ಫಿಟ್‌ನೆಸ್‌ಗೆ ನೆರವಾಗುವ ಸಾಧನಗಳು

ಮಂಗಳವಾರ, ಏಪ್ರಿಲ್ 23, 2019
25 °C

ಫಿಟ್‌ನೆಸ್‌ಗೆ ನೆರವಾಗುವ ಸಾಧನಗಳು

Published:
Updated:
Prajavani

ನಿತ್ಯವೂ ತಪ್ಪದೇ ವ್ಯಾಯಾಮ ಮಾಡಬೇಕು, ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬೇಕು ಎಂಬ ಆಸೆ ಹಲವರಿಗೆ ಇರುತ್ತದೆ. ಆದರೆ ಸಮಯದ ಕೊರತೆ, ಸೂಕ್ತ ಸ್ಥಳದ ಕೊರತೆ ಇತ್ಯಾದಿ ಸಮಸ್ಯೆಗಳಿಂದಾಗಿ ಹಲವರು ವ್ಯಾಯಾಮದಿಂದ ವಿಮುಖರಾಗುತ್ತಿದ್ದಾರೆ. ಇಂಥವರಿಗೆ ನೆರವಾಗಲೆಂದೇ
ಹಲವು ಸಾಧನಗಳು ಲಭ್ಯವಿವೆ. ಅವುಗಳಲ್ಲಿ ಫಿಟ್‌ನೆಸ್ ಪ್ರಿಯರ ಮನ ಗೆಲ್ಲುತ್ತಿರುವ ಕೆಲವು ಸಾಧನಗಳ ಬಗ್ಗೆ ಮಾಹಿತಿ
ಇಲ್ಲಿದೆ. –ಪೃಥ್ವಿರಾಜ್

ನಿತ್ಯವೂ ತಪ್ಪದೇ ವ್ಯಾಯಾಮ ಮಾಡಬೇಕು, ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬೇಕು ಎಂಬ ಆಸೆ ಹಲವರಿಗೆ ಇರುತ್ತದೆ. ಆದರೆ ಸಮಯದ ಕೊರತೆ, ಸೂಕ್ತ ಸ್ಥಳದ ಕೊರತೆ ಇತ್ಯಾದಿ ಸಮಸ್ಯೆಗಳಿಂದಾಗಿ ಹಲವರು ವ್ಯಾಯಾಮದಿಂದ ವಿಮುಖರಾಗುತ್ತಿದ್ದಾರೆ. ಇಂಥವರಿಗೆ ನೆರವಾಗಲೆಂದೇ ಹಲವು ಸಾಧನಗಳು ಲಭ್ಯವಿವೆ. ಅವುಗಳಲ್ಲಿ ಫಿಟ್‌ನೆಸ್ ಪ್ರಿಯರ ಮನ ಗೆಲ್ಲುತ್ತಿರುವ ಕೆಲವು ಸಾಧನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಫಿಟ್‌ಬಿಟ್ ಸ್ಮಾರ್ಟ್ ಸ್ಕೇಲ್

ಫಿಟ್‌ಬಿಟ್‌ ಸಂಸ್ಥೆಯ ಫಿಟ್‌ನೆಸ್ ಟ್ರ್ಯಾಕರ್‌ ಹಲವು ಫಿಟ್‌ನೆಸ್‌ ಪ್ರಿಯರ ಮೆಚ್ಚುಗೆ ಗಳಿಸಿತ್ತು. ಈಗ ಅರಿಯಾ 2 (Aria 2) ಎಂಬ ತೂಕ ಇಳಿಸಿಕೊಳ್ಳಲು ನೆರವಾಗುವಂತಹ ಸ್ಮಾರ್ಟ್‌ ಸ್ಕೇಲ್ ಅನ್ನು ಸಂಸ್ಥೆ ಪರಿಚಯಿಸಿದೆ. ಈ ಸ್ಕೇಲ್ ತೂಕ ತಿಳಿಸುವುದಕ್ಕಷ್ಟೇ ಸೀಮಿತವಾಗದೆ, ದೇಹದಲ್ಲಿರುವ ಕೊಬ್ಬಿನ ಪ್ರಮಾಣವನ್ನೂ ತಿಳಿಸುತ್ತದೆ. ಅಲ್ಲದೇ ಬಿಎಂಐ ಅನ್ನು ಕೂಡ ಲೆಕ್ಕ ಹಾಕುತ್ತದೆ. ಮತ್ತೊಂದು ವಿಶೇಷವೆಂದರೆ, ಇದನ್ನು 8 ಮಂದಿ ಬಳಸಿಕೊಳ್ಳಬಹುದು. ಪ್ರತಿ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತ್ಯೇಕವಾಗಿ ನಿರ್ವಹಿಸುವಂತಹ ವ್ಯವಸ್ಥೆ ಇದರಲ್ಲಿದೆ. ಇದನ್ನು ತಂತಿ ರಹಿತವಾಗಿ ಸ್ಮಾರ್ಟ್‌ಫೋನ್‌ ಜೋಡಿಸಿಕೊಳ್ಳುವುದಕ್ಕೂ ಅವಕಾಶವಿದೆ.

ಐ ಫಿಟ್ ಸ್ಲೀಪ್ ಟ್ರ್ಯಾಕರ್‌

ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕು ಎಂದು ಬಯಸುವವರು ನಿದ್ರೆಯ ಬಗ್ಗೆ ಕೂಡ ಕಾಳಜಿ ವಹಿಸುವುದು ಅನಿವಾರ್ಯ. ಇದಕ್ಕೆ ಸಂಬಂಧಿಸಿದ ಸ್ಲೀಪ್ ಟ್ರ್ಯಾಕರ್‌ಗಳು ಈಗಾಗಲೇ ಹಲವು ಇವೆ. ಅವುಗಳಲ್ಲಿ ಆ್ಯಪಲ್‌ ವಾಚ್‌ಗಳು ಕೂಡ ಒಂದು. ಇಲ್ಲಿ ಸಮಸ್ಯೆ ಎಂದರೆ ದುಬಾರಿ ಟ್ರ್ಯಾಕರ್‌ಗಳನ್ನು ಕೈಗೆ ಧರಿಸಿಕೊಂಡು ನಿದ್ರಿಸುವುದಕ್ಕೆ ಹಲವರಿಗೆ ಇಷ್ಟವಿರುವುದಿಲ್ಲ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಐ ಫಿಟ್ ಸ್ಲೀಪ್ ಟ್ರ್ಯಾಕರ್‌ ಈ ತಯಾರಿಸಲಾಗಿದೆ.

ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಬಹುದಾದ ಈ ಸಾಧನವನ್ನು ಹಾಸಿಗೆ ಮೇಲೆ ಇಟ್ಟು ಮಲಗಿದರೆ ಸಾಕು, ನಮ್ಮ ಆರೋಗ್ಯ ಮಾಹಿತಿಯನ್ನು ಮುಂಜಾನೆ ಏಳುತ್ತಿದ್ದಂತೆಯೇ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಫ್ ಮತ್ತು ಚಾರ್ಟ್‌ಗಳ ಮೂಲಕ ವಿವರಿಸುತ್ತದೆ. ಅಲ್ಲದೇ, ರಾತ್ರಿಯಲ್ಲಿ ಎಷ್ಟುಬಾರಿ ಎಚ್ಚರವಾಗಿತ್ತು. ತೃಪ್ತಿಕರವಾಗಿ ನಿದ್ರೆ ಮಾಡಿದ್ದಿರೋ, ಇಲ್ಲವೊ ಎಂಬುದನ್ನೂ ತಿಳಿಸುತ್ತದೆ. ಜೊತೆಗೆ ರಾತ್ರಿಯಲ್ಲಿ ಹೃದಯದ ಕಾರ್ಯವೈಖರಿ ಬಗ್ಗೆಯೂ ತಿಳಿಸುತ್ತದೆ.

ಸ್ಕ್ಲಪ್ಟ್‌ ಸ್ಕ್ಯಾನರ್‌

ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಬಹುದಾದ ಈ ಸಾಧನವು ದೇಹದ ಎಲ್ಲ ಅಂಗಾಂಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡುತ್ತದೆ. ದೇಹದಲ್ಲಿರುವ ಕೊಬ್ಬು, ಫಿಟ್‌ನೆಸ್ ಪ್ರಿಯರಿಗೆ ಅಗತ್ಯವಿರುವ ಆರೋಗ್ಯ, ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳನ್ನು ಸೂಚಿಸುತ್ತದೆ. ಈ ಸ್ಕ್ಯಾನರ್‌ ದೇಹದ ಎಲ್ಲ ಅಂಗಾಂಗಳನ್ನು 24 ಬಗೆಯಲ್ಲಿ ಸ್ಕ್ಯಾನ್ ಮಾಡಿ ಯಾವ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿದೆ. ಎಲ್ಲಿ ಕರಗಿಸಬೇಕು ಎಂಬುದನ್ನು ಸೂಚಿಸುತ್ತದೆ. ಇದಕ್ಕಾಗಿ ಪ್ರತ್ಯೇಕ ಕಿರು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಮಾಡಬೇಕಾದ ವ್ಯಾಯಾಮಗಳು, ಆಹಾರ ಕ್ರಮದ ಬಗ್ಗೆ ಮಾಹಿತಿ ನೀಡುತ್ತದೆ.

ಸಾಮಾನ್ಯರ ದೆರಾಗನ್‌

ಮಾಂಸಖಂಡಗಳಲ್ಲಿ ನೋವಿದ್ದರೆ ಮಾಸಾಜ್ ಕೇಂದ್ರಗಳಲ್ಲಿ ದೆರಾಗನ್‌ಗಳ ಮೂಲಕ ಮಸಾಜ್ ಮಾಡುತ್ತಾರೆ. ಆದರೆ ಇದರ ಬಗ್ಗೆ ತಿಳಿದಿದ್ದರೆ ಮಾತ್ರ ಬಳಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯ. ಆದರೆ ಸಾಮನ್ಯರೂ ಬಳಸಬಹುದಾದಂತ ದೆರಾಗನ್ ಬಳಕೆಗೆ ಬಂದಿದೆ. ಇದು ಫಿಟ್‌ನೆಸ್ ಕಾಪಾಡಿಕೊಳ್ಳಲು ಬಯಸುವವರ ಮಾಂಸಂಖಂಡಗಳಿಗೆ ಮೃದುವಾಗಿ ಮರ್ದನ ಮಾಡಲು ನೆರವಾಗುತ್ತದೆ. ನೋವು, ಊತದಂತಹ ಸಮಸ್ಯೆಗಳಿದ್ದರೆ ಬೇಗ ಗುಣಮುಖರಾಗಲು ನೆರವಾಗುತ್ತದೆ. ಕೀಲು ನೋವು, ಮಂಡಿ ನೋವು ಇತ್ಯಾದಿ ಸಮಸ್ಯೆಗಳಿಗೂ ಉಪಯೋಗವಾಗುತ್ತದೆ. ಹಗುರವಾಗಿದ್ದು, ಚಾರ್ಜಿಂಗ್ ಮಾಡುವ ಸೌಲಭ್ಯ ಇರುವುದರಿಂದ ಬಳಕೆಯೂ ಸುಲಭ. ಸದಾ ಪ್ರಯಾಣ ಮಾಡುವ ಆಟಗಾರರಿಗೆ, ಫಿಟ್‌ನೆಸ್ ಪ್ರಿಯರಿಗೆ ಇದು ನೆರವಾಗುತ್ತದೆ.

ಸ್ಮಾರ್ಟ್ ಬಾಟಲ್

ಫಿಟ್‌ನೆಸ್ ಪ್ರಿಯರಿಗೆ ಮತ್ತು ಆಟಗಾರರಿಗೆ ಬೇಸಿಗೆಯಲ್ಲಿ ಹೆಚ್ಚು ಕಾಡುವ ಸಮಸ್ಯೆ ನಿರ್ಜಲೀಕರಣ. ವ್ಯಾಯಾಮ ಮಾಡಿದ ನಂತರ ನೀರು ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು, ಯಾವ ಸಮಯದಲ್ಲಿ ಕುಡಿಯಬೇಕು ಎಂಬ ಅರಿವು ಹಲವರಿಗೆ ಇರುವುದಿಲ್ಲ. ಇಂಥವರಿಗೆ ಈ ಒಜ್ಮೊ ಆ್ಯಕ್ಟೀವ್ ಸ್ಮಾರ್ಟ್ ಬಾಟಲ್ ನೆರವಾಗುತ್ತದೆ. ಬ್ಯಾಟರಿ ಶಕ್ತಿಯಿಂದ ಕೆಲಸ ಮಾಡುವ ಈ ಸಾಧನವನ್ನು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ಗೆ ಜೋಡಿಸಿ, ಜೊತೆಯಲ್ಲಿಟ್ಟುಕೊಂಡರೆ ಸಾಕು, ನಿತ್ಯ ಎಷ್ಟು ನೀರು ಸೇವಿಸಿದ್ದೀರಿ?, ದೇಹಕ್ಕೆ ನೀರಿನ ಪ್ರಮಾಣ ಎಷ್ಟು ಅಗತ್ಯವಿದೆ? ಇತ್ಯಾದಿ ವಿವರಗಳನ್ನು ತಿಳಿಸುತ್ತದೆ.

ಈ ಪರಿಕರಗಳು ಅಮೇಜಾನ್‌ನ್ ಸೇರಿದಂತೆ ಆನ್‌ಲೈನ್ ತಾಣಗಳಲ್ಲಿ ಲಭ್ಯವಿವೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !