ಬುಧವಾರ, ಮಾರ್ಚ್ 3, 2021
21 °C

ಲಿವರ್ ಕಸಿ, ಆದರೂ ಜೋಪಾನ

ಮಂಜುಶ್ರೀ ಎಂ. ಕಡಕೋಳ‌ Updated:

ಅಕ್ಷರ ಗಾತ್ರ : | |

Prajavani

ಪ್ರದೀಪ್ ವೃತ್ತಿಯಲ್ಲಿ ಎಂಜಿನಿಯರ್. ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿಯಮಿತವಾಗಿ ಔಷಧಿ ಸೇವಿಸುತ್ತಿದ್ದರು. ಟಿ.ಬಿ.ಗೆ ಪಡೆಯುತ್ತಿದ್ದ ಎಟಿಟಿ ಔಷಧಿಗಳ ಬಳಕೆಯಿಂದ ಪ್ರದೀಪ್‌ಗೆ ಲಿವರ್ (ಯಕೃತ್ತ್‌) ಸಮಸ್ಯೆ ಕಾಣಿಸಿಕೊಂಡಿತು. ಸರಿಪಡಿಸಲಾಗದಷ್ಟು ಹಾಳಾಗಿದ್ದ ಲಿವರ್‌ ಸಮಸ್ಯೆಗೆ ಅಂಗಾಂಗ ಕಸಿಯೊಂದೇ ಮಾರ್ಗವೆಂದು ವೈದ್ಯರು ಸೂಚಿಸಿದರು.

‘ಸೋದರ ಸಂಬಂಧಿಯೊಬ್ಬರು ಲಿವರ್ ದಾನ ಮಾಡಿದ್ದರಿಂದ ಈಗ ಮೊದಲಿನಂತೆ ಜೀವನ ನಡೆಸುತ್ತಿದ್ದೇನೆ. ಲಿವರ್ ಕಸಿಯಾಗದಿದ್ದರೆ ಇಂದು ನಾನು ನಿಮ್ಮ ಮುಂದೆ ಕುಳಿತು ಮಾತನಾಡುತ್ತಿರಲಿಲ್ಲ’ ಎಂದು ತಮ್ಮ ಅನುಭವ ಬಿಚ್ಚಿಟ್ಟರು ಪ್ರದೀಪ್.

 ***

ಗೃಹಿಣಿ ಪ್ರೇಮಾ ಅವರ ಅನುಭವ ಇದಕ್ಕಿಂತ ಭಿನ್ನ. ಮನೆಕೆಲಸ, ಗಂಡ–ಮಗಳ ಕಡೆ ಗಮನ ಹರಿಸಿದ್ದ ಅವರಿಗೆ ತಮ್ಮ ಆರೋಗ್ಯ ದಿಢೀರ್ ಅಂತ ಕೈಗೊಟ್ಟಾಗಲೇ ಲಿವರ್ ಹಾಳಾಗಿರುವ ವಿಷಯ ತಿಳಿದದ್ದು. ಅಲ್ಲಿಯ ತನಕ ಲವಲವಿಕೆಯಿಂದ ಜೀವನ ನಡೆಸುತ್ತಿದ್ದ ಅವರಿಗೆ ದಿಢೀರ್ ಅಂತ ಶಾಕ್ ನೀಡಿತ್ತು ಲಿವರ್ ಸಮಸ್ಯೆ. ವೈದ್ಯರ ಪ್ರೋತ್ಸಾಹಕರ ನುಡಿ ಮತ್ತು ಮಗಳು ಲಿವರ್ ದಾನ ಮಾಡುವ ಅಭಿಲಾಷೆ ಪ್ರೇಮಾ ಅವರಲ್ಲಿ ಮತ್ತೆ ಜೀವನಪ್ರೀತಿ ಉಕ್ಕಿಸಿತ್ತು. ಮಧ್ಯವಯಸ್ಸಿನ ಅವರೀಗ ತಮ್ಮಂತೆ ಲಿವರ್ ಸಮಸ್ಯೆಗೀಡಾದವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಆರೋಗ್ಯಕರ ಜೀವನ ಶೈಲಿಯ ಕುರಿತು ಟಿಪ್ಸ್ ನೀಡುತ್ತಾರೆ.

***

ಒತ್ತಡದ ಜೀವನಶೈಲಿ, ಎಗ್ಗಿಲ್ಲದೇ ಆಹಾರ ಸೇವನೆ, ಮಿತಿ ಮೀರಿದ ಮದ್ಯಪಾನ ಸೇವನೆ, ವಂಶವಾಹಿ ಸಮಸ್ಯೆ ಕಾರಣಗಳಿಂದಾಗಿ ನಗರವಾಸಿಗಳಲ್ಲಿ ಲಿವರ್ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಅಂಗಾಂಗ ಕಸಿಯೊಂದೇ ಮಾರ್ಗ ಎನ್ನುತ್ತಾರೆ ವೈದ್ಯರು.

ಲಿವರ್ ಸಮಸ್ಯೆಗೆ ನಿರ್ದಿಷ್ಟ ಲಕ್ಷಣಗಳು ಇಲ್ಲವಾದ್ದರಿಂದ ಈ ಕಾಯಿಲೆಯನ್ನು ಗುರುತಿಸುವುದು ಕಷ್ಟ. ಎಷ್ಟೋ ಬಾರಿ ಏಳರಿಂದ ಹತ್ತು ವರ್ಷಗಳ ತನಕ ಲಿವರ್ ಸಮಸ್ಯೆ ಇದೆ ಎಂಬುದೇ ರೋಗಿಗೆ ತಿಳಿದಿರುವುದಿಲ್ಲ. ಲಿವರ್‌ನ ಬಹುಭಾಗ ಹಾಳಾದ ನಂತರವಷ್ಟೇ ತಿಳಿದುಬರುತ್ತದೆ. ಆರೋಗ್ಯಕರ ಜೀವನಶೈಲಿ, ದುಶ್ಚಟಗಳಿಂದ ದೂರವಿರುವುದು, ನಿತ್ಯ ವ್ಯಾಯಾಮ, ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ಲಿವರ್ ಸಮಸ್ಯೆಯಿಂದ ದೂರವಿರಬಹುದು ಅನ್ನುವುದು ವೈದ್ಯರ ಸಲಹೆ.

‘ಜಾಂಡೀಸ್ ಯಾವ ಹಂತದಲ್ಲಿದೆ? ರಕ್ತ ಎಷ್ಟು ತೆಳುವಾಗಿದೆ? ಲಿವರ್‌ನಿಂದಾಗಿ ಕಿಡ್ನಿಗಳ ಮೇಲೆ ಏನು ಪರಿಣಾಮವಾಗಿದೆ ಅನ್ನುವುದನ್ನು ಮೆಲ್ಡ್‌ ಸ್ಕೋರ್ ವಿಧಾನದಲ್ಲಿ ಅರಿತ ಮೇಲಷ್ಟೇ ಸಮಸ್ಯೆಯನ್ನು ಗುರುತಿಸಬಹುದಾಗಿದೆ. ಕೆಲವರಿಗೆ ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು, ಅತಿಯಾದ ಸುಸ್ತು ಆವರಿಸುವುದು, ಸರಿಯಾಗಿ ನಡೆದಾಡಲು ಆಗದಿರುವ ಲಕ್ಷಣಗಳು ಗೋಚರಿಸುತ್ತವೆ. ಕೆಲಬಾರಿ ಇದು ಲಿವರ್ ಸಮಸ್ಯೆಯ ಲಕ್ಷಣಗಳಾಗಿರುವ ಸಾಧ್ಯತೆ ಇರುವುದನ್ನು ಅಲ್ಲಗಳೆಯಲಾಗದು’ ಎನ್ನುತ್ತಾರೆ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಬಹು ಅಂಗಾಂಗ ಶಸ್ತ್ರಚಿಕಿತ್ಸೆ ತಜ್ಞ ಡಾ.ಸುರೇಶ್ ರಾಘವಯ್ಯ.

ಫ್ಯಾಟಿ ಲಿವರ್: ದೇಹದಲ್ಲಿ ಹೆಚ್ಚಾದ ಕೊಬ್ಬು ಲಿವರ್‌ನಲ್ಲಿ ಕೂತಾಗ ಫ್ಯಾಟಿ ಲಿವರ್ ಉಂಟಾಗುತ್ತದೆ. ಇದಕ್ಕೆ ಒತ್ತಡದ ಜೀವನಶೈಲಿ, ವ್ಯಾಯಾಮ ಮಾಡದಿರುವುದು, ಕರಿದ–ಕೊಬ್ಬು ಆಹಾರ ಪದಾರ್ಥಗಳ ಸೇವನೆಯೇ ಮುಖ್ಯಕಾರಣ.

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಲ್ಲಿ ಮತ್ತು ಮಿತಿಮೀರಿ ಮದ್ಯ ಸೇವಿಸುವವರಲ್ಲಿ ಕಾಣಿಸಿಕೊಳ್ಳುವ ಫ್ಯಾಟಿ ಲಿವರ್, ಮಧುಮೇಹ ಮತ್ತು ಹೃದಯಾಘಾತಕ್ಕೆ ಸದ್ದಿಲ್ಲದೇ ಆಹ್ವಾನ ನೀಡುತ್ತದೆ. ಮುಖ್ಯವಾಗಿ ಈಸ್ಟ್ರೋಜನ್ ಹಾರ್ಮೋನ್ ಮಟ್ಟ ಹೆಚ್ಚಿರುವ ಹೆಣ್ಣುಮಕ್ಕಳಲ್ಲಿ ಫ್ಯಾಟಿ ಲಿವರ್ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ದೈಹಿಕ ಚಟುವಟಿಕೆ ಹೆಚ್ಚಾಗಿ ಮಾಡದಿರುವವರಲ್ಲಿ ಇದು ಬಹುಬೇಗ ಕಾಣಿಸಿಕೊಳ್ಳುತ್ತದೆ ಅನ್ನುವುದು ತಜ್ಞರ ಅಭಿಮತ.

ಪರಿಹಾರ: ರಕ್ತ ಪರೀಕ್ಷೆ ಇಲ್ಲವೇ ಸ್ಕ್ಯಾನಿಂಗ್ ಮೂಲಕ ಫ್ಯಾಟಿ ಲಿವರ್ ಪತ್ತೆ ಹಚ್ಚಬಹುದು. ಒಮ್ಮೆ ಫ್ಯಾಟಿ ಲಿವರ್ ಬಂದಮೇಲೆ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಿನ ಪಥ್ಯ ಮತ್ತು ನಿತ್ಯವೂ 40 ನಿಮಿಷಗಳ ಕಾಲ ವ್ಯಾಯಾಮ ಮಾಡಿದಲ್ಲಿ ಆರು ವಾರಗಳಲ್ಲೇ ಫ್ಯಾಟಿ ಲಿವರ್‌ಗೆ ಗುಡ್‌ಬೈ ಹೇಳಬಹುದು ಅನ್ನುತ್ತಾರೆ ಡಾ.ಸುರೇಶ್.

ಅಂಗಾಂಗ ದಾನದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವಿಲ್ಲದಿರುವುದರಿಂದ ಅನೇಕ ರೋಗಿಗಳು ಲಿವರ್ ಸಮಸ್ಯೆಯಿಂದ ನರಳುವಂತಾಗಿದೆ. ಲಿವರ್ ಕಸಿ ಶಸ್ತ್ರಚಿಕಿತ್ಸೆ ರಾಜ್ಯದ ಬೆರಳೆಣಿಕೆಯಷ್ಟು ಆಸ್ಪತ್ರೆಗಳಲ್ಲಿ ಲಭ್ಯವಿರುವುದು, ಶಸ್ತ್ರಚಿಕಿತ್ಸೆಯ ದುಬಾರಿ ವೆಚ್ಚದ ಕಾರಣಕ್ಕಾಗಿ ಅನೇಕ ರೋಗಿಗಳು ಅಂಗಾಂಗ ಕಸಿ ಚಿಕಿತ್ಸೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಶಸ್ತ್ರಚಿಕಿತ್ಸೆ ಆರೋಗ್ಯವಿಮೆಗೆ ಒಳಪಡುತ್ತದೆ. ರೋಗಿಯ ಸ್ಥಿತಿಗೆ ಅನುಗುಣವಾಗಿ ಶಸ್ತ್ರಚಿಕಿತ್ಸೆಗೆ ₹ 18 ಲಕ್ಷದಿಂದ ₹ 24 ಲಕ್ಷದ ತನಕ ವೆಚ್ಚವಾಗುತ್ತದೆ.

ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಕಾಲೇಜಿನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಲಿವರ್ ಕಸಿ ಶಸ್ತ್ರಚಿಕಿತ್ಸೆ ಸೌಲಭ್ಯಗಳಿವೆ.

‘ಬಿಜಿಎಸ್ ಆಸ್ಪತ್ರೆ 9 ವರ್ಷಗಳಲ್ಲಿ 200 ಲಿವರ್ ಕಸಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ  ಮುಂಚೂಣಿಯಲ್ಲಿದೆ. ಇದರಲ್ಲಿ ಶೇ 93ರಷ್ಟು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿವೆ. ಅಂಗಾಂಗ ದಾನ ಮತ್ತು ಶವದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಜಿಎಸ್ ಜೀವಸಾರ್ಥಕತೆ ಸಂಸ್ಥೆಯ ಸಹಯೋಗ ಪಡೆಯುತ್ತಿದೆ. ಅಂಗಾಂಗ ಕಸಿಗೆ ತಗಲುವ ವೆಚ್ಚ ಭರಿಸಲು ಆರ್ಥಿಕ ಸಹಾಯ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಾ ಬಂದಿದ್ದೇವೆ’ ಎನ್ನುತ್ತಾರೆ ಬಿಜಿಎಸ್ ಆಸ್ಪತ್ರೆಯ ಎಚ್‌ಪಿಬಿ ಅಂಡ್ ಲಿವರ್ ಟ್ರಾನ್ಸ್‌ಪ್ಲಾಂಟೇಷನ್ ವಿಭಾಗದ ಮುಖ್ಯಸ್ಥ ಡಾ.ಸಂಜೀವ್ ಗೋವಿಲ್.

**

ಆರೋಗ್ಯಕರ ಲಿವರ್‌ಗಾಗಿ

* ಊಟದಲ್ಲಿ ಪಥ್ಯವಿರಲಿ, ತಪ್ಪದೇ ವ್ಯಾಯಾಮ ಮಾಡಿ

* ಎಣ್ಣೆ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಿ

* ಮಾಂಸಾಹಾರ ತ್ಯಜಿಸಬೇಡಿ. ಇದು ಪ್ರೋಟಿನ್‌ನ ಅತ್ಯುತ್ತಮ ಆಗರ

* ಚಿಪ್ಸ್, ಚಕ್ಕುಲಿಯಂಥ ಪದಾರ್ಥ ತಿನ್ನಬೇಡಿ.

* ಹೆಪಟೈಟೀಸ್ ಬಿ ವ್ಯಾಕ್ಸಿನ್ ತಪ್ಪದೇ ಹಾಕಿಸಿಕೊಳ್ಳಿ

* ಮದ್ಯಪಾನ ಸೇವನೆ ಮಿತಿಯಲ್ಲಿರಲಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು