ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪು ಖಾರ ಇಲ್ಲದ ಪಲಾವ್ ‘ಪೇಸ್ಟ್‌’

Last Updated 14 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಅಡುಗೆ ಮನೆಯ ಉಸಾಬರಿ ನನಗೆ ಅಷ್ಟಕ್ಕಷ್ಟೇ. ಎಲ್ಲರ ಮನೆಯಂತೆ ನಮ್ಮನೇಲೂ ಅಡುಗೆ ಮನೆ ಉಸ್ತುವಾರಿ ಅಮ್ಮನದ್ದೇ. ಅವರಿಗೆ ನನ್ನಕ್ಕ‌ ನೆರವಾಗುತ್ತಿದ್ದಳು. ಹಾಗಾಗಿ ನಾನು ಅಡುಗೆ ಮನೆಯ ಜವಾಬ್ದಾರಿ ತಲೆಮೇಲೆ ಎಳ್ಕೊಂಡಿದ್ದೇ ಕಡಿಮೆ.

ನಾನು ಹುಟ್ಟಿದ್ದು ಶಿವಮೊಗ್ಗದ ಹೊಸನಗರದಲ್ಲಿ. ಆದರೆ ಅಪ್ಪನಿಗೆ ನೌಕರಿ ಸಿಕ್ಕಿದ್ದರಿಂದ ಬೆಳೆದ್ದು, ಓದಿದ್ದು ಬೆಂಗಳೂರಿನಲ್ಲಿ. ಮೊದಲು ಮಾರತ್ತಹಳ್ಳಿ ಹತ್ರ ಇದ್ದೆವು. ಈಗ ಪದ್ಮನಾಭನಗರದಲ್ಲಿದೆ ನಮ್ಮ ಮನೆ.‌ ಅಡುಗೆ ಮಾಡೋದಕ್ಕೆ ಬರೋದಿಲ್ಲ ಅನ್ನೋದು ಕಾಲೇಜು ಓದುವವರೆಗಿನ ಮಾತು.‌ ಹಾಗಂತ ಮನೆಗೆ ರೇಷನ್‌ ತರೋದು, ಕರೆಂಟ್ ಟೆಲಿಫೋನ್‌ ಬಿಲ್ಲು ಕಟ್ಟಬೇಕಿದ್ದರೆ ತಕರಾರಿಲ್ಲದೆ ಹೋಗುತ್ತಿದ್ದೆ.

ಪದವಿ ಓದುತ್ತಿದ್ದಾಗ ಒಂದು ಸಲ ನನಗೆ ಅಡುಗೆ ಕಲಿಯುವ ಉಮೇದು ಬಂತು. ಅದು ಹೇಗೆಂದರೆ,ಗೆಳತಿ ತರುತ್ತಿದ್ದ ಪಲಾವ್‌ ನನಗೆ ಬಹಳ ಇಷ್ಟವಾಗ್ತಿತ್ತು. ಅದರ ರುಚಿಗೆ ನಾನು ಸೋತುಹೋಗಿದ್ದೆ. ನನ್ನಮ್ಮನಿಗೆ ಪಲಾವ್ ಮಾಡೋಕೆ ಬರೋದಿಲ್ಲ. ಅದಕ್ಕೆ ನಾನೇ ಕಲಿತರೆ ಹೇಗೆ ಎಂದು ಯೋಚಿಸಿದೆ. ಪಲಾವ್‌ ಮಾಡುವ ವಿಧಾನವನ್ನು ಅವಳಿಂದಲೇ ಕೇಳಿ ಬರೆದಿಟ್ಟುಕೊಂಡೆ.

ಅವತ್ತು ರಜಾ ದಿನವೋ ಏನೋ ನೆನಪಿಲ್ಲ. ಅಪ್ಪ, ಅಮ್ಮ ಮತ್ತು ಅಕ್ಕ ಮನೆಯಲ್ಲೇ ಇದ್ದರು. ನಾನು ಬರೆದುಕೊಂಡ ನೋಟ್‌ ನೋಡಿಕೊಂಡು ಪಲಾವ್‌ಗೆ ಸಿದ್ಧತೆ ಮಾಡಿಕೊಂಡು ಕುಕ್ಕರ್‌ನಲ್ಲಿ ಬೇಯಲು ಇಟ್ಟೆ. ಪಲಾವ್‌ ಬೇಯುವಾಗ ಘಮ್‌ ಅಂತ ಸುವಾಸನೆಯೂ ಬಂತು.

ಎಲ್ಲರಿಗೂ ತಟ್ಟೆ ರೆಡಿ ಮಾಡಿ ನಾನೇ ಬಡಿಸಿ ಕೈಗೆ ಕೊಟ್ಟೆ. ಮೊದಲ ಸಲ ಮಾಡಿದ ಅಡುಗೆ. ಅದೂ ಮನೆಯಲ್ಲಿ ಮಾಡಿದ ಪಲಾವ್‌! ಎಲ್ಲರಿಗೂ ಇಷ್ಟವಾಗುತ್ತದೆ ಎಂದುಕೊಂಡೆ. ಆದರೆ ವಾಸ್ತವವೇನು ಗೊತ್ತಾ? ಉಪ್ಪು, ಹುಳಿ, ಖಾರ ಯಾವುದೂ ನಾಟಿರಲಿಲ್ಲ. ಹಾಗಾಗಿ ಬರೀ ಸಪ್ಪೆ. ಅದಕ್ಕಿಂತಲೂ ಮುಖ್ಯವಾಗಿ, ಪಲಾವ್‌ ಜಾಸ್ತಿ ಬೆಂದು ಪೇಸ್ಟ್‌ನಂತಾಗಿತ್ತು. ಈ ಫಜೀತಿ ಆಗಿದ್ದು ಹೇಗೆ ಗೊತ್ತಾ? ಪಲಾವ್‌ ಮಾಡುವ ವಿಧಾನ ಹೇಳಿಕೊಟ್ಟ ಗೆಳತಿಯನ್ನು, ಎಷ್ಟು ವಿಷಲ್‌ ತೆಗೆಯಬೇಕು ಎಂದು ಕೇಳಿರಲಿಲ್ಲ!

ನಾನೇ ಮಾಡಿದ ಕಾರಣಕ್ಕೆ ಎಲ್ಲರೂ ಉಪ್ಪು ಬೆರೆಸಿಕೊಂಡು ತಿಂದರೆನ್ನಿ. ಆದರೂ ಮೊದಲ ಅಡುಗೆ ಹೀಗೆ ಕೈಕೊಟ್ಟದನ್ನು ಮರೆಯಲು ಸಾಧ್ಯವೇ ಇಲ್ಲ. ಅದಾದ ಮೇಲೆ ನಿತ್ಯ ಬಳಕೆಯ ಒಂದೊಂದೇ ಅಡುಗೆಯನ್ನು ಕಲಿಯುತ್ತಾ ಬಂದೆ. ಈಗಲೂ ಭಾರಿ ಎನ್ನುವಷ್ಟೇನೂ ಗೊತ್ತಿಲ್ಲ. ಆದರೆ ಅನ್ನ, ಸಾರು, ಸಾಂಬಾರು, ಪಲ್ಯಗಳನ್ನು ಚೆನ್ನಾಗಿಯೇ ಮಾಡುತ್ತೇನೆ. ನಾನು ಮಾಡುವ ಟೊಮೆಟೊ ಭಾತ್‌ ಸಖತ್ತಾಗಿರುತ್ತದೆ. ಖಾರ ಖಾರ ತಿನ್ನಬೇಕು ಅನಿಸಿದಾಗ ಸ್ಪೆಷಲ್ಲಾಗಿ ಪಲಾವ್‌ ಮಾಡುತ್ತೇನೆ. ಟೊಮೆಟೊ ಭಾತ್‌ನಷ್ಟೇ ವೆಜ್‌ ಪಲಾವ್‌ ಕೂಡಾ ನಮ್ಮ ಮನೆಯವರು ಮತ್ತು ಸ್ನೇಹಿತರಿಗೆ ತುಂಬಾ ಇಷ್ಟವಾಗುತ್ತದೆ.

ಮಂಗಳೂರು ಬನ್ಸ್‌

ಬೇಕಾದ ಸಾಮಗ್ರಿಗಳು: ಮೈದಾ, ಮೊಸರು, ಚೆನ್ನಾಗಿ ಕಳಿತಿರುವ ಬಾಳೆಹಣ್ಣು, ಉಪ್ಪು, ಸಕ್ಕರೆ, ಸೋಡಾ, ಜೀರಿಗೆ

ವಿಧಾನ: ಮೈದಾಕ್ಕೆ ಎರಡು ಚಮಚ ಸಕ್ಕರೆ‌ ಮತ್ತು ಪುಡಿ ಮಾಡಿದ ಅರ್ಧ ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಸೋಡಾ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಬೆರೆಸುತ್ತಾ ಕಲಸಿ. ಚಪಾತಿ ಹಿಟ್ಟಿನ ಹದದಲ್ಲಿರಲಿ.ಒಂದೆರಡು ಬಾಳೆಹಣ್ಣನ್ನು ಕೈಯಲ್ಲಿ ಕಿವುಚುತ್ತಾ ಹಿಟ್ಟಿನೊಂದಿಗೆ ಹದ ಮಾಡಿಕೊಳ್ಳಿ. ಈ ಹಿಟ್ಟನ್ನು ಎಷ್ಟು ನಾದುತ್ತೇವೋ ಬನ್ಸ್‌ ಅಷ್ಟೇ ಮೃದುವಾಗಿರುತ್ತದೆ.

ಹಿಟ್ಟನ್ನು ಅರ್ಧ ಗಂಟೆ ಮುಚ್ಚಿ ಇಡಿ. ನಂತರ ಪೂರಿ ಆಕಾರದಲ್ಲಿ ಲಟ್ಟಿಸಿಕೊಂಡು ಚೆನ್ನಾಗಿ ಕಾದ ಎಣ್ಣೆಯಲ್ಲಿ ಕಂದು ಬಣ್ಣಕ್ಕೆ ಬರುವವರೆಗೂ ಕರಿಯಿರಿ. ಉರಿ ಮಧ್ಯಮ ಗಾತ್ರದಲ್ಲಿದ್ದರೆ ಬನ್ಸ್‌ ಒಳಭಾಗದಲ್ಲಿಯೂ ಚೆನ್ನಾಗಿ ಬೇಯುತ್ತದೆ. ಮೈದಾ ಬಳಸುವ ಕಾರಣ ಸರಿಯಾಗಿ ಬೇಯದೇ ಇದ್ದರೆ ಹೊಟ್ಟೆ ಉಬ್ಬರವಾದೀತು.

ಮಂಗಳೂರು ಬನ್ಸ್‌ಗೆ ಕಾಯಿ ಚಟ್ನಿ ಮತ್ತು ಬಿಸಿ ಸಾಂಬಾರ್‌ ಉತ್ತಮ ಕಾಂಬಿನೇಷನ್. ಮಾಡಿಕೊಂಡು ಸವಿಯಿರಿ. ಚಳಿಗಾಲದಲ್ಲಿ ಸಂಜೆಯ ಟೀ ಅಥವಾ ಕಾಫಿ ಕುಡಿಯುವಾಗ ಚಟ್ನಿ, ಸಾಂಬಾರ್‌ ಇಲ್ಲದೆಯೂ ಹಾಗೇ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT