ಖರೀದಿ ಕೇಂದ್ರದತ್ತ ಸುಳಿಯದ ರೈತರು

7
ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಇದೇ 5ರಿಂದ ಆರಂಭವಾಗಿರುವ ಪ್ರಕ್ರಿಯೆ

ಖರೀದಿ ಕೇಂದ್ರದತ್ತ ಸುಳಿಯದ ರೈತರು

Published:
Updated:
Deccan Herald

ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ ಭತ್ತ ಖರೀದಿಸಲು ಜಿಲ್ಲಾಡಳಿತ ಕೊಳ್ಳೇಗಾಲ ಮತ್ತು ಸಂತೇಮರಹಳ್ಳಿಯಲ್ಲಿ ಎರಡು ಖರೀದಿ ಕೇಂದ್ರ ತೆರೆದು ವಾರ ಕಳೆದರೂ ಇದುವರೆಗೆ ಯಾವೊಬ್ಬ ಬೆಳೆಗಾರ ಕೂಡ ನೋಂದಣಿ ಮಾಡಿಕೊಂಡಿಲ್ಲ.

ಪ್ರತಿ ಕ್ವಿಂಟಲ್‌ಗೆ ₹1,750 (ಸಾಮಾನ್ಯ ದರ್ಜೆ) ಮತ್ತು ₹1,770ಕ್ಕೆ (ಎ ದರ್ಜೆ) ರೈತರಿಂದ ನೇರವಾಗಿ ಭತ್ತ ಖರೀದಿಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಇದೇ 5ರಂದು ಚಾಲನೆ ನೀಡಿತ್ತು. ಆರಂಭಿಕ ಹಂತವಾಗಿ 5ರಿಂದ 15ರವರೆಗೆ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಲು ಕರೆ ನೀಡಲಾಗಿತ್ತು. 16ರಿಂದ 31ರವರೆಗೆ ನಿಗದಿತ ಅಕ್ಕಿ ಗಿರಣಿಗಳ ಮೂಲಕ ಸಣ್ಣ ರೈತರಿಂದ ಗರಿಷ್ಠ 40 ಕ್ವಿಂಟಲ್‌ವರೆಗೆ ಅಕ್ಕಿ ಖರೀದಿಸಲು ಯೋಜನೆ ಹಾಕಿಕೊಂಡಿತ್ತು.

ಈ ನಿಟ್ಟಿನಲ್ಲಿ ಕೊಳ್ಳೇಗಾಲದಲ್ಲಿರುವ ರಾಜ್ಯ ಉಗ್ರಾಣ ನಿಗಮದ ಆವರಣದಲ್ಲಿ ಮತ್ತು ಸಂತೇಮರಹಳ್ಳಿಯ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ, ಒಂದು ವಾರದ ಅವಧಿಯಲ್ಲಿ ಯಾರೊಬ್ಬರೂ ನೋಂದಣಿ ಮಾಡಿಕೊಂಡಿಲ್ಲ.

ಎರಡು ಕೇಂದ್ರಗಳಿಗೆ 40ರಿಂದ 50 ರೈತರು ಬಂದು ಮಾಹಿತಿ ಪಡೆದು ಹೋಗಿದ್ದಾರೆ. ಆದರೆ, ದಾಖಲೆಗಳು ಹಾಗೂ ಭತ್ತದ ಮಾದರಿ ತಂದು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿಲ್ಲ. 

‘ಕೆಲವು ರೈತರು ಯೋಜನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ, ಯಾರೂ ನೋಂದಣಿ ಮಾಡಿಕೊಂಡಿಲ್ಲ. ಇನ್ನೂ ಎರಡು ಮೂರು ದಿನಗಳಿವೆ. ರೈತರು ಬರುವ ಸಾಧ್ಯತೆ ಇದೆ’ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಆರ್‌.ರಾಚಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

2017–18ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯ ಅಡಿಯಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಕೆಜಿ ಭತ್ತ ಖರೀದಿ ಆಗಿರಲಿಲ್ಲ.

ಜಿಲ್ಲಾಧಿಕಾರಿ ಮನವಿ: ಈ ಮಧ್ಯೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ರೈತರಿಗೆ ಮನವಿ ಮಾಡಿದ್ದಾರೆ.

ನೋಂದಣಿ ಅವಧಿ ವಿಸ್ತರಣೆ?: ಒಂದು ವೇಳೆ 15ರವರೆಗೆ ರೈತರು ನೋಂದಣಿ ಮಾಡಿಕೊಳ್ಳದಿದ್ದರೆ, ನೋಂದಣಿ ಅವಧಿಯನ್ನು ವಿಸ್ತರಿಸುವ ಸಂಭವ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಾರಣ ಏನು?

ಅಕ್ಕಿ ಗಿರಣಿ ಮಾಲೀಕರು ಪ್ರತಿ ಕ್ರಿಂಟಲ್‌ಗೆ ₹1,730ರಿಂದ ₹1,750ರವರೆಗೆ ನೀಡಿ ರೈತರ ಮನೆ ಬಾಗಿಲಿನಿಂದಲೇ ಭತ್ತ ಖರೀದಿಸುತ್ತಿದ್ದಾರೆ. ರೈತರು ಸರ್ಕಾರಕ್ಕೆ ಮಾರಾಟ ಮಾಡಬೇಕಾದರೆ, ಭತ್ತವನ್ನು ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ಅಕ್ಕಿ ಗಿರಣಿಗಳಿಗೆ ಸಾಗಣೆ ಮಾಡಬೇಕು. ಅಲ್ಲದೇ ನೋಂದಣಿ ಮಾಡಬೇಕಾದರೆ ಹಲವು ದಾಖಲೆಗಳನ್ನು ನೀಡಬೇಕು. ಈ ವರ್ಷ ಫಸಲು ಉತ್ತಮವಾಗಿದ್ದು, ಸರ್ಕಾರ ಗರಿಷ್ಠ ಖರೀದಿ ಮಿತಿಯನ್ನು 40 ಕ್ವಿಂಟಲ್‌ಗೆ ಇಳಿಸಿದ್ದು ಕೂಡ ರೈತರಿಗೆ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಬಲ ಬೆಲೆಯಷ್ಟೇ ದುಡ್ಡು ಮಾರುಕಟ್ಟೆಯಲ್ಲಿ ಸಿಗುತ್ತಿರುವಾಗ ಹಾಗೂ ಗಿರಣಿ ಮಾಲೀಕರೇ ಭತ್ತವನ್ನು ತೆಗೆದುಕೊಂಡು ಹೋಗುತ್ತಿರುವುದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಹಾಗಾಗಿ, ಬೆಳೆಗಾರರು ನೋಂದಣಿ ಕೇಂದ್ರದತ್ತ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !