ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿಗೆ ಸಜ್ಜಾಗುತ್ತಿದೆ ಭಾರತ...

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಮಗೆ ಬೌನ್ಸರ್‌ ಭೀತಿಯಿಲ್ಲ. ಇದಕ್ಕೆ ನಾವು ಅಂಜುವುದೂ ಇಲ್ಲ. ಹುಲಿಯ ಗುಹೆಗೆ ನುಗ್ಗಿ ಅದನ್ನು ಹೇಗೆ ಬೇಟೆಯಾಡಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು’ –ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಹೇಳಿದ ಮಾತಿದು.

ನಾಲ್ಕು ಟೆಸ್ಟ್‌ ಮತ್ತು ತ್ರಿಕೋನ ಏಕದಿನ ಸರಣಿ ಆಡಲು ಕಾಂಗರೂ ನಾಡಿಗೆ ತೆರಳಿದ ಆರಂಭದಲ್ಲಿಯೇ ಕೊಹ್ಲಿ ಆಸ್ಟ್ರೇಲಿಯಾ ತಂಡಕ್ಕೆ ಈ ಎಚ್ಚರಿಕೆ ನೀಡಿದ್ದರು. ತಮ್ಮ ತಂಡದ ಸಾಮರ್ಥ್ಯ ಏನೆಂಬುದನ್ನು ಅಭ್ಯಾಸ ಪಂದ್ಯಗಳಲ್ಲಿಯೇ ತೋರಿಸಿಕೊಟ್ಟಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ ನಾಯಕತ್ವದ ತಂಡ ತೋರಿದ ದಿಟ್ಟ ಹೋರಾಟ ಮೆಚ್ಚುವಂಥದ್ದು.

ಸವಾಲಿನ ಮೊತ್ತ ಎದುರಿಗಿದ್ದರೆ ಅಪಾಯಕ್ಕೆ ಅವಕಾಶ ನೀಡದೆ ರಕ್ಷಣಾತ್ಮಕವಾಗಿ ಆಡುವ ಬಗ್ಗೆ ಯೋಚಿಸುವವರೇ ಹೆಚ್ಚು. ಆದರೆ, ಕೊಹ್ಲಿ ‘ಸೋತರೂ ಚಿಂತೆಯಿಲ್ಲ.  ನಾವು ಗೆಲುವಿಗಾಗಿ ಹೋರಾಟ ಮಾಡೋಣ’ ಎಂದು ತಮ್ಮ ತಂಡದ ಆಟಗಾರರನ್ನು ಹುರಿದುಂಬಿಸಿದ್ದರು. ಮೊದಲ ಟೆಸ್ಟ್‌ನಲ್ಲಿ ಭಾರತ ಸೋಲು ಕಂಡಿತು. ಆ ಮಾತು ಬೇರೆ ಬಿಡಿ. ಆದರೆ, ಗೆಲುವಿನ ಸನಿಹದವರೆಗೂ ತೋರಿದ ಹೋರಾಟಕ್ಕೆ ಶಹಬ್ಬಾಸ್‌ ಹೇಳಲೇಬೇಕು.

ಆಸ್ಟ್ರೇಲಿಯಾ ಎದುರಿನ ಸರಣಿ ಎಂದಾಕ್ಷಣ ಸಾಕು ಭಾರತದ ಆಟಗಾರರು ಸಾಕಷ್ಟು ಚುರುಕಾಗುತ್ತಾರೆ. ಅದರಲ್ಲೂ ‘ಬಾರ್ಡರ್-ಗಾವಸ್ಕರ್‌’ ಟ್ರೋಫಿ ಯಾವಾಗಲೂ ಕುತೂಹಲದ ಗಣಿ. ಪಂದ್ಯದ ವೇಳೆ ನಡೆಯುವ ಹೋರಾಟದ ಜತೆಗೆ ಪಂದ್ಯದ ಹೊರಗೂ ನಡೆಯುವ ಮಾತಿನ ಚಕಮಕಿ ಹೆಚ್ಚು ಸುದ್ದಿಮಾಡುತ್ತದೆ. ಈ ರೀತಿಯ ಘಟನೆಗಳಿಗೆ 2007-08ರಲ್ಲಿ ನಡೆದ ಮಂಕಿಗೇಟ್‌ ಪ್ರಕರಣಕ್ಕಿಂತ ಇನ್ನೇನು ಸಾಕ್ಷಿ ಬೇಕು?

18 ವರ್ಷಗಳ ಹಿಂದೆ ಆರಂಭವಾದ ಈ ಸರಣಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದು ಕೊಂಡಿದೆ. ಟೆಸ್ಟ್‌ ಜಗತ್ತಿನ ಶ್ರೇಷ್ಠ ಸರಣಿಗಳಲ್ಲಿ ಒಂದೆನಿಸಿದೆ. ಕ್ರಿಕೆಟ್‌ ಪ್ರೇಮಿಗಳು ಈಗ ಏಕದಿನ ಮಾದರಿಗಿಂತ ಟೆಸ್ಟ್‌ಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಆ್ಯಷಸ್‌ ಸರಣಿಗೆ ಸಿಕ್ಕಷ್ಟೇ ಪ್ರಾಮುಖ್ಯತೆ ‘ಬಾರ್ಡರ್‌-ಗಾವಸ್ಕರ್‌’ ಟ್ರೋಫಿಗೂ ಸಿಗುತ್ತಿದೆ.

ಅಡಿಲೇಡ್‌ ಟೆಸ್ಟ್‌ ವೇಳೆ ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ ಮತ್ತು ಕೆಲ ಆತಿಥೇಯ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಟ್ವಿಟರ್‌ನಲ್ಲಿ ಕ್ರಿಕೆಟ್‌ ಅಭಿಮಾನಿಯೊಬ್ಬ ‘ಇದೇನಿದು ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಯೇ?’ ಎಂದು ಪ್ರಶ್ನಿಸಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಗಳು ಹೆಚ್ಚು ರೋಚಕವಾಗಿರುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನವಷ್ಟೆ.

ಅದಕ್ಕೂ ಮೊದಲು ಸರಣಿ ಆರಂಭವಾಗಿದ್ದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ. ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗಾವಸ್ಕರ್‌ ಮತ್ತು ಆಸ್ಟ್ರೇಲಿಯಾದ ಅಲನ್‌ ಬಾರ್ಡರ್‌ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಲಾ ಹತ್ತು ಸಾವಿರ ರನ್‌ ಗಳಿಸಿದ ಸವಿ ನೆನಪಿಗಾಗಿ ‘ಬಾರ್ಡರ್‌-ಗಾವಸ್ಕರ್‌’ ಸರಣಿಯನ್ನು ಆರಂಭಿಸಲಾಯಿತು.

1996-97ರಲ್ಲಿ ಮೊದಲ ಸಲ ಭಾರತದಲ್ಲಿ ಸರಣಿ ಆಯೋಜಿಸಲಾಗಿತ್ತು. ಆಗ ಭಾರತ 1-0ರಲ್ಲಿ ಸರಣಿ ಗೆದ್ದುಕೊಂಡಿತ್ತು. ಮೊದಲ ಬಾರಿಗೆ ಸರಣಿ ಶ್ರೇಷ್ಠ ಗೌರವ ಪಡೆದ ಕೀರ್ತಿ ಭಾರತದ ನಯನ್ ಮೊಂಗಿಯಾ ಹೆಸರಿನಲ್ಲಿದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಜಂಟಿಯಾಗಿ ಈ ಸರಣಿ ಆಯೋಜಿಸುತ್ತವೆ. ಈ ಟೂರ್ನಿ ಹೋದ ವರ್ಷ ಭಾರತದಲ್ಲಿ ನಡೆದಿತ್ತು. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ‘ಕ್ಲೀನ್ ಸ್ವೀಪ್‌’ ಸಾಧನೆ ತೋರಿತ್ತು.  ಹೆಚ್ಚು ಸಲ ಪ್ರಶಸ್ತಿ ಗೆದ್ದ ದಾಖಲೆಯೂ ಭಾರತದ ಹೆಸರಿನಲ್ಲಿದೆ.

ಕೊಹ್ಲಿ ಭರವಸೆಯ ಹೆಜ್ಜೆ: ನಾಯಕರಾದ ಮೊದಲ ಟೆಸ್ಟ್‌ನಲ್ಲಿಯೇ ಕಠಿಣ ನಿರ್ಧಾರಗಳನ್ನು ತೆಳೆಯುವ ಮೊಲಕ ಕೊಹ್ಲಿ ‘ನಾನು ಸಮರ್ಥ ನಾಯಕನಾಗಬಲ್ಲೆ’ ಎನ್ನುವ ಭರವಸೆ ಮೂಡಿಸಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಅಬ್ಬರಿಸಿದ್ದಾರೆ. ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕ ಸಿಡಿಸಿದ್ದರು. ನಾಯಕನ ಸ್ಥಾನದ ಜವಾಬ್ದಾರಿಯ ಒತ್ತಡದ ಜತೆಗೆ ಕೊಹ್ಲಿ ಅಮೋಘ ಆಟ ತೋರಿದರು. ಹಿಂದಿನ ಹಲವು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದ ದೆಹಲಿಯ ಬ್ಯಾಟ್ಸ್‌ಮನ್‌ ಈಗ ಬ್ಯಾಟ್‌ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

ಆಸ್ಟ್ರೇಲಿಯಾದ ಎದುರು ಸದಾ ಉತ್ತಮ ಪ್ರದರ್ಶನ ತೋರುವ ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಈ ಸಲವೂ ಕಾಂಗರೂ ಎದುರು ತಮ್ಮ ದರ್ಬಾರ್‌ ಮುಂದು ವರಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಒಂದು ಅರ್ಧಶತಕ ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಒಂದೇ ರನ್‌ನಿಂದ ಶತಕ ವಂಚಿತರಾಗಿದ್ದರು. ಎರಡನೇ ಟೆಸ್ಟ್‌ನಲ್ಲಿ ಅವರು ಶತಕ ಸಿಡಿಸಿ ಅಮೋಘ ಇನಿಂಗ್ಸ್‌ ಕಟ್ಟಿದ್ದರು. 2012-13ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಆಗ ಮುರಳಿ ಒಟ್ಟು 430 ರನ್‌ ಗಳಿಸಿ ಗರಿಷ್ಠ ಮೊತ್ತ ಗಳಿಸಿದ ಆಟಗಾರ ಎನಿಸಿದ್ದರು.

ವಿದೇಶಿ ನೆಲದಲ್ಲಿ ಉತ್ತಮ ಸಾಧನೆ ಹೊಂದಿರುವ ಶಿಖರ್‌ ಧವನ್‌ ಮತ್ತು ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಅವರ ವೈಫಲ್ಯದ ಹಾದಿ ಮುಂದುವರಿಯುತ್ತಲೇ ಇದೆ. ಅಜಿಂಕ್ಯ ರಹಾನೆ, ಕರಣ್‌ ಶರ್ಮ, ವೃದ್ಧಿಮಾನ್‌ ಸಹಾ, ಧವಳ್‌ ಕುಲಕರ್ಣಿ, ಕರ್ನಾಟಕದ ಕೆ.ಎಲ್‌. ರಾಹುಲ್‌ ಅವರಂಥ ಪ್ರತಿಭಾನ್ವಿತ ಆಟಗಾರರು ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಗಿಟ್ಟಿಸಲು ಸಾಕಷ್ಟು ಕಾತರದಿಂದ ಕಾಯುತ್ತಿದ್ದಾರೆ. ಆದ್ದರಿಂದ ಅನುಭವಿ ಆಟಗಾರರು ಎಚ್ಚರಿಕೆಯಿಂದ ಆಡಬೇಕಿದೆ. ಇಲ್ಲವಾದರೆ ‘ಗೇಟ್‌ ಪಾಸ್‌’ ಕಟ್ಟಿಟ್ಟ ಬುತ್ತಿ.

ಆ ಸವಾಲಿಗೆ ಈ ಸರಣಿ: ಒಂದೂವರೆ ತಿಂಗಳು ಕಳೆದರೆ ಸಾಕು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಆರಂಭ. ಈ ಸವಾಲಿಗೆ ಸಜ್ಜಾಗಲು ಟೆಸ್ಟ್‌ ಸರಣಿ ಭಾರತಕ್ಕೆ ನೆರವಾಗಲಿದೆ. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಬಳಿಕ ಭಾರತ ತ್ರಿಕೋನ ಏಕದಿನ ಸರಣಿ ಆಡಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಏಕದಿನ ವಿಶ್ವಕಪ್‌ನ ಹಾಲಿ ಚಾಂಪಿಯನ್ ಕೂಡಾ ಆಗಿರುವ ಭಾರತ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿ ಕೊಳ್ಳಬೇಕಾದ ಸವಾಲಿದೆ. ಆದ್ದರಿಂದ ಈ ಪ್ರವಾಸ ದೋನಿ ಪಡೆಗೆ ಕೆಂಡದ ಮೇಲಿನ ನಡಿಗೆಯಷ್ಟೇ ಕಠಿಣವೆನಿಸಿದೆ.

ಕ್ಲಾರ್ಕ್‌ ಅವಕಾಶ ಸ್ಮಿತ್‌ ಪಾಲು: 2011-12ರಲ್ಲಿ ಭಾರತ ತಂಡ ‘ಬಾರ್ಡರ್‌-ಗಾವಸ್ಕರ್‌’ ಟ್ರೋಫಿ ಆಡಲು ಕಾಂಗರೂ ನಾಡಿಗೆ ತೆರಳಿತ್ತು. ಆಗ ಮೈಕಲ್‌ ಕ್ಲಾರ್ಕ್‌ ನಾಯಕತ್ವದ ಆಸ್ಟ್ರೇಲಿಯಾ 4-0ರಲ್ಲಿ ಗೆಲುವು ಸಾಧಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಆದರೆ, ಕ್ಲಾರ್ಕ್‌ ಈಗ ಸರಣಿಗೆ ಅಲಭ್ಯರಾಗಿದ್ದಾರೆ.

ಬೆನ್ನು ಮತ್ತು ಸ್ನಾಯುಸೆಳೆತದ ನೋವಿನಿಂದ ಬಳಲುತ್ತಿರುವ ಕ್ಲಾರ್ಕ್‌ ಈಗಾಗಲೇ ಸರಣಿಯಿಂದ ಹೊರಬಿದ್ದಿದ್ದಾರೆ. ಆಲ್‌ರೌಂಡರ್‌ ಸ್ಟೀವನ್‌ ಸ್ಮಿತ್‌ಗೆ ನಾಯಕ ಪಟ್ಟ ಲಭಿಸಿದೆ. ಆದ್ದರಿಂದ ಹೊಸ ನಾಯಕನ ನೇತೃತ್ವದಲ್ಲಿ ಟ್ರೋಫಿ ಎತ್ತಿ ಹಿಡಿಯುವ ಕನಸು ಕಾಂಗರೂ ಪಡೆಯದ್ದಾಗಿದೆ.

ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನ ಬೌನ್ಸರ್‌ ಬಡಿದು ಫಿಲಿಪ್ ಹ್ಯೂಸ್‌ ಮೃತಪಟ್ಟ ಕರಾಳ ಘಟನೆ ಆಟಗಾರರ ಮನಸ್ಸಿನಿಂದ ಪೂರ್ಣವಾಗಿ ಮಾಸಿಲ್ಲ. ಪ್ರತಿ ಪಂದ್ಯದಲ್ಲಿಯೂ ಹ್ಯೂಸ್ ನೆನಪು ಆಸ್ಟ್ರೇಲಿಯಾದ ಅಭಿಮಾನಿಗಳು ಮತ್ತು ಕ್ರಿಕೆಟಿಗರನ್ನು ಕಾಡುತ್ತಿದೆ. ಆದ್ದರಿಂದ ಇದು ಭಾವನಾತ್ಮಕ ಸರಣಿ ಎನಿಸಿದೆ.

ಈ ಟೂರ್ನಿಯ ಪ್ರಮುಖ ಮಾಹಿತಿಗಳು
* ಹೆಚ್ಚು ಬಾರಿ ಪ್ರಶಸ್ತಿ ಜಯಿಸಿದ್ದು ಭಾರತ (6 ಸಲ)

* ಒಟ್ಟು ಗರಿಷ್ಠ ರನ್‌ ಬಾರಿಸಿದ್ದು ಸಚಿನ್ ತೆಂಡೂಲ್ಕರ್‌ (2380)

* ಹೆಚ್ಚು ವಿಕೆಟ್‌ ಪಡೆದವರು ಅನಿಲ್‌ ಕುಂಬ್ಳೆ (111)

* ಹಿಂದಿನ ಚಾಂಪಿಯನ್‌ ಭಾರತ

* ಆಸ್ಟ್ರೇಲಿಯಾ ಕೊನೆಯ ಸಲ ಪ್ರಶಸ್ತಿ ಜಯಿಸಿದ್ದು: 2011---12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT