ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳ್ಳುಗಾಡಿಯಲ್ಲಿನ ಇಡ್ಲಿ ಸವಿರುಚಿ..!

Last Updated 10 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಆಲಮೇಲ:ಎರಡೇ ತಾಸಿನ ವಹಿವಾಟು. ಬೆಳಿಗ್ಗೆ 7ಕ್ಕೆ ಆರಂಭವಾದರೆ 9ಕ್ಕೆ ಎಲ್ಲವೂ ಖಾಲಿ... ಖಾಲಿ... ತಿನ್ನಬೇಕು ಎಂದರೂ ಒಂದು ತುಣುಕು ಇಡ್ಲಿಯೂ ಸಿಗದು.

ಇಲ್ಲಿನ ಬಸ್‌ ನಿಲ್ದಾಣದ ಸನಿಹ ತಳ್ಳುಗಾಡಿಯಲ್ಲಿ ನಿತ್ಯ ಇಡ್ಲಿ–ಚಟ್ನಿ ವ್ಯಾಪಾರ ಮಾಡುವ ಅಯ್ಯಪ್ಪ ನಿಂಗಪ್ಪ ಕುಡಕಿ (ಬೋರಗಿ) ಕೈ ರುಚಿಯ ಪ್ರಭಾವವಿದು. ಇಲ್ಲಿ ಒಮ್ಮೆ ಇಡ್ಲಿ–ಚಟ್ನಿ ಸವಿದವರು ಆಗಾಗ್ಗೆ, ಮತ್ತೆ ಮತ್ತೆ ಇಡ್ಲಿ ಮೆಲ್ಲಲು ಬರುವುದು ವಿಶೇಷ.

ಬೋರಗಿ ಆಲಮೇಲಕ್ಕೆ ಬಂದು 8 ವರ್ಷ ಕಳೆದಿವೆ. ನಿತ್ಯ ಬೆಳಿಗ್ಗೆ ಕಾಯಕ ದಾಸೋಹ ಮಾಡುತ್ತಿದ್ದಾರೆ. ಇಡ್ಲಿ ಕೈ ಹಿಡಿದಿದೆ. ಒಂದು ಪ್ಲೇಟಿಗೆ ನಾಲ್ಕು ಇಡ್ಲಿ, ಚಟ್ನಿ ನೀಡುತ್ತಾರೆ. ಒಮ್ಮೆ ಇದನ್ನು ಸವಿಯುವ ಗ್ರಾಹಕ ಇವರ ಕೈ ರುಚಿಗೆ ಮನಸೋಲುತ್ತಾರೆ. ಕನಿಷ್ಠ ನೂರು ಗ್ರಾಹಕರು ಇಲ್ಲಿ ಉಪಾಹಾರ ಸವಿಯುತ್ತಾರೆ. ತಡವಾದರೆ ಸಿಗುವುದಿಲ್ಲ ಎಂದು ಮನೆಗೂ ಕಟ್ಟಿಸಿಕೊಂಡು ಹೋಗುತ್ತಾರೆ.

ಅಯ್ಯಪ್ಪ ಕುಟುಂಬ ನಿತ್ಯವೂ ಇದಕ್ಕಾಗಿ ರಾತ್ರಿ ವೇಳೆ ಸಿದ್ಧತೆ ಮಾಡಿಕೊಳ್ಳುತ್ತದೆ. ನಸುಕಿನ 3ಕ್ಕೆ ಎದ್ದು ಇಡ್ಲಿ ಹಿಟ್ಟು ರುಬ್ಬಿಕೊಳ್ಳುತ್ತಾರೆ. ಆರು ಗಂಟೆಯೊಳಗೆ ಚಟ್ನಿ ಮಾಡಿಕೊಂಡು ಬಸ್‌ ನಿಲ್ದಾಣದ ಸನಿಹದ ತಳ್ಳುಗಾಡಿಯಲ್ಲಿ ತಮ್ಮ ವ್ಯಾಪಾರ ಆರಂಭಿಸುತ್ತಾರೆ.

‘ಸ್ವಾವಲಂಬಿ ಬದುಕಿಗೆ ಈ ವ್ಯಾಪಾರ ರಹದಾರಿ ಮಾಡಿಕೊಟ್ಟಿದೆ. ನಿತ್ಯವೂ ದುಡಿದುಕೊಂಡು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಒಮ್ಮೊಮ್ಮೆ ಗ್ರಾಹಕರು ಕಡಿಮೆಯಾದಾಗ ಇಡ್ಲಿ–ಚಟ್ನಿ ಉಳಿದು ನಷ್ಟ ಅನುಭವಿಸಿದ್ದು ಇದೆ. ಆದರೆ ಅದು ಅಪರೂಪಕ್ಕೊಮ್ಮೆ ಮಾತ್ರ’ ಎನ್ನುತ್ತಾರೆ ಅಯ್ಯಪ್ಪ. ‘ಇದೇ ರೀತಿ ನಾವು ರಜೆ ಮಾಡಿದಾಗ ನಿರಾಸೆ ಅನುಭವಿಸುವ ಗ್ರಾಹಕರು ಇದ್ದಾರೆ’ ಎನ್ನುತ್ತಾರೆ ಅವರು.

ಚಟ್ನಿ ಇಲ್ಲಿನ ವಿಶೇಷ

ಇಡ್ಲಿ ಎಲ್ಲೆಡೆ ಬಹುತೇಕ ಒಂದೇ ರುಚಿಯಿರುತ್ತದೆ. ಆದರೆ ಇಲ್ಲಿ ಸಿಗುವ ತೆಂಗಿನಕಾಯಿಯ ತಿಳಿ ಹಾಗೂ ಗಟ್ಟಿ ಚಟ್ನಿ ತುಂಬಾ ಫೇಮಸ್ಸು. ಕೆಲ ಗ್ರಾಹಕರಂತೂ ಇಡ್ಲಿಗಿಂತ ಚಟ್ನಿಯನ್ನೇ ಹೆಚ್ಚಾಗಿ ಸವಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT