ಶುಕ್ರವಾರ, ಮಾರ್ಚ್ 5, 2021
30 °C
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪ್ರಿಯಕರನ ಪತ್ನಿಯನ್ನು ಕೊಲ್ಲಲು ಮೂರು ಬಾರಿ ಯತ್ನ, ಅಕ್ಕಸಾಲಿಗರು ಬಳಸುವ ರಾಸಾಯನಿಕ ಬೆರೆಸಿ ಕೇಸರಿ ಬಾತ್‌ ವಿತರಣೆ

ಗಂಗಮ್ಮ ದೇವಿ ಪ್ರಸಾದಕ್ಕೆ ವಿಷ: ಮೂರು ಮಹಿಳೆಯರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಂತಾಮಣಿಯ ಗಂಗಮ್ಮ ದೇವಿ ವಿಷ ಪ್ರಸಾದ ಪ್ರಕರಣ ಬೇಧಿಸಿರುವ ಪೊಲೀಸರು ಪ್ರಸಾದಕ್ಕೆ ವಿಷ ಬೆರೆಸಿ ಭಕ್ತರಿಗೆ ಹಂಚಿದ ಆರೋಪದ ಮೇಲೆ ಮೂರು ಮಹಿಳೆಯರನ್ನು ಬಂಧಿಸಿ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇಂದ್ರ ವಲಯ ಐಜಿಪಿ ಬಿ.ದಯಾನಂದ್, ‘ಈ ಪ್ರಕರಣದ ತನಿಖೆಯ ಸಮಯದಲ್ಲಿ ಕೆಲ ಸಾಕ್ಷಿಗಳನ್ನು ಪತ್ತೆ ಮಾಡಿದಾಗ ಪ್ರಸಾದಕ್ಕೆ ವಿಷ ಬೆರೆತದ್ದು ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿ ಬೆರೆಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿಯ ಸಾಲಿಪೇಟೆ ನಿವಾಸಿ ಲಕ್ಷ್ಮೀ, ಅಮರಾವತಿ ಮತ್ತು ಚನ್ನಕೇಶವಪುರದ ಪಾರ್ವತಮ್ಮ ಎಂಬುವರನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

‘ಪ್ರಸಾದ ಸೇವಿಸಿ ಮೃತಪಟ್ಟ ಸರಸ್ವತಮ್ಮ ಅವರ ಪುತ್ರಿ ಗೌರಿ ಅವರು ನೀಡಿದ ಹೇಳಿಕೆ ಆಧರಿಸಿ ತನಿಖೆ ನಡೆಸಿದಾಗ ಪ್ರಸಾದ ಹಂಚಲು ತಂದಿದ್ದ ಲಕ್ಷ್ಮೀ ಎಂಬಾಕೆ ಈ ಪ್ರಕರಣದ ಮುಖ್ಯ ಆರೋಪಿ ಎಂಬುದು ತಿಳಿಯಿತು. ಆಕೆ ಕೆಲ ವರ್ಷಗಳ ಹಿಂದೆ ಗೌರಿ ಪತಿ ಲೋಕೇಶ್‌ ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಆ ಸಂದರ್ಭದಲ್ಲಿ ಅವರ ನಡುವೆ ಒಡನಾಟವಿತ್ತು. ಮದುವೆಯಾದ ಬಳಿಕ ಗೌರಿ ಇದನ್ನು ತಿಳಿದು ಅನೇಕ ಬಾರಿ ಗಲಾಟೆ ಮಾಡಿದ್ದರು’ ಎಂದು ತಿಳಿಸಿದರು.

