ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಯುದ್ಧ ಕಾಲದಲ್ಲಿ ಸಿದ್ಧತೆ ಆರಂಭ

Last Updated 22 ಮೇ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ದೊಡ್ಡ ಆಸ್ಪತ್ರೆಗಳ ಮೇಲಿನ ಒತ್ತಡ ತಗ್ಗಿಸಲು ಎಲ್ಲ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವರ್ತಿಸುವಂತೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ನೀಡಿದ್ದಾರೆ. ಆದರೆ, ರಾಜ್ಯದಲ್ಲಿ ವೈದ್ಯರು, ಸಿಬ್ಬಂದಿ, ಉಪಕರಣಗಳ ಕೊರತೆಯಿಂದ ಬಳಲುತ್ತಿರುವ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಬಲವರ್ಧನೆಗೆ ಸರ್ಕಾರ ನಡೆಸಿರುವ ಪ್ರಯತ್ನ ‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಎಂಬಂತಾಗಿದೆ.

ರಾಜ್ಯದ ಎಲ್ಲ ದೊಡ್ಡ ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೂ ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ, ಅವುಗಳ ಅಧೀನದಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನೂ ತೆರೆಯುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

ರಾಜ್ಯದಲ್ಲಿ 204 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 2,508 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಪೈಕಿ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕೆಲವು ಕಡೆಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗ
ಳನ್ನೂ ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಹಲವು ಕಡೆಗಳಲ್ಲಿ ಈ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದೆ.

ಆದರೆ, ರಾಜ್ಯದ ಬಹುಪಾಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಶೋಚನೀಯವಾಗಿದೆ. ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ತಾಂಡವವಾಡುತ್ತಿದೆ. ಈ ಕೇಂದ್ರಗಳನ್ನು ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವರ್ತಿಸುವುದು ಸಾಧ್ಯವೇ ಎಂಬ ಪ್ರಶ್ನೆ ಆರೋಗ್ಯ ಇಲಾಖೆಯನ್ನೂ ಕಾಡುತ್ತಿದೆ.

ಸಿಬ್ಬಂದಿ ಇಲ್ಲದೆ ಹೈರಾಣ: ‘ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಯೇ ಇಲ್ಲ. ವೈದ್ಯರ ಜತೆ ಒಬ್ಬ ಸ್ಟಾಫ್‌ ನರ್ಸ್‌, ಒಬ್ಬ ಫಾರ್ಮಸಿಸ್ಟ್‌, ಒಬ್ಬ ಗುಮಾಸ್ತ, ಒಬ್ಬ ಡೇಟಾ ಎಂಟ್ರಿ ಆಪರೇಟರ್‌, ಕನಿಷ್ಠ ಇಬ್ಬರು ‘ಡಿ’ ದರ್ಜೆ ನೌಕರರು ಬೇಕು. ಆದರೆ, ಕೆಲವು ಕಡೆ ನರ್ಸ್‌ಗಳೇ ಇಲ್ಲ. ಡೇಟಾ ಎಂಟ್ರಿ ಆಪರೇಟರ್‌ಗಳಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆಯೇ ವಿರಳ. ವೈದ್ಯರೇ ಎಲ್ಲ ಕೆಲಸವನ್ನೂ ಮಾಡಬೇಕಾದ ಸ್ಥಿತಿ ಇದೆ’ ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು.

ಕೋವಿಡ್‌ ಎರಡನೇ ಅಲೆ ಆರಂಭವಾದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಕಸರತ್ತು ನಡೆಸುತ್ತಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಮೂಲಕ ಒಂದಷ್ಟು ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದರೆ, ಸ್ಥಳೀಯವಾಗಿ ಗುತ್ತಿಗೆ ಮೂಲಕವೂ ಸಿಬ್ಬಂದಿ ನೇಮಕಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪಿಎಚ್‌ಸಿಗಳ ಪರಿವರ್ತನೆ ಅಸಾಧ್ಯ

‘ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವರ್ತಿಸಬಹುದು. ಆದರೆ, ರಾಜ್ಯದ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಕೋವಿಡ್‌ ಆರೈಕೆ ಕೇಂದ್ರಗಳ ರೂಪದಲ್ಲಿ ಬೇಕಾದರೆ ಬಳಸಿಕೊಳ್ಳಬಹುದು’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಿರಿಯ ವೈದ್ಯ ಡಾ. ರಾಮಚಂದ್ರ ಬಾಯರಿ.

ಕೋವಿಡ್‌ ಆರೈಕೆ ಕೇಂದ್ರಗಳಿಗೆ 24 ಗಂಟೆಗಳ ಕಾಲ ವೈದ್ಯರು ಮತ್ತು ನರ್ಸ್‌ಗಳ ಸೇವೆ ಬೇಕು. ಆಮ್ಲಜನಕ ಪೂರೈಕೆಯ ವ್ಯವಸ್ಥೆ ಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇರುವುದೇ ಆರು ಹಾಸಿಗೆಗಳು. ಅವುಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬಳಸುವುದು ಅಸಾಧ್ಯ ಎಂದು ಅವರು ಅನುಭವದ ಆಧಾರದಲ್ಲಿ ಹೇಳುತ್ತಾರೆ.

₹ 4ಲಕ್ಷ ಸಂಬಳಕ್ಕೂ ವೈದ್ಯರು ಬರುತ್ತಿಲ್ಲ!

ಬಳ್ಳಾರಿ: ಜಿಂದಾಲ್ ತಾತ್ಕಾಲಿಕ ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಭರ್ತಿಮಾಡಲು ಮರು ಪ್ರಕಟಣೆ ನೀಡಿರುವ ಜಿಲ್ಲಾಡಳಿತ ವೇತನವನ್ನು ₹2.50 ಲಕ್ಷದಿಂದ ₹4 ಲಕ್ಷಕ್ಕೆ ಏರಿಸಿದೆ. ಗುತ್ತಿಗೆ ಅವಧಿಯನ್ನು ಮೂರು ತಿಂಗಳಿಂದ ಹನ್ನೊಂದು ತಿಂಗಳಿಗೆ ಹೆಚ್ಚಿಸಿದೆ. ಸಾಮಾನ್ಯ ವೈದ್ಯರ ವೇತನವನ್ನು ₹50 ಸಾವಿರದಿಂದ ₹75 ಸಾವಿರಕ್ಕೆ ಹೆಚ್ಚಿಸಿದೆ. ಊಟ ವಸತಿ ಸಹಿತ ಈ ಉದ್ಯೋಗಾವಕಾಶ ನೀಡಿದ್ದರೂ ಅರ್ಜಿಗಳು ಬರುತ್ತಿಲ್ಲ ಎಂದು ಜಿಲ್ಲಾಡಳಿತ ಅಸಹಾಯಕತೆ ವ್ಯಕ್ತಪಡಿಸುತ್ತದೆ.

ವೈದ್ಯರ ನೇಮಕಾತಿಗೆ ಚಾಲನೆ

ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿದೆ. ತಜ್ಞ ವೈದ್ಯರ ಸೇವೆ ಇಲ್ಲವೇ ಇಲ್ಲ ಎಂಬ ಸ್ಥಿತಿ ಇದೆ. ಕೆಲವು ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿಗಳೂ ಇಲ್ಲ. ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, 1,700 ತಜ್ಞ ವೈದ್ಯರೂ ಸೇರಿದಂತೆ 2,150 ವೈದ್ಯರ ನೇಮಕಾತಿಗೆ ಚಾಲನೆ ನೀಡಿದೆ.

‘2,150 ವೈದ್ಯರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇನ್ನು ಒಂದು ವಾರದೊಳಗೆ ಈ ಎಲ್ಲ ವೈದ್ಯರೂ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಇನ್ನೂ ಖಾಲಿ ಉಳಿಯುವ ಹುದ್ದೆಗಳ ಭರ್ತಿಗೂ ಶೀಘ್ರದಲ್ಲಿ ನೇಮಕ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT