ಬುಧವಾರ, ಅಕ್ಟೋಬರ್ 23, 2019
23 °C

ಬದುಕನ್ನು ಎದುರಿಸಲಾಗದ ಭಯ

Published:
Updated:

ಸರ್, ನನಗೆ ಗಾಬರಿ. ಎಲ್ಲಿ ಸಾಯ್ತೀನಿ ಅನ್ನೋ ಭಯ, ಯಾರಾದರೂ ಸತ್ತರೂ ಭಯ. ಅಪಘಾತದಿಂದ ಸತ್ತದ್ದನ್ನು ಕೇಳಿದರೆ ಎದೆ ಝಲ್ ಅನ್ನುತ್ತೆ. ಭಯಕ್ಕೆ ಹೊಟ್ಟೆಯ ತೊಂದರೆಗೆ ಮಾತ್ರೆ ತಗೋತಿದ್ದೇನೆ. ಎಡಗೈ ಮತ್ತು ಎಡಗಡೆ ಭಾಗ ಚುಚ್ಚಿದ ಅನುಭವವಾಗುತ್ತದೆ. ಯಾಕೆ ಹೀಗಾಗುತ್ತದೆ? ಇದಕ್ಕೆ ಪರಿಹಾರ ಇಲ್ಲವೇ?

ಹೆಸರು, ಊರು ಬೇಡ

ನಿಮ್ಮ ಭಯ ದೇಹಕ್ಕೆ ಕಳಿಸುತ್ತಿರುವ ಸೂಚನೆಗಳನ್ನು ಮಾತ್ರೆಗಳ ಮೂಲಕ ಹತ್ತಿಕ್ಕಿ ಭಯವನ್ನು ಹೇಗೆ ಅರ್ಥಮಾಡಿಕೊಳ್ಳುತ್ತೀರಿ? ದೇಹದ ಎಡಭಾಗದಲ್ಲಿ ಏನಿರುತ್ತದೆ ಗೊತ್ತಲ್ವಾ? ಹೃದಯ, ಅಂದರೆ ನಿಮ್ಮ ಆತಂಕ, ಭಯ ಹೃದಯದಲ್ಲಿದೆ. ಮೆದುಳಿಗೆ ಬುದ್ಧಿ ಹೇಳಿ ಭಯವನ್ನು ಗೆಲ್ಲುವ ಪ್ರಯತ್ನದಲ್ಲಿ ಹೆಚ್ಚಿನ ಭಯವನ್ನು ಆಹ್ವಾನಿಸಿಕೊಳ್ಳುತ್ತಿದ್ದೀರಿ. ಸ್ವಲ್ಪಮಟ್ಟಿನ ಭಯ ನಮ್ಮೆಲ್ಲರಿಗೆ ಪ್ರಕೃತಿಯಿಂದ ಬಂದಿರುವ ಅನಿವಾರ್ಯತೆ. ನಿತ್ಯಜೀವನಕ್ಕೆ ತೊಂದರೆಯಾಗದಂತೆ ಭಯವನ್ನು ನಿಭಾಯಿಸಬೇಕು. ಭಯದಿಂದ ಓಡಿಹೋಗದೆ ದಿಟ್ಟವಾಗಿ ಎದುರಿಸಲು ಸ್ವಲ್ಪ ಕಷ್ಟದ ಪ್ರಯೋಗವೊಂದನ್ನು ಮಾಡಿ.

ಏಕಾಂತದಲ್ಲಿ ಕುಳಿತು ದೀರ್ಘವಾಗಿ ಉಸಿರಾಡುತ್ತಾ ತಲೆಯಿಂದ ಕಾಲಿನವರೆಗೆ ಒಂದೊಂದೇ ಅಂಗವನ್ನು 10 ಸೆಕೆಂಡ್‍ಗಳ ಕಾಲ ಸುಮ್ಮನೆ ಗಮನಿಸಿ. ನಂತರ ಒಂದು ಸಾವನ್ನು ಕಲ್ಪಿಸಿಕೊಂಡು ತೀವ್ರವಾಗಿ ಅನುಭವಿಸಿ. ಭಯ ದೇಹದಲ್ಲಿ ತೋರಿಸುತ್ತಿರುವ ಪ್ರತಿಕ್ರಿಯೆಯನ್ನು ತಗ್ಗಿಸಲು ಪ್ರಯತ್ನಿಸದೆ ಗಮನಿಸುತ್ತಿರಿ. ಪ್ರತಿದಿನ 15 ನಿಮಿಷಗಳಷ್ಟು ಕಾಲ ನಿಮ್ಮ ಬೇರೆಬೇರೆ ವಿಷಯಗಳ ಭಯವನ್ನು ಇಟ್ಟುಕೊಂಡು ಪ್ರಯೋಗಮಾಡಿ. ಸಾವಿನ ಅನಿವಾರ್ಯತೆ ನಿಮಗೆ ತಿಳಿದಿದೆ. ನಿಮಗಿರುವುದು ಸಾವಿನ ಭಯವಲ್ಲ, ಬದುಕನ್ನು ಎದುರಿಸಲಾಗದ ಭಯ. ಜೀವನವನ್ನು ಎದುರಿಸದೆ ನಾನು ಹೇಗೆ ಓಡುತ್ತಿದ್ದೇನೆ ಎಂದು ಅರ್ಥವಾದರೆ ಪರಿಹಾರಗಳು ಸುಲಭ. ಆಗಾಗ ಕಾಡುವ ಭಯವನ್ನು ಅನುಭವಿಸುತ್ತಲೇ ಬದುಕುವುದನ್ನು ಕಲಿಯುವ ಬಗೆಗೆ ಯೋಚಿಸಿ.

ವಯಸ್ಸು 21. ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ದಿನಾ ಪ್ರಯಾಣ ಮಾಡುವುದರಿಂದ ಕಷ್ಟವಾಗಿ ತಲೆನೋವು ಬರುತ್ತಿದೆ. ಇದರಿಂದ ಹೊರಬರುವ ದಾರಿ ಇಲ್ಲವೇ?

ಮಾರುತಿ, ಊರು ಬೇಡ

ಮಾರುತಿಯವರೇ, ವಿದ್ಯಾಭ್ಯಾಸಕ್ಕಾಗಿ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ನಿಮ್ಮ ಮೆದುಳಿಗೆ ಗೊತ್ತಿದೆ. ಆದರೆ ಆ ವಾಸ್ತವವನ್ನು ಮನಸ್ಸು ಒಪ್ಪಿಕೊಳ್ಳದೆ ಪ್ರಯಾಣದ ಕಷ್ಟಗಳ ಬಗೆಗೆ ಯೋಚಿಸಿ ಆತಂಕವನ್ನು ಸೃಷ್ಟಿಮಾಡುತ್ತಿದೆ. ಮೇಲ್ನೋಟಕ್ಕೆ ಅನಿವಾರ್ಯವೆಂದು ಕಾಣುವ ವಾಸ್ತವಿಕತೆಯನ್ನು ತಿರಸ್ಕರಿಸುವ ನಿಮ್ಮ ಮನಸ್ಸಿನ ಪ್ರವೃತ್ತಿಯ ಹಿನ್ನೆಲೆಯ ಬಗೆಗೆ ನಿಧಾನವಾಗಿ ಯೋಚಿಸಿ. ಬದುಕಿನ ಸಣ್ಣಪುಟ್ಟ ಏರುಪೇರುಗಳನ್ನು ಒಪ್ಪಿಕೊಳ್ಳದ ವ್ಯವಸ್ಥಿತ ಜೀವನದ ನಿರೀಕ್ಷೆ ನಿಮ್ಮ ಮೂಲಪ್ರವೃತ್ತಿಯಾಗಿರಬಹುದು. ಜೊತೆಗೆ ಪ್ರಯಾಣ ಕೊಡುತ್ತಿರುವ ಕಷ್ಟಗಳನ್ನು ಪಟ್ಟಿಮಾಡಿ. ತಲೆನೋವು ಕಷ್ಟವಲ್ಲ, ಅದು ಪರಿಣಾಮ. ನಂತರ ಒಂದೊಂದೇ ಕಷ್ಟವನ್ನು ಕಲ್ಪನೆಯಲ್ಲಿ ಆಳವಾಗಿ ಅನುಭವಿಸುತ್ತಾ ಇದರ ಪರಿಹಾರ ನನ್ನ ಹಿಡಿತದಲ್ಲಿದೆಯೇ ಎಂದು ಯೋಚಿಸಿ. ನಿಮ್ಮ ಮಿತಿಯಲ್ಲಿರುವುದನ್ನು ಸರಿಪಡಿಸುವ ದಾರಿಗಳನ್ನು ಹುಡುಕಿ. ಮಿತಿಯಲ್ಲಿ ಇಲ್ಲದಿರುವುದನ್ನೂ ಕೂಡ ತಿರಸ್ಕರಿಸದೆ ಸ್ವೀಕರಿಸಿ. ಸ್ನಾತಕೋತ್ತರ ಪದವಿಯ ಸಿಹಿಯನ್ನು ಪಡೆಯಲು ನುಂಗಬೇಕಾದ ಕಹಿಮಾತ್ರೆಯಾಗಿ ಸೇವಿಸಿ. ಪ್ರಯಾಣದ ಸಮಯವನ್ನು ಮೊಬೈಲ್ ಬಳಕೆ ಮಾಡದೆ ಉಲ್ಲಾಸಕಾರಿಯಾಗಿ ಮಾಡುವುದು ಹೇಗೆ ಎಂದು ಯೋಚಿಸಿ.

ನಾನು ಶಿಕ್ಷಕಿಯಾಗಿ 9 ತಿಂಗಳಾದವು. ನನ್ನ ಕೆಲಸಕ್ಕೆ ಕೈಲಾದಷ್ಟು ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಮಕ್ಕಳಿಂದ ಧನಾತ್ಮಕ ಬದಲಾವಣೆಗಳನ್ನು ಕಾಣಲಾಗುತ್ತಿಲ್ಲ. ಬದಲಾವಣೆ ಕಾಣಲು ಏನು ಮಾಡಬಹುದು?

ಹೆಸರು, ಊರು ಬೇಡ

ಕೇವಲ 9 ತಿಂಗಳಲ್ಲಿ ನೀವು ನಿರಾಸೆಗೊಂಡಿರುವುದನ್ನು ನೋಡಿದರೆ ತ್ವರಿತವಾಗಿ ಪ್ರತಿಫಲದ ನಿರೀಕ್ಷೆ ನಿಮ್ಮ ಮೂಲ ಪ್ರವೃತ್ತಿಯಾಗಿರಬಹುದು ಅಥವಾ ನಿಮಗೆ ಮೇಲಿನವರ ಒತ್ತಡವಿದೆ. ನೀವು ಶಿಕ್ಷಣವ್ಯವಸ್ಥೆಯ ಒಂದು ಭಾಗವಾಗಿ ಕೆಲಸ ಮಾಡುತ್ತಿದ್ದೀರಿ. ಹಾಗಾಗಿ ವ್ಯವಸ್ಥೆಯ ಮಿತಿಗಳೊಳಗೆ ಮಾತ್ರ ನಿಮ್ಮ ಪ್ರಯತ್ನ ಸಫಲವಾಗುತ್ತದೆ. ಧನಾತ್ಮಕ ಬದಲಾವಣೆಯ ಸಂಪೂರ್ಣ ಜವಾಬ್ದಾರಿ ನಿಮ್ಮೊಬ್ಬರ ಮೇಲೆ ಮಾತ್ರ ಇರುವುದಿಲ್ಲ. ಧನಾತ್ಮಕ ಬದಲಾವಣೆ ಎಂದು ನೀವು ಹೇಳುತ್ತಿರುವುದು ಮಕ್ಕಳ ಕಲಿಕೆಯ ವಿಷಯದಲ್ಲಿ ಇರಬೇಕಲ್ಲವೇ? ಮಕ್ಕಳಲ್ಲಿ ಹೆಚ್ಚಿನ ಜ್ಞಾನವನ್ನು ತುಂಬುವುದಕ್ಕೆ ಕೇವಲ ಬೋಧನೆ ಮತ್ತು ಬಾಯಿಪಾಠ ಸಹಾಯ ಮಾಡುವುದಿಲ್ಲ. ಆಸಕ್ತಿಯಿಲ್ಲದಿದ್ದಾಗ ಶಿಸ್ತು, ಒತ್ತಡ ವಿಫಲವಾಗುತ್ತದೆ. ಬೋಧಿಸುವ ಮೊದಲು ಮಕ್ಕಳಲ್ಲಿ ವಿಷಯದ ಬಗೆಗೆ ಆಸಕ್ತಿ ಮೂಡಿಸುವುದು ಹೇಗೆ ಎಂದು ಯೋಚಿಸಿ. ವಿಷಯಗಳನ್ನು ನಮ್ಮ ಸುತ್ತಲೂ ಇರುವ ವಸ್ತುಗಳ ಘಟನೆಗಳ ಮೂಲಕ ಅಥವಾ ಕಥೆಯಾಗಿ ಪ್ರಯೋಗವಾಗಿ ಕಲಿಸಿದರೆ ಮಕ್ಕಳನ್ನು ಆಕರ್ಷಿಸುವುದು ಸುಲಭ. ನಿಮಗಿರುವ ಸಮಯದ ನಿಯಮಗಳ ಮಿತಿಗಳಲ್ಲಿ ಇವುಗಳನ್ನು ಅಳವಡಿಸುವುದು ಹೇಗೆ ಎಂದು ಯೋಚಿಸಿ. ಇಲ್ಲದಿರುವುದಕ್ಕೆ ಕೊರಗದೆ ಸಣ್ಣಸಣ್ಣ ಸೃಜನಾತ್ಮಕ ಪ್ರಯೋಗಗಳನ್ನು ಮಾಡಿ. ಮಕ್ಕಳನ್ನು ಕಲಿಕೆಯ ವಸ್ತುಗಳಾಗಿ ಮಾಡದೆ ಅವರೊಡನೆ ಒಂದು ಜೀವಂತ ವ್ಯಕ್ತಿಯ ಜೊತೆ ಇರಬಹುದಾದ ಸಂಬಂಧವನ್ನು ಇಟ್ಟುಕೊಳ್ಳುವುದು ಹೇಗೆ ಎಂದು ಯೋಚಿಸಿ. ಸ್ವಲ್ಪ ಸಹನೆಯಿಂದ ಭಿನ್ನವಾಗಿ ಯೋಚಿಸಿದರೆ ಇವೆಲ್ಲವೂ ನಿಮಗೆ ಸಾಧ್ಯ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)