‘ಗೌರಿಯನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕು ಎನ್ನುವ ಉದ್ದೇಶದಿಂದ ಲಕ್ಷ್ಮೀ ನವೆಂಬರ್ ತಿಂಗಳಲ್ಲಿ ಬುರ್ಖಾ ಹಾಕಿಕೊಂಡು ಅವರ ಮನಗೆ ಹೋಗಿ ಪ್ರಸಾದ ರೂಪದಲ್ಲಿ ವಿಷ ಬೆರೆಸಿದ್ದ ಕೆಲ ಪದಾರ್ಥಗಳನ್ನು ಕೊಟ್ಟಿದ್ದಳು. ಆಗ ಗೌರಿ ಕುಟುಂಬದವರು ಅಸ್ವಸ್ಥರಾಗಿದ್ದರು. ಬಳಿಕ ಡಿಸೆಂಬರ್‌ನಲ್ಲಿ ಸಿಹಿಬೂಂದಿ ವಿಷ ಮಿಶ್ರಣ ಮಾಡಿ ಕೊಟ್ಟಿದ್ದರು. ಅದನ್ನು ತಿಂದು ಗೌರಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು’ ಎಂದರು.

‘ಮೂರನೇ ಪ್ರಯತ್ನವಾಗಿ ಜ.25 ರಂದು ಲಕ್ಷ್ಮೀ ಕೆಲಸದಾಕೆ ಅಮರಾವತಿ ಜತೆಗೂಡಿ ಸಾಮಾನ್ಯ ಭಕ್ತರಿಗೆ ನೀಡಲು ಒಂದು, ಗೌರಿ ಅವರಿಗೆ ನೀಡಲು ಅಕ್ಕಸಾಲಿಗರು ಬಳಸುವ ರಾಸಾಯನಿಕ ಬೆರೆಸಿದ ಮತ್ತೊಂದು.. ಹೀಗೆ ಎರಡು ಪ್ರತ್ಯೇಕ ಡಬ್ಬಿಗಳಲ್ಲಿ ಕೇಸರಿ ಬಾತ್ ಅನ್ನು ದೇವಾಲಯಕ್ಕೆ ತಂದಿದ್ದರು. ದೇವಾಲಯದ ಬಳಿ ಹೂವು ಮಾರುವ ಪಾರ್ವತಮ್ಮ ಅವರು ಅಮರಾವತಿಗೆ ಗೌರಿ ಅವರನ್ನು ತೋರಿಸಿದ್ದರು’ ಎಂದು ಹೇಳಿದರು.

‘ಅಮರಾವತಿ ವಿಷ ಬೆರೆಸಿದ ಪ್ರಸಾದವನ್ನು ಗೌರಿ ಅವರೊಂದಿಗೆ ಬಂದಿದ್ದ ಅವರ ತಾಯಿ ಸರಸ್ವತಮ್ಮ ಅವರಿಗೆ ನೀಡಿದ್ದರು. ಹಿಂದಿನ ಎರಡು ಘಟನೆಗಳಿಂದ ಎಚ್ಚೆತ್ತುಕೊಂಡಿದ್ದ ಗೌರಿ ಅವರು ಆ ಪ್ರಸಾದ ತಿನ್ನಲು ಗೌರಿ ನಿರಾಕರಿಸಿದ್ದರು, ಹೀಗಾಗಿ ಸರಸ್ವತಮ್ಮ ತಿಂದು ಅಸ್ವಸ್ಥರಾಗಿ ಮೃತಪಟ್ಟರು. ಪ್ರಸಾದ ಹಂಚುವಾಗ ಅಮರಾವತಿ ಗೊಂದಲ ಮಾಡಿಕೊಂಡು ಎರಡೂ ಪ್ರಸಾದ ಮಿಶ್ರಣ ಮಾಡಿದ್ದರಿಂದ ಆ ಪ್ರಸಾದ ತಿಂದ ಬೇರೆಯವರು ಸಹ ಅಸ್ವಸ್ಥಗೊಂಡರು, ಕವಿತಾ ಎಂಬುವರು ಸಹ ಮೃತಪಟ್ಟರು’ ಎಂದು ತಿಳಿಸಿದರು.

‘ಆರೋಪಿಗಳ ಕೂಲಂಕುಷ ವಿಚಾರಣೆ, ಸಾಕ್ಷಿ ಸಂಗ್ರಹಿಸಿದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಇದೀಗ ಆಕಸ್ಮಿಕ ಪ್ರಕರಣ ಎಂಬುದನ್ನು ಕೊಲೆ ಪ್ರಕರಣವನ್ನಾಗಿ ಬದಲಾಯಿಸಿಕೊಂಡಿದ್ದೇವೆ. ಮೂರೂವರೆ ತಿಂಗಳಿಂದ ನಾಪತ್ತೆಯಾಗಿರುವ ಗೌರಿ ಪತಿ ಲೋಕೇಶ್‌ ಅವರ ಕೈವಾಡದ ಬಗ್ಗೆ ಸಹ ತನಿಖೆ ನಡೆಸಿದ್ದೇವೆ. ಈ ಕೊಲೆ ಪ್ರಕರಣ ಪತ್ತೆ ಹಚ್ಚಿದ ತಂಡಕ್ಕೆ ₹50 ಸಾವಿರ ಬಹುಮಾನ ನೀಡಲಾಗುತ್ತದೆ’ ಎಂದರು. ಎಸ್ಪಿ ಕಾರ್ತಿಕ್ ರೆಡ್ಡಿ, ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಬಿ.ಎಸ್‌.ಶ್ರೀನಿವಾಸ್‌ ಹಾಜರಿದ್ದರು.

ಚಿಂತಾಮಣಿ ವಿಷ ಪ್ರಸಾದ: ಭದ್ರಾವತಿಯಲ್ಲಿ ಲೋಕೇಶ್ ಬಂಧನ

ಭದ್ರಾವತಿ: ಚಿಂತಾಮಣಿ ಗಂಗಮ್ಮ ದೇವಾಲಯ ವಿಷ ಪ್ರಸಾದ ಘಟನೆಯ ಪ್ರಮುಖ ಆರೋಪಿ, ಲಕ್ಷ್ಮಿಯ ಪ್ರಿಯಕರನಾದ ಚಿಂತಾಮಣಿ ನಿವಾಸಿ ಲೋಕೇಶ್ ಎಂಬಾತನನ್ನು ಇಲ್ಲಿನ ನ್ಯೂಟೌನ್ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಚಿಂತಾಮಣಿ ಪೊಲೀಸರ ಮಾಹಿತಿ ಆಧಾರ ಮೇರೆಗೆ ಕಾರ್ಯಾಚರಣೆ ನಡೆಸಿದ ನ್ಯೂಟೌನ್ ಪೊಲೀಸರು ಇಲ್ಲಿನ ಸ್ಫೂರ್ತಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗುಮಾಸ್ತ ಹುದ್ದೆಯ ತರಬೇತಿಯಲ್ಲಿದ್ದ ಲೋಕೇಶನನ್ನು ತನಿಖೆಗೆ ಒಳಪಡಿಸಿದ್ದಾರೆ.

ಸೋಗಿನಲ್ಲಿ ಕೆಲಸ:‘ ನಾನೊಬ್ಬ ಅನಾಥ. ಬಿ.ಸಿ.ಎ ಪದವಿ ಮುಗಿಸಿ ಕೋಲಾರ ಖಾಸಗಿ ಶಾಲೆಯಲ್ಲಿ ಗುಮಾಸ್ತ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ’ ಎಂದು ಹೇಳಿ ಇಲ್ಲಿನ ಸ್ಫೂರ್ತಿ ಶಾಲೆಯಲ್ಲಿ 20 ದಿನದ ಹಿಂದೆ ಕೆಲಸ ಗಿಟ್ಟಿಸುವ ಯತ್ನವನ್ನು ಲೋಕೇಶ್ ನಡೆಸಿದ್ದ.

ಶಾಲೆಯ ಆಡಳಿತ ಮಂಡಳಿ ತಕ್ಷಣವೇ ಕೆಲಸ ನೀಡಲು ಸಾಧ್ಯವಿಲ್ಲ, ಒಂದು ತಿಂಗಳ ಕಾಲ ತರಬೇತಿ ಪಡೆದ ನಂತರ ಕೆಲಸ ನೀಡುವ ಕುರಿತು ತೀರ್ಮಾನ ಮಾಡೋಣ ಎಂದು ಹೇಳಿ ಟ್ರೈನಿ ಗುಮಾಸ್ತನನ್ನಾಗಿ ನೇಮಿಸಿಕೊಂಡಿತ್ತು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು