ಕಾರಹುಣ್ಣಿಮೆ ಬಜಾರ್‌ನಲ್ಲಿ ರೈತರ ಸಡಗರ..!

7
ಭರ್ಜರಿ ವಹಿವಾಟಿನ ನಿರೀಕ್ಷೆ ಹೊತ್ತು ದೂರದೂರಿನಿಂದ ಬಂದ ವ್ಯಾಪಾರಸ್ಥರು

ಕಾರಹುಣ್ಣಿಮೆ ಬಜಾರ್‌ನಲ್ಲಿ ರೈತರ ಸಡಗರ..!

Published:
Updated:
ವಿಜಯಪುರದ ನಾಲಬಂದ ಚೌಕ್‌ನಲ್ಲಿ ಮಂಗಳವಾರ ನಡೆದ ಕಾರಹುಣ್ಣಿಮೆ ಖರೀದಿಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

ವಿಜಯಪುರ: ನಗರದ ನಾಲಾಬಂದ ಚೌಕ್‌ನಲ್ಲಿ ‘ಕಾರಹುಣ್ಣಿಮೆ’ಯ ಬಜಾರ್‌ ತಾತ್ಕಾಲಿಕವಾಗಿ ರಸ್ತೆ ಬದಿ, ಮಧ್ಯೆಯೇ ತೆರೆದುಕೊಂಡಿದೆ. ಐದಾರು ದಿನಗಳಿಂದ ವಹಿವಾಟು ನಡೆದಿದ್ದು, ಇನ್ನೆರೆಡು ದಿನ ಬಿರುಸಿನ ವ್ಯಾಪಾರ ನಡೆಯಲಿದೆ.

ಚೌಕ್‌ನ ರಸ್ತೆ ಇದೀಗ ವಿವಿಧೆಡೆಯ ವ್ಯಾಪಾರಿಗಳು, ರೈತರಿಂದ ತುಂಬಿ ತುಳುಕುತ್ತಿದೆ. ಕಾಲಿಡಲು ಜಾಗವಿಲ್ಲ. ಎತ್ತ ನೋಡಿದರೂ ಜನಾಕರ್ಷಣೆಯ ಜಾನುವಾರು ಅಲಂಕಾರದ ಸಾಮಗ್ರಿಗಳೇ ಗೋಚರಿಸುತ್ತಿವೆ. ದುಬಾರಿ ದುನಿಯಾದಲ್ಲೂ ಖರೀದಿಗೆ ಮುಗಿಬೀಳುವ ಚಿತ್ರಣ ಕಂಡು ಬರುತ್ತಿದೆ.

ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯ ಬೆಳಗಾವಿ, ಬಾಗಲಕೋಟೆ, ದೂರದ ಧಾರವಾಡ ಜಿಲ್ಲೆಗಳ ವಿವಿಧ ಭಾಗಗಳಲ್ಲಿನ ವ್ಯಾಪಾರಸ್ಥರು ಭರ್ಜರಿ ವಹಿವಾಟಿನ ನಿರೀಕ್ಷೆಯಿಂದ ನಾಲ್ಕೈದು ದಿನಗಳಿಂದ ವಿಜಯಪುರದಲ್ಲೇ ಬೀಡು ಬಿಟ್ಟಿದ್ದಾರೆ.

ತಮ್ಮೂರುಗಳಿಂದ ಮಾರಾಟ ಸಾಮಗ್ರಿ ಹೊತ್ತು ಬಂದಿರುವ ಈ ವ್ಯಾಪಾರಿಗಳಿಗೆ ರಸ್ತೆ ಬದಿಯೇ ಆಶ್ರಯತಾಣ. ಮುಂಜಾನೆಯಿಂದ ರಾತ್ರಿಯವರೆಗೂ ವಹಿವಾಟು ನಡೆಸಿ, ತಮ್ಮ ತಾತ್ಕಾಲಿಕ ಅಂಗಡಿಗಳ ಬಳಿಯೇ ರಾತ್ರಿ ಕಳೆಯುತ್ತಿದ್ದಾರೆ. ಗುರುವಾರ ಕಾರಹುಣ್ಣಿಮೆ ಆಚರಣೆ ಮುಗಿಯುವ ತನಕವೂ ಇದು ನಡೆಯಲಿದೆ.

ದಶಕದ ನಂಟು: ಹೊರ ಜಿಲ್ಲೆಗಳ ವ್ಯಾಪಾರಿ ಸಮೂಹಕ್ಕೂ; ಕಾರ ಹುಣ್ಣಿಮೆಗೂ, ವಿಜಯಪುರದ ವಹಿವಾಟಿಗೂ ದಶಕದ ಬೆಸುಗೆ. ಕೆಲವರು ಮೂರು ದಶಕದಿಂದ ಹುಣ್ಣಿಮೆಯ ವಹಿವಾಟಿಗೆಂದು ವಿಜಯಪುರಕ್ಕೆ ಬರುತ್ತಿರುವವರಿದ್ದಾರೆ. ತಮ್ಮ ಮನೆತನದ ವಹಿವಾಟನ್ನು ಮುಂದುವರೆಸಿಕೊಂಡು ಹೋಗಲು ಅಪ್ಪನ ಕಾಲದಿಂದಲೂ ಇಲ್ಲಿಗೆ ವಹಿವಾಟಿಗಾಗಿ ಬರುತ್ತಿರುವ ವ್ಯಾಪಾರಿ ಕುಟುಂಬದ ಕುಡಿಗಳಿರುವುದು ವಿಶೇಷ.

ಕೃಷಿಕರ ಹಬ್ಬವಾಗಿರುವ ಕಾರಹುಣ್ಣಿಮೆಯ ಸಂಭ್ರಮವನ್ನು ಇಮ್ಮಡಿಗೊಳಿಸಲು ವಿಜಯಪುರ ಜಿಲ್ಲೆಯ ವ್ಯಾಪಾರಿಗಳು, ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಗ್ರಾಮದ ವ್ಯಾಪಾರಸ್ಥರು, ನೆರೆಯ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮೂಡಲಗಿ ಗ್ರಾಮದ ವ್ಯಾಪಾರಸ್ಥರು, ಬಾಗಲಕೋಟೆ ಜಿಲ್ಲೆಯ ಮುಧೋಳ ಗ್ರಾಮದ ವ್ಯಾಪಾರಿಗಳು ಸೇರಿದಂತೆ ವಿವಿಧೆಡೆಯ ವ್ಯಾಪಾರಿಗಳು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆಗೆ ಕಳೆದ ಗುರುವಾರವೇ ಬಂದು ಬೀಡುಬಿಟ್ಟಿದ್ದಾರೆ.

‘ಮೂರು ದಶಕದಿಂದ ಕಾರಹುಣ್ಣಿಮೆಯ ವಹಿವಾಟಿಗಾಗಿ ವಿಜಯಪುರಕ್ಕೆ ಬರುತ್ತಿರುವೆವು. ಚಲೋ ವಹಿವಾಟು ನಡೆಯಲಿದೆ. ವರ್ಷದಿಂದ ವರ್ಷಕ್ಕೆ ಎತ್ತುಗಳ ಸಂಖ್ಯೆ ಕಡಿಮೆಯಾದಂತೆ ವ್ಯಾಪಾರ ಕ್ಷೀಣಿಸಿದರೂ, ತಲೆಮಾರುಗಳಿಂದ ಬಂದಿರುವ ವೃತ್ತಿಯನ್ನು ಬಿಟ್ಟಿಲ್ಲ.

ವರ್ಷವಿಡಿ ನಮ್ಮದು ಇದೇ ವ್ಯಾಪಾರ. ಕಾರಹುಣ್ಣಿಮೆ ಸಂಭ್ರಮದ ಸಮಯ ಇಲ್ಲಿಗೆ ಬಂದರೆ, ದೀಪಾವಳಿ ವೇಳೆಗೆ ಮುಂಡಗೋಡ, ಶಿರಸಿ, ಸಿದ್ದಾಪುರ ಭಾಗಕ್ಕೆ ತೆರಳುತ್ತೇವೆ. ಅಲ್ಲಿ ಆ ಸಮಯದಲ್ಲಿ ಎತ್ತುಗಳನ್ನು ಅಲಂಕರಿಸಿ ಮೆರವಣಿಗೆ ನಡೆಸುತ್ತಾರೆ. ಹೀಗೆ ಉತ್ತರ ಕರ್ನಾಟಕದ ಎಲ್ಲೆಲ್ಲಿ, ಯಾವ್ಯಾವ ಭಾಗದಲ್ಲಿ ಜಾನುವಾರುಗಳನ್ನು ಸಿಂಗರಿಸಿ ಸಂಭ್ರಮಿಸುವ ಹಬ್ಬ, ಜಾತ್ರೆಗಳು ನಡೆಯುವ ಸ್ಥಳಗಳಿಗೆ ತೆರಳಿ ತಾತ್ಕಾಲಿಕ ಅಂಗಡಿಗಳನ್ನು ಹಾಕಿಕೊಂಡು ವಹಿವಾಟು ನಡೆಸಲಿದ್ದೇವೆ’ ಎಂದು ಧಾರವಾಡ ಜಿಲ್ಲೆಯ ಕುಂದಗೋಳದ ದಾವಲಸಾಬ್‌ ಹುಸೇನ್‌ಸಾಬ್‌ ತಿಳಿಸಿದರು.

‘ಈ ಬಾರಿ 20ಕ್ಕೂ ಹೆಚ್ಚು ಮಂದಿ ವ್ಯಾಪಾರಸ್ಥರು ಒಟ್ಟಾಗಿ ವಿಜಯಪುರಕ್ಕೆ ಕಾರಹುಣ್ಣಿಮೆ ವಹಿವಾಟಿಗಾಗಿ ಬಂದಿರುವೆವು’ ಎಂದು ಹೇಳಿದರು.

ಕೃಷಿಕರ ಹಬ್ಬ: ‘ಕಾರಹುಣ್ಣಿಮೆ ಕೃಷಿಕರ ಹಬ್ಬ. ಇದರ ಸಂಭ್ರಮ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿದೆ. ಎತ್ತುಗಳ ಸಂಖ್ಯೆ ಕ್ಷೀಣಿಸಿದಂತೆ ಸಡಗರವೂ ಮರೆಯಾಗಲಾರಂಭಿಸಿದೆ. ಆದರೂ ತಾತ–ಮುತ್ತಾತಂದಿರ ಕಾಲದಿಂದಲೂ ಆಚರಣೆ ನಡೆದಿದೆ.

ವರ್ಷಧಾರೆ ಸುರಿಯುವುದರ ಮೇಲೆ ಇದರ ವಿಜೃಂಭಣೆ ನಿಂತಿರುತ್ತಿದೆ. ಚಲೋ ಮಳೆಯಾದರೆ ಸಂಭ್ರಮ ನೂರು ಪಟ್ಟು. ವರುಣನ ಮುನಿಸು ಹೆಚ್ಚಿದ್ದರೆ ಸಂಪ್ರದಾಯದ ಆಚರಣೆ. ಹುಣ್ಣಿಮೆಗೂ ಮುನ್ನ ಸಾಕಷ್ಟು ಮಳೆ ಸುರಿದು, ಹೊಲದಲ್ಲಿ ಮುಂಗಾರು ನಳನಳಿಸುತ್ತಿದ್ದರೆ ನಮ್ಮ ಸಡಗರ ಆಗಸದೆತ್ತರಕ್ಕಿರುತ್ತದೆ. ಮಳೆಯಾಗದಿದ್ದರೂ ಸಹ ಎಂದೂ ಸಂಪ್ರದಾಯದ ಆಚರಣೆ ಬಿಟ್ಟಿಲ್ಲ. ನಮ್ಮದು ಊರಲ್ಲಿ ಗೌಡಕಿ ಮನೆತನ ಅನಿವಾರ್ಯವಾಗಿ ಆಚರಿಸಲೇಬೇಕಿದೆ’ ಎಂದು ಶಿರನಾಳದ ಅಣ್ಣಪ್ಪಗೌಡ ಹೇಳಿದರು.

‘ಬಸವಣ್ಣ ಇದ್ದವರ ಮನೆಯ ಕಾರ ಹುಣ್ಣಿಮೆ ಸಂಭ್ರಮವೇ ಬೇರೆ. ಎತ್ತುಗಳಿಲ್ಲದವರ ಮನೆಯವರ ಸಂಪ್ರದಾಯಿಕ ಆಚರಣೆಯೇ ಬೇರೆ. ಎತ್ತುಗಳಿಗೆ ನಸುಕಿನಲ್ಲೇ ಸ್ನಾನ ಮಾಡಿಸಿ, ತಾವು ಸ್ನಾನಗೈದು ಶ್ರದ್ಧಾಭಕ್ತಿಯಿಂದ ಪೂಜಿಸುತ್ತೇವೆ. ಹೊಸ ಹಗ್ಗ, ಹಣೆಪಟ್ಟಿ, ಗೆಜ್ಜೆ ಸರ, ಮೂಗುದಾರ, ಕೊರಳಗಂಟೆ, ಕೊರಳಿಗೆ ಅಂಗಡ, ಬಾರು, ದೃಷ್ಟಿ ಮಣಿ, ಜೂಲ, ಮಿಣಿಯೊಂದಿಗೆ ಅಲಂಕರಿಸಿ ರಂಗು ರಂಗಿನ ಬಣ್ಣ ಬಳಿದು ಸಂಭ್ರಮಿಸುತ್ತೇವೆ.

ಮುಸ್ಸಂಜೆ ಊರ ಮುಂದೆ ಎತ್ತುಗಳನ್ನು ಓಡಿಸಿ ಸಂಭ್ರಮ ಪಡುತ್ತೇವೆ. ಈ ಸಂದರ್ಭವೇ ವರ್ಷದ ಬೆಳೆಯ ಸ್ಥಿತಿ–ಗತಿ ತಿಳಿದುಕೊಳ್ಳುವ ‘ಕರಿ’ ಆಚರಣೆಯನ್ನು ನಡೆಸುತ್ತೇವೆ’ ಎಂದು ಬಸವನಬಾಗೇವಾಡಿ ತಾಲ್ಲೂಕಿನ ಹಳ್ಳದಗೆಣ್ಣೂರಿನ ರೈತ ಈರಪ್ಪ ಹಡಪದ ‘ಪ್ರಜಾವಾಣಿ’ಗೆ ತಿಳಿಸಿದರು.

ಎತ್ತು ಕಟ್ಟೋರೇ ಕಡಿಮೆಯಾಗಿದ್ರಿಂದ ಕಾರ ಹುಣ್ಣಿಮೆ ಕಾರುಬಾರು ಕಡಿಮೆಯಾಗಿದೆ. ಎತ್ತಿದ್ದವರ ಸಂಭ್ರಮವೇ ಬೇರೆ. ಕನಿಷ್ಠ ₹2000 ಮೌಲ್ಯದ ಖರೀದಿ ನಡೆಸಿದೆ ಎಂದು ಇಂಡಿ ತಾಲ್ಲೂಕು ಕ್ಯಾತನಗೆರೆಯ ಹಣಮಂತ ಸೋಮನಿಂಗ ವನಂಜಿಕರ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !