬಂದಿದ್ದವು.

ಮನೀಷ್ ಸ್ಥಾನ ತುಂಬಲು ಸಾಕಷ್ಟು ಆಟಗಾರರು ತುದಿಗಾಲಲ್ಲಿ ಕಾಯುತ್ತಿದ್ದರು. ಆದ್ದರಿಂದ ಕೆಎಸ್‌ಸಿಎ ಕೂಡಾ ಸೆಮಿಫೈನಲ್‌ ಪಂದ್ಯಕ್ಕೆ ಮನೀಷ್‌ ಬದಲು ಬೇರೆ ಆಟಗಾರನನ್ನು ಆಡಿಸಲು ನಿರ್ಧರಿಸಿತ್ತು. ಆದರೆ, ಬ್ರಿಜೇಶ್‌ ಪಟೇಲ್‌ ಅವರಿಗೆ ಮನವಿ ಮಾಡಿಕೊಂಡು ಮನೀಷ್‌ ಅತ್ಯಂತ ಪ್ರತಿಭಾವಂತ. ದಯವಿಟ್ಟು ಒಂದು ಅವಕಾಶ ಕೊಟ್ಟು ನೋಡಿ ಎಂದು ವಿನಂತಿಸಿದೆ. ಬ್ರಿಜೇಶ್‌ ಅವರು ಅವಕಾಶ ಕೊಟ್ಟರು. ಆ ಪಂದ್ಯದಲ್ಲಿ ಮನೀಷ್‌ ದ್ವಿಶತಕ ಗಳಿಸಿ ತಮ್ಮ ಸಾಮರ್ಥ್ಯ  ಸಾಬೀತು ಮಾಡಿದ್ದರು.

ಆಗಿನಿಂದ ಒಮ್ಮೆಯೂ ಹಿಂತಿರುಗಿ ನೋಡಿಲ್ಲ. ಪ್ರತಿ ಪಂದ್ಯದಲ್ಲಿ ಮನೀಷ್‌ ಚೆನ್ನಾಗಿಯೇ ಆಡುತ್ತಿದ್ದಾರೆ. ಒಂದು ವೇಳೆ ಆಗ ಅವಕಾಶ ಲಭಿಸದೇ ಹೋಗಿದ್ದರೆ ಮನೀಷ್‌ಗೆ ಇವತ್ತು ರಾಜ್ಯ ತಂಡವನ್ನೂ ಪ್ರತಿನಿಧಿಸಲು ಆಗುತ್ತಿರಲಿಲ್ಲ’ ಎಂದು ಜವಾನ್ಸ್‌ ಕ್ರಿಕೆಟ್‌ ಕ್ಲಬ್‌ ತರಬೇತುದಾರ  ಇರ್ಫಾನ್‌ ಸೇಠ್‌  ನೆನಪುಗಳನ್ನು ಮೆಲುಕು ಹಾಕಿದರು. ಇರ್ಫಾನ್‌ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್‌ ಕ್ರಿಕೆಟ್‌ನ ನಿರ್ದೇಶಕರೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT