ಸೋಮವಾರ, ಅಕ್ಟೋಬರ್ 14, 2019
22 °C

₹ 25 ಲಕ್ಷ ದುರುಪಯೋಗ: ಎಫ್‌ಡಿಎಗೆ ಜೈಲು ಶಿಕ್ಷೆ

Published:
Updated:

ಬೆಂಗಳೂರು: ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಅವರ ನಕಲಿ ಸಹಿ ಬಳಸಿ ಬ್ಯಾಂಕ್‌ ಖಾತೆಯಿಂದ ಚೆಕ್‌ ಮೂಲಕ ₹ 25 ಲಕ್ಷ ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದ ಅಪರಾಧಿ ಶಿವಪ್ರಸಾದ್ (47) ಎಂಬಾತನಿಗೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 24.15 ಲಕ್ಷ ದಂಡ ವಿಧಿಸಿ ನಗರದ ಭ್ರಷ್ಟಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಅಪರಾಧಿ ಶಿವಪ್ರಸಾದ್, ಜಿಲ್ಲಾ ಗೃಹರಕ್ಷಕ ದಳದ ಪ್ರಥಮದರ್ಜೆ ಸಹಾಯಕ (ಎಫ್‌ಡಿಎ) ಆಗಿ ಕೆಲಸ ಮಾಡುತ್ತಿದ್ದ. ಆತನ ವಿರುದ್ಧ 2014ರಲ್ಲಿ ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

‘ಕಚೇರಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಶಿವಪ್ರಸಾದ್, ಕಮಾಂಡೆಂಟ್‌ ಅವರ ಹೆಸರಿನ ಬ್ಯಾಂಕ್‌ ಖಾತೆಯಿಂದಲೇ ಚೆಕ್‌ ಮೂಲಕ ಹಣ ಡ್ರಾ ಮಾಡಿಕೊಂಡಿದ್ದ. ಆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದ. ಸಂಸ್ಥೆಗೆ ನಂಬಿಕೆದ್ರೋಹ ಹಾಗೂ ವಂಚನೆ ಮಾಡಿದ್ದ’ ಎಂದು ಸಿಐಡಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಕರಣದ ತನಿಖೆ ನಡೆಸಿದ್ದ ಸಿಐಡಿಯ ಅಂದಿನ ಡಿವೈಎಸ್ಪಿ ಕೆ. ಪುರುಷೋತ್ತಮ್ ಹಾಗೂ ಇನ್‌ಸ್ಪೆಕ್ಟರ್ ಮೊಹಮ್ಮದ್ ಅಲಿ ಅವರ ವಿಶೇಷ ತಂಡ, ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಡಿ. ರಮೇಶ್ ಬಾಬು ವಾದಿಸಿದ್ದರು.

Post Comments (+)