ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂದಲು ದಾನ ‘ಚೆರಿಯನ್‌’ ಅಭಿಯಾನ

ದಿ ಚೆರಿಯನ್‌ ಫೌಂಡೇಷನ್‌
Last Updated 15 ಮಾರ್ಚ್ 2019, 15:20 IST
ಅಕ್ಷರ ಗಾತ್ರ

ಹೆ ಣ್ಣಿನ ಕೂದಲ ವರ್ಣನೆ ಕವಿಗಳಿಗೆ ಅಚ್ಚುಮೆಚ್ಚು. ಅದು ಮುಂಗುರುಳೇ ಇರಲಿ, ನೀಳಜಡೆಯೇ ಇರಲಿ. ಕಲಾವಿದರಿಗಂತೂ ಹೆಣ್ಣಿನ ಚಿತ್ರ ಬಿಡಿಸುವಾಗ ಗಮನ ಆಕೆಯ ಕೂದಲಿನ ಮೇಲೇ ಇರುತ್ತದೆ. ತನ್ನ ಸೌಂದರ್ಯದ ಸಂಕೇತವಾದ ಕೂದಲನ್ನು ಕಳೆದುಕೊಳ್ಳಲು ಯಾವ ಹೆಣ್ಣೂ ತಯಾರಿರುವುದಿಲ್ಲ.

ಕ್ಯಾನ್ಸರ್‌ ಬಂದರೆ! ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವಾಗ ಕೂದಲು ಉದುರುತ್ತದೆ. ಇದರಿಂದಾಗಿ ತಾನು ಕ್ಯಾನ್ಸರ್‌ ರೋಗಿ ಎಂಬುದುಬೇರೆಯವರಿಗೆ ತಿಳಿದುಬಿಡುತ್ತದೆ ಎಂಬ ಅಂಜಿಕೆ ಶುರುವಾಗುತ್ತದೆ. ಇದೇ ಕಾರಣಕ್ಕೆ ಕ್ಯಾನ್ಸರ್‌ ಬಂದ ಸೂಕ್ಷ್ಮ ಮನಸ್ಸಿನ ಮಹಿಳೆಯರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿರುವುದು ಆಘಾತಕಾರಿ ಸಂಗತಿ.

ಆದರೆ, ಇಂತಹ ಕ್ಯಾನ್ಸರ್‌ ಪೀಡಿತ ಮಹಿಳೆಯರಲ್ಲಿ ಆತ್ಮ ವಿಶ್ವಾಸ ತುಂಬುವ ಉದ್ದೇಶದಿಂದ ಚೆನ್ನೈನ ‘ದಿ ಚೆರಿಯನ್‌ ಫೌಂಡೇಷನ್‌’ ಅಭಿಯಾನವೊಂದನ್ನು ಆರಂಭಿಸಿದೆ. ‘ಗಿಫ್ಟ್‌ ಹೇರ್ ಗಿಫ್ಟ್‌ ಕಾನ್ಫಿಡೆನ್ಸ್‌’ ಎಂಬ ಅಭಿಯಾನದ ಮೂಲಕ ಪ್ರಮುಖ ನಗರಗಳ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ಕೂದಲು ದಾನ ಪಡೆದು ಅದರಿಂದ ವಿಗ್‌ ತಯಾರಿಸಿ ಕ್ಯಾನ್ಸರ್‌ ಪೀಡಿತ ಬಡ ಮಹಿಳೆಯರಿಗೆ ಉಚಿತವಾಗಿ ಹಂಚುವುದು ಈ ಅಭಿಯಾನದ ಉದ್ದೇಶ.

‘ಚೆನ್ನೈನ ಅಡ್ಯಾರ್ ಕ್ಯಾನ್ಸರ್‌ ಸಂಸ್ಥೆಯ ಸಹಯೋಗದಲ್ಲಿ ಈ ಅಭಿಯಾನ ನಡೆಯುತ್ತಿದೆ. ವಿಗ್ ಹಂಚುವುದಷ್ಟೇ ಅಲ್ಲ, ವಿಗ್‌ ಧರಿಸುವ ವಿಧಾನ, ಅದರ ಸರಿಯಾದ ನಿರ್ವಹಣೆ, ಹೇರ್‌ಸ್ಟೈಲ್‌ ಮಾಡುವ ವಿಧಾನ ತಿಳಿಸಿಕೊಡಲಾಗುತ್ತದೆ. ಸೂಕ್ಷ್ಮ ಚರ್ಮದ ಅಗತ್ಯಗಳಿಗೆ ಅನುಗುಣವಾಗಿ ಗುಣಮಟ್ಟದ ವಿಗ್‌ ತಯಾರಿಸಿ ಹಂಚಲಾಗುತ್ತದೆ. ವಿಗ್‌ ಧರಿಸುವುದರಿಂದ ರೋಗಿಗಳಲ್ಲಿ ಕೀಳರಿಮೆ ಮಾಯವಾಗಿ ಆತ್ಮವಿಶ್ವಾಸ ತುಂಬುತ್ತದೆ. ಚಿಕಿತ್ಸೆಗೆ ಬೇಗ ಸ್ಪಂದಿಸುತ್ತಾರೆ. ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವುದು ಸಂಸ್ಥೆಯ ಕಾಳಜಿ’ ಎನ್ನುತ್ತಾರೆ ಸಂಸ್ಥೆಯ ಟ್ರಸ್ಟಿ ಸಾರಾ ಬಿ. ಚೆರಿಯನ್‌.

ಇದುವರೆಗೆ 420 ಕ್ಯಾನ್ಸರ್‌ಪೀಡಿತ ಮಹಿಳೆಯರಿಗೆ ಉಚಿತವಾಗಿ ವಿಗ್‌ ವಿತರಿಸಿದ್ದಾರೆ. ಗ್ರೀನ್‌ ಟ್ರೆಂಡ್ಸ್‌, ನ್ಯಾಚುರಲ್ಸ್‌, ಎಬೋನಿ, ಮುಂತಾದ ಖ್ಯಾತ ಸೆಲೂನ್‌ಗಳ ಜೊತೆ ಸಂಸ್ಥೆ ಸಹಭಾಗಿತ್ವ ವಹಿಸಿದೆ. ದಕ್ಷಿಣ ಭಾರತದಾದ್ಯಂತ ಶಾಲೆ, ಕಾಲೇಜು, ಟೆಕ್‌ ಪಾರ್ಕ್‌ ಮತ್ತು ಸೋಷಿಯಲ್‌ ಕ್ಲಬ್‌ಗಳಲ್ಲಿ ಕೂದಲು ದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ರೋಟರಿ ಕ್ಲಬ್‌, ಲೇಡಿಸ್‌ ಸರ್ಕಲ್‌ ಇಂಡಿಯಾ, ರಾಜಸ್ಥಾನ್‌ ಲೇಡಿಸ್‌ ಕ್ಲಬ್‌ಗಳು ಈ ಅಭಿಯಾನಕ್ಕೆ ಬೆಂಬಲ ನೀಡುತ್ತಿವೆ.

ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಮೌಂಟ್‌ ಕಾರ್ಮೆಲ್‌, ರೇವಾ ಯುನಿವರ್ಸಿಟಿ, ಕ್ರೈಸ್ಟ್‌ ಯುನಿವರ್ಸಿಟಿ, ಜೈನ್‌ ಯುನಿವರ್ಸಿಟಿ, ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ, ಸೋಫಿಯಾ ಹೈಸ್ಕೂಲ್‌ಗಳಲ್ಲಿ ಈ ಅಭಿಯಾನ ನಡೆದಿದ್ದು ವಿದ್ಯಾರ್ಥಿನಿಯರು ಕೂದಲು ದಾನ ಮಾಡಿದ್ದಾರೆ.

ಕೂದಲಿನ ಮೇಲೆ ಹೆಣ್ಣುಮಕ್ಕಳಿಗೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಪ್ರೀತಿ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ದಾನ ಮಾಡುವುದರಲ್ಲಿಯೂ ಇದೆ ಎಂಬುದಕ್ಕೆ ಈ ಅಭಿಯಾನಕ್ಕೆ ಬರುತ್ತಿರುವ ಸ್ಪಂದನೆಯೇ ಸಾಕ್ಷಿ.

ಕೂದಲು ದಾನ ಮಾಡುವ ಬಗೆ ಹೀಗೆ

l ಕೂದಲನ್ನು ಚೆನ್ನಾಗಿ ತೊಳೆಯಿರಿ

l ಕೂದಲ ಬುಡಕ್ಕೆ ಹೇರ್‌ ಬ್ಯಾಂಡ್‌ ಹಾಕಿ

l ಮಧ್ಯಕ್ಕೊಂದು ಹೇರ್‌ ಬ್ಯಾಂಡ್‌ ಹಾಕಿ

l ಕೂದಲ ಉದ್ದ ಹತ್ತು ಇಂಚುಗಳಿಗಿಂತ ಹೆಚ್ಚು ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ

l ಕೂದಲ ಬುಡಕ್ಕೆ ಹಾಕಿದ ಬ್ಯಾಂಡ್‌ ನ ಮೇಲ್ಭಾಗದಿಂದ ಕತ್ತರಿಸಿ

l ಕತ್ತರಿಸಿದ ಕೂದಲನ್ನು ಪೇಪರ್‌ನಲ್ಲಿ ಸುತ್ತಿ

l ಜಿಪ್‌ಲಾಕ್‌ ಬ್ಯಾಗ್‌ನ ಒಳಗಿಟ್ಟು ದಿ ಚೆರಿಯನ್‌ ಫೌಂಡೇಷನ್‌ಗೆ ಕೊರಿಯರ್‌ ಮೂಲಕ ಕಳಿಸಿ

ವಿಳಾಸ: # 38, ಮೆಲಾನಿ ರಸ್ತೆ, ಟಿ.ನಗರ, ಚೆನ್ನೈ 600 017

ಕೂದಲು ದಾನ ಮಾಡುವುದಕ್ಕೂ ಮುನ್ನ www.cherianfoundation.org ವೆಬ್‌ಸೈಟಿನಲ್ಲಿರುವ ‘ಹೇರ್‌ ಡೊನೇಷನ್‌ ಕನ್ಸೆಂಟ್‌ ಫಾರ್ಮ್‌‘ ಅನ್ನು ಡೌನ್‌ಲೋಡ್‌ ಮಾಡಿ ತುಂಬಬೇಕು. ಕೂದಲಿನ ಜೊತೆ ಮಾಹಿತಿ ತುಂಬಿದ ಫಾರ್ಮ್‌ ಅನ್ನು ಕಳುಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT