ಪರ್ಯಾಯ ಕ್ರಮ: ವಿಶ್ವಸಂಸ್ಥೆ ಎಚ್ಚರಿಕೆ

ಸೋಮವಾರ, ಮಾರ್ಚ್ 18, 2019
31 °C
ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಘೋಷಣೆಗೆ ಚೀನಾ ಅಡ್ಡಗಾಲು

ಪರ್ಯಾಯ ಕ್ರಮ: ವಿಶ್ವಸಂಸ್ಥೆ ಎಚ್ಚರಿಕೆ

Published:
Updated:
Prajavani

ವಾಷಿಂಗ್ಟನ್‌: ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಮುಖ್ಯಸ್ಥ, ಪಾಕಿಸ್ತಾನದ ಮಸೂದ್‌ ಅಜರ್‌ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಬೇಕೆಂಬ ಪ್ರಸ್ತಾವಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿರುವುದರಿಂದ, ಪರ್ಯಾಯ ಕ್ರಮಕ್ಕೆ ಚಿಂತಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಇತರ ಸದಸ್ಯ ರಾಷ್ಟ್ರಗಳು  ಗುರುವಾರ ಎಚ್ಚರಿಸಿವೆ.

ಭಾರತದ ಪ್ರಸ್ತಾವಕ್ಕೆ ಬುಧವಾರ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಇತರೆ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್‌, ಇಂಗ್ಲೆಂಡ್‌ ಮತ್ತು ಅಮೆರಿಕ ಬೆಂಬಲ ವ್ಯಕ್ತಪಡಿಸಿವೆ.

ಪುಲ್ವಾಮಾ ದಾಳಿ ನಂತರ ಭಾರತವು ಈ ಪ್ರಸ್ತಾವವನ್ನು ಸಲ್ಲಿಸಿದ್ದು, ಚೀನಾ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದೆ. ‘ನಾಲ್ಕನೇ ಬಾರಿಗೆ ಚೀನಾವು ಈ ರೀತಿ ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ, ಭದ್ರತಾ ಮಂಡಳಿಯ ಇತರ ಸದಸ್ಯ ರಾಷ್ಟ್ರಗಳು ಭಾರತೀಯರ ಮೇಲೆ ದಾಳಿ ಮಾಡಿದ ಭಯೋತ್ಪಾದಕನ ವಿರುದ್ಧ ಕ್ರಮ ಕೈಗೊಳ್ಳಲು ಬೆಂಬಲ ವ್ಯಕ್ತಪಡಿಸಿರುವುದರಿಂದ ಪರ್ಯಾಯ ಕ್ರಮಗಳ ಬಗ್ಗೆಯೂ ಭಾರತ ಪ್ರಯತ್ನ ಮುಂದುವರಿಸಿದೆ’ ಎಂದು ಭದ್ರತಾ ಮಂಡಳಿಯ ರಾಯಭಾರಿಯೊಬ್ಬರು ತಿಳಿಸಿದ್ದಾರೆ.

‘ಭಯೋತ್ಪಾದನೆ ವಿರುದ್ಧ ಹೋರಾಡುವ ಹಾಗೂ ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ತಾನು ಹೊಂದಿದ್ದ ಗುರಿಗಳಿಂದ ಚೀನಾ ಈ ಮೂಲಕ ಹಿಂದೆ ಸರಿದಂತಾಗಿದೆ’ ಎಂದು ಅವರು ಹೇಳಿದ್ದಾರೆ.

ಭಯೋತ್ಪಾದಕ ಸಂಘಟನೆಗಳನ್ನು ರಕ್ಷಿಸುವುದಕ್ಕೋಸ್ಕರ ಚೀನಾವನ್ನು ಅವಲಂಬಿಸಿರುವ ಪಾಕಿಸ್ತಾನದ ವಿರುದ್ಧವೂ ರಾಜತಾಂತ್ರಿಕ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಲುವು ಸಮರ್ಥಿಸಿಕೊಂಡ ಚೀನಾ
ಬೀಜಿಂಗ್‌: ಭಾರತದ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿರುವ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಚೀನಾ, ‘ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವುದಕ್ಕಿಂತ, ಭಯೋತ್ಪಾದನೆ ನಿರ್ಮೂಲನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗುತ್ತದೆ’ ಎಂದು ಹೇಳಿದೆ.

ತಾಂತ್ರಿಕ ಕಾರಣಗಳಿಂದ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿರುವುದಾಗಿ ಹೇಳಿರುವ ಚೀನಾ, ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಮಯಾವಕಾಶದ ಅಗತ್ಯವಿದೆ ಎಂದು ಹೇಳಿದೆ.

‘ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಇತರೆ ರಾಷ್ಟ್ರಗಳೊಂದಿಗೆ ಹೆಚ್ಚಿನ ಮಾತುಕತೆ ನಡೆಸುವ ಅಗತ್ಯವಿದೆ. ಭಯೋತ್ಪಾದನೆ ನಿರ್ಮೂಲನೆಗೆ ನಿರ್ಣಾಯಕ ಕ್ರಮ ಕೈಗೊಳ್ಳಬೇಕು’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !