ಯಾರು ಬೇಕಾದ್ರೂ ಮಾಡ್ಬೋದು ಜುಂಬಾ ಡ್ಯಾನ್ಸ್

7

ಯಾರು ಬೇಕಾದ್ರೂ ಮಾಡ್ಬೋದು ಜುಂಬಾ ಡ್ಯಾನ್ಸ್

Published:
Updated:
Deccan Herald

‘ಮನೆಕೆಲಸ ಮಾಡಿದರೆ ಸಾಕು ಅದೇ ಎಕ್ಸಸೈಜ್‌ ಬೇಕಾದಷ್ಟಾಯಿತು. ಮನೆ ಕೆಲಸಕ್ಕೆ ಆಳು ಇಟ್ಕೊಂಡು ಜಿಮ್‌ಗೆ ಹೋಗಿ ಮೈ ಕರಗಿಸ್ತಾರೆ ಈಗಿನೋರು’ ಅಂತ ತಮಾಷೆಯೊ, ಕೆಲವೊಮ್ಮೆ ತುಸು ವ್ಯಂಗ್ಯವಾಗಿಯೊ ಆಡುವ ಮಾತು ನಿಮ್ಮ ಕಿವಿಗೂ ಬಿದ್ದಿರುತ್ತೆ. ಆದರೆ ಫಿಟ್‌ನೆಸ್‌ ಬರೀ ಮನೆಕೆಲಸದಿಂದ ಬರುವಂಥದ್ದಲ್ಲ. ಫಿಟ್‌ನೆಸ್‌ ಎಂದಾಕ್ಷಣ ಜಿಮ್‌, ಟ್ರೆಡ್‌ಮಿಲ್‌, ಡಂಬೆಲ್‌ಗಳೇ ಕಣ್ಮುಂದೆ ಬರುತ್ತವೆ. ಇವೆಲ್ಲ ಸಲಕರಣೆಗಳು ನಾವೇ ಫಿಟ್‌ ಆಗಲು ಸಹಾಯಕ. ಆದರೆ ಬಯಸಿದ ಫಲಿತಾಂಶ ಸಿಗಬೇಕೆಂದರೆ ಸುಲಭವಲ್ಲ ಹೆಚ್ಚಿನ ಪ್ರಯತ್ನ ಬೇಕು. ಅರ್ಧಕ್ಕೇ ಉತ್ಸಾಹ ಕಳೆದುಕೊಳ್ಳದೇ ಬಿಡದೇ ಕೊನೆಯವರೆಗೂ ನಮಗೆ ನಾವೇ ಮುಂದುವರಿಯುವ ಪ್ರೇರಣೆ ತಂದುಕೊಳ್ಳುತ್ತ ಇರಬೇಕಾಗುತ್ತದೆ. ಹಾಗಾಗೇ ವ್ಯಾಯಾಮ ಶುರು ಮಾಡುವ ಮೊದಲೇ ನಿಂತುಬಿಡುತ್ತೇವೆ ನಮ್ಮಲ್ಲಿ ಬಹುತೇಕರು. ಹಾಗಂತ ಫಿಟ್‌ ಇರಲು ಅಪ್ಪಟ ವ್ಯಾಯಾಮವಷ್ಟೇ ಬೇಕು ಅಂತಿಲ್ಲ.

ಫಿಟ್‌ನೆಸ್‌ ಕಾರ್ಯಕ್ರಮದಲ್ಲಿ ಡಾನ್ಸ್‌ ಕೂಡ ಸೇರಿದೆಯಲ್ಲ ಈಗ ಡ್ಯಾನ್ಸ್‌ಸೈಜ್‌. ಅದರಲ್ಲೂ ಫಿಟ್‌ನೆಸ್‌ ಕಾರ್ಯಕ್ರಮವೇ ಜುಂಬಾ. ಆದರೆ ಬರೀ ವ್ಯಾಯಾಮವಲ್ಲ; ಬರೀ ಡಾನ್ಸ್‌ ಸಹ ಅಲ್ಲ. ಕ್ಯಾಲೊರಿ ಕರಗಿಸುತ್ತಲೇ ಮಜವೂ ಎನಿಸುವ ನುಲಿತ ಇಲ್ಲಿದೆ. ಸಂಗೀತ ಆಸ್ವಾದಿಸುತ್ತಲೇ ಫಿಟ್‌ ಆಗುವುದನ್ನ ಯಾರು ಬೇಡ ಅಂತಾರೆ. ಸುಲಭದ ಹೆಜ್ಜೆಗಳು, ಓಲಾಟ... ಮೇಲಾಗಿ ಸಂಗೀತವೇ ನಿಮ್ಮಲ್ಲಿ ಉತ್ಸಾಹವನ್ನೂ ಚೈತನ್ಯವನ್ನೂ ತುಂಬುತ್ತಲಿರುವಾಗ ಕಷ್ಟಪಟ್ಟು ಮೈಬಗ್ಗಿಸಿ, ನಡು ಹೊರಳಿಸಿ, ಕುಳಿತೇಳುವಂತಹ ಶ್ರಮವೂ ಬೇಕಿಲ್ಲ. ಆರು ವರ್ಷದವರಾದರೇನು ಅರವತ್ತಾದರೇನು ಮಜವಾಗಿರುವ ಸ್ವಭಾವ ನಿಮ್ಮದಾಗಿದ್ದರೆ ಜುಂಬಾ ನಿಮಗಾಗಿ! ಎಲ್ಲರಿಗಾಗಿ.

ಅಂತೆಯೇ ಉತ್ಸಾಹ ಇರುವವರೆಗೂ ಮಾಡುತ್ತಲೇ ಇರಬಹುದು. ಆದರೆ ಫಿಟ್‌ನೆಸ್‌ ಉದ್ಯಮ ಆರೋಗ್ಯ, ಎಲುಬು– ಸ್ನಾಯುಗಳಿಗೇ ಸಂಬಂಧಿಸಿದ್ದು. ಹಾಗಾಗಿ ಎಂಥ ದೇಹಚಲನೆ, ಎಷ್ಟು ಶ್ರಮ, ಯಾರಿಗೆ ಸೂಕ್ತ ಎನ್ನುವ ಅರಿವು ತರಬೇತುದಾರರಿಗೆ ಇರಲೇಬೇಕಾಗುತ್ತದೆ. ಅಷ್ಟಕ್ಕೂ ಜುಂಬಾ ಎನ್ನುವುದು ಜುಂಬಾ ಪಿಟ್‌ನೆಸ್‌ ಕಂಪನಿಯ ಟ್ರೇಡ್ ಮಾರ್ಕ್. ಆ ಬ್ರ್ಯಾಂಡ್ ಬಳಸುವವರು ಕನಿಷ್ಠ ಆ ನಿಯಮಗಳನ್ನು ಅನುಸರಿಸಬೇಕು ಎನ್ನುತ್ತಾರೆ ಆನಂದ್. ಆ ಕಂಪನಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ಸರ್ಟಿಫಿಕೇಟ್ ನೀಡುತ್ತದೆ. ಹೀಗೆ ತರಬೇತುದಾರರಾದವರು ಜಿನ್ (ZIN ಅಂದರೆ Zumba Instructor Network). ತರಬೇತು ಪಡೆದವರು ಆರೋಗ್ಯದ ಮಾಹಿತಿಯನ್ನಷ್ಟೇ ಅಲ್ಲ, ತಮ್ಮ ತರಗತಿಯ ಎಲ್ಲರನ್ನೂ ಬೇಸರವಾಗದಂತೆ ಗಡಿಯಾರದ ಪರಿವೇ ಇರದಂತೆ ಮಜವಾದ ಲಹರಿಯಲ್ಲಿ ಒಂದು ಚಟುವಟಿಕೆಯಲ್ಲಿ ತೊಡಗಿಸುತ್ತ ಹಿಡಿದಿಡುವ ಕಲೆ ಅರಿತಿರುತ್ತಾರೆ.

ಸಂಗೀತ ಕಿವಿದುಂಬುತ್ತಲೇ ಮೈಮನವನ್ನು ಹಗುರಾಗಿಸುವಂತೆ ಓಲಾಡುತ ನುಲಿಯುವಂತೆ ಮಾಡುತ್ತದೆ. ಸಂತೋಷ ಸಕಾರಾತ್ಮಕ ಚೈತನ್ಯ ಚಿಮ್ಮುತ್ತದೆ ತರಗತಿಯ ತುಂಬೆಲ್ಲ. ಒಂದಂತೂ ಸ್ಪಷ್ಟ. ಇದು ನಿಮ್ಮ ನೃತ್ಯ ಕಲೆಯ ಪ್ರತಿಭೆ ತೋರಲು ಇರುವ ದಾರಿಯಂತೂ ಅಲ್ಲ. ಯಾರು ಯಾರಿಗಿಂತ ಚೆನ್ನಾಗಿ ನರ್ತಿಸುವರು ಎಂಬೆಲ್ಲ ನಿರೀಕ್ಷೆಯ ಭಾರಗಳಿಲ್ಲ ಇಲ್ಲಿ. ಎಲ್ಲರೂ ನೂರಕ್ಕೆ ನೂರರಷ್ಟು ಎಂಜಾಯ್ ಮಾಡುತ್ತ ತೊಡಗಿಕೊಳ್ಳುವ ಸಂಗೀತಕ್ಕೆ ತಕ್ಕಂತೆ ನರ್ತನ ಕ್ರಮ ಎನ್ನಬಹುದು.

ನೀರಲ್ಲಿ ನಡೆಯುವ ಅಕ್ವಾ ಜುಂಬಾ, ಜುಂಬಾ ಗೋಲ್ಡ್, ಮಕ್ಕಳಿಗಾಗಿ ಜುಂಬಾ ಎಂಬೆಲ್ಲ ಹಲವು ವೈವಿಧ್ಯಗಳೂ ಇವೆ.

ಬೆಂಗಳೂರಿನಲ್ಲಿ ಮತ್ತು ಇತರ ನಗರಗಳ ಡಾನ್ಸ್ ಮತ್ತು ಫಿಟ್‌ನೆಸ್ ಸೆಂಟರ್‌ಗಳಲ್ಲಿ ಈಗಾಗಲೇ ಜುಂಬಾ ತರಗತಿಗಳು ನಡೆಯುತ್ತಿವೆ. ಒಮ್ಮೆ ಸೇರಿಕೊಂಡು ನೋಡಿ. ಇನ್ನೇನಾಗದಿದ್ದರೂ ತೂಕ ಕಡಿಮೆ ಆಗುತ್ತದೆ. ದಿನ ದಿನವೂ ಅದದೇ ವ್ಯಾಯಾಮ ಮಾಡುವಾಗ ಆಗುವಂತೆ ಇಲ್ಲಿ ಬೋರ್ ಆಗುವುದಿಲ್ಲ. ಹೊಸ ಸಂಗೀತ, ಹೊಸ ಹೆಜ್ಜೆಗಳು, ಹೊಸ ಉತ್ಸಾಹ ಮನದುಂಬದಿದ್ದರೆ ಹೇಳಿ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